ಚಿಕ್ಕ ಮಕ್ಕಳಲ್ಲಿ ಕೂದಲು ಬಿಳಿಯಾಗುವುದಕ್ಕೆ ಕಾರಣವೇನು? ವಿಟಮಿನ್ ಕೊರತೆಯೇ ಅಥವಾ ರೋಗದ ಲಕ್ಷಣವೇ?

ಇತ್ತೀಚಿನ ದಿನಗಳಲ್ಲಿ ಬಿಳಿ ಕೂದಲು ವಯಸ್ಸಾದವರಲ್ಲಿ ಮಾತ್ರವಲ್ಲ, ಚಿಕ್ಕ ಮಕ್ಕಳಲ್ಲಿಯೂ ಕಂಡುಬರುತ್ತಿದೆ. ಈ ರೀತಿಯ ಸಮಸ್ಯೆ ಹಲವು ಪೋಷಕರ ಕಳವಳಕ್ಕೆ ಕಾರಣವಾಗಿದೆ. ಆದರೆ ಕೆಲವರು ಮಾತ್ರ ಇದು ಸಮಸ್ಯೆಯೇ ಅಲ್ಲ ಎಂಬಂತೆ ನಿರ್ಲಕ್ಷಿಸುತ್ತಾರೆ, ಈ ರೀತಿ ಮಾಡುವುದು ಸರಿಯಲ್ಲ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಏಕೆಂದರೆ ಇದು ವಿಟಮಿನ್ ಕೊರತೆ ಅಥವಾ ದೇಹದಲ್ಲಿನ ಕೆಲವು ಕಾಯಿಲೆಗಳ ಸೂಚಕವಾಗಿರಬಹುದು. ಹಾಗಾದರೆ ಈ ರೀತಿಯಾಗುವುದಕ್ಕೆ ನಿಜವಾದ ಕಾರಣವೇನು, ತಡೆಗಟ್ಟಲು ಏನು ಮಾಡಬಹುದು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಚಿಕ್ಕ ಮಕ್ಕಳಲ್ಲಿ ಕೂದಲು ಬಿಳಿಯಾಗುವುದಕ್ಕೆ ಕಾರಣವೇನು? ವಿಟಮಿನ್ ಕೊರತೆಯೇ ಅಥವಾ ರೋಗದ ಲಕ್ಷಣವೇ?
White Hair in Children: Causes and Concerns
Image Credit source: Getty Images

Updated on: Apr 09, 2026 | 4:00 PM

ಮೊದಲೆಲ್ಲಾ ಬಿಳಿ ಕೂದಲು (White Hair) ವಯಸ್ಸಾದವರಲ್ಲಿ ಕಂಡುಬರುತ್ತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಚಿಕ್ಕ ಮಕ್ಕಳಲ್ಲಿಯೂ ಬಿಳಿ ಕೂದಲು ಕಾಣಿಸಿಕೊಳ್ಳುತ್ತಿರುವುದು ಪೋಷಕರ ಆತಂಕಕ್ಕೆ ಕಾರಣವಾಗಿದೆ. ತಜ್ಞರ ಪ್ರಕಾರ, ಇದನ್ನು ನಿರ್ಲಕ್ಷಿಸುವುದು ಸರಿಯಲ್ಲ, ಏಕೆಂದರೆ ಇದು ದೇಹದಲ್ಲಿ ವಿಟಮಿನ್ ಕೊರತೆ ಅಥವಾ ಕೆಲವು ಆರೋಗ್ಯ ಸಮಸ್ಯೆಗಳ ಸೂಚನೆಯಾಗಿರಬಹುದು. ಹೌದು ಮಗುವಿನ ಕೂದಲಿನ ಬಣ್ಣವು ಅವರ ಆರೋಗ್ಯ, ಪೋಷಣೆ ಮತ್ತು ದೇಹದ ಆಂತರಿಕ ಸ್ಥಿತಿಯನ್ನು ಸಹ ಪ್ರತಿಬಿಂಬಿಸುತ್ತದೆ ಎಂಬುದು ನಿಮಗೆ ತಿಳಿದಿದೆಯೇ… ಈ ರೀತಿಯಾಗುವ ಬದಲಾವಣೆಯನ್ನು ಸಮಯಕ್ಕೆ ಸರಿಯಾಗಿ ಗುರುತಿಸಿ ಪರಿಹಾರ ಕಂಡುಕೊಳ್ಳದಿದ್ದರೆ ಸಮಸ್ಯೆ ಮತ್ತಷ್ಟು ಹೆಚ್ಚಾಗಬಹುದು. ಹಲವು ಬಾರಿ, ಇದು ಕೇವಲ ಬಾಹ್ಯ ಬದಲಾವಣೆಯಲ್ಲ, ಬದಲಾಗಿ ದೇಹದೊಳಗೆ ಸಂಭವಿಸುವ ಕೆಲವು ಅಸಮತೋಲನವನ್ನು ಸೂಚಿಸುತ್ತಿರಬಹುದು ಹಾಗಾಗಿ ಅವುಗಳನ್ನು ನಿರ್ಲಕ್ಷ್ಯ ಮಾಡುವುದು ಸರಿಯಲ್ಲ. ಹಾಗಾದರೆ ಈ ರೀತಿಯಾಗುವುದಕ್ಕೆ ನಿಜವಾದ ಕಾರಣವೇನು, ತಡೆಗಟ್ಟಲು ಏನು ಮಾಡಬಹುದು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ವಿಟಮಿನ್ ಕೊರತೆಯೇ ಪ್ರಮುಖ ಕಾರಣ:

