ಕೂದಲು, ಚರ್ಮ, ಉಗುರಿನ ಆರೋಗ್ಯಕ್ಕೆ ಈ 7 ಆಹಾರ ಸೇವಿಸಿ
ಕೂದಲು ಆರೋಗ್ಯಕರವಾಗಿರಲು ಆಹಾರದಲ್ಲಿ ಪ್ರೋಟೀನ್ ಅತ್ಯಗತ್ಯವಾಗಿದೆ. ಹಸಿರು ಸೊಪ್ಪು ನಮ್ಮ ದೇಹಕ್ಕೆ ಸಾಕಷ್ಟು ಪೋಷಕಾಂಶಗಳನ್ನು ಒದಗಿಸುತ್ತದೆ. ಅವಕಾಡೊಗಳು ಚರ್ಮ ಮತ್ತು ಉಗುರುಗಳ ಆರೋಗ್ಯವನ್ನು ಉತ್ತೇಜಿಸುತ್ತದೆ.
ನಮ್ಮ ಕೂದಲು, ಚರ್ಮ ಮತ್ತು ಉಗುರುಗಳ ಆರೋಗ್ಯವನ್ನು ನಾವು ಮರೆಯುವಂತಿಲ್ಲ. ಇವು ನಮ್ಮ ಸೌಂದರ್ಯದ ಜೊತೆಗೆ ಆರೋಗ್ಯಯುತವಾಗಿದ್ದೇವೆಯೇ ಎಂದು ಬಿಂಬಿಸುವ ಅಂಶಗಳೂ ಹೌದು. ಎಷ್ಟೋ ಜನರು ಈ ಬಗ್ಗೆ ತಲೆ ಕೆಡಿಸಿಕೊಳ್ಳುವುದೇ ಇಲ್ಲ. ಕೂದಲು, ಚರ್ಮ ಮತ್ತು ಉಗುರುಗಳು ಆರೋಗ್ಯಯುತವಾಗಿ, ಸುಂದರವಾಗಿರಲು ಯಾವ ರೀತಿಯ ಆಹಾರಗಳನ್ನು ಸೇವಿಸಬೇಕು ಎಂಬ ಮಾಹಿತಿ ಇಲ್ಲಿದೆ.
ನಾವು ಸೇವಿಸುವ ಆಹಾರದಲ್ಲಿ ಪೌಷ್ಟಿಕಾಂಶ ಹೇರಳವಾಗಿದ್ದರೆ ಅದರಿಂದ ನಾನಾ ರೀತಿಯ ಉಪಯೋಗಗಳಿವೆ. ಚರ್ಮ, ಕೂದಲು ಮತ್ತು ಉಗುರಿನ ಆರೋಗ್ಯ ಚೆನ್ನಾಗಿರಲು ಈ ಕೆಳಗಿನ ಆಹಾರವನ್ನು ಸೇವಿಸಿ.
ಮೀನು: ಒಮೆಗಾ -3 ಕೊಬ್ಬಿನಾಮ್ಲಗಳಲ್ಲಿ ಸಮೃದ್ಧವಾಗಿರುವ ಸಮುದ್ರಾಹಾರವಾದ ಮೀನು ಕೂದಲು ಮತ್ತು ಚರ್ಮಕ್ಕೆ ಪ್ರಯೋಜನವನ್ನು ನೀಡುತ್ತದೆ. ಒಮೆಗಾ-3 ಕೊಬ್ಬಿನಾಮ್ಲಗಳು ದೇಹ ಮತ್ತು ಚರ್ಮದಲ್ಲಿ ಉರಿಯೂತ ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಇದನ್ನೂ ಓದಿ: ಈ ಹಣ್ಣುಗಳನ್ನು ಸೇವಿಸಿದ ತಕ್ಷಣ ನೀರು ಕುಡಿಯಬೇಡಿ
ಗೆಣಸು: ಗೆಣಸಿನಲ್ಲಿ ಕ್ಯಾರೊಟಿನಾಯ್ಡ್ ಬೀಟಾ-ಕ್ಯಾರೋಟಿನ್ ಸಮೃದ್ಧವಾಗಿದೆ. ಇದು ವಿಟಮಿನ್ ಎಯನ್ನು ಹೊಂದಿರುತ್ತದೆ. ವಿಟಮಿನ್ ಎ ಕೆರಾಟಿನ್ ಉತ್ಪಾದನೆಯನ್ನು ಉತ್ತೇಜಿಸುತ್ತದೆ. ಇದು ಚರ್ಮ ಮತ್ತು ಉಗುರುಗಳ ಆರೋಗ್ಯಕ್ಕೆ ಅವಶ್ಯಕವಾಗಿದೆ.
