Keto Diet: ತೂಕ ಇಳಿಸಿಕೊಳ್ಳಲು ಹೋಗಿ ಅಪಾಯಕ್ಕೆ ಸಿಲುಕಬೇಡಿ; ಕೀಟೋ ಡಯಟ್​ನ ಅಡ್ಡ ಪರಿಣಾಮಗಳಿವು

| Updated By: ಸುಷ್ಮಾ ಚಕ್ರೆ

Updated on: Feb 16, 2022 | 4:18 PM

Keto Diet Side Effects: ತೂಕ ಇಳಿಸಿಕೊಳ್ಳಲು ಜನರು ಅನೇಕ ರೀತಿಯ ಡಯಟ್​ಗಳನ್ನು ಅನುಸರಿಸುತ್ತಾರೆ. ಅದರಲ್ಲೂ ಕೀಟೋ ಡಯಟ್​ ಪಾಲಿಸುವವರು ಅದರಿಂದ ಉಂಟಾಗುವ ಅಡ್ಡಪರಿಣಾಮಗಳ ಬಗ್ಗೆ ತಿಳಿದುಕೊಳ್ಳುವುದು ಉತ್ತಮ.

Keto Diet: ತೂಕ ಇಳಿಸಿಕೊಳ್ಳಲು ಹೋಗಿ ಅಪಾಯಕ್ಕೆ ಸಿಲುಕಬೇಡಿ; ಕೀಟೋ ಡಯಟ್​ನ ಅಡ್ಡ ಪರಿಣಾಮಗಳಿವು
ಸಾಂದರ್ಭಿಕ ಚಿತ್ರ
Follow us on

ಬೇಗ ತೂಕ ಇಳಿಸಿಕೊಳ್ಳಬೇಕೆಂಬ ಕಾರಣಕ್ಕೆ ಅನೇಕರು ಏನೇನೋ ಡಯಟ್ ಪ್ಲಾನ್ ಫಾಲೋ ಮಾಡುತ್ತಾರೆ. ಅದರಲ್ಲೂ ಇತ್ತೀಚೆಗೆ ಕೀಟೋ ಡಯಟ್ (Keto Diet) ಬಹಳ ಫೇಮಸ್ ಆಗಿದೆ. ಮಧುಮೇಹಿಗಳಿಂದ ಹಿಡಿದು ಹೃದ್ರೋಗಿಗಳು (Heart Patients) ಮತ್ತು ಸ್ಥೂಲಕಾಯದ ಜನರವರೆಗೆ ಹೆಚ್ಚಿನ ಜನರಿಗೆ ತೂಕವನ್ನು ಹತೋಟಿಯಲ್ಲಿಟ್ಟುಕೊಳ್ಳುವುದೇ ದೊಡ್ಡ ಸವಾಲು. ತೂಕ ಇಳಿಸಿಕೊಳ್ಳಲು (Weight Loss) ಬಯಸುವವರಿಗೆ ಅತ್ಯಂತ ಜನಪ್ರಿಯ ಆಹಾರದ ಪ್ರವೃತ್ತಿಯೆಂದರೆ ಕೀಟೋ ಡಯಟ್. ಕೀಟೋ ಆಹಾರವು ದೇಹದ ಶಕ್ತಿಯ ಮೂಲವನ್ನು ತೆಗೆದುಹಾಕುವ ಮೂಲಕ ಮತ್ತು ಕೊಬ್ಬಿನ ಶೇಖರಣೆಯನ್ನು ಚಯಾಪಚಯಗೊಳಿಸುವ ಮೂಲಕ ಕಾರ್ಯ ನಿರ್ವಹಿಸುತ್ತದೆ. ಇದು ಕಾರ್ಬೋಹೈಡ್ರೇಟ್‌ಗಳ ಮೂಲಗಳನ್ನು ಸಂಪೂರ್ಣವಾಗಿ ತೆಗೆದುಹಾಕುತ್ತದೆ.

ತೂಕ ಇಳಿಸಿಕೊಳ್ಳಲು ಕೀಟೋ ಆಹಾರದ ಅನೇಕ ಪ್ರಯೋಜನಗಳ ಹೊರತಾಗಿಯೂ ದೇಹಕ್ಕೆ ಹಾನಿಯನ್ನುಂಟುಮಾಡುತ್ತದೆ ಎಂದು ಅನೇಕರಿಗೆ ಗೊತ್ತಿರುವುದಿಲ್ಲ. ಮಾನವನ ದೇಹದ ಅತಿದೊಡ್ಡ ಅಂಗವಾದ ಚರ್ಮ ಮತ್ತು ಕೂದಲಿನ ಮೇಲೂ ಕೀಟೋ ಡಯಟ್​ನಿಂದ ಅಡ್ಡ ಪರಿಣಾಮಗಳಾಗುತ್ತವೆ. ಕೀಟೋ ಡಯಟ್‌ನಲ್ಲಿರುವಾಗ ಒಬ್ಬ ವ್ಯಕ್ತಿಯು ತ್ವರಿತ ತೂಕ ನಷ್ಟವನ್ನು ಸಾಧಿಸಲು ಒತ್ತಡ ಅನುಭವಿಸುತ್ತಾನೆ. ಅತಿಯಾದ ಕೂದಲು ಉದುರುವಿಕೆ, ಮುಖದ ಮೇಲೆ ಕಲೆಗಳು ಸೇರಿದಂತೆ ಕೀಟೋ ಆಹಾರವು ಕರುಳಿನ ಬ್ಯಾಕ್ಟೀರಿಯಾದೊಂದಿಗೆ ಗೊಂದಲಕ್ಕೀಡಾಗಬಹುದು. ಇದು ಪ್ರಮುಖ ಪೌಷ್ಟಿಕಾಂಶದ ಕೊರತೆಗಳಿಗೆ ಕಾರಣವಾಗುತ್ತದೆ. ಇದು ಚರ್ಮಕ್ಕೆ ಹಾನಿಯನ್ನುಂಟುಮಾಡುತ್ತದೆ.

ಕೀಟೋ ದಿನಚರಿಯಲ್ಲಿ, ಚರ್ಮ, ಉಗುರುಗಳು ಮತ್ತು ಕೂದಲಿನ ಮೇಲೆ ಮೊದಲು ಪರಿಣಾಮ ಬೀರುತ್ತದೆ. ಏಕೆಂದರೆ ಪ್ರತಿಯೊಂದು ಅಗತ್ಯ ಪೋಷಕಾಂಶವು ಮೊದಲು ಯಕೃತ್ತು, ಹೃದಯ ಮತ್ತು ಮೆದುಳಿಗೆ ಹೋಗುತ್ತದೆ. ನಿಮ್ಮ ದೇಹದಲ್ಲಿ ಕೊಬ್ಬಿನ ಅಂಶ ಮತ್ತು ಬೊಜ್ಜಿನ ಪ್ರಮಾಣ ಹೆಚ್ಚಾದರೆ ಅದನ್ನು ಕಡಿಮೆ ಮಾಡಿಕೊಳ್ಳಲು ಸಾಕಷ್ಟು ಹರಸಾಹಸ ಪಡಬೇಕಾಗುತ್ತದೆ. ತೂಕವನ್ನು ಇಳಿಸಲು ಕೀಟೋ ಡಯಟ್ ಅನ್ನು ದೀರ್ಘಕಾಲಿಕವಾಗಿ ಪಾಲಿಸಬಾರದು ಎಂದು ತಜ್ಞರು ಹೇಳಿದ್ದಾರೆ.

