Gurellu: ರಾಗಿ ರೊಟ್ಟಿ ಹುಚ್ಚೆಳ್ ಚಟ್ನಿ ತಂದೀನಿ ನನ್ನ ಮಗನೆ: ತಿಳಿಯಿರಿ ಗುರೆಳ್ಳು ಚಟ್ನಿ ಪುಡಿಯ ಮಹಿಮೆಯನ್ನು!
Uchellu: ಗುರೆಳ್ಳು ಸೇವನೆ ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತದೆ. ಹೃದಯಕ್ಕೆ ಒಳ್ಳೆಯದು. ಎಣ್ಣೆಯು ಚರ್ಮಕ್ಕೆ ಕಾಂತಿ ನೀಡುತ್ತದೆ. ಎಣ್ಣೆಯನ್ನು ನೋವು ನಿವಾರಕವಾಗಿ, ಗಂಟುಗಳನ್ನು ಕರಗಿಸಲು ಬಳಸುತ್ತಾರೆ.
ಗುರೆಳ್ಳನ್ನು ರಾಗಿ, ಸಜ್ಜೆ, ನವಣೆ, ಹುರುಳಿ ಬೆಳೆಗಳೊಂದಿಗೆ ಮಿಶ್ರ ಬೆಳೆಯಾಗಿ ಬೆಳೆಯುತ್ತಾರೆ. ಆಕರ್ಷಕವಾದ ಹಳದಿ ಬಣ್ಣದ ಹೂಗಳು, ವಿಶಿಷ್ಟ ಪರಿಮಳ ಬೀರುತ್ತವೆ. ಗುರೆಳ್ಳು ಅಥವಾ ಹುಚ್ಚೆಳ್ಳು ಚಟ್ನಿಪುಡಿ ಎಲ್ಲರಿಗೂ ಪರಿಚಿತ. ಈ ಕಾಳುಗಳಿಂದ ಎಣ್ಣೆಯನ್ನು ತೆಗೆಯುತ್ತಾರೆ. ಪ್ರೊಟೀನ್ ಕಾರ್ಬೋಹೈಡ್ರೇಟ್, ಫೈಬರ್, ಕ್ಯಾಲ್ಸಿಯಂ ವಿಟಮಿನ್ ಗಳಿರುವ ಹುಚ್ಚೆಳ್ಳು ಹಾಗೂ ಹುಚ್ಚೆಳ್ಳೆಣ್ಣೆ ಆರೋಗ್ಯಕ್ಕೆ ಹಿತಕರವಾಗಿರುತ್ತದೆ (uchellu gurellu chutney powder). ದೂರದಿಂದ ನೋಡಿದರೆ ಕಪ್ಪು ಎಳ್ಳಿನ ಹಾಗೆ ಕಾಣುವ ಆಕಾರದಲ್ಲಿ ಭಿನ್ನವಾಗಿರುವ ಈ ಕಾಳುಗಳಿಗೆ ಕನ್ನಡ ಭಾಷೆಯಲ್ಲಿ ಗುರೆಳ್ಳು , ಕರೆಳ್ಳು, ಕಾರೆಳ್ಳು, ಕಾರ್ಯೊಳು, ಹುಚ್ಚೆಳ್ಳು ಎಂದೂ ಸಂಸ್ಕೃತ ಭಾಷೆಯಲ್ಲಿ ರಾಮ ತಿಲ್, ಹಿಂದಿ ಹಾಗೂ ಉರ್ದು ಭಾಷೆಯಲ್ಲಿ ಕಾರಲ್ ಎಂದೂ ಕರೆಯುತ್ತಾರೆ.
- ಅಗಸಿ ಚಟ್ನಿ, ಸೇಂಗಾ ಚಟ್ನಿಯ ಹಾಗೆ ಗುರೆಳ್ಳು ಚಟ್ನಿ ಕೂಡ ಉತ್ತರ ಕರ್ನಾಟಕದಲ್ಲಿ ದಿನ ನಿತ್ಯ ಬಳಸುತ್ತಾರೆ. ಸಜ್ಜೆ ರೊಟ್ಟಿ, ಮೊಸರು, ಗುರೆಳ್ಳು ಚಟ್ನಿ ಈ ಭಾಗದಲ್ಲಿ ಫೇಮಸ್ ಆಗಿದೆ. ಹಾಗೆಯೇ ದಕ್ಷಿಣ ಕರ್ನಾಟಕದಲ್ಲಿ ರಾಗಿ ರೊಟ್ಟಿ ಹುಚ್ಚೆಳ್ಳು (niger seeds) ಚಟ್ನಿ ಫೇಮಸ್ ಅನ್ನಬಹುದು. ಇದಕ್ಕೆ ಪೂರಕವಾಗಿರುವ ಈ ಕನ್ನಡ ಚಿತ್ರಗೀತೆಯನ್ನು ಮೆಲುಕು ಹಾಕಬಹುದು: ‘ರಾಗಿ ರೊಟ್ಟಿ ಹುಚ್ಚೆಳ್ ಚಟ್ನಿ ತಂದೀನಿ ನನ್ನ ಮಗನೆ… ಮೂಗಿನ ಮಟ್ಟ ಜಡಿದು ಮಲಗೋ ನನ್ನ ಮಗನೇ’
- ಗುರೆಳ್ಳು ಚಟ್ನಿ ತಿನ್ನಲು ತುಂಬಾ ರುಚಿಕರವಾಗಿರುತ್ತದೆ. ಹುಚ್ಚೆಳ್ಳು ಎಣ್ಣೆ ಪಾರದರ್ಶಕವಾಗಿದ್ದು ತಿನ್ನಲು ಬಳಸುತ್ತಾರೆ.
- ಗುರೆಳ್ಳು ಪುಡಿಯನ್ನು ಬದನೆಕಾಯಿ ಪಲ್ಯ, ಚೌಳಿ ಕಾಯಿ ಪಲ್ಯ ಸಮೇತ ಇತರೆ ಪಲ್ಯಗಳಿಗೆ ಬಳಸುತ್ತಾರೆ.
- ಗುರೆಳ್ಳು ಸೇವನೆ ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತದೆ. ಹೃದಯಕ್ಕೆ ಒಳ್ಳೆಯದು. ಎಣ್ಣೆಯು ಚರ್ಮಕ್ಕೆ ಕಾಂತಿ ನೀಡುತ್ತದೆ. ಎಣ್ಣೆಯನ್ನು ನೋವು ನಿವಾರಕವಾಗಿ, ಗಂಟುಗಳನ್ನು ಕರಗಿಸಲು ಬಳಸುತ್ತಾರೆ.
- ಈ ಎಣ್ಣೆಯ ಹಿಂಡಿಯು ದನಕರುಗಳಿಗೆ ಉತ್ತಮ ಪಶು ಆಹಾರವಾಗಿದೆ. (ಬರಹ: ಎಸ್.ಹೆಚ್. ನದಾಫ್)