Norovirus Disease: ಕೇರಳದ ಇಬ್ಬರು ವಿದ್ಯಾರ್ಥಿಗಳಲ್ಲಿ ನೊರೊವೈರಸ್ ಪತ್ತೆ; ಈ ಸೋಂಕಿನ ಲಕ್ಷಣ, ಅಪಾಯಗಳೇನು?

Norovirus Symptoms: ನೊರೊವೈರಸ್ ಸೋಂಕಿನ ಸಾಮಾನ್ಯ ಲಕ್ಷಣಗಳೆಂದರೆ ಅತಿಸಾರ, ವಾಂತಿ, ವಾಕರಿಕೆ ಮತ್ತು ಹೊಟ್ಟೆಯ ಅಸ್ವಸ್ಥತೆ. ಜ್ವರ, ತಲೆನೋವು ಮತ್ತು ದೇಹದ ನೋವು.

Norovirus Disease: ಕೇರಳದ ಇಬ್ಬರು ವಿದ್ಯಾರ್ಥಿಗಳಲ್ಲಿ ನೊರೊವೈರಸ್ ಪತ್ತೆ; ಈ ಸೋಂಕಿನ ಲಕ್ಷಣ, ಅಪಾಯಗಳೇನು?
ನೊರೊವೈರಸ್
Follow us
ಸುಷ್ಮಾ ಚಕ್ರೆ
|

Updated on: Jan 24, 2023 | 10:46 AM

ಕೊಚ್ಚಿ: ಕೇರಳದಲ್ಲಿ ಇಬ್ಬರು ವಿದ್ಯಾರ್ಥಿಗಳಲ್ಲಿ ನೊರೊವೈರಸ್ (Norovirus) ಸೋಂಕು ಪತ್ತೆಯಾಗುವ ಮೂಲಕ ಆತಂಕ ಮೂಡಿಸಿದೆ. ಕೇರಳದ ಕಾಕ್ಕನಾಡಿನ (Kakkanad) ಇಬ್ಬರು ಮಕ್ಕಳಲ್ಲಿ ನೊರೊವೈರಸ್ ಕಾಣಿಸಿಕೊಂಡಿದೆ. ಕಾಕ್ಕನಾಡು ಸಮೀಪದ ಶಾಲೆಯೊಂದರಲ್ಲಿ 1 ಮತ್ತು 2ನೇ ತರಗತಿಯ ವಿದ್ಯಾರ್ಥಿಗಳಿಗೆ ಈ ರೋಗದ ಲಕ್ಷಣಗಳು ಕಾಣಿಸಿಕೊಂಡಿದ್ದು, ಈ ಪೈಕಿ ಮೂವರು ಮಕ್ಕಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕಾಕ್ಕನಾಡು ಶಾಲೆಯ ಒಟ್ಟು 62 ವಿದ್ಯಾರ್ಥಿಗಳು ಮತ್ತು ಕೆಲವು ಪೋಷಕರಲ್ಲಿ ನೊರೊವೈರಸ್ ರೋಗದ ಲಕ್ಷಣಗಳು ಕಾಣಿಸಿಕೊಂಡಿದ್ದು, ಎರಡು ಸ್ಯಾಂಪಲ್​ಗಳನ್ನು ರಾಜ್ಯ ಸಾರ್ವಜನಿಕ ಪ್ರಯೋಗಾಲಯದಲ್ಲಿ ಪರೀಕ್ಷೆಗೆ ಕಳುಹಿಸಲಾಗಿದೆ. ಈ ಕುರಿತು ಅಧಿಕೃತ ಹೇಳಿಕೆ ನೀಡಿರುವ ಜಿಲ್ಲಾ ವೈದ್ಯಾಧಿಕಾರಿ, ಮಕ್ಕಳ ಆರೋಗ್ಯ ಸ್ಥಿತಿ ಸ್ಥಿರವಾಗಿದೆ. ಇದೀಗ ತಾತ್ಕಾಲಿಕವಾಗಿ ಮುಚ್ಚಿರುವ ಶಾಲೆಯನ್ನು ಆರೋಗ್ಯ ಇಲಾಖೆ ಸಿಬ್ಬಂದಿ ಪರಿಶೀಲನೆ ನಡೆಸಿದ್ದಾರೆ. ನಾವು ಮಕ್ಕಳು ಮತ್ತು ಪೋಷಕರಿಗೆ ಆನ್‌ಲೈನ್ ಜಾಗೃತಿ ಸೆಷನ್‌ಗಳನ್ನು ನಡೆಸುತ್ತಿದ್ದೇವೆ. ತರಗತಿ ಕೊಠಡಿಗಳು ಮತ್ತು ಶೌಚಾಲಯಗಳನ್ನು ಈಗ ಸ್ಯಾನಿಟೈಸ್ ಮಾಡಲಾಗಿದೆ ಎಂದಿದ್ದಾರೆ. ಕಳೆದ ವರ್ಷ, ತಿರುವನಂತಪುರಂನ ವಿಝಿಂಜಂನಲ್ಲಿ ಇಬ್ಬರು ಮಕ್ಕಳು ನೊರೊವೈರಸ್ ಸೋಂಕಿಗೆ ಒಳಗಾಗಿದ್ದರು.

