Arthritis: ಮಳೆಗಾಲದಲ್ಲಿ ಕಾಡುವ ಸಂಧಿವಾತಕ್ಕೆ ಇಲ್ಲಿದೆ ಪರಿಹಾರ
Arthritis and Monsoon : ಸಂಧಿವಾತದಿಂದ ಬಳಲುತ್ತಿದ್ದೀರಾ? ಮಳೆಗಾಲದಲ್ಲಿ ಈ ಸಮಸ್ಯೆಯನ್ನು ನಿರ್ವಹಿಸುವುದು ಎಂದು ಯೋಚಿಸುತ್ತಿದ್ದೀರಾ? ಹಾಗಿದ್ದರೆ ಈ ಬರಹವನ್ನು ಓದಿ ಕೆಲ ಸಲಹೆಗಳು ಉಪಯುಕ್ತವೆನ್ನಿಸಬಹುದು.
Arthritis: ಸಾಮಾನ್ಯವಾಗಿ ಸಂಧಿವಾತ ಸುಮಾರು 65ರ ನಂತರ ಕಾಣಿಸಿಕೊಳ್ಳಲಾರಂಭಿಸುತ್ತದೆ. ಮೂಳೆ, ಮಾಂಸಖಂಡಗಳ ಉರಿಯೂತದ ಸಮಸ್ಯೆಯೇ ಸಂಧಿವಾತ. ಇದರಲ್ಲಿ ಆಸ್ಟಿಯೋ ಮತ್ತು ರುಮಟಾಯ್ಡ್ ಎಂಬ ಎರಡು ಪ್ರಕಾರಗಳಿವೆ. ಸಾಮಾನ್ಯವಾಗಿ ಬೊಜ್ಜುಳ್ಳವರಲ್ಲಿ ಇದು ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಯಾವುದೇ ಸಂಕೀರ್ಣ ರೋಗವು ಆಯಾ ಋತುಮಾನಕ್ಕೆ ತಕ್ಕಂತೆ ತನ್ನ ನಾಲಗೆಯನ್ನು ಚಾಚುತ್ತಿರುತ್ತದೆ. ಹಾಗೆಯೇ ಮಳೆಗಾಲ ಮತ್ತು ಚಳಿಗಾಲದಲ್ಲಿ ಸಂದಿವಾತವು ತನ್ನ ಆಟಾಟೋಪವನ್ನು ಹೆಚ್ಚು ತೋರಿಸುತ್ತದೆ. ಏಕೆಂದರೆ ಹವಾಮಾನದ ಒತ್ತಡ, ತಾಪಮಾನದ ಬದಲಾವಣೆಯಿಂದ ಮಾಂಸಖಂಡ, ಮೂಳೆಗಳಲ್ಲಿ ಉರಿಯೂತ ಶುರುವಾಗಿ ಅಸಾಧ್ಯ ನೋವು ಉಂಟಾಗುತ್ತದೆ. ಹಾಗಾಗಿ ಸಂಧಿವಾತವಿರುವವರಿಗೆ ಮಳೆಗಾಲವೆಂದರೆ ಉಸಿರು ಬಿಗಿಗೊಳ್ಳುತ್ತದೆ. ಅದರಲ್ಲೂ ಬೆಳಗಿನ ವೇಳೆಯಂತೂ ಇದು ತೀರಾ ತ್ರಾಸದಾಯಕ.
ಹಾಗಾಗಿ ತಜ್ಞವೈದ್ಯರು ನಿತ್ಯ ವ್ಯಾಯಾಮವೊಂದೇ ಇದಕ್ಕೆ ಮದ್ದು ಎನ್ನುತ್ತಾರೆ. ದಿನವೂ ನಡಿಗೆ, ಯೋಗ, ವ್ಯಾಯಾಮಗಳನ್ನು ನಿರ್ದಿಷ್ಟ ಪ್ರಮಾಣದಲ್ಲಿ ಮಾಡಿದಲ್ಲಿ ಸಂಧಿವಾತದಿಂದ ಉಂಟಾಗುವ ನೋವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬಹುದು. ದೈಹಿಕ ಸ್ಥಿತಿಯ ಆಧಾರದ ಮೇಲೆ ಮಾನಸಿಕ ಸ್ಥಿತಿಯೂ ಸ್ಥಿಮಿತದಲ್ಲಿರುತ್ತದೆ. ಹಾಗಾಗಿ ಆಯಾ ಋತುಮಾನಗಳಿಗೆ ತಕ್ಕಂತೆ ಜಾಗ್ರತೆ ವಹಿಸುವುದು ಅತ್ಯವಶ್ಯ. ನೋವಿನ ಪ್ರಮಾಣ ಹೆಚ್ಚಾದಾಗ ದೇಹ ಚಲಿಸಲೂ ತಕರಾರು ತೆಗೆಯುತ್ತದೆ. ಆಗ ತಂಪು ಅಥವಾ ಬಿಸಿನೀರಿನ ಶಾಖವನ್ನೂ ನೋವಿರುವ ಜಾಗಕ್ಕೆ ಆಗಾಗ ಕೊಟ್ಟುಕೊಳ್ಳಬಹುದು. ಜೊತೆಗೆ ಎಣ್ಣೆಯಿಂದ ಮಸಾಜ್ ಮಾಡುವ ಮೂಲಕ ರಕ್ತಪರಿಚಲನೆಯನ್ನು ಚುರುಕುಗೊಳಿಸಬಹುದು.
