Alzheimer’s Disease: ಅಮೆರಿಕದಲ್ಲಿ 65ರ ಆಸುಪಾಸಿನ 6 ಮಿಲಿಯನ್ ಜನ ಈ ಕಾಯಿಲೆಗೆ ತುತ್ತಾಗಿದ್ದಾರೆ

| Updated By: ಶ್ರೀದೇವಿ ಕಳಸದ

Updated on: Jun 20, 2022 | 1:54 PM

Mood Swing: ಅತಿಯಾದ ಮೂಡ್​ ಸ್ವಿಂಗ್​ನಿಂದ ನಿತ್ಯದ ಚಟುವಟಿಕೆ ನಿಭಾಯಿಸುವಲ್ಲಿ ಕಷ್ಟವೆನ್ನಿಸುತ್ತಿದೆಯಾ? ಇದು ಅಲ್ಝೈಮರ್​ನ ಮುನ್ಸೂಚನೆ ಯಾಕಾಗಿರಬಾರದು?

Alzheimer’s Disease: ಅಮೆರಿಕದಲ್ಲಿ 65ರ ಆಸುಪಾಸಿನ 6 ಮಿಲಿಯನ್ ಜನ ಈ ಕಾಯಿಲೆಗೆ ತುತ್ತಾಗಿದ್ದಾರೆ
Follow us on

Alzheimer’s Disease : ಈ ರೋಗವನ್ನು ಆರಂಭಿಕ ಹಂತದಲ್ಲಿಯೇ ಗುಣಮುಖಗೊಳಿಸಲು ಔಷಧಿ ಕಂಡುಹಿಡಿಯದಿದ್ದಲ್ಲಿ ಅಮೆರಿಕದಲ್ಲಷ್ಟೇ ಯಾಕೆ? ಎಲ್ಲ ದೇಶಗಳಲ್ಲಿಯೂ ಇದು ಇನ್ನಷ್ಟು ಸಂಖ್ಯೆಗೆ ಏರುವ ಅಪಾಯವಿದೆ ಎಂದು ವೈದ್ಯಕೀಯ ವರದಿಗಳು ಹೇಳುತ್ತಿವೆ. ವಯಸ್ಸಾಗುತ್ತಾ ಹೋದಂತೆ ಮೆದುಳಲ್ಲಿ ಉಂಟಾಗುವ ರಾಸಾಯನಿಕ ಏರುಪೇರುಗಳೇ ಅಲ್ಝೈಮರ್ ಕಾಯಿಲೆಗೆ ಕಾರಣ. ನಮ್ಮ ಜೀವನಶೈಲಿಗೂ ಇದಕ್ಕೂ ನೇರ ಸಂಬಂಧವಿದೆ. ಈ ಅಪಾಯಕಾರಿ ರೋಗದ ಗುಣಲಕ್ಷಣಗಳನ್ನು  ಪ್ರಾಥಮಿಕ ಹಂತದಲ್ಲಿಯೇ ಪತ್ತೆ ಹಚ್ಚಿ ಔಷಧೋಪಚಾರ ನಡೆಸುವುದು ಬಹಳೇ ಮುಖ್ಯ. ಅದರೆ ಈ ನಿಟ್ಟಿನಲ್ಲಿ ಈತನಕ ವೈದ್ಯಕೀಯ ಕ್ಷೇತ್ರದಲ್ಲಿ ಅನೇಕ ಸಂಶೋಧನೆಗಳು ನಡೆದಿದ್ದರೂ, ನಡೆಯುತ್ತಿದ್ದರೂ ನಿಖರವಾದ ಗುಣಲಕ್ಷಣಗಳನ್ನು ಗುರುತಿಸುವಲ್ಲಿ ಸಾಧ್ಯವಾಗುತ್ತಿಲ್ಲ. ಹೀಗಿರುವಾಗ ಈ ರೋಗವನ್ನು ಸಂಪೂರ್ಣವಾಗಿ ನಿರ್ನಾಮಗೊಳಿಸಲು ಶಕ್ಯವೇ ಎಂಬ ಪ್ರಶ್ನೆ ಪ್ರಶ್ನೆಯಾಗಿಯೇ ಉಳಿಯುತ್ತಿದೆ. ಆದರೆ ಯಾವುದಕ್ಕೂ ನಮ್ಮ ಆರೋಗ್ಯದ ಬಗ್ಗೆ ಕಾಳಜಿ ನಾವೇ ತೆಗೆದುಕೊಳ್ಳಬೇಕಲ್ಲವೆ?

