ಮಳೆಗಾಲದಲ್ಲಿ ಈ ತರಕಾರಿಗಳನ್ನು ಸೇವನೆ ಮಾಡಬಾರದಂತೆ! ಯಾಕೆ ಗೊತ್ತಾ?
ಸೊಪ್ಪು, ತರಕಾರಿ ನಮ್ಮ ಆರೋಗ್ಯ ಕಾಪಾಡಿಕೊಳ್ಳಲು ಬಹಳ ಮುಖ್ಯ ಎಂಬುದು ತಿಳಿದ ವಿಚಾರ. ಆದರೆ ಮಳೆಗಾಲದಲ್ಲಿ ಕೆಲವು ರೀತಿಯ ತರಕಾರಿಗಳನ್ನು ಅಪ್ಪಿತಪ್ಪಿಯೂ ಸೇವಿಸಬಾರದು. ಹೌದು, ಪೌಷ್ಟಿಕತಜ್ಞೆ ಕಿರಣ್ ಕುಕ್ರೇಜಾ ನೀಡಿರುವ ಸಲಹೆಯಾನುಸಾರ ಕೆಲವು ಸೊಪ್ಪು ಮತ್ತು ತರಕಾರಿ ಮಳೆಗಾಲದಲ್ಲಿ ಸೇವನೆ ಮಾಡುವುದಕ್ಕೆ ಯೋಗ್ಯವಲ್ಲ. ಇದರ ಸೇವನೆಯಿಂದ ಆರೋಗ್ಯ ಪ್ರಯೋಜನಕ್ಕಿಂತ ಸಮಸ್ಯೆಗಳೇ ಹೆಚ್ಚಾಗುತ್ತದೆ ಎಂದು ಅವರು ಎಚ್ಚರಿಸಿದ್ದಾರೆ. ಹಾಗಾದರೆ ಆ ತರಕಾರಿಗಳು ಯಾವುವು? ಯಾವುದನ್ನು ತಿನ್ನಬಾರದು ಎಂಬುದನ್ನು ತಿಳಿದುಕೊಳ್ಳಿ.

ತರಕಾರಿಗಳು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದು ಎಲ್ಲರಿಗೂ ತಿಳಿದಿರುವ ವಿಚಾರ. ಆದರೆ ಬಹಳ ಕಡಿಮೆ ಜನರಿಗೆ ತಿಳಿದಿರುವ ಒಂದು ವಿಷಯವಿದೆ. ಹವಾಮಾನ ಬದಲಾವಣೆಗಳಿಗೆ ಅನುಗುಣವಾಗಿ ಕೆಲವು ತರಕಾರಿಗಳನ್ನು ಸೇವಿಸಬೇಕು ಮತ್ತು ಕೆಲವನ್ನು ಸೇವಿಸಬಾರದು. ಈ ಮುನ್ನೆಚ್ಚರಿಕೆಗಳನ್ನು ಅನುಸರಿಸುವುದರಿಂದ ಮಾತ್ರ ದೇಹವು ಬದಲಾಗುತ್ತಿರುವ ಋತುಗಳಿಗೆ ಹೊಂದಿಕೊಳ್ಳುತ್ತದೆ. ಇಲ್ಲದಿದ್ದರೆ, ಆರೋಗ್ಯ (health) ಸಮಸ್ಯೆಗಳು ಬಂದೆ ಬರುತ್ತೆ. ವಿಶೇಷವಾಗಿ ಮಳೆಗಾಲದಲ್ಲಿ, ಸೇವಿಸುವ ಆಹಾರದ ಬಗ್ಗೆ ಬಹಳ ಜಾಗರೂಕರಾಗಿರಬೇಕು. ಈ ಸಮಯದಲ್ಲಿ ರೋಗಗಳ ಅಪಾಯ ಹೆಚ್ಚು. ಪೌಷ್ಟಿಕತಜ್ಞೆ ಕಿರಣ್ ಕುಕ್ರೇಜಾ ಅವರು ಮಳೆಗಾಲದಲ್ಲಿ ಕೆಲವು ತರಕಾರಿಗಳನ್ನು (monsoon vegetables) ಸೇವನೆ ಮಾಡುವುದು ಒಳ್ಳೆಯದಲ್ಲ ಎಂದಿದ್ದಾರೆ. ಆ ತರಕಾರಿಗಳು ಯಾವುದು? ಯಾಕೆ ಸೇವನೆ ಮಾಡಬಾರದು ಎಂಬುದನ್ನು ತಮ್ಮ ಇನ್ಸ್ಟಾಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಹಾಗಾದರೆ ನಾವು ಮಳೆಗಾಲದಲ್ಲಿ ಯಾವ ತರಕಾರಿಗಳನ್ನು ಸೇವಿಸಬಾರದು (vegetables to avoid in monsoon)? ಅದಕ್ಕೆ ಕಾರಣವೇನು ಎಂಬುದರ ಬಗ್ಗೆ ವಿವರವಾಗಿ ತಿಳಿದುಕೊಳ್ಳಿ.
