ನೀವು ಈ ಆಹಾರ ಸೇವಿಸಿದರೆ, ನಿಮ್ಮ ಮೆದುಳು ಸೂಪರ್ ಫಾಸ್ಟ್ ಆಗಿ ಕೆಲಸ ಮಾಡುತ್ತೆ
ಪ್ರತಿದಿನ ಬೆಳಿಗ್ಗೆ ನಾವು ಸೇವಿಸುವ ಆಹಾರವು ನಮ್ಮ ಮೆದುಳು ವೇಗವಾಗಿ ಕೆಲಸ ಮಾಡಲು ಸಹಾಯ ಮಾಡುತ್ತದೆ. ಹಾಗಾಗಿ ಬೆಳಗಿನ ಸಮಯದಲ್ಲಿ ಜ್ಞಾಪಕ ಶಕ್ತಿಯನ್ನು ಹೆಚ್ಚಿಸುವ ಮತ್ತು ಮಾನಸಿಕ ಒತ್ತಡವನ್ನು ಕಡಿಮೆ ಮಾಡುವಂತಹ ಆಹಾರಗಳ ಸೇವನೆ ಮಾಡಬೇಕು ಎಂದು ಹೇಳಲಾಗುತ್ತದೆ. ಹಾಗಾದರೆ ಮೆದುಳಿನ ಶಕ್ತಿಯನ್ನು ಹೆಚ್ಚಿಸುವ ಈ ಆಹಾರಗಳು ಯಾವವು? ಮೆದುಳು ಸೂಪರ್ ಫಾಸ್ಟ್ ಆಗಲು ಯಾವ ಆಹಾರ ಬೆಸ್ಟ್ ಎಂಬುದನ್ನು ತಿಳಿದುಕೊಳ್ಳಿ.

ಪ್ರತಿನಿತ್ಯ ಬೆಳಗಿನ ಸಮಯದಲ್ಲಿ ನಾವು ಸೇವನೆ ಮಾಡುವ ಆಹಾರವು (food) ನಮ್ಮ ದೇಹಕ್ಕೆ ಮಾತ್ರವಲ್ಲ, ಬದಲಾಗಿ ನಮ್ಮ ಮೆದುಳಿನ ಕಾರ್ಯನಿರ್ವಹಣೆಯ ಮೇಲೂ ಪರಿಣಾಮ ಬೀರುತ್ತದೆ. ಹಾಗಾಗಿ ಬೆಳಗಿನ ಉಪಾಹಾರ ಯಾವಾಗಲೂ ಪೋಷಕಾಂಶಯುಕ್ತವಾಗಿರಬೇಕು. ಜೊತೆಗೆ ಬುದ್ಧಿವಂತಿಕೆಯನ್ನು ವೇಗಗೊಳಿಸುವ, ಜ್ಞಾಪಕ ಶಕ್ತಿಯನ್ನು ಹೆಚ್ಚಿಸುವ ಮತ್ತು ಆಯಾಸವನ್ನು ಕಡಿಮೆ ಮಾಡುವ ಆಹಾರವನ್ನು ನೀವು ತೆಗೆದುಕೊಂಡರೆ, ಮೆದುಳು ಚೆನ್ನಾಗಿ ಕೆಲಸ ಮಾಡುವುದರ ಜೊತೆಗೆ ನಿಮ್ಮ ದೇಹ ಕೂಡ ಆರೋಗ್ಯವಾಗಿರುತ್ತದೆ. ಹಾಗಾದರೆ ನಾವು ಬೆಳಗ್ಗೆ ಯಾವ ರೀತಿಯ ತಿಂಡಿ ಅಥವಾ ಉಪಹಾರಗಳ ಸೇವನೆ ಮಾಡಬೇಕು? ಮೆದುಳು ಸೂಪರ್ ಫಾಸ್ಟ್ ಆಗಲು ಯಾವ ಆಹಾರ ಬೆಸ್ಟ್ ಎಂಬುದನ್ನು ತಿಳಿದುಕೊಳ್ಳಿ.
