20 ಸೆಕೆಂಡುಗಳ ಕಾಲ ಒಬ್ಬ ವ್ಯಕ್ತಿಯನ್ನು ತಬ್ಬಿಕೊಳ್ಳುವುದರಿಂದ ಎಷ್ಟೆಲ್ಲಾ ಆರೋಗ್ಯ ಪ್ರಯೋಜನಗಳಿವೆ ತಿಳಿದಿದೆಯೇ?
ಅಪ್ಪುಗೆ ಕೇವಲ ಪ್ರೀತಿಯನ್ನು ವ್ಯಕ್ತಪಡಿಸುವ ಸೌಮ್ಯ ಭಾವನೆಯಲ್ಲ. ಇದು ಆರೋಗ್ಯಕ್ಕೂ ಒಳ್ಳೆಯದು ಎಂದು ನಿಮಗೆ ತಿಳಿದಿದೆಯೇ? ನಾವು ಪ್ರೀತಿಸುವ ವ್ಯಕ್ತಿಯನ್ನು ತಬ್ಬಿಕೊಳ್ಳುವುದರಿಂದ ದೇಹ ಮತ್ತು ಮನಸ್ಸಿಗೆ ಸಾಕಷ್ಟು ಪ್ರಯೋಜನಗಳಿವೆ ಎಂಬುದು ತಿಳಿದು ಬಂದಿದೆ. ಕೇವಲ 20 ಸೆಕೆಂಡುಗಳ ಕಾಲ ವ್ಯಕ್ತಿಯನ್ನು ಗಟ್ಟಿಯಾಗಿ ತಬ್ಬಿಕೊಳ್ಳುವುದರಿಂದ ಮಾನಸಿಕ ಒತ್ತಡ ಕಡಿಮೆಯಾಗುತ್ತದೆ ಎಂದು ಅಧ್ಯಯನಗಳಿಂದ ಸಾಬೀತಾಗಿದೆ. ಹಾಗಾದರೆ ಅಪ್ಪುಗೆಯಿಂದ ಸಿಗುವ ಆರೋಗ್ಯಕರ ಪ್ರಯೋಜನಗಳೇನು ತಿಳಿದುಕೊಳ್ಳಿ.

ಒಂದು ಪ್ರೀತಿಯ ಅಪ್ಪುಗೆಗೆ ಎಂತಹ ಕೋಪವನ್ನಾದರೂ ಕಡಿಮೆ ಮಾಡುವ ಶಕ್ತಿ ಇದೆ. ಅದೊಂದು ರೀತಿಯ ರಕ್ಷಣೆ, ಸಂಬಂಧಗಳ ಬೆಸೆಯುವ ಕೊಂಡಿ, ನಾನಿದ್ದೇನೆ ಎಂಬ ವಿಶ್ವಾಸ ಹೀಗೆ ಒಂದು ಅಪ್ಪುಗೆ ನಾನಾ ರೀತಿಯ ಸಂದರ್ಭಗಳಲ್ಲಿ ವಿವಿಧ ರೀತಿಯ ಅರ್ಥ ನೀಡುತ್ತದೆ. ಅದೇ ರೀತಿ ಒಂದು ಅಪ್ಪುಗೆ ಮನಸ್ಸಿನ ನೋವುಗಳನ್ನು ಕಡಿಮೆ ಮಾಡಬಲ್ಲದು ಎಂದು ಹೇಳಲಾಗುತ್ತದೆ. ಇದಕ್ಕೆ ಪೂರಕವೆಂಬಂತೆ ಹಲವಾರು ಅಧ್ಯಯನಗಳನ್ನು ನಡೆಸಲಾಗಿದ್ದು ಅವುಗಳ ಫಲಿತಾಂಶಗಳ ಪ್ರಕಾರ, ನಾವು ಪ್ರೀತಿಸುವ ವ್ಯಕ್ತಿಯನ್ನು ತಬ್ಬಿಕೊಳ್ಳುವುದರಿಂದ ದೇಹ ಮತ್ತು ಮನಸ್ಸಿಗೆ ಸಾಕಷ್ಟು ಪ್ರಯೋಜನಗಳಿವೆ ಎಂಬುದು ತಿಳಿದು ಬಂದಿದೆ. ಕೇವಲ 20 ಸೆಕೆಂಡುಗಳ ಕಾಲ ವ್ಯಕ್ತಿಯನ್ನು ಗಟ್ಟಿಯಾಗಿ ತಬ್ಬಿಕೊಳ್ಳುವುದರಿಂದ ಮಾನಸಿಕ ಒತ್ತಡ ಕಡಿಮೆಯಾಗುತ್ತದೆ ಎಂದು ಅಧ್ಯಯನಗಳಿಂದ ಸಾಬೀತಾಗಿದೆ. ಹಾಗಾದರೆ ಅಪ್ಪುಗೆಯಿಂದ ಸಿಗುವ ಆರೋಗ್ಯಕರ ಪ್ರಯೋಜನಗಳೇನು ತಿಳಿದುಕೊಳ್ಳಿ.
