Prostate cancer: ಪುರುಷರೇ, ಈ ರೀತಿಯ ಲಕ್ಷಣಗಳು ಕಂಡು ಬಂದಾಗ ತಕ್ಷಣ ವೈದ್ಯರನ್ನು ಭೇಟಿ ಮಾಡಿ
ಆರೋಗ್ಯ ತಜ್ಞರು ಹೇಳುವ ಪ್ರಕಾರ, 50 ವರ್ಷದ ನಂತರ, ಪ್ರತಿಯೊಬ್ಬ ಪುರುಷನು ಪ್ರಾಸ್ಟೇಟ್ ಸಂಬಂಧಿತ ಪರೀಕ್ಷೆಗಳಿಗೆ ಒಳಗಾಗಬೇಕು, ಇದರಿಂದ ರೋಗವನ್ನು ಸಮಯೋಚಿತವಾಗಿ ಪತ್ತೆಹಚ್ಚುವ ಮೂಲಕ ಸರಿಯಾದ ರೀತಿಯಲ್ಲಿ ಚಿಕಿತ್ಸೆ ನೀಡಬಹುದು. ಇಲ್ಲವಾದಲ್ಲಿ ಇದು ಅನೇಕ ರೀತಿಯ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಹಾಗಾದರೆ ಪ್ರಾಸ್ಟೇಟ್ ಕ್ಯಾನ್ಸರ್ ಕಂಡುಬರುವುದಕ್ಕೆ ಕಾರಣವೇನು? ಇದರ ಲಕ್ಷಣಗಳೇನು? ಇದನ್ನು ಹೇಗೆ ತಡೆಯಬಹುದು ಎಂಬುದನ್ನು ತಿಳಿದುಕೊಳ್ಳಿ.

ವಯಸ್ಸಾದಂತೆ, ಪುರುಷರಲ್ಲಿ ಹೆಚ್ಚಾಗಿ ಮೂತ್ರವಿಸರ್ಜನೆಗೆ (Urination) ಸಂಬಂಧಿಸಿದ ಸಮಸ್ಯೆ ಕಂಡುಬರಲು ಆರಂಭವಾಗುತ್ತದೆ. ಇದು ಸಾಮಾನ್ಯ ಸಮಸ್ಯೆಯಾಗಿದ್ದರೂ ಕೂಡ ಇದು ದೀರ್ಘಕಾಲದ ವರೆಗೆ ಮುಂದುವರಿದಲ್ಲಿ ಬಹಳ ಅಪಾಯಕಾರಿ ಆಗಬಹುದು. ಅದಲ್ಲದೆ ಮೂತ್ರದ ಹರಿವು ಸರಿಯಾಗಿ ಇರದಿದ್ದರೂ ಕೂಡ ಅದನ್ನು ಲಘುವಾಗಿ ತೆಗೆದುಕೊಳ್ಳುವುದು ಅಪಾಯಕಾರಿ. ಏಕೆಂದರೆ ಇದು ಪ್ರಾಸ್ಟೇಟ್ ಕ್ಯಾನ್ಸರ್ (Prostate Cancer) ಆರಂಭಿಕ ಲಕ್ಷಣವಾಗಿರಬಹುದು. ಆರೋಗ್ಯ ತಜ್ಞರು ಹೇಳುವ ಪ್ರಕಾರ, 50 ವರ್ಷದ ನಂತರ, ಪ್ರತಿಯೊಬ್ಬ ಪುರುಷನು ಪ್ರಾಸ್ಟೇಟ್ ಸಂಬಂಧಿತ ಪರೀಕ್ಷೆಗಳಿಗೆ ಒಳಗಾಗಬೇಕು, ಇದರಿಂದ ರೋಗವನ್ನು ಸಮಯೋಚಿತವಾಗಿ ಪತ್ತೆಹಚ್ಚುವ ಮೂಲಕ ಸರಿಯಾದ ರೀತಿಯಲ್ಲಿ ಚಿಕಿತ್ಸೆ ನೀಡಬಹುದು. ಇಲ್ಲವಾದಲ್ಲಿ ಇದು ಅನೇಕ ರೀತಿಯ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಹಾಗಾದರೆ ಪ್ರಾಸ್ಟೇಟ್ ಕ್ಯಾನ್ಸರ್ ಕಂಡುಬರುವುದಕ್ಕೆ ಕಾರಣವೇನು? ಇದರ ಲಕ್ಷಣಗಳೇನು? ಇದನ್ನು ಹೇಗೆ ತಡೆಯಬಹುದು ಎಂಬುದನ್ನು ತಿಳಿದುಕೊಳ್ಳಿ.