ದೇಹಕ್ಕೆ ಕಾರ್ಬೋಹೈಡ್ರೇಟ್ಸ್ ಪ್ರಮುಖವಾಗಿ ಶಕ್ತಿ ನೀಡುವುದು. ಹೀಗಾಗಿ ನೀವು ಇದನ್ನು ಕಡಿಮೆ ಮಾಡಿದರೆ, ಅದರಿಂದ ದೇಹದಲ್ಲಿ ನಿಶ್ಯಕ್ತಿ ಹೆಚ್ಚಾಗುತ್ತದೆ. ಕೀಟೋ ಡಯಟ್​​ನಿಂದ ಜೀರ್ಣಶಕ್ತಿ ಕಡಿಮೆಯಾಗುತ್ತದೆ, ಮಲಬದ್ಧತೆಯೂ ಕಾಡುತ್ತದೆ. ಕೀಟೊ ಡಯಟ್ ಅನ್ನು ಕಡಿಮೆ ಕಾರ್ಬ್ ಕೀಟೊ ಡಯಟ್ ಎಂದು ಕರೆಯಲಾಗುತ್ತದೆ. ಈ ಆಹಾರ ಕ್ರಮಗಳನ್ನು ಅನುಸರಿಸುವುದರಿಂದ ನಮ್ಮ ಯಕೃತ್ತಿನಲ್ಲಿ ಕೀಟೋನ್ ಉತ್ಪತ್ತಿಯಾಗುತ್ತದೆ. ದೇಹದ ಕೊಬ್ಬನ್ನು ಕರಗಿಸುವಲ್ಲಿ ಇದು ತುಂಬಾ ಪರಿಣಾಮಕಾರಿ. ಕಡಿಮೆ ಪ್ರೋಟೀನ್ ಮತ್ತು ಅತೀ ಕಡಿಮೆ ಕಾರ್ಬೋಹೈಡ್ರೇಟ್‌ ಇರುವ ಆಹಾರ ಪದ್ಧತಿಯೆ ಕೀಟೊ ಡಯಟ್.

ಕಿಟೋ ಡಯಟ್ ಕೆಲವು ಪ್ರಕರಣಗಳಲ್ಲಿ ಕಿಡ್ನಿ ಸ್ಟೋನ್​ಗೂ ಕಾರಣವಾಗುತ್ತದೆ. ಈ ಆಹಾರ ಕ್ರಮದಲ್ಲಿ ಪ್ರೋಟೀನ್‌ಗಳ ಅಧಿಕ ಸೇವನೆಯು ಮೂತ್ರದಲ್ಲಿ ಕ್ಯಾಲ್ಸಿಯಂ ಮತ್ತು ಯೂರಿಕ್ ಆ್ಯಸಿಡ್ ಮಟ್ಟಗಳನ್ನು ಹೆಚ್ಚಿಸುತ್ತದೆ. ಈ ಮಟ್ಟಗಳು ಹೆಚ್ಚುತ್ತಿದ್ದಂತೆ ಕಿಡ್ನಿ ಸ್ಟೋನ್​​ನ ಅಪಾಯವೂ ಹೆಚ್ಚಾಗುತ್ತದೆ. ಹೀಗಾಗಿ, ಕೀಟೋ ಡಯಟ್​ ಅನುಸರಿಸುವ ಮೊದಲು ಎಚ್ಚರ ವಹಿಸಿ.

(ಇಲ್ಲಿ ತಿಳಿಸಿರುವ ಸಲಹೆಗಳು ಎಲ್ಲರಿಗೂ ಅನ್ವಯವಾಗುವುದಿಲ್ಲ. ಅವರವರ ದೇಹ ಪ್ರಕೃತಿಗೆ ಸಂಬಂಧಿಸಿದಂತೆ ಆರೋಗ್ಯದ ಮೇಲಿನ ಪರಿಣಾಮಗಳು ಕೂಡ ಬದಲಾಗುತ್ತವೆ. ನೀವು ಡಯಟ್ ಅನುಸರಿಸುವ ಮುನ್ನ ತಜ್ಞ ವೈದ್ಯರನ್ನುಯ ಭೇಟಿಯಾಗುವುದು ಒಳಿತು)

ಇದನ್ನೂ ಓದಿ: Weight Loss: ಸುಖವಾದ ನಿದ್ರೆಯಿಂದಲೂ ತೂಕ ಇಳಿಸಿಕೊಳ್ಳಬಹುದೆಂದು ನಿಮಗೆ ಗೊತ್ತಾ?

Weight Loss: ಗಟ್ಟಿ ಆಹಾರದ ಬದಲು ಜ್ಯೂಸ್​ ಕುಡಿಯೋದ್ರಿಂದ ತೂಕ ಕಡಿಮೆಯಾಗುತ್ತಾ?