ಓಟ್ಸ್
ಇದರಲ್ಲಿ ಫೈಬರ್ ಮತ್ತು ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿದೆ. ಇದರ ಸೇವನೆಯಿಂದ ಮೆದುಳಿಗೆ ಸಾಕಷ್ಟು ಶಕ್ತಿ ಸಿಗುತ್ತದೆ. ಓಟ್ಸ್ ಅನ್ನು ಉಪಾಹಾರವಾಗಿ ಬಳಕೆ ಮಾಡುವುದರಿಂದ, ಮೆದುಳು ನಿಧಾನವಾಗಿ ಚುರುಕಾಗುತ್ತದೆ. ಅಲ್ಲದೆ ನೀವು ದಿನವಿಡೀ ಸಕ್ರಿಯವಾಗಿರಲು ಇದು ಸಹಾಯ ಮಾಡುತ್ತದೆ. ಜೊತೆಗೆ ದೈಹಿಕವಾಗಿ ಮಾತ್ರವಲ್ಲದೆ ಮಾನಸಿಕವಾಗಿಯೂ ಶಕ್ತಿಯನ್ನು ನೀಡುತ್ತದೆ.
ಆವಕಾಡೊ
ಇದು ನಿಮ್ಮ ಮೆದುಳಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ತುಂಬಾ ಉಪಯುಕ್ತವಾಗಿವೆ. ದೇಹದಲ್ಲಿ ರಕ್ತ ಪರಿಚಲನೆ ಸುಧಾರಿಸುತ್ತದೆ ಜೊತೆಗೆ ಮೆದುಳಿಗೆ ಅಗತ್ಯವಾದ ಆಮ್ಲಜನಕ ಮತ್ತು ಪೋಷಕಾಂಶಗಳು ಸರಿಯಾಗಿ ಸಿಗುವಂತೆ ಮಾಡುವ ಶಕ್ತಿಯನ್ನು ಹೊಂದಿದೆ. ಇದು ನಮಗೆ ತ್ವರಿತವಾಗಿ ಯೋಚಿಸಲು ಮತ್ತು ಏನನ್ನಾದರೂ ನೆನಪಿಟ್ಟುಕೊಳ್ಳಲು ಸುಲಭ ಮಾಡುವ ಆಹಾರಗಳಲ್ಲಿ ಒಂದಾಗಿದೆ. ಹಾಗಾಗಿ ಇವುಗಳನ್ನು ವಿವಿಧ ರೀತಿಯ ಉಪಹಾರಗಳಲ್ಲಿ ಬಳಕೆ ಮಾಡಿಕೊಳ್ಳಬಹುದು.
ವಾಲ್ನಟ್ಸ್
ಇದರಲ್ಲಿರುವ ಒಮೆಗಾ -3 ಕೊಬ್ಬಿನಾಮ್ಲಗಳು ಮೆದುಳಿನ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಅವು ನರಮಂಡಲಕ್ಕೆ ಸಹಾಯ ಮಾಡುವ ಮೂಲಕ ಜ್ಞಾಪಕ ಶಕ್ತಿಯನ್ನು ಬಲಪಡಿಸುತ್ತವೆ. ಜೊತೆಗೆ ಮಾನಸಿಕ ಒತ್ತಡವನ್ನು ಕಡಿಮೆ ಮಾಡುತ್ತದೆ.
ಬ್ಲೂಬೆರ್ರಿ
ಇವುಗಳಲ್ಲಿ ಹೇರಳವಾಗಿರುವ ಉತ್ಕರ್ಷಣ ನಿರೋಧಕಗಳು ಮೆದುಳನ್ನು ಆಕ್ಸಿಡೇಟಿವ್ ಒತ್ತಡದಿಂದ ರಕ್ಷಿಸುತ್ತವೆ. ದೀರ್ಘಾವಧಿಯಲ್ಲಿ ಮೆದುಳನ್ನು ಆರೋಗ್ಯಕರವಾಗಿರಿಸಲು ಇದು ಸಹಾಯ ಮಾಡುತ್ತದೆ. ಜೊತೆಗೆ ವಯಸ್ಸಾದಂತೆ ಬರುವ ಮರೆವನ್ನು ಕಡಿಮೆ ಮಾಡಲು ಸಹಕಾರಿಯಾಗಿವೆ.
