Dental Health: ಹೊಸ ಹಲ್ಲುಗಳಿಗಾಗಿ ದಂತ ಕೋಶಕ್ಕೆ ಕಸಿ ಪ್ರಯೋಗ, ಡೆಂಟಲ್ ಫಿಲ್ಲಿಂಗ್ ಮಾಡುವ ಅವಶ್ಯಕತೆ ಇಲ್ಲ
ಹಲ್ಲಿನ ಆರೋಗ್ಯ: ಲಂಡನ್ನ ಕಿಂಗ್ಸ್ ಕಾಲೇಜಿನ ದಂತವೈದ್ಯರ ತಂಡ ಹೊಸ ಪ್ರಯೋಗ ನಡೆಸಿದ್ದು ಇದು ಯಶಸ್ವಿಯಾದರೆ ಹಲ್ಲು ಬಿದ್ದರೆ ಅಥವಾ ಕುಳಿ ಕಂಡು ಬಂದರೆ ಅಥವಾ ಹುಳುಕಾಗಿ ಹಾಳಾಗಿದ್ದರೆ ಜನರು ಚಿಂತಿಸುವ ಅಗತ್ಯವಿರುವುದಿಲ್ಲ. ಏಕೆಂದರೆ ಈ ಪ್ರಯೋಗ ಇಂತಹ ಸಮಸ್ಯೆಗೆ ಶಾಶ್ವತ ಪರಿಹಾರ ನೀಡುತ್ತದೆ. ಹೌದು. ಈ ವಿಷಯ ನಿಮಗೆ ಆಶ್ಚರ್ಯ ಮೂಡಿಸಬಹುದು. ಆದರೆ ಇದು ಸತ್ಯ. ಹಾಗದರೆ ಈ ಪ್ರಯೋಗ ಹೇಗೆ ನಡೆಯುತ್ತೆ? ಇದು ಹೇಗೆ ಉಪಯೋಗಕಾರಿಯಾಗಬಲ್ಲದು ಎಂಬುದನ್ನು ತಿಳಿದುಕೊಳ್ಳಿ.

ಹಲ್ಲು (Tooth) ನಮ್ಮ ಆರೋಗ್ಯ (Health) ಕಾಪಾಡಿಕೊಳ್ಳಲು ಮುಖ್ಯವಾಗಿರುತ್ತದೆ. ಆಹಾರವನ್ನು ಜಗಿದು ತಿಂದಾಗ ಮಾತ್ರ ಜೀರ್ಣಶಕ್ತಿ (Digestive power) ಸರಿಯಾಗಿರುತ್ತದೆ. ಇದೊಂದು ರೀತಿಯ ಆರೋಗ್ಯಕ್ಕೆ ಬಾಗಿಲು ಇದ್ದಂತೆ. ಆದರೆ ಬರು ಬರುತ್ತಾ ನಮ್ಮ ಹಲ್ಲುಗಳು ಹುಳುಕಾಗುತ್ತದೆ. ಇದಕ್ಕೆ ಹಲವು ಕಾರಣಗಳಿರಬಹುದು. ಆದರೆ ಹಲ್ಲುಗಳನ್ನು ಪದೇ ಪದೇ ಭರ್ತಿ ಮಾಡುವುದು ಅಥವಾ ಕೃತಕ ಹಲ್ಲನ್ನು ಹಾಕಿಕೊಳ್ಳುವುದರಿಂದ ಸಮಸ್ಯೆ ಮತ್ತಷ್ಟು ಹೆಚ್ಚಾಗುತ್ತದೆ. ಹಾಗಾಗಿಯೇ ಈ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಲು ಲಂಡನ್ನ ಕಿಂಗ್ಸ್ ಕಾಲೇಜಿನ ಸಂಶೋಧಕರು ನಿಮ್ಮ ಜೀವಕೋಶಗಳಿಂದ ಪ್ರಯೋಗಾಲಯದಲ್ಲಿ ಹೊಸ ಹಲ್ಲನ್ನು ಬೆಳೆಸಿ, ಬಳಿಕ ನಿಮ್ಮ ದವಡೆಗೆ ಕಸಿ (Transplant) ಮಾಡುತ್ತಾರೆ. ಈ ವಿಷಯ ನಿಮಗೆ ಆಶ್ಚರ್ಯ ಮೂಡಿಸುವುದು ಸಹಜ. ಆದರೆ ಇದರಿಂದ ಯಾವ ರೀತಿಯ ಪ್ರಯೋಜನವಿದೆ? ಇದನ್ನು ಪ್ರಯೋಗಾಲಯದಲ್ಲಿ ಹೇಗೆ ಬೆಳೆಸಲಾಗುತ್ತದೆ? ನಮ್ಮ ದೇಶಕ್ಕೆ ಇದರಿಂದ ಪ್ರಯೋಜನ ಸಿಗಬಹುದೇ? ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ಔಷಧದಲ್ಲಿನ ಈ ಹೊಸ ಪ್ರಗತಿಯ ಬಗ್ಗೆ ಲಂಡನ್ನ ಕಿಂಗ್ಸ್ ಕಾಲೇಜಿನ ದಂತ ವೈದ್ಯಕೀಯ, ಓರಲ್ ಮತ್ತು ಕ್ರೇನಿಯೋಫೇಷಿಯಲ್ ಸೈನ್ಸಸ್ ವಿಭಾಗದ ಕ್ಸುಚೆನ್ ಜಾಂಗ್ ಎಂಬುವವರು ಈ ಬಗ್ಗೆ ಕೆಲವು ಮಾಹಿತಿ ಹಂಚಿಕೊಂಡಿದ್ದು ಅವರ ಪ್ರಕಾರ, ಹಲ್ಲುಗಳನ್ನು ಸರಿಪಡಿಸಲು ಭರ್ತಿ ಮಾಡುವುದೊಂದೇ ಪರಿಹಾರವಲ್ಲ. ಏಕೆಂದರೆ ಕಾಲಾನಂತರದಲ್ಲಿ, ಅವು ಕೂಡ ನಮ್ಮ ಹಲ್ಲನ್ನು ದುರ್ಬಲಗೊಳಿಸಬಹುದು. ಜೊತೆಗೆ ಅವುಗಳಿಗೆ ಸೀಮಿತ ಜೀವಿತಾವಧಿ ಇರುವುದರಿಂದ ಮತ್ತಷ್ಟು ಕೊಳೆಯುವಿಕೆ ಅಥವಾ ಅವು ಹಲ್ಲಿನ ಸೂಕ್ಷ್ಮತೆಗೆ ಕಾರಣವಾಗಬಹುದು. ಹಾಗಾಗಿ ಈ ರೀತಿಯ ಪರಿಹಾರ ದೀರ್ಘಕಾಲಕ್ಕೆ ಪ್ರಯೋಜನಕಾರಿಯಾಗಿರುವುದಿಲ್ಲ ಎಂಬುದು ಅವರ ಅಭಿಪ್ರಾಯ. ಆದ ಕಾರಣ, ಲಂಡನ್ನ ಕಿಂಗ್ಸ್ ಕಾಲೇಜಿನ ದಂತವೈದ್ಯಕೀಯ ತಂಡ ಹಲ್ಲು ಇರದ ಜಾಗದಲ್ಲಿ, ಎಳೆಯ ಹಲ್ಲಿನ ಕೋಶಗಳನ್ನು ಕಸಿ ಮಾಡುವ ಮೂಲಕ ಬಾಯಿಯೊಳಗೆ ಬೆಳೆಯಲು ಬಿಡುವುದಕ್ಕೆ ಪ್ರಯೋಗ ನಡೆಸುತ್ತಿದ್ದು ಅದಕ್ಕೂ ಮೊದಲು ಅವುಗಳಿಗೆ ಪರ್ಯಾಯವಾಗಿ, ಹಲ್ಲನ್ನು ಪ್ರಯೋಗಾಲಯದಲ್ಲಿ ಬೆಳೆಸುವುದಕ್ಕೆ ತಯಾರಿ ನಡೆಸಿಕೊಂಡಿದ್ದಾರೆ.
ಈ ಸಂಶೋಧನೆ ಹೇಗೆ ಉಪಯೋಗಕಾರಿ?