ಈ ಸಮಯದಲ್ಲಿ ಮುನ್ನೆಚ್ಚರಿಕೆ ಅಗತ್ಯ
ಮಳೆಗಾಲದಲ್ಲಿ, ತರಕಾರಿಗಳನ್ನು ಸೇವಿಸುವ ಮೊದಲು ಒಂದು ಅಥವಾ ಎರಡು ಬಾರಿ ಪರಿಶೀಲಿಸುವುದು ಅವಶ್ಯಕ. ಕಾರಣವೇನೆಂದರೆ ಈ ಸಮಯದಲ್ಲಿ ಬ್ಯಾಕ್ಟೀರಿಯಾ ಮತ್ತು ಕೀಟಗಳು ಹೆಚ್ಚು ಸಕ್ರಿಯವಾಗಿರುತ್ತವೆ. ಅವು ವೇಗವಾಗಿ ಸಂತಾನೋತ್ಪತ್ತಿ ಮಾಡುತ್ತವೆ ಇದರಿಂದ ಅವು ಬೇಗನೆ ಹರಡಬಹುದು. ಅಷ್ಟೇ ಅಲ್ಲ, ಮಳೆಗಾಲದಲ್ಲಿ ತರಕಾರಿಗಳ ಮೇಲೆ ಅತಿಯಾದ ತೇವಾಂಶವೂ ಇರುತ್ತದೆ. ಇದು ಶಿಲೀಂಧ್ರಗಳು, ಬ್ಯಾಕ್ಟೀರಿಯಾಗಳು ಮತ್ತು ಇತರ ಕೀಟಗಳು ಬೆಳೆಯಲು ಅವಕಾಶ ಮಾಡಿಕೊಡುತ್ತದೆ. ನಿಮಗೆ ತಿಳಿದಿರಬಹುದು, ಮಣ್ಣಿನಲ್ಲಿ ಬೆಳೆಯುವ ಕೆಲವು ರೀತಿಯ ತರಕಾರಿಗಳು ಬಹಳಷ್ಟು ನೀರನ್ನು ಹೀರಿಕೊಳ್ಳುತ್ತವೆ. ಅವುಗಳಲ್ಲಿ ಕೀಟಗಳು ಇರುವ ಅಪಾಯ ಹೆಚ್ಚಾಗಿರುತ್ತದೆ. ಅಂತಹ ತರಕಾರಿಗಳನ್ನು ಸೇವಿಸುವುದರಿಂದ ವಿವಿಧ ರೀತಿಯ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳಿಗೆ ಕಾರಣವಾಗಬಹುದು. ಸೋಂಕು, ಗ್ಯಾಸ್, ಹೊಟ್ಟೆ ಉಬ್ಬುವುದು ಮತ್ತು ಆಹಾರವೇ ವಿಷವಾಗುವ ಅಪಾಯವೂ ಇದೆ. ಅದಕ್ಕಾಗಿಯೇ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು.