ನೊರೊವೈರಸ್ ಸೋಂಕಿನ ಲಕ್ಷಣಗಳೇನು?: ನೊರೊವೈರಸ್ ಒಂದು ವೈರಲ್ ಕಾಯಿಲೆಯಾಗಿದ್ದು, ಜಾಗತಿಕವಾಗಿ ತೀವ್ರವಾದ ಗ್ಯಾಸ್ಟ್ರೋಎಂಟರೈಟಿಸ್‌ಗೆ ಸಾಮಾನ್ಯ ಕಾರಣವಾಗಿದೆ. ಸರಳವಾಗಿ ಹೇಳುವುದಾದರೆ, ಇದು ಅತಿಸಾರ ಮತ್ತು ವಾಂತಿಗೆ ಕಾರಣವಾಗುವ ಅತ್ಯಂತ ಸಾಂಕ್ರಾಮಿಕ ವೈರಸ್ ಆಗಿದೆ. ವಿಶ್ವ ಆರೋಗ್ಯ ಸಂಸ್ಥೆ (WHO) ಪ್ರಕಾರ ನೊರೊವೈರಸ್ ಯಾರಿಗಾದರೂ ಸೋಂಕು ತರಬಹುದು. ಇದರಿಂದ ಯಾರು ಬೇಕಾದರೂ ಸುಲಭವಾಗಿ ಅನಾರೋಗ್ಯಕ್ಕೆ ಒಳಗಾಗಬಹುದು.

ನೊರೊವೈರಸ್ ಸೋಂಕಿನ ಸಾಮಾನ್ಯ ಲಕ್ಷಣಗಳೆಂದರೆ ಅತಿಸಾರ, ವಾಂತಿ, ವಾಕರಿಕೆ ಮತ್ತು ಹೊಟ್ಟೆಯ ಅಸ್ವಸ್ಥತೆ. ಜ್ವರ, ತಲೆನೋವು ಮತ್ತು ದೇಹದ ನೋವು.

ಇದನ್ನೂ ಓದಿ: Norovirus: ಕೇರಳದಲ್ಲಿ ನೊರೊವೈರಸ್ ಹಾವಳಿ: ದಕ್ಷಿಣ ಕನ್ನಡ, ಕೊಡಗು ಜಿಲ್ಲೆಗಳಲ್ಲಿ ಮುನ್ನೆಚ್ಚರಿಕೆ ವಹಿಸಲು ಸೂಚನೆ

ನೊರೊವೈರಸ್ ಹರಡಲು ಕಾರಣಗಳು: ಸೋಂಕಿತ ವ್ಯಕ್ತಿಯೊಂದಿಗೆ ನೇರ ಸಂಪರ್ಕ, ಕಲುಷಿತ ಆಹಾರ ಅಥವಾ ನೀರನ್ನು ಕುಡಿಯುವುದು ಅಥವಾ ಕಲುಷಿತ ದೇಹದ ಮೇಲ್ಭಾಗವನ್ನು ಸ್ಪರ್ಶಿಸುವುದು, ತೊಳೆಯದ ಕೈಗಳನ್ನು ನಿಮ್ಮ ಬಾಯಿಯಲ್ಲಿ ಹಾಕುವುದು ನೊರೊವೈರಸ್ ಹರಡಲು ಕಾರಣವಾಗುತ್ತದೆ.