ಪ್ರಯೋಗಾಲಯದಲ್ಲಿ ಬೆಳೆದ ಹಲ್ಲುಗಳು ಹೆಚ್ಚು ಬಾಳಿಕೆ ಬರುತ್ತವೆ ಮತ್ತು ಹಲ್ಲಿನಲ್ಲಿ ಕುಳಿ ಬೀಳುವ ಸಮಸ್ಯೆಯನ್ನು ತಡೆಯುತ್ತದೆ. ಇದು ಜೀವಕೋಶಗಳಿಂದ ಮಾಡಲ್ಪಟ್ಟಿರುವುದರಿಂದ, ಹಲ್ಲುಗಳು ಗಟ್ಟಿಯಾಗಿಯೂ ಇರುತ್ತದೆ. ಪದೇ ಪದೇ ಹಲ್ಲಿನ ಸಮಸ್ಯೆಯೂ ಕಂಡು ಬರುವುದಿಲ್ಲ ಜೊತೆಗೆ ವೈದ್ಯರನ್ನು ಭೇಟಿ ಮಾಡುವ ಪ್ರಮೇಯವೂ ಇರುವುದಿಲ್ಲ. ಈ ಪ್ರಯೋಗ ಯಶಸ್ವಿಯಾದರೆ, ಇದು ದಂತ ಕ್ಷೇತ್ರದಲ್ಲಿ ಹೊಸ ಪ್ರಗತಿ ಕಾಣುವುದು ಮಾತ್ರವಲ್ಲ ಇದು ಜನರಿಗೆ ದುಬಾರಿ ವೆಚ್ಚವನ್ನು ಕೂಡ ಕಡಿತಗೊಳಿಸುತ್ತದೆ ಜೊತೆಗೆ ನೈಸರ್ಗಿಕವಾದ ಹಲ್ಲು ಪಡೆಯುವುದಕ್ಕೂ ಕೂಡ ಅವಕಾಶ ಸಿಗುತ್ತದೆ.
ಇದನ್ನೂ ಓದಿ: ಆನೆಕಾಲು ರೋಗ ನಿವಾರಣೆಗೆ ಗಜಗದ ಬಳ್ಳಿಯೇ ಮದ್ದು! ಈ ರೀತಿ ಬಳಸಿ
ಭಾರತಕ್ಕೆ ಪ್ರಯೋಜನ ಸಿಗಬಹುದೇ?
ಈ ಪ್ರಯೋಗ ಯಶಸ್ವಿಯಾಗಿ ಭಾರತಕ್ಕೂ ಬಂದರೆ ಇಲ್ಲಿನ ಜನರಿಗೆ ಬಹಳ ಪ್ರಯೋಜನಕಾರಿಯಾಗಲಿದೆ. ಇಲ್ಲಿ ದಂತ ಚಿಕಿತ್ಸೆ ಬಹಳ ದುಬಾರಿಯಾಗಿರುವುದರಿಂದ, ಅನೇಕರು ಹಲ್ಲುಗಳನ್ನು ಕಳೆದುಕೊಳ್ಳುತ್ತಿದ್ದಾರೆ. ಹಾಗಾಗಿ ಈ ಪ್ರಯೋಗ ನಮ್ಮ ದೇಶಕ್ಕೂ ಬಂದರೆ ಶಾಶ್ವತ ಪರಿಹಾರ ಸಿಗುತ್ತದೆ. ಸಂಕ್ಷಿಪ್ತವಾಗಿ ಹೇಳುವುದಾದರೆ, ಹಲ್ಲುಗಳಲ್ಲಿ ಕಂಡು ಬರುವ ಸಮಸ್ಯೆ ಕೂಡ ಚರ್ಮದ ಮೇಲಿನ ಗಾಯದಂತೆಯೇ ಬೇಗ ಗುಣಪಡಿಸಬಹುದು.
ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಇದು ಯಾವುದೇ ರೀತಿಯಲ್ಲಿ ಅರ್ಹ ವೈದ್ಯಕೀಯ ಸಲಹೆಗೆ ಪರ್ಯಾಯವಲ್ಲ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞರನ್ನು ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸುವುದನ್ನು ಮರೆಯಬೇಡಿ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








