
ಮಹಿಳೆಯರ ಜೀವನದಲ್ಲಿ ಮೆನೋಪಾಸ್ ಒಂದು ಸಹಜ ಜೈವಿಕ ಹಂತವಾಗಿದೆ. ಈ ಅವಧಿಯಲ್ಲಿ ಮುಟ್ಟಿನ ಚಕ್ರ ಶಾಶ್ವತವಾಗಿ ನಿಲ್ಲುತ್ತದೆ. ಸಾಮಾನ್ಯವಾಗಿ ಅಂಡಾಶಯಗಳ ಚಟುವಟಿಕೆ ಕಡಿಮೆಯಾಗುವುದರಿಂದ ಈಸ್ಟ್ರೋಜನ್ನಂತಹ ಹಾರ್ಮೋನ್ಗಳ ಮಟ್ಟದಲ್ಲಿ ಬದಲಾವಣೆ ಉಂಟಾಗುತ್ತದೆ. ಇದರಿಂದ ದೇಹದಲ್ಲಿ ಹಲವು ರೀತಿಯ ಬದಲಾವಣೆಗಳು ಕಾಣಿಸಿಕೊಳ್ಳಬಹುದು. ಎಲ್ಲ ಮಹಿಳೆಯರಲ್ಲೂ ಒಂದೇ ರೀತಿಯ ಲಕ್ಷಣಗಳು ಕಂಡುಬರುವುದಿಲ್ಲವಾದರೂ ಕೆಲವು ಲಕ್ಷಣ ಕಂಡುಬಂದರೆ ತಡಮಾಡದೆಯೇ ವೈದ್ಯರ ಸಲಹೆ ಪಡೆಯಬೇಕು. ಹಾಗಾದರೆ ಮೆನೋಪಾಸ್ ಸಮಯದಲ್ಲಿ ದೇಹದಲ್ಲಿ ಯಾವ ರೀತಿಯ ಬದಲಾವಣೆಗಳಾಗುತ್ತವೆ ಮತ್ತು ಈ ಸಮಯದಲ್ಲಿ ಆರೋಗ್ಯದ ಬಗ್ಗೆ ಯಾವ ರೀತಿ ಕಾಳಜಿ ವಹಿಸಬೇಕು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.
ಮೆನೋಪಾಸ್ ಸಮಯದಲ್ಲಿ ಮುಖ, ಕುತ್ತಿಗೆ ಮತ್ತು ಎದೆಯ ಭಾಗದಲ್ಲಿ ಏಕಾಏಕಿ ಬಿಸಿಯಾಗುವ ಅನುಭವ ಉಂಟಾಗಬಹುದು. ಇದನ್ನು ಹಾಟ್ ಫ್ಲ್ಯಾಶ್ ಎಂದು ಕರೆಯಲಾಗುತ್ತದೆ. ಕೆಲವರಿಗೆ ಈ ಸಂದರ್ಭದಲ್ಲಿ ಚರ್ಮ ಕೆಂಪಾಗುವುದು ಮತ್ತು ಹೆಚ್ಚು ಬೆವರುವುದು ಕಂಡುಬರುತ್ತದೆ. ರಾತ್ರಿ ಬೆವರಿನಿಂದ ನಿದ್ರೆಗೆ ತೊಂದರೆಯಾಗಬಹುದು.
ಈ ಅವಧಿಯಲ್ಲಿ ಕೆಲ ಮಹಿಳೆಯರಿಗೆ ಕಿರಿಕಿರಿ, ಆತಂಕ, ದುಃಖ ಅಥವಾ ಮನಸ್ಥಿತಿಯಲ್ಲಿ ಏರಿಳಿತ ಉಂಟಾಗಬಹುದು. ನಿದ್ರೆಯ ಕೊರತೆಯೂ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ಗಮನ ಕೇಂದ್ರೀಕರಿಸಲು ಕಷ್ಟವಾಗುವುದು ಕೂಡ ಕೆಲವರಲ್ಲಿ ಕಂಡುಬರಬಹುದು.
ಇದನ್ನೂ ಓದಿ: ಫುಡ್ ಪಾಯ್ಸನಿಂಗ್ನಿಂದ ಹೊಟ್ಟೆ ನೋವು ಕಂಡುಬಂದರೆ ಈ ಸರಳ ಕ್ರಮ ಅನುಸರಿಸಿ
ಸಾಮಾನ್ಯವಾಗಿ ಮೂಳೆಗಳ ಬಲವನ್ನು ಕಾಪಾಡಿಕೊಳ್ಳಲು ಈಸ್ಟ್ರೋಜನ್ ಪ್ರಮುಖ ಪಾತ್ರ ವಹಿಸುತ್ತದೆ. ಮೆನೋಪಾಸ್ ನಂತರ ಈ ಹಾರ್ಮೋನ್ ಮಟ್ಟ ಕಡಿಮೆಯಾಗುವುದರಿಂದ ಮೂಳೆಗಳ ಸಾಂದ್ರತೆ ಕುಸಿಯುವ ಅಪಾಯ ಹೆಚ್ಚುತ್ತದೆ. ಇದರಿಂದ ಆಸ್ಟಿಯೊಪೊರೋಸಿಸ್ ಮತ್ತು ಮೂಳೆ ಮುರಿತದ ಅಪಾಯ ಹೆಚ್ಚಾಗಬಹುದು. ಕ್ಯಾಲ್ಸಿಯಂಯುಕ್ತ ಆಹಾರ, ಸೂಕ್ತ ವ್ಯಾಯಾಮ ಮತ್ತು ವೈದ್ಯರ ಸಲಹೆ ಮುಖ್ಯವಾಗಿವೆ.
ಮೆನೋಪಾಸ್ ಅವಧಿಯಲ್ಲಿ ಕೆಲ ಮಹಿಳೆಯರಿಗೆ ತೂಕ ಹೆಚ್ಚಾಗಬಹುದು. ವಯಸ್ಸು, ದೈಹಿಕ ಚಟುವಟಿಕೆ, ನಿದ್ರೆ ಮತ್ತು ಹಾರ್ಮೋನ್ಗಳ ಬದಲಾವಣೆ ಇದಕ್ಕೆ ಕಾರಣವಾಗಬಹುದು. ವಿಶೇಷವಾಗಿ ಹೊಟ್ಟೆಯ ಸುತ್ತ ಕೊಬ್ಬು ಹೆಚ್ಚಾಗುವ ಸಾಧ್ಯತೆ ಇದೆ. ಸಮತೋಲಿತ ಆಹಾರ ಮತ್ತು ನಿಯಮಿತ ವ್ಯಾಯಾಮ ಸಹಾಯಕವಾಗುತ್ತವೆ.
ಈಸ್ಟ್ರೋಜನ್ ಮಟ್ಟ ಕಡಿಮೆಯಾಗುವುದರಿಂದ ಯೋನಿಯ ಭಾಗದಲ್ಲಿ ಶುಷ್ಕತೆ, ತುರಿಕೆ ಅಥವಾ ಲೈಂಗಿಕ ಕ್ರಿಯೆಯ ಸಮಯದಲ್ಲಿ ನೋವು ಕಾಣಿಸಿಕೊಳ್ಳಬಹುದು. ಕೆಲವರಿಗೆ ಮೂತ್ರ ವಿಸರ್ಜನೆಯ ವೇಳೆ ಉರಿ ಮತ್ತು ಪದೇಪದೇ ಮೂತ್ರದ ಸೋಂಕು ಉಂಟಾಗುವ ಸಮಸ್ಯೆಗಳೂ ಎದುರಾಗಬಹುದು. ಇಂತಹ ಲಕ್ಷಣಗಳು ಕಂಡುಬಂದರೆ ವೈದ್ಯರನ್ನು ಸಂಪರ್ಕಿಸುವುದು ಸೂಕ್ತ.
ಮೆನೋಪಾಸ್ ಕಾಯಿಲೆಯಲ್ಲ, ಮಹಿಳೆಯರ ಜೀವನದ ಸಹಜ ಹಂತ. ಪೌಷ್ಟಿಕ ಆಹಾರ ಸೇವಿಸುವುದು, ನಿಯಮಿತವಾಗಿ ವ್ಯಾಯಾಮ ಮಾಡುವುದು, ಸಾಕಷ್ಟು ನಿದ್ರೆ ಮಾಡುವುದು ಮತ್ತು ವೈದ್ಯಕೀಯ ತಪಾಸಣೆ ಮಾಡಿಸಿಕೊಳ್ಳುವುದು ಆರೋಗ್ಯ ಕಾಪಾಡಲು ಸಹಾಯ ಮಾಡುತ್ತದೆ. ಲಕ್ಷಣಗಳು ದೈನಂದಿನ ಜೀವನಕ್ಕೆ ತೊಂದರೆ ಉಂಟುಮಾಡುತ್ತಿದ್ದರೆ ವೈದ್ಯರ ಸಲಹೆ ಪಡೆಯಬೇಕು.
ಸೂಚನೆ: ಈ ಮಾಹಿತಿ ಸಾಮಾನ್ಯ ಆರೋಗ್ಯ ಜಾಗೃತಿಗಾಗಿ ಮಾತ್ರ. ಯಾವುದೇ ಚಿಕಿತ್ಸೆ ಆರಂಭಿಸುವ ಮೊದಲು ವೈದ್ಯರ ಸಲಹೆ ಪಡೆಯಿರಿ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