ಪ್ರಾಸ್ಟೇಟ್ ಗ್ರಂಥಿಯು ಮನುಷ್ಯನ ದೇಹದಲ್ಲಿ ಮೂತ್ರಕೋಶದ ಕೆಳಗೆ ಇರುತ್ತದೆ. ಇದು ಮೂತ್ರ – ವೀರ್ಯದ ಹರಿವನ್ನು ನಿಯಂತ್ರಿಸುತ್ತದೆ. ಸಾಮಾನ್ಯವಾಗಿ ವಯಸ್ಸು ಹೆಚ್ಚಾದಂತೆ, ಈ ಗ್ರಂಥಿ ದೊಡ್ಡದಾಗಿ ಬೆಳೆಯಲು ಪ್ರಾರಂಭಿಸುತ್ತದೆ. ಇದು ಮೂತ್ರ ವಿಸರ್ಜನೆಯ ಸಮಯದಲ್ಲಿ ತೊಂದರೆಯನ್ನು ಉಂಟುಮಾಡುತ್ತದೆ. ಹೆಚ್ಚಿನ ಸಂದರ್ಭಗಳಲ್ಲಿ, ಈ ಗ್ರಂಥಿಯು ಕ್ಯಾನ್ಸರ್ ನ ಅಪಾಯ ಹೆಚ್ಚಿಸುವುದರ ಜೊತೆಗೆ ಗಂಭೀರ ಸ್ಥಿತಿಗೆ ಕಾರಣವಾಗಬಹುದು.
ಪ್ರಾಸ್ಟೇಟ್ ಕ್ಯಾನ್ಸರ್ ನ ಲಕ್ಷಣಗಳೇನು?
ಆಗಾಗ ಮೂತ್ರವಿಸರ್ಜನೆಗೆ ಹೋಗಬೇಕು ಎನಿಸುವುದು, ರಾತ್ರಿ ಸಮಯದಲ್ಲಿ ಮೂತ್ರ ವಿಸರ್ಜನೆ ಮಾಡುವಾಗ ತೊಂದರೆಯಾಗುವುದು, ಉರಿಯೂತ ಅಥವಾ ಮೂತ್ರವಿಸರ್ಜನೆಯ ಸಮಯದಲ್ಲಿ ನೋವು ಮುಂತಾದ ಚಿಹ್ನೆಗಳು ಪ್ರಾಸ್ಟೇಟ್ ಕ್ಯಾನ್ಸರ್ ಲಕ್ಷಣಗಳಾಗಿರಬಹುದು. ಇದಲ್ಲದೆ, ಮೂತ್ರ ಅಥವಾ ವೀರ್ಯದಲ್ಲಿ ರಕ್ತ, ಪೆಲ್ವಿಕ್ ಪ್ರದೇಶದಲ್ಲಿ ಅಥವಾ ಕೆಳ ಬೆನ್ನಿನಲ್ಲಿ ನಿರಂತರ ನೋವು ಸಹ ಪ್ರಾಸ್ಟೇಟ್ ಕ್ಯಾನ್ಸರ್ ಗೆ ಕಾರಣವಾಗಬಹುದು.
ಇದನ್ನೂ ಓದಿ: ರಾತ್ರಿ ಚೆನ್ನಾಗಿ ನಿದ್ರೆ ಬರಲು ಈ ಆಹಾರಗಳನ್ನು ಸೇವನೆ ಮಾಡಿ
ಯಾವ ರೀತಿಯ ಪುರುಷರಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ?
ತಜ್ಞರ ಪ್ರಕಾರ, 50 ವರ್ಷಕ್ಕಿಂತ ಮೇಲ್ಪಟ್ಟ ಪುರುಷರು ಹೆಚ್ಚಾಗಿ ಈ ರೋಗಕ್ಕೆ ತುತ್ತಾಗುವ ಅಪಾಯದಲ್ಲಿದ್ದಾರೆ. ಇದಲ್ಲದೆ, ಕುಟುಂಬದಲ್ಲಿ ಯಾರಾದರೂ ಈ ಹಿಂದೆ ಪ್ರಾಸ್ಟೇಟ್ ಕ್ಯಾನ್ಸರ್ ಹೊಂದಿದ್ದರೆ ಜಾಗರೂಕರಾಗಿರುವುದು ಮುಖ್ಯ. ಕೆಟ್ಟ ಜೀವನಶೈಲಿ, ಅನಾರೋಗ್ಯಕರ ಆಹಾರ ಮತ್ತು ಬೊಜ್ಜು ಸಹ ರೋಗದ ಅಪಾಯವನ್ನು ಹೆಚ್ಚಿಸುತ್ತದೆ. ಹಾಗಾಗಿ 50 ವರ್ಷದ ನಂತರ ಈ ರೀತಿಯ ಲಕ್ಷಣ ಕಂಡು ಬಂದರೆ ನಿರ್ಲಕ್ಷ್ಯ ಮಾಡಬೇಡಿ. ಒಂದು ವೇಳೆ ಪರೀಕ್ಷಾ ವರದಿ ಪಾಸಿಟಿವ್ ಆಗಿದ್ದರೆ, ನೀವು ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು ಮತ್ತು ವೈದ್ಯರ ಸೂಚನೆಗಳನ್ನು ಅನುಸರಿಸಬೇಕು. ಇದಲ್ಲದೆ, ವರದಿ ನಕಾರಾತ್ಮಕವಾಗಿದ್ದರೆ ನೀವು ಈ ಕ್ರಮಗಳನ್ನು ಅಳವಡಿಸಿಕೊಳ್ಳಬೇಕು. ಇದರಿಂದ ನೀವು ಆರೋಗ್ಯವಾಗಿರಲು ಸಾಧ್ಯ.
*ನೀವು ನಿಮ್ಮ ಆಹಾರಕ್ರಮವನ್ನು ಬದಲಾಯಿಸಬೇಕು. ಸೊಪ್ಪು, ತರಕಾರಿಗಳು ಮತ್ತು ಫೈಬರ್ ಸಮೃದ್ಧವಾಗಿರುವ ಆರೋಗ್ಯಕರ ಆಹಾರವನ್ನು ಸೇವಿಸಿ.
*ನಿಯಮಿತವಾಗಿ ವ್ಯಾಯಾಮ ಮಾಡುವ ಮೂಲಕ ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳಿ. *ಧೂಮಪಾನ – ಮದ್ಯಪಾನದಿಂದ ದೂರವಿರಿ.
*50 ವರ್ಷದ ನಂತರ, ಪ್ರತಿ ವರ್ಷ ಪ್ರಾಸ್ಟೇಟ್ ಪರೀಕ್ಷೆ ಮಾಡಿಸಿಕೊಳ್ಳಿ.
ಪ್ರಾಸ್ಟೇಟ್ ಕ್ಯಾನ್ಸರ್ ಅನ್ನು ಆರಂಭಿಕ ಹಂತದಲ್ಲಿ ಪತ್ತೆಹಚ್ಚಿದರೆ, ಅದಕ್ಕೆ ಚಿಕಿತ್ಸೆ ನೀಡಬಹುದು ಎಂದು ತಜ್ಞರು ಹೇಳುತ್ತಾರೆ. ಆದ್ದರಿಂದ, ನೀವು ಪದೇ ಪದೇ ಮೂತ್ರವಿಸರ್ಜನೆಗೆ ಹೋಗುತ್ತಿದ್ದರೆ, ನೋವು ಅಥವಾ ರಕ್ತಸ್ರಾವದಂತಹ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ, ಅದನ್ನು ನಿರ್ಲಕ್ಷಿಸಬೇಡಿ. ತಕ್ಷಣ ನಿಮ್ಮ ವೈದ್ಯರನ್ನು ಸಂಪರ್ಕಿಸಿ. ಸರಿಯಾದ ಸಮಯದಲ್ಲಿ ಪರೀಕ್ಷೆ ಮಾಡಿಸಿಕೊಳ್ಳಿ. ಜೊತೆಗೆ ಆರೋಗ್ಯಕರ ಜೀವನಶೈಲಿಯನ್ನು ಅನುಸರಿಸಿ.
(ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಇದು ಯಾವುದೇ ರೀತಿಯಲ್ಲಿ ಅರ್ಹ ವೈದ್ಯಕೀಯ ಸಲಹೆಗೆ ಪರ್ಯಾಯವಲ್ಲ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞರನ್ನು ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸುವುದನ್ನು ಮರೆಯಬೇಡಿ.)
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:58 pm, Fri, 21 March 25