ಅತಿಯಾದ ಮೂಡ್​ ಸ್ವಿಂಗ್ 

ನಡೆವಳಿಕೆ, ಯೋಚನೆಗಳಲ್ಲಿ ಏರುಪೇರು, ದೈನಂದಿನ ತಮ್ಮ ಕೆಲಸಗಳನ್ನು ಸ್ವತಃ ನಿರ್ವಹಿಸಿಕೊಳ್ಳುವಲ್ಲಿ ಅಸಮರ್ಥತೆ ಉಂಟಾಗುವುದು ಈ ರೋಗದ ಪ್ರಾಥಮಿಕ ಲಕ್ಷಣಗಳು. ಇದಕ್ಕೆ ಕಾರಣ ವಯಸ್ಸಾದಂತೆ ಮೆದುಳಿನಲ್ಲಿರುವ ಜೀವಕೋಶಗಳು ಕ್ರಮೇಣ ಅವಸಾನಗೊಳ್ಳುವುದು. ಹೀಗಾದಾಗ ಮೆದುಳು ಸಂಕುಚಿತಗೊಳ್ಳಲಾರಂಭಿಸುತ್ತದೆ. ಪರಿಣಾಮವಾಗಿ ನರದೌರ್ಬಲ್ಯ ಉಲ್ಬಣಗೊಳ್ಳುತ್ತಾ ಸಾಗುತ್ತದೆ. ಆಗ ನೆನಪಿನ ಶಕ್ತಿ ಸಂಪೂರ್ಣ ಕ್ಷೀಣಿಸುತ್ತದೆ. ಇದಕ್ಕೆ ಪರಿಹಾರಾರ್ಥವಾಗಿ ಸಾಕಷ್ಟು ಸಂಶೋಧನೆಗಳು ನಡೆದಿದ್ದರೂ ಈತನಕ ಇದಕ್ಕೆ ಯಾವುದೇ ರೀತಿಯ ಔಷಧೋಪಚಾರ ಲಭ್ಯವಿಲ್ಲದಿರುವುದು ಖೇದನೀಯ.

ಇದನ್ನೂ ಓದಿ
Weather: Qatar Mail: ಮಧ್ಯಪ್ರಾಚ್ಯವನ್ನು ದಿಕ್ಕೆಡಿಸುತ್ತಿರುವ ಈ ಮರಳು ಬಿರುಗಾಳಿ
National Wine Day: ಒಡೆದ​ ವೈನ್ ಬಾಟಲಿ ಮತ್ತು ‘ಕೂಲ್​ ರನ್ನಿಂಗ್’ನೊಂದಿಗೆ ಮಮತಾ ಸಾಗರ್
Poetry: ಅವಿತಕವಿತೆ; ಬಾಗಿಲುಗಳು ‘ಎಡ’ಕ್ಕೆ ತೆರೆಯಲಿವೆ ಬಾಗಿಲುಗಳು ‘ಬಲ’ಕ್ಕೆ ತೆರೆಯಲಿವೆ
Booker Shortlist 2022: ಗೀತಾಂಜಲಿ ಶ್ರೀ ಕಾದಂಬರಿ ‘ಟಾಂಬ್ ಆಫ್ ಸ್ಯಾಂಡ್’ ಬೂಕರ್ ಪ್ರಶಸ್ತಿಯ ಅಂತಿಮ ಘಟ್ಟಕ್ಕೆ