ನೊರೊವೈರಸ್ ಹರಡುವಿಕೆ ತಡೆಗಟ್ಟುವುದು ಹೇಗೆ?: ನಿಮ್ಮ ಕೈಗಳನ್ನು ಆಗಾಗ ತೊಳೆಯುವುದು, ಹಣ್ಣುಗಳು ಮತ್ತು ತರಕಾರಿಗಳನ್ನು ತೊಳೆಯುವುದು, ಚಿಪ್ಪುಮೀನುಗಳನ್ನು ಚೆನ್ನಾಗಿ ಬೇಯಿಸುವುದು, ಅನಾರೋಗ್ಯದಿಂದ ಬಳಲುತ್ತಿರುವಾಗ ಮತ್ತು ರೋಗಲಕ್ಷಣಗಳು ನಿಂತ 2 ದಿನಗಳವರೆಗೆ ಮನೆಯಲ್ಲಿಯೇ ಇರುವುದರಿಂದ ನೊರೊವೈರಸ್ ಹರಡುವಿಕೆಯನ್ನು ತಡೆಗಟ್ಟಬಹುದು.

ನೊರೊವೈರಸ್ ಹೊಟ್ಟೆ ಅಥವಾ ಕರುಳಿನ ಉರಿಯೂತವನ್ನು ಉಂಟುಮಾಡುತ್ತದೆ. ಇದನ್ನು ತೀವ್ರವಾದ ಗ್ಯಾಸ್ಟ್ರೋಎಂಟರೈಟಿಸ್ ಎಂದು ಕರೆಯಲಾಗುತ್ತದೆ. ಈ ವೈರಸ್‌ಗೆ ಒಳಗಾದ 12ರಿಂದ 48 ಗಂಟೆಗಳ ನಂತರ ರೋಗಲಕ್ಷಣಗಳು ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತವೆ. ಹೆಚ್ಚಿನ ಜನರು 1ರಿಂದ 3 ದಿನಗಳಲ್ಲಿ ನೊರೊವೈರಸ್ ಕಾಯಿಲೆಯಿಂದ ಚೇತರಿಸಿಕೊಳ್ಳುತ್ತಾರೆ.

ಇದನ್ನೂ ಓದಿ: Norovirus: ಮಕ್ಕಳು ಮತ್ತು ವೃದ್ಧರಿಗೆ ಶುರುವಾಯ್ತು ನೊರೊವೈರಸ್​ ಭಯ; ದೇಹವನ್ನು ಬಳಲಿಸುವ ಈ ಕಾಯಿಲೆ ಬಗ್ಗೆ ಇರಲಿ ನಿಗಾ

ನೊರೊವೈರಸ್ ಕಾಯಿಲೆಗೆ ಚಿಕಿತ್ಸೆ ನೀಡಲು ಯಾವುದೇ ನಿರ್ದಿಷ್ಟ ಔಷಧಿಗಳಿಲ್ಲ. ಆದಷ್ಟು ಹೆಚ್ಚು ನೀರು ಕುಡಿಯುವುದರಿಂದ ನಿರ್ಜಲೀಕರಣದಿಂದ ಪಾರಾಗಬಹುದು. ಇದರಿಂದ ನೊರೊವೈರಸ್ ಹರಡುವಿಕೆಯೂ ಕಡಿಮೆಯಾಗುತ್ತದೆ. ಈ ನೊರೊವೈರಸ್​​ನಿಂದ ಚೇತರಿಸಿಕೊಂಡವರ ಮಲದಲ್ಲಿ ಈ ವೈರಸ್ ಕನಿಷ್ಠ 2 ವಾರಗಳವರೆಗೆ ಇರಬಹುದಾದ್ದರಿಂದ ಶೌಚಾಲಯಕ್ಕೆ ಹೋದ ಬಳಿಕ ಸಾಬೂನು ಮತ್ತು ನೀರಿನಿಂದ ಸ್ವಚ್ಛವಾಗಿ ನಿಮ್ಮ ಕೈಗಳನ್ನು ತೊಳೆಯುವುದು ಅತ್ಯಗತ್ಯ.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