ಚಿಯಾ ಬೀಜ
ಇವು ನೋಡುವುದಕ್ಕೆ ಚಿಕ್ಕದಾಗಿ ಕಂಡರೂ ಕೂಡ, ಪೋಷಕಾಂಶಗಳ ವಿಷಯದಲ್ಲಿ ಇವು ಸಾಕಷ್ಟು ಪ್ರಮಾಣದ ಶಕ್ತಿಯನ್ನು ಹೊಂದಿವೆ. ಇದರಲ್ಲಿರುವ ಒಮೆಗಾ -3 ಆಮ್ಲಗಳು ಮತ್ತು ಫೈಬರ್ ಅಂಶ ಮೆದುಳಿಗೆ ಶಕ್ತಿಯನ್ನು ನೀಡುತ್ತದೆ ಮತ್ತು ಅದನ್ನು ಆರೋಗ್ಯಕರವಾಗಿರಿಸುತ್ತದೆ. ಜೊತೆಗೆ ಇವು ನಿಮಗೆ ದಿನವಿಡೀ ಉತ್ಸಾಹದಿಂದ ಇರಲು ಸಹಾಯ ಮಾಡುತ್ತದೆ.
ಕುಂಬಳಕಾಯಿ ಬೀಜ
ಇದರಲ್ಲಿ ಸತು ಮತ್ತು ಮೆಗ್ನೀಸಿಯಮ್ ನಂತಹ ಖನಿಜಗಳು ಸಮೃದ್ಧವಾಗಿವೆ. ಮೆದುಳಿನ ಕಾರ್ಯವನ್ನು ಸುಧಾರಿಸುವುದರ ಹೊರತಾಗಿ, ಅವು ಒತ್ತಡವನ್ನು ಕಡಿಮೆ ಮಾಡಲು ಸಹ ಸಹಾಯ ಮಾಡುತ್ತವೆ. ಹಾಗಾಗಿ ಬೆಳಗಿನ ಉಪಾಹಾರದಲ್ಲಿ ಇವುಗಳನ್ನು ಸೇರಿಸಿಕೊಳ್ಳುವುದು ಬಹಳ ಒಳ್ಳೆಯದು.
ಇದನ್ನೂ ಓದಿ: ಶುಂಠಿ ಚಹಾ ಅಂದ್ರೆ ಇಷ್ಟನಾ? ಮೇ ತಿಂಗಳು ಮುಗಿಯುವ ತನಕ ಕುಡಿಯಲೇಬೇಡಿ ಯಾಕೆ ಗೊತ್ತಾ?
ಪಾಲಕ್ ಸೊಪ್ಪು
ಈ ಸೊಪ್ಪಿನಲ್ಲಿರುವ ವಿಟಮಿನ್ ಕೆ ಮತ್ತು ಫೋಲೇಟ್ ನಂತಹ ಪೋಷಕಾಂಶಗಳು ಮೆದುಳಿಗೆ ಅತ್ಯಗತ್ಯವಾಗಿದೆ. ಇವು ಮೆದುಳಿನ ಕೋಶಗಳ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
ಈ ಆಹಾರಗಳು ನಮ್ಮ ಮೆದುಳನ್ನು ಆರೋಗ್ಯಕರವಾಗಿರಿಸುವುದಲ್ಲದೆ ದಿನವಿಡೀ ಸಕ್ರಿಯವಾಗಿ ಮತ್ತು ಸಕಾರಾತ್ಮಕ ಯೋಚಿಸಲು ಸಹಾಯ ಮಾಡುತ್ತದೆ. ಜೊತೆಗೆ ಮಾನಸಿಕ ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಹಾಗಾಗಿ ನಿಮ್ಮ ಉಪಾಹಾರ ದಿನಚರಿಯಲ್ಲಿ ಇವುಗಳನ್ನು ಸೇರಿಸಿಕೊಳ್ಳುವ ಮೂಲಕ, ಮೆದುಳನ್ನು ಆರೋಗ್ಯವಾಗಿ ಇರಿಸಿಕೊಳ್ಳಬಹುದು.
ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಇದು ಯಾವುದೇ ರೀತಿಯಲ್ಲಿ ಅರ್ಹ ವೈದ್ಯಕೀಯ ಸಲಹೆಗೆ ಪರ್ಯಾಯವಲ್ಲ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞರನ್ನು ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸುವುದನ್ನು ಮರೆಯಬೇಡಿ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