- ಒತ್ತಡ ಮತ್ತು ಆತಂಕವನ್ನು ಕಡಿಮೆ ಮಾಡುತ್ತದೆ: ಇತ್ತೀಚಿನ ದಿನಗಳಲ್ಲಿ, ಕೆಲಸದ ಒತ್ತಡ, ಪ್ಯಾನಿಕ್ ಅಟ್ಯಾಕ್ ಮತ್ತು ಮನಸ್ಸಿನ ಶಾಂತಿ ಹಾಳಾಗುವುದು ಸ್ವಾಭಾವಿಕವಾಗಿದೆ. ಆದರೆ ಕೇವಲ 20 ಸೆಕೆಂಡುಗಳ ಕಾಲ ಪ್ರೀತಿ ಪಾತ್ರರಾದ ವ್ಯಕ್ತಿಯನ್ನು ತಬ್ಬಿಕೊಳ್ಳುವುದರಿಂದ ಒತ್ತಡವನ್ನು ಕಡಿಮೆ ಮಾಡಬಹುದು ಎಂದು ಅಧ್ಯಯನಗಳು ಹೇಳುತ್ತವೆ. ವ್ಯಕ್ತಿಯನ್ನು ಹಗ್ ಮಾಡುವಾಗ ಆಕ್ಸಿಟೋಸಿನ್ ಎಂಬ ಹಾರ್ಮೋನ್ ದೇಹದಲ್ಲಿ ಬಿಡುಗಡೆಯಾಗುತ್ತದೆ ಇದು ಮನಸ್ಸಿಗೆ ಶಾಂತಿ ನೀಡುವ ಮೂಲಕ ಒತ್ತಡ ಮತ್ತು ಆತಂಕವನ್ನು ಕಡಿಮೆ ಮಾಡುತ್ತದೆ.
- ಮಾನಸಿಕ ಆರೋಗ್ಯವನ್ನು ಕಾಪಾಡುತ್ತದೆ: ನಮ್ಮ ಸಂಗಾತಿ ಅಥವಾ ನಾವು ಇಷ್ಟಪಡುವ ವ್ಯಕ್ತಿಯನ್ನು ತಬ್ಬಿಕೊಳ್ಳುವುದು ನಮ್ಮ ಮನಸ್ಥಿತಿಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಇದು ಆತ್ಮವಿಶ್ವಾಸವನ್ನು ಹೆಚ್ಚಿಸುವುದಲ್ಲದೆ ಹೃದಯದ ಆರೋಗ್ಯಕ್ಕೂ ಹಲವು ರೀತಿಯ ಪ್ರಯೋಜನವನ್ನು ನೀಡುತ್ತದೆ. ವೈಜ್ಞಾನಿಕ ಸಂಶೋಧನೆಯ ಪ್ರಕಾರ, ತಬ್ಬಿಕೊಳ್ಳುವುದು ಮನಸ್ಸನ್ನು ಶಾಂತಗೊಳಿಸುತ್ತದೆ ಮತ್ತು ಸಂತೋಷವನ್ನು ಹೆಚ್ಚಿಸುವ ಹಾರ್ಮೋನುಗಳನ್ನು ಬಿಡುಗಡೆ ಮಾಡುತ್ತದೆ.
- ದೈಹಿಕ ನೋವಿನಿಂದ ಪರಿಹಾರ ನೀಡುತ್ತದೆ: ತಬ್ಬಿಕೊಳ್ಳುವುದು ಒಂದು ರೀತಿಯ ಭಾವನೆ ಮಾತ್ರವಲ್ಲದೆ ಇದು ನಮ್ಮ ದೇಹಕ್ಕೂ ಒಳ್ಳೆಯದು. ದೇಹದಲ್ಲಿರುವ ನೋವನ್ನು ಕಡಿಮೆ ಮಾಡುವ ಶಕ್ತಿ ಒಂದು ಅಪ್ಪುಗೆಗೆ ಇದೆ. ಈ ಸಂದರ್ಭಗಳಲ್ಲಿ ಉತ್ಪತ್ತಿಯಾಗುವ ಹಾರ್ಮೋನುಗಳು ಬಹಳ ಶಕ್ತಿಶಾಲಿಯಾಗಿದ್ದು, ಕೆಲವು ಚಿಕಿತ್ಸೆಗಳಿಗಿಂತ ಇದು ಹೆಚ್ಚು ಪರಿಣಾಮಕಾರಿಯಾಗಿದೆ ಎಂದು ಸಂಶೋಧನೆಗಳು ಹೇಳುತ್ತವೆ.
- ಹೃದಯದ ಆರೋಗ್ಯಕ್ಕೆ ಒಳ್ಳೆಯದು: ಉತ್ತರ ಕೆರೊಲಿನಾ ವಿಶ್ವವಿದ್ಯಾಲಯದಲ್ಲಿ ನಡೆದಿರುವ ಒಂದು ಅಧ್ಯಯನದ ಪ್ರಕಾರ, ಒಂದು ಪ್ರೀತಿಯ ಅಪ್ಪುಗೆ ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡುತ್ತದೆ. ಇದು ಹೃದಯರಕ್ತನಾಳದ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ಹಾಗಾಗಿ ನಮ್ಮ ಹೃದಯ ಆರೋಗ್ಯವಾಗಿರುತ್ತದೆ.
ಇದನ್ನೂ ಓದಿ: ಕಣ್ಣಿನ ಆರೋಗ್ಯ ಕಾಪಾಡಿಕೊಳ್ಳಲು ಇದಕ್ಕಿಂತ ಸುಲಭ ಉಪಾಯ ಮತ್ತೊಂದಿಲ್ಲ
ಆದರೆ ದಿನದಲ್ಲಿ ಒಂದು ಬಾರಿಯೂ ಅಪ್ಪಿಕೊಳ್ಳದ ದಂಪತಿ ಹೃದಯ ಬಡಿತವು ನಿಮಿಷಕ್ಕೆ 10 ಬಾರಿ ಹೆಚ್ಚಾಗಿದೆ ಎಂದು ಅಧ್ಯಯನಗಳು ತೋರಿಸಿಕೊಟ್ಟಿವೆ. ಇದರರ್ಥ ಅಪ್ಪಿಕೊಳ್ಳದವರ ಒತ್ತಡದ ಮಟ್ಟವು ಸಾಮಾನ್ಯವಾಗಿ ಹೆಚ್ಚಾಗಿರುತ್ತದೆ. ಆದ್ದರಿಂದ, ನಾವು ಪ್ರೀತಿಸುವ ವ್ಯಕ್ತಿಯನ್ನು ತಬ್ಬಿಕೊಳ್ಳುವುದು ದೇಹ ಮತ್ತು ಮನಸ್ಸಿಗೆ ಸಾಕಷ್ಟು ರೀತಿಯಲ್ಲಿ ಪ್ರಯೋಜನವನ್ನು ನೀಡುತ್ತದೆ. ಪ್ರತಿದಿನ ನಮ್ಮ ಪ್ರೀತಿ ಪಾತ್ರರನ್ನು ತಬ್ಬಿಕೊಳ್ಳುವ ಮೂಲಕ ಮನಸ್ಸಿನ ಶಾಂತಿ ಜೊತೆಗೆ ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು. ಕೆಲವರು ಅಪ್ಪುಗೆಯಲ್ಲಿ ಏನಿದೆ ಎಂದು ನಿರ್ಲಕ್ಷಿಸುತ್ತಾರೆ ಆದರೆ ಈ ಸಣ್ಣ ಪ್ರಯತ್ನ ನಿಮ್ಮ ಆರೋಗ್ಯದಲ್ಲಿ ಹಲವಾರು ರೀತಿಯ ಬದಲಾವಣೆಗೆ ಕಾರಣವಾಗಬಹುದು ಎಂಬುದನ್ನು ಎಂದಿಗೂ ಮರೆಯಬೇಡಿ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:45 pm, Fri, 14 February 25