ಇದನ್ನೂ ಓದಿ : Alzheimer’s Disease: ಅಮೆರಿಕದಲ್ಲಿ 65ರ ಆಸುಪಾಸಿನ 6 ಮಿಲಿಯನ್ ಜನ ಈ ಕಾಯಿಲೆಗೆ ತುತ್ತಾಗಿದ್ದಾರೆ
ಎಲ್ಲಕ್ಕಿಂಥ ಮುಖ್ಯವಾಗಿ ಹೆಚ್ಚು ನೀರು ಕುಡಿಯಬೇಕು. ದೇಹ ನಿರ್ಜಲೀಕರಣಗೊಂಡಷ್ಟು ನೋವು ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಇನ್ನು ಸಂತುಲಿತ ಆಹಾರವೂ ಅಷ್ಟೇ ಮುಖ್ಯ. ಟೊಮ್ಯಾಟೋ, ಆಲೀವ್ ಎಣ್ಣೆ, ಹಸಿರು ತರಕಾರಿ, ಸೊಪ್ಪು, ಕಾಳುಗಳು, ಮೊಟ್ಟೆ, ಮೊಸರು, ಅವಕಾಡೋ, ಬೆರ್ರಿ, ಬ್ರೊಕೊಲಿ, ಕ್ಯಾರೆಟ್, ಶುಂಠಿ, ವಾಲ್ನಟ್, ಅನಾನಸ್, ಸಾಲ್ಮನ್ ಫಿಷ್ ಅರಿಷಿಣ… ಇಂಥ ಆಹಾರ ಪದಾರ್ಥಗಳು ನಿತ್ಯ ಊಟದ ತಟ್ಟೆಯಲ್ಲಿರುವುದು ಒಳ್ಳೆಯದು. ಜಂಕ್ ಫುಡ್, ಆಲ್ಕೊಹಾಲ್, ಧೂಮಪಾನ ಬೇಡವೇ ಬೇಡ.
ಇದನ್ನೂ ಓದಿ : Color Psychology : ಬಣ್ಣಗಳ ಮೂಲಕ ನಿಮ್ಮ ವ್ಯಕ್ತಿತ್ವ ತಿಳಿಯಿರಿ
ಚಟುವಟಿಕೆಯಿಂದ ಇರಲು ಮಾನಸಿಕ ಸ್ವಾಸ್ಥ್ಯ ವೃದ್ಧಿಸಿಕೊಳ್ಳಲು ನಿಮ್ಮ ಮನೆಯ ಅಥವಾ ಪಕ್ಕದ ಮನೆಯ ಪುಟ್ಟಮಕ್ಕಳೊಂದಿಗೆ, ಸಾಕುಪ್ರಾಣಿಗಳೊಂದಿಗೆ ಸಮಯ ಕಳೆಯುವುದೂ ಒಳ್ಳೆಯದೇ. ಧೋ ಎಂದು ಸುರಿಯುವ ಮಳೆಗಾಲವನ್ನು ಆನಂದಿಸುತ್ತ ಮನಸ್ಸನ್ನು ಆಹ್ಲಾದಕರವಾಗಿ ಇರಿಸಿಕೊಳ್ಳಬಹುದು. ಮಾನಸಿಕ ಸಮತೋಲನ ಸಾಧಿಸುವ ಮೂಲಕವೂ ದೈಹಿಕ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಉತ್ತಮ ಅಭಿರುಚಿ, ಹವ್ಯಾಸಗಳನ್ನು ರೂಢಿಸಿಕೊಂಡಷ್ಟೂ ಆಯಸ್ಸು ಗಟ್ಟಿಯಾಗುತ್ತದೆ.