ಚರ್ಮ ತಜ್ಞೆ ಡಾ. ಸೌಮ್ಯ ಪ್ರಕಾರ, ಮಕ್ಕಳಲ್ಲಿ ಬಿಳಿ ಕೂದಲು ಕಾಣಿಸಿಕೊಳ್ಳುವುದು ವಿಟಮಿನ್ ಬಿ12, ಐರನ್, ಕ್ಯಾಲ್ಸಿಯಂ ಮತ್ತು ಪ್ರೋಟೀನ್ ಕೊರತೆಯಿಂದಾಗಿರಬಹುದು. ಈ ಪೋಷಕಾಂಶಗಳ ಕೊರತೆ ಕೂದಲಿನ ಆರೋಗ್ಯದ ಮೇಲೆ ನೇರ ಪರಿಣಾಮ ಬೀರುತ್ತದೆ. ಸರಿಯಾದ ಪೋಷಕಾಂಶ ಸಿಗದಿದ್ದರೆ ಕೂದಲು ಬೇಗ ಬಿಳಿಯಾಗುವ ಸಾಧ್ಯತೆ ಇದೆ.

ರೋಗಗಳ ಸೂಚನೆಯೂ ಆಗಿರಬಹುದು:

ಕೆಲವು ಸಂದರ್ಭಗಳಲ್ಲಿ ಥೈರಾಯ್ಡ್ ಸಮಸ್ಯೆಗಳು, ಆಟೋಇಮ್ಯೂನ್ ರೋಗಗಳು ಅಥವಾ ಚರ್ಮ ಸಂಬಂಧಿತ ಕಾಯಿಲೆಗಳು ಕೂಡ ಕೂದಲಿನ ಬಣ್ಣ ಬದಲಾವಣೆಗೆ ಕಾರಣವಾಗಬಹುದು. ಮಕ್ಕಳಲ್ಲಿ ವೇಗವಾಗಿ ಕೂದಲು ಬಿಳಿಯಾಗುತ್ತಿದ್ದರೆ ವೈದ್ಯರನ್ನು ಸಂಪರ್ಕಿಸುವುದು ಬಹಳ ಮುಖ್ಯ.

ಇದನ್ನೂ ಓದಿ: ಒಂದು ಬಿಳಿಕೂದಲು ಕಿತ್ತರೆ ಸುತ್ತಲಿನ ಕೂದಲು ಬಿಳಿಯಾಗುತ್ತಾ?

ಜೆನೆಟಿಕ್ ಮತ್ತು ಜೀವನಶೈಲಿಯೂ ಕಾರಣ:

ಕುಟುಂಬದಲ್ಲಿ ಇಂತಹ ಸಮಸ್ಯೆ ಇದ್ದರೆ, ಇದು ವಂಶಪಾರಂಪರ್ಯದಿಂದಲೂ ಬರಬಹುದು. ಜೊತೆಗೆ ಅಸಮತೋಲನದ ಆಹಾರ, ಜಂಕ್ ಫುಡ್ ಹೆಚ್ಚು ಸೇವನೆ, ನಿದ್ರೆ ಕೊರತೆ ಮತ್ತು ಮಾನಸಿಕ ಒತ್ತಡವೂ ಮಕ್ಕಳ ಕೂದಲಿನ ಆರೋಗ್ಯವನ್ನು ಹಾಳುಮಾಡಬಹುದು. ಕೆಮಿಕಲ್ ಇರುವ ಹೇರ್ ಪ್ರಾಡಕ್ಟ್ಸ್ ಬಳಕೆ ಮತ್ತು ಪರಿಸರ ಮಾಲಿನ್ಯವೂ ಕೂಡ ಈ ರೀತಿ ಸಮಸ್ಯೆಗೆ ಕಾರಣವಾಗಬಹುದು.

ಬಿಳಿ ಕೂದಲನ್ನು ಹೇಗೆ ತಡೆಗಟ್ಟಬಹುದು?

ಈ ಸಮಸ್ಯೆಯನ್ನು ತಡೆಯಲು ಮಕ್ಕಳ ಆಹಾರದಲ್ಲಿ ಹಸಿರು ತರಕಾರಿ, ಹಣ್ಣು, ಹಾಲು, ದಾಲ್ ಮತ್ತು ಪ್ರೋಟೀನ್ ಸಮೃದ್ಧ ಆಹಾರಗಳನ್ನು ಸೇರಿಸಬೇಕು. ಇದೆಲ್ಲದರ ಜೊತೆಗೆ ಸರಿಯಾಗಿ ನಿದ್ರೆ ಮತ್ತು ಒತ್ತಡರಹಿತ ವಾತಾವರಣವೂ ಅಗತ್ಯವಾಗಿರುತ್ತದೆ. ಕೆಮಿಕಲ್ ಇರುವ ಉತ್ಪನ್ನಗಳನ್ನು ತಪ್ಪಿಸಿ, ಕೂದಲಿನ ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕು. ಚಿಕ್ಕ ಮಕ್ಕಳಲ್ಲಿ ಬಿಳಿ ಕೂದಲು ಕಾಣಿಸಿಕೊಳ್ಳುವುದು ಸಣ್ಣ ಸಮಸ್ಯೆಯಂತೆ ಕಂಡರೂ, ಇದು ದೇಹದ ಒಳಗಿನ ಅಸಮತೋಲನದ ಸೂಚನೆಯಾಗಿರಬಹುದು. ಆದ್ದರಿಂದ ಸಮಯಕ್ಕೆ ಸರಿಯಾಗಿ ಗಮನಿಸಿ, ಅಗತ್ಯವಿದ್ದರೆ ವೈದ್ಯರ ಸಲಹೆ ಪಡೆಯುವುದು ಅತ್ಯಂತ ಮುಖ್ಯ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us