ಪಾಲಕ್, ಮೆಂತೆ ಸೊಪ್ಪು
ಮಳೆಗಾಲದಲ್ಲಿ, ಸೊಪ್ಪು, ತರಕಾರಿಗಳು ಹೆಚ್ಚಿನ ತೇವಾಂಶವನ್ನು ಹೀರಿಕೊಳ್ಳುವುದರಿಂದ ಅವು ಬೇಗನೆ ಹಾಳಾಗುವ ಸಾಧ್ಯತೆ ಹೆಚ್ಚು. ಇದಲ್ಲದೆ, ಅವುಗಳ ಮೇಲೆ ಶಿಲೀಂಧ್ರ ಮತ್ತು ಬ್ಯಾಕ್ಟೀರಿಯಾಗಳು ಬೆಳೆಯುವ ಅಪಾಯ ಹೆಚ್ಚಾಗಿರುತ್ತದೆ. ಕಿರಣ್ ಕುಕ್ರೇಜಾ ಅವರ ಪ್ರಕಾರ, ವಿಶೇಷವಾಗಿ ಪಾಲಕ್ ಮತ್ತು ಮೆಂತೆ ಸೊಪ್ಪಿನಲ್ಲಿ, ಹೆಚ್ಚಿನ ಸಂಖ್ಯೆಯ ಸೂಕ್ಷ್ಮಜೀವಿಗಳು ಇರುವ ಸಾಧ್ಯತೆಯಿದೆ. ಈ ಎರಡು ಸೊಪ್ಪು ಮಾತ್ರವಲ್ಲ, ಪ್ರತಿಯೊಂದು ಸೊಪ್ಪಿನ ಮೇಲೂ ಕಣ್ಣಿಗೆ ಕಾಣಿಸದ ಹಲವಾರು ಸೂಕ್ಷ್ಮ ಕೀಟಗಳು ಇರುತ್ತವೆ. ಹಾಗಾಗಿ ಮಳೆಗಾಲದಲ್ಲಿ ಅವುಗಳನ್ನು ಸಾಧ್ಯವಾದಷ್ಟು ಖರೀದಿಸುವುದನ್ನು ತಪ್ಪಿಸುವುದು ಉತ್ತಮ. ನೀವು ಅವುಗಳನ್ನು ಖರೀದಿಸಲೇ ಬೇಕಾದರೆ ಅವುಗಳನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸುವುದು ಅತ್ಯಗತ್ಯ. ಸೊಪ್ಪು, ತರಕಾರಿಗಳನ್ನು ಸ್ವಲ್ಪ ಉಪ್ಪಿನೊಂದಿಗೆ ನೀರಿನಲ್ಲಿ ತೊಳೆಯುವುದು ಉತ್ತಮ.
ಇಲ್ಲಿದೆ ನೋಡಿ ವಿಡಿಯೋ:
View this post on Instagram
ಹೂಕೋಸು, ಎಲೆಕೋಸು
ಮಳೆಗಾಲದಲ್ಲಿ, ಹೂಕೋಸು ಮತ್ತು ಎಲೆಕೋಸು ಕೂಡ ಬಳಸಬಾರದು. ಅವುಗಳಲ್ಲಿ ತೇವಾಂಶ ಹೆಚ್ಚಾಗಿದ್ದು, ಪದರಗಳ ನಡುವೆ ಶಿಲೀಂಧ್ರ ಇರುವ ಅಪಾಯವಿದೆ. ಎರಡೂ ಆರೋಗ್ಯಕ್ಕೆ ಒಳ್ಳೆಯದಾದರೂ, ಮಳೆಗಾಲದಲ್ಲಿ ಅವುಗಳ ಸೇವನೆ ಮಾಡುವುದನ್ನು ತಪ್ಪಿಸುವುದು ಉತ್ತಮ. ಸೊಪ್ಪಿಗೆ ಹೋಲಿಸಿದರೆ, ಈ ಎರಡು ರೀತಿಯ ತರಕಾರಿಗಳಲ್ಲಿ ಶಿಲೀಂಧ್ರ ಇರುವ ಸಾಧ್ಯತೆ ಹೆಚ್ಚು. ಬಿಸಿ ನೀರಿನಲ್ಲಿ ತೊಳೆದರೂ ಸಹ, ಕೆಲವೊಮ್ಮೆ ಈ ಸೂಕ್ಷ್ಮಜೀವಿಗಳು ಸಂಪೂರ್ಣವಾಗಿ ಹೋಗುವುದಿಲ್ಲ. ಆದ್ದರಿಂದ, ಈ ಎರಡನ್ನು ಸಾಧ್ಯವಾದಷ್ಟು ದೂರವಿಡಿ.
ಅಣಬೆಗಳು
ಒಂದು ಕಾಲದಲ್ಲಿ, ಇವುಗಳಿಗೆ ಬೇಡಿಕೆ ಬಹಳ ಕಡಿಮೆ ಇತ್ತು. ಆದರೆ ಇದರ ಆರೋಗ್ಯ ಪ್ರಯೋಜನಗಳ ಬಗ್ಗೆ ತಿಳಿದ ಮೇಲೆ, ಬಹಳಷ್ಟು ಜನರು ಅಣಬೆಗಳನ್ನು ಬಳಸುತ್ತಿದ್ದಾರೆ. ನಿಯಮಿತ ದಿನಗಳಲ್ಲಿ ಅವುಗಳನ್ನು ತಿನ್ನುವುದು ಒಳ್ಳೆಯದು. ಆದರೆ ಮಳೆಗಾಲದಲ್ಲಿ, ಅವು ಕಲುಷಿತಗೊಳ್ಳುವ ಸಾಧ್ಯತೆ ಹೆಚ್ಚು. ಮಣ್ಣಿನಲ್ಲಿ ಉಳಿದು ಬಹಳಷ್ಟು ನೀರನ್ನು ಹೀರಿಕೊಳ್ಳುವುದರಿಂದ ಸೂಕ್ಷ್ಮಜೀವಿಗಳು, ಕೀಟಗಳು ಮತ್ತು ಶಿಲೀಂಧ್ರಗಳು ಹೆಚ್ಚಾಗಿರುತ್ತದೆ. ಅದಕ್ಕಾಗಿಯೇ ಅವುಗಳ ಸೇವನೆಯನ್ನು ಗಣನೀಯವಾಗಿ ಕಡಿಮೆ ಮಾಡಬೇಕು. ಅವು ಸ್ವಚ್ಛವಾಗಿ ಕಂಡರೂ, ಒಳಗೆ ಶಿಲೀಂಧ್ರಗಳು ಇರುವ ಅಪಾಯವಿದೆ. ಆದ್ದರಿಂದ, ಮಳೆಗಾಲದಲ್ಲಿ ಇವುಗಳ ಸೇವನೆ ಮಾಡುವುದನ್ನು ತಪ್ಪಿಸಬೇಕು.
ಇದನ್ನೂ ಓದಿ: ನಿಮಗೂ ಮಳೆಗಾಲದಲ್ಲಿ ಚರ್ಮದ ಸಮಸ್ಯೆ ಕಂಡುಬರುತ್ತಾ? ಟೆನ್ಶನ್ ಬಿಡಿ ವೈದ್ಯರು ನೀಡಿರುವ ಈ ಸಲಹೆ ಟ್ರೈ ಮಾಡಿ
ಆಲೂಗಡ್ಡೆ
ಮಣ್ಣಿನಲ್ಲಿ ಬೆಳೆಯುವ ಆಲೂಗಡ್ಡೆಗಳಲ್ಲಿ ಶಿಲೀಂಧ್ರ ಬೆಳೆಯುವ ಅಪಾಯವಿದೆ. ಅದರಲ್ಲಿಯೂ ಮೊಳಕೆಯೊಡೆದ ಆಲೂಗಡ್ಡೆಯನ್ನು ಯಾವುದೇ ಸಂದರ್ಭದಲ್ಲಿಯೂ ಸೇವಿಸಬಾರದು. ಮೊಳಕೆಯೊಡೆದ ಆಲೂಗಡ್ಡೆ ಆರೋಗ್ಯಕ್ಕೆ ತುಂಬಾ ಹಾನಿಕಾರಕವಾದ ಸೋಲನೈನ್ ಅನ್ನು ಹೊಂದಿರುತ್ತದೆ. ಆದ್ದರಿಂದ, ಅವುಗಳನ್ನು ಸಾಧ್ಯವಾದಷ್ಟು ತಪ್ಪಿಸಬೇಕು. ಕ್ಯಾರೆಟ್, ಸಿಹಿ ಗೆಣಸುಗಳಂತಹ ತರಕಾರಿ ಖರೀದಿಸುವಾಗ ಕಾಳಜಿ ವಹಿಸಬೇಕು, ಏಕೆಂದರೆ ಅವುಗಳ ಮೇಲೆ ಬಹಳಷ್ಟು ಕೊಳೆ ಇರುತ್ತದೆ. ಆದ್ದರಿಂದ, ಅಡುಗೆ ಮಾಡುವ ಮೊದಲು ಅವುಗಳನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಬೇಕು. ಆರೋಗ್ಯವಾಗಿರಲು ಈ ಸಲಹೆಗಳನ್ನು ಮರೆಯಬಾರದು.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