ಸೀಡ್ಸ್: ಕೆಲವು ಬೀಜಗಳು ಅದರಲ್ಲೂ ವಿಶೇಷವಾಗಿ ಸೂರ್ಯಕಾಂತಿ ಬೀಜಗಳನ್ನು ಸೇವಿಸುವುದರಿಂದ ಸಾಕಷ್ಟು ಪ್ರಯೋಜನಗಳಿವೆ. ಇದರಲ್ಲಿ ಬಯೋಟಿನ್, ಪ್ರೋಟೀನ್, ವಿಟಮಿನ್ ಇ ಅಂಶ ಯಥೇಚ್ಛವಾಗಿರುತ್ತದೆ. ಜೊತೆಗೆ ಬಾದಾಮಿ, ವಾಲ್ನಟ್ನಂತಹ ಡ್ರೈಫ್ರೂಟ್ಗಳನ್ನೂ ಸೇವಿಸಿ. ಇದು ಆಕ್ಸಿಡೇಟಿವ್ ಹಾನಿಯನ್ನು ಎದುರಿಸಲು ಸಹಾಯ ಮಾಡುತ್ತದೆ.
ಅವಕಾಡೊ: ಅವಕಾಡೊಗಳು ಆರೋಗ್ಯಕರ ಕೊಬ್ಬುಗಳು ಮತ್ತು ಪೋಷಕಾಂಶಗಳನ್ನು ಹೊಂದಿದೆ. ಇದು ಚರ್ಮ ಮತ್ತು ಉಗುರುಗಳ ಆರೋಗ್ಯವನ್ನು ಉತ್ತೇಜಿಸುತ್ತದೆ. ಇದರಲ್ಲಿ ವಿಟಮಿನ್ ಸಿ, ವಿಟಮಿನ್ ಎ, ವಿಟಮಿನ್ ಇ ಅಂಶ ಹೆಚ್ಚಾಗಿದೆ.
ಮೊಟ್ಟೆಗಳು: ಕೂದಲು ಆರೋಗ್ಯಕರವಾಗಿರಲು ಆಹಾರದಲ್ಲಿ ಪ್ರೋಟೀನ್ ಅತ್ಯಗತ್ಯವಾಗಿದೆ. ನಮ್ಮ ಕೂದಲು ಕೆರಾಟಿನ್ ಎಂಬ ಪ್ರೊಟೀನ್‌ನಿಂದ ಮಾಡಲ್ಪಟ್ಟಿದೆ. ಆದ್ದರಿಂದ ಪ್ರೋಟೀನ್ ಹೆಚ್ಚಾಗಿರುವ ಆಹಾರಗಳು ಕೂದಲನ್ನು ಆರೋಗ್ಯಯುತವಾಗಿರಿಸುತ್ತದೆ.
ಇದನ್ನೂ ಓದಿ: ಮಧುಮೇಹಿಗಳು ಈ ಹಣ್ಣುಗಳನ್ನು ತಿನ್ನಬೇಡಿ
ಹಸಿರು ಸೊಪ್ಪುಗಳು: ಹಸಿರು ಸೊಪ್ಪು ನಮ್ಮ ದೇಹಕ್ಕೆ ಸಾಕಷ್ಟು ಪೋಷಕಾಂಶಗಳನ್ನು ಒದಗಿಸುತ್ತದೆ. ಅದು ಕೂದಲು, ಚರ್ಮ ಮತ್ತು ಉಗುರುಗಳಿಗೆ ಪ್ರಯೋಜನವನ್ನು ನೀಡುತ್ತದೆ. ಹಸಿರು ಸೊಪ್ಪುಗಳು, ಎಲೆಕೋಸುಗಳನ್ನು ಹೆಚ್ಚಾಗಿ ಬಳಸಿ.
ನೀರಿನಂಶ ಇರುವ ಆಹಾರಗಳು: ಕುಡಿಯುವ ನೀರು ಮಾತ್ರವಲ್ಲದೆ ನೀರಿನಂಶ ಹೆಚ್ಚಾಗಿರುವ ