Cardiac Arrest: ಹಠಾತ್ ಹೃದಯ ಸ್ತಂಭನವನ್ನು ನಿಭಾಯಿಸುವುದು ಹೇಗೆ?

| Updated By: Ganapathi Sharma

Updated on: Aug 08, 2023 | 9:59 PM

How to Deal With Sudden Cardiac Arrest; ಹಠಾತ್ ಹೃದಯ ಸ್ತಂಭನಕ್ಕೆ ಹೃದಯ ಸಂಬಂಧಿ ಕಾಯಿಲೆಗಳು ಮುಖ್ಯ ಕಾರಣ. ಆದ್ದರಿಂದ ಅವುಗಳ ತಡೆಗಟ್ಟುವಿಕೆ ಹೃದಯ ಸ್ತಂಭನವನ್ನು ತಡೆಗಟ್ಟುವಲ್ಲಿ ಬಹಳ ಸಹಕಾರಿ. ರೋಗಿಗಳು ನಿಯಮಿತವಾಗಿ ಆರೋಗ್ಯ ತಪಾಸಣೆಗೆ ಒಳಗಾಗಬೇಕು ಮತ್ತು ಮಧುಮೇಹ, ಅಧಿಕ ರಕ್ತದೊತ್ತಡ ಮತ್ತು ಅಧಿಕ ಕೊಲೆಸ್ಟ್ರಾಲ್‌ನಂತಹ ಅಪಾಯಕಾರಿ ಅಂಶಗಳಿಗೆ ಚಿಕಿತ್ಸೆ ಪಡೆಯಬೇಕು.

Cardiac Arrest: ಹಠಾತ್ ಹೃದಯ ಸ್ತಂಭನವನ್ನು ನಿಭಾಯಿಸುವುದು ಹೇಗೆ?
ಸಾಂದರ್ಭಿಕ ಚಿತ್ರ
Follow us on

ಹಠಾತ್ ಹೃದಯ ಸ್ತಂಭನವು (Cardiac Arrest) ಆರೋಗ್ಯದ ತುರ್ತು ಸ್ಥಿತಿಯಾಗಿದ್ದು ಹೃದಯವು ಸಂಪೂರ್ಣವಾಗಿ ಮತ್ತು ಇದ್ದಕ್ಕಿದ್ದಂತೆ ಕಾರ್ಯನಿರ್ವಹಿಸುವುದನ್ನು ನಿಲ್ಲಿಸುತ್ತದೆ. ಇದಕ್ಕೆ ತಕ್ಷಣವೇ ಚಿಕಿತ್ಸೆ ನೀಡದಿದ್ದರೆ (ನಿಮಿಷಗಳಲ್ಲಿ) ವ್ಯಕ್ತಿಯು ಸಾವಿಗೀಡಾಗುತ್ತಾನೆ. ಇದು ಹೃದಯಾಘಾತದಿಂದ ಸಂಪೂರ್ಣವಾಗಿ ಭಿನ್ನವಾಗಿದ್ದು, ಹೃದಯಕ್ಕೆ ರಕ್ತ ಪೂರೈಸುವ ರಕ್ತನಾಳಗಳ ಸಂಪೂರ್ಣ ತಡೆಗಟ್ಟುವಿಕೆಯಿಂದ ಉಂಟಾಗುವ ತುರ್ತುಸ್ಥಿತಿಯಾಗಿದೆ. ಹೀಗಾಗಿ ಎಲ್ಲ ಸಾವುಗಳಿಗೂ ಹೃದಯಾಘಾತ ಮಾತ್ರ ಕಾರಣವಲ್ಲ ಮತ್ತು ಹೃದಾಯಾಘಾತದಿಂದ ತಕ್ಷಣ ಸಾವು ಸಂಭವಿಸುವುದಿಲ್ಲ ಎಂಬುದನ್ನು ಮೊದಲು ಅರ್ಥ ಮಾಡಿಕೊಳ್ಳಬೇಕು. ಹೃದಯಾಘಾತವು ಹೃದಯ ಸ್ತಂಭನಕ್ಕೆ ಕಾರಣವಾಗಬಹುದು ಆದರೆ ಎಲ್ಲಾ ಸಮಯದಲ್ಲೂ ಇದೊಂದೇ ಕಾರಣವಲ್ಲ. ಹೃದಯ ಸ್ತಂಭನವು ಹೆಚ್ಚಿನ ಸಮಯದಲ್ಲಿ ವ್ಯಕ್ತಿಯ ಸಾವಿಗೆ ಕಾರಣವಾಗುತ್ತದೆ.

ಹೃದಯ ಸ್ತಂಭನದ ಸಮಯದಲ್ಲಿ ನೀವು ಹೇಗೆ ಸಹಾಯ ಮಾಡಬಹುದು?

ಓರ್ವ ವ್ಯಕ್ತಿಯು ನಿಮ್ಮೆದುರಿಗೆ ಹೃದಯ ಸ್ತಂಭನದಿಂದ ಬಳಲುತ್ತಿದ್ದರೆ ಆ ವ್ಯಕ್ತಿಯ ಜೀವವನ್ನು ಉಳಿಸಲು ವಿವಿಧ ಕ್ರಮಗಳನ್ನು ನೀವು ಕೈಗೊಳ್ಳಬಹುದೆಂಬುದು ತಿಳಿದಿರಲಿ. ಇದಕ್ಕೆ ಮೊದಲು ಸ್ಪಂದಿಸುವವರು ಸುತ್ತಮುತ್ತಲಿನ ಇತರರ ಗಮನ ಮತ್ತು ಸಹಾಯವನ್ನು ಪಡೆಯಬೇಕು. ಹೃದಯ-ಶ್ವಾಸಕೋಶದ ಮರು ಜೀವ ನೀಡುವ ತರಬೇತಿ ಪಡೆದ ಯಾರಾದರೂ ತಕ್ಷಣ ಅದನ್ನು ಪ್ರಾರಂಭಿಸಬೇಕು. ರೋಗಿಯನ್ನು ಹತ್ತಿರದ ಆಸ್ಪತ್ರೆಗೆ ಸ್ಥಳಾಂತರಿಸಲು ಇನ್ನೊಬ್ಬ ವ್ಯಕ್ತಿ ತುರ್ತು ಆಂಬ್ಯುಲೆನ್ಸ್‌ಗೆ ಕರೆ ಮಾಡಬೇಕು. ಸ್ವಯಂಚಾಲಿತ ಡಿಫಿಬ್ರಿಲೇಟರ್ ಲಭ್ಯವಿದ್ದರೆ, ತಕ್ಷಣವೇ ಅದನ್ನು ಪಡೆದುಕೊಳ್ಳಬೇಕು ಮತ್ತು ಅದನ್ನು ರೋಗಿಗೆ ಲಗತ್ತಿಸಬೇಕು. ಇದರಿಂದ ವ್ಯಕ್ತಿಯನ್ನು ಪ್ರಾಣಾಪಾಯದಿಂದ ಕಾಪಾಡಬಹುದು. ಸ್ವಯಂಚಾಲಿತ ಡಿಫಿಬ್ರಿಲೇಟರ್‌ಗಳು ಜಿಮ್‌ನಂತಹ ವಿವಿಧ ಸ್ಥಳಗಳಲ್ಲಿ ಮತ್ತು ಕೆಲವೊಮ್ಮೆ ಮಾಲ್‌ಗಳಲ್ಲಿ ಲಭ್ಯವಿದೆ. ಇವುಗಳನ್ನು ರೋಗಿಗೆ ಲಗತ್ತಿಸಿದಾಗ ಹೃದಯದ ಲಯವನ್ನು ನಿರ್ಧರಿಸಲು ಮತ್ತು ಅಗತ್ಯವಿದ್ದರೆ ಶಾಕ್ ನೀಡಲು ಸಾಧ್ಯವಾಗುತ್ತದೆ. ಶಾಕ್ ನೀಡಿದ ನಂತರ ರೋಗಿಯು ಪ್ರಜ್ಞೆಯನ್ನು ಮರಳಿ ಪಡೆಯದಿದ್ದರೆ, ಆಂಬ್ಯುಲೆನ್ಸ್‌ಗಾಗಿ ಕಾಯುತ್ತ ಹೃದಯ-ಶ್ವಾಸಕೋಶದ ಪುನರುಜ್ಜೀವನವನ್ನು ಮುಂದುವರಿಸಬೇಕು.

ಹಠಾತ್ ಹೃದಯ ಸ್ತಂಭನಕ್ಕೆ ಕಾರಣವೇನು?

ಸಾಮಾನ್ಯ ಕಾರಣವೆಂದರೆ ಹೃದಯಾಘಾತ. ಆದಾಗ್ಯೂ, ಕಾರ್ಡಿಯೊಮಿಯೊಪತಿ, ಹೃದಯ ವೈಫಲ್ಯ, ಕವಾಟದ ಹೃದಯ ಕಾಯಿಲೆ ಅಥವಾ ಜನ್ಮಜಾತ ಹೃದಯ ಸ್ಥಿತಿಗಳಂತಹ ಇತರ ವಿವಿಧ ಪರಿಸ್ಥಿತಿಗಳಿಂದ ಹಠಾತ್ ಹೃದಯ ಸ್ತಂಭನವಾಗಬಹುದು. ಈ ಯಾವುದೇ ಪರಿಸ್ಥಿತಿಗಳ ತಡೆಗಟ್ಟುವಿಕೆ ಮತ್ತು ಸಮಯೋಚಿತ ಚಿಕಿತ್ಸೆಯು ಹಠಾತ್ ಹೃದಯ ಸ್ತಂಭನವನ್ನು ತಡೆಯಬಹುದು. ಹೃದಯಾಘಾತ ಹೊಂದಿದ ರೋಗಿಗಳಲ್ಲಿ, ಆಂಜಿಯೋಪ್ಲ್ಯಾಸ್ಟಿ ಅಥವಾ ಥ್ರಂಬೋಲಿಸಿಸ್ ಮೂಲಕ ಹೃದಯದಲ್ಲಿ ಮುಚ್ಚಿದ ರಕ್ತನಾಳವನ್ನು ತೆರೆಯುವುದು ಹೃದಯ ಸ್ತಂಭನವನ್ನು ತಡೆಗಟ್ಟುತ್ತದೆ ಮತ್ತು ಪ್ರಾಣ ಉಳಿಸುತ್ತದೆ. ಹೃದಯಾಘಾತದ ರೋಗಿಗಳಲ್ಲಿ, ಆಂಟಿಅರಿಥ್ಮಿಕ್ ಔಷಧಿಗಳೆಂದು ಕರೆಯಲ್ಪಡುವ ನಿರ್ದಿಷ್ಟ ಔಷಧಿಗಳನ್ನು ಬಳಸಲಾಗುತ್ತದೆ.

ಇದನ್ನೂ ಓದಿ: Cardiac Arrest: ಮಕ್ಕಳಲ್ಲೂ ಕಂಡು ಬರುತ್ತಿದೆ ಹಠಾತ್‌ ಹೃದಯ ಸ್ತಂಭನ

ಹೆಚ್ಚಿನ ಅಪಾಯದ ಹೃದಯ ವೈಫಲ್ಯದ ರೋಗಿಗಳಲ್ಲಿ, ಆಂತರಿಕ ಕಾರ್ಡಿಯೋವರ್ಟರ್ ಡಿಫಿಬ್ರಿಲೇಟರ್ (ICD) ಸಾಧನಗಳನ್ನು ಅಳವಡಿಸಲಾಗುತ್ತದೆ. ಈ ಸಾಧನಗಳು ಹೃದಯದ ಲಯವನ್ನು ಮೇಲ್ವಿಚಾರಣೆ ಮಾಡುತ್ತದೆ ಮತ್ತು ಹೃದಯ ಸ್ತಂಭನವಾದಾಗ ಶಾಕ್ ಚಿಕಿತ್ಸೆಯನ್ನು ನೀಡುತ್ತದೆ. ಅಂತೆಯೇ, ಶಸ್ತ್ರಚಿಕಿತ್ಸೆಗಳು ಮತ್ತು ಸಾಧನಗಳು ಕವಾಟದ ಹೃದಯ ಕಾಯಿಲೆ ಮತ್ತು ಜನ್ಮಜಾತ ಹೃದ್ರೋಗ ರೋಗಿಗಳಲ್ಲಿ ಹೃದಯ ಸ್ತಂಭನದ ಸಂದರ್ಭಗಳನ್ನು ತಡೆಯಲು ಸಹಾಯ ಮಾಡುತ್ತವೆ.

ಹೃದಯ ಸ್ತಂಭನವನ್ನು ತಡೆಯುವುದು ಹೇಗೆ?

ಹಠಾತ್ ಹೃದಯ ಸ್ತಂಭನಕ್ಕೆ ಹೃದಯ ಸಂಬಂಧಿ ಕಾಯಿಲೆಗಳು ಮುಖ್ಯ ಕಾರಣ. ಆದ್ದರಿಂದ ಅವುಗಳ ತಡೆಗಟ್ಟುವಿಕೆ ಹೃದಯ ಸ್ತಂಭನವನ್ನು ತಡೆಗಟ್ಟುವಲ್ಲಿ ಬಹಳ ಸಹಕಾರಿ. ರೋಗಿಗಳು ನಿಯಮಿತವಾಗಿ ಆರೋಗ್ಯ ತಪಾಸಣೆಗೆ ಒಳಗಾಗಬೇಕು ಮತ್ತು ಮಧುಮೇಹ, ಅಧಿಕ ರಕ್ತದೊತ್ತಡ ಮತ್ತು ಅಧಿಕ ಕೊಲೆಸ್ಟ್ರಾಲ್‌ನಂತಹ ಅಪಾಯಕಾರಿ ಅಂಶಗಳಿಗೆ ಚಿಕಿತ್ಸೆ ಪಡೆಯಬೇಕು. ಧೂಮಪಾನವನ್ನು ನಿಲ್ಲಿಸಬೇಕು ಮತ್ತು ನಿಯಮಿತ ವ್ಯಾಯಾಮ ಮತ್ತು ಉತ್ತಮ ಆಹಾರ ಪದ್ಧತಿಗಳೊಂದಿಗೆ ಆರೋಗ್ಯಕರ ಜೀವನಶೈಲಿಯನ್ನು ರೂಢಿಸಿಕೊಳ್ಳಬೇಕು.

ಇದನ್ನೂ ಓದಿ: How to Do CPR: ಹಠಾತ್ ಹೃದಯ ಸ್ತಂಭನವಾದ ವ್ಯಕ್ತಿಗೆ ಮೊದಲು ನೀವು ಏನು ಮಾಡಬೇಕು? ತಕ್ಷಣದ ಕ್ರಮಗಳೇನು?

ಮಾನಸಿಕ ಒತ್ತಡ ಮತ್ತು ಪಾಶ್ಚಿಮಾತ್ಯ ಜೀವನಶೈಲಿಯು ಹೃದ್ರೋಗಕ್ಕೆ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ, ವಿಶೇಷವಾಗಿ ಕಿರಿಯ ವಯಸ್ಸಿನವರಲ್ಲಿನ ಹೃದಯ ಕಾಯಿಲೆಗಳಿಗೆ. ಇವುಗಳನ್ನು ಸಮಯೋಚಿತವಾಗಿ ನಿಭಾಯಿಸಬೇಕು. ವೃತ್ತಿಪರ ಕ್ರೀಡೆಗಳಲ್ಲಿ ಭಾಗಿಯಾಗುವ ವ್ಯಕ್ತಿಗಳು ಹೃದ್ರೋಗಕ್ಕಾಗಿ ಔಪಚಾರಿಕವಾಗಿ ಪರೀಕ್ಷಿಸಲ್ಪಡಬೇಕು. ಫೀಲ್ಡ್‌ನಲ್ಲಿರುವ ಆಟಗಾರರಲ್ಲಿ ಹಠಾತ್ ಹೃದಯದ ಸಾವಿಗೆ ರೋಗನಿರ್ಣಯ ಮಾಡದ ಹೃದ್ರೋಗವು ಸಾಮಾನ್ಯ ಕಾರಣವಾಗಿದೆ. ಈ ಸ್ಥಿತಿಯ ಬಗ್ಗೆ ಸಾಮಾನ್ಯ ಅರಿವು ಕೂಡ ಜನರಲ್ಲಿ ಹೆಚ್ಚಾಗಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಸಾಮಾನ್ಯವಾಗಿ ಸ್ವಯಂಚಾಲಿತ ಡಿಫಿಬ್ರಿಲೇಟರ್‌ಗಳ ಲಭ್ಯತೆಯು ಜೀವಗಳನ್ನು ಉಳಿಸುತ್ತದೆ. ಹೃದಯ-ಶ್ವಾಸಕೋಶದ ಪುನರುಜ್ಜೀವನದ ತರಬೇತಿಯನ್ನು ಹೆಚ್ಚಿನ ವ್ಯಕ್ತಿಗಳಿಗೆ ನೀಡಬೇಕು.

ಹೃದಯ ಸ್ತಂಭನದ ಕಾರಣಗಳು ಮತ್ತು ನಿರ್ವಹಣೆಯ ಬಗ್ಗೆ ಜಾಗೃತಿಯನ್ನು ಹೆಚ್ಚಿಸುವುದರಿಂದ ಈ ರೀತಿ ಸಾವುಗಳನ್ನು ತಡೆಗಟ್ಟಬಹುದು.

ಡಾ.ಗಣೇಶ್ ನಲ್ಲೂರು ಶಿವು
(ಲೇಖಕರು: ಹಿರಿಯ ಇಂಟರ್ವೆನ್ಷನಲ್ ಕಾರ್ಡಿಯಾಲಜಿಸ್ಟ್, ಕಾವೇರಿ ಆಸ್ಪತ್ರೆ ಎಲೆಕ್ಟ್ರಾನಿಕ್ ಸಿಟಿ, ಬೆಂಗಳೂರು)