ಅಪಾಯದ ಗಂಟೆ 

ಈ ರೋಗವು ಮಂದಗತಿಯಲ್ಲಿ ಬಹಳ ಮೊದಲೇ ಎಚ್ಚರಿಕೆ ಗಂಟೆಯನ್ನು ಬಾರಿಸುತ್ತಲೇ ಇರುತ್ತದೆ. ಆದರೆ ಒತ್ತಡದ ಜೀವನಶೈಲಿಯಲ್ಲಿ ನಮಗಿದು ಅರಿವೇ ಆಗದು. ಸ್ವಲ್ಪ ನಮ್ಮನ್ನು ನಾವು ಸ್ವಅವಲೋಕಿಸುವುದನ್ನು ರೂಢಿಸಿಕೊಳ್ಳಲಾರಂಭಿಸಿದರೆ, ತಕ್ಷಣವೇ ಎಚ್ಚೆತ್ತುಕೊಂಡು ಅಪಾಯದಿಂದ ತಪ್ಪಿಸಿಕೊಳ್ಳಲು ಸಾಧ್ಯವಿದೆ. ಹಾಗಿದ್ದರೆ ಅದರ ಗುಣಲಕ್ಷಣಗಳು ಏನೆಂದು ನೋಡೋಣ.

ಇದನ್ನೂ ಓದಿ : Health and Beauty : ಈ ಕಾಫಿ ಅಂದ್ರೆ ಬರೀ ಕುಡಿಯೋದಕ್ಕಷ್ಟೇ ಅಲ್ಲ

ಏಕಾಗ್ರತೆಯ ಸಮಸ್ಯೆ : ಯೋಚಿಸುವಲ್ಲಿ ಮತ್ತು ಏಕಾಗ್ರತೆ ಸಾಧಿಸುವಲ್ಲಿ ಕಷ್ಟವೆನ್ನಿಸುತ್ತಾ ಹೋಗುತ್ತದೆ. ಕೆಲವೊಮ್ಮೆ ಸಣ್ಣಪುಟ್ಟ ಕೆಲಸಗಳನ್ನು ನಿರ್ವಹಿಸಲೂ ಕಷ್ಟಪಡಬೇಕಾಗುತ್ತದೆ. ಉದಾ: ಬಿಲ್​ ಕಟ್ಟುವುದು, ಅರ್ಜಿ ತುಂಬುವುದು ಅಥವಾ ಸಾರ್ವಜನಿಕ ವಲಯದಲ್ಲಿ ವ್ಯವಹರಿಸುವುದು ಮುಂತಾದವು.

ತಪ್ಪು ತೀರ್ಮಾನ: ಜೀವನದ ಪ್ರತೀ ಸನ್ನಿವೇಶಗಳಲ್ಲಿಯೂ ಕೈಗೊಳ್ಳುವ ತೀರ್ಮಾನಗಳ ಮೇಲೆ ನಮ್ಮ ಮುಂದಿನ ಬದುಕು ನಿರ್ಧಾರವಾಗುತ್ತಾ ಹೋಗುತ್ತದೆ. ಆದರೆ ಯಾವಾಗ ಒಬ್ಬ ವ್ಯಕ್ತಿ ಮುಖ್ಯ ಸಂದರ್ಭಗಳಲ್ಲಿ ತೀರ್ಮಾನ ತೆಗೆದುಕೊಳ್ಳುವಲ್ಲಿ ಎಡವಲು ಶುರುಮಾಡುತ್ತಾನೋ ಆಗಲೇ ಸಮಸ್ಯೆ ಶುರುವಾಗಿದೆ ಎಂದರ್ಥ. ಇಂಥ ಲಕ್ಷಣವೂ ಅಲ್ಝೈಮರ್ ಗೆ ಕಾರಣವಾಗುವ ಸಾಧ್ಯತೆ ಇರುತ್ತದೆ. ಅಂದರೆ ವ್ಯಕ್ತಿಯ ಯೋಚನಾ ಶಕ್ತಿ ಕ್ಷೀಣಿಸುತ್ತಾ ಹೋಗುವುದೇ ಇದರ ಮುಖ್ಯ ಲಕ್ಷಣ. ಆರಂಭದಲ್ಲಿ ಇದು ಹೇಗೆ ಶುರುವಾಗುತ್ತದೆ ಎಂದರೆ, ಹೋಟೆಲ್​ಗೆ ಹೋದಾಗ ಏನು ತಿನ್ನಬೇಕು ಎಂಬಲ್ಲಿಯೇ ಸಾಕಷ್ಟು ಗೊಂದಲ ಉಂಟಾಗಿ ಸಮಯ ವ್ಯಯವಾಗುವುದು. ಸಮಾರಂಭಗಳಿಗೆ ಯಾವ ಉಡುಗೆ ತೊಡಬೇಕು ಎನ್ನುವಲ್ಲಿಯೇ ನಿರ್ಧಾರಕ್ಕೆ ಬರುವಲ್ಲಿ ಸೋಲುವುದು. ಹೀಗೆ ಪ್ರತೀ ಸಂದರ್ಭ, ಹಂತವೂ ದೊಡ್ಡ ಸಮಸ್ಯೆಯಾಗಿ ಮಾರ್ಪಾಡಾಗುತ್ತಾ ವ್ಯಕ್ತಿ ಗೊಂದಲದ ಗೂಡಾಗಿ ಜೀವನದ ಬಗ್ಗೆ ಆಸಕ್ತಿ ಕಳೆದುಕೊಳ್ಳುತ್ತಾ ಹೋಗುತ್ತಾನೆ.

ಇದನ್ನೂ ಓದಿ : Mental Health: ಪುರುಷರು ತಮ್ಮ ಮಾನಸಿಕ ಆರೋಗ್ಯದ ಬಗ್ಗೆ ಯಾರೊಂದಿಗೂ ಮಾತನಾಡುವುದಿಲ್ಲ ಏಕೆ?

ನಿತ್ಯಕೆಲಸಗಳ ನಿರ್ವಹಣೆಯಲ್ಲಿ ತೊಂದರೆ 

ಒತ್ತಡದಿಂದ ಆತಂಕ, ಸ್ವಯಂನಿಂದನೆ, ಸಾಮಾಜಿಕ ಜೀವನದಿಂದ ದೂರವಿರುವುದು, ನಿದ್ರಾಸಮಯದ ಏರುಪೇರು, ನಿದ್ರಾಹೀನತೆ ಮುಂತಾದ ಸಮಸ್ಯೆಗಳು ಉಂಟಾಗಿ ಮಾನಸಿಕ ಆರೋಗ್ಯ ಕ್ಷೀಣಿಸುತ್ತಾ ಹೋಗುತ್ತದೆ. ಹೆಣ್ಣುಮಕ್ಕಳಿಗಾದರೆ ಅಡುಗೆ, ಕೈತೋಟದ ನಿರ್ವಹಣೆ, ಮಕ್ಕಳನ್ನು ನಿಭಾಯಿಸುವುದು, ಗೃಹಕೃತ್ಯಗಳನ್ನು ಮಾಡಿಕೊಳ್ಳುವುದು, ಕಚೇರಿ ನಿರ್ವಹಿಸುವುದು ಅಸಾಧ್ಯವೆನ್ನಿಸುತ್ತಾ ಹೋಗುತ್ತದೆ. ಕೆಲವೊಮ್ಮೆಯಂತೂ ಸ್ನಾನ ಮಾಡುವುದು, ಹಲ್ಲುಜ್ಜುವುದನ್ನೂ ಮರೆತುಹೋಗುವ ಮಟ್ಟಕ್ಕೂ ಇದು ತಲುಪುತ್ತದೆ.

ಈ ಮೇಲಿನ ಮಾಹಿತಿಯ ಬಗ್ಗೆ ನಿಖರವಾಗಿ ತಿಳಿದುಕೊಳ್ಳಬೇಕೆಂದರೆ ದಯವಿಟ್ಟು ನಿಮ್ಮ ಸಮೀಪದ ವೈದ್ಯರನ್ನು ಸಂಪರ್ಕಿಸಿ. ಅವರ ಸಲಹೆಯಂತೆ ಮುಂದುವರಿಯಿರಿ.

Published On - 1:50 pm, Mon, 20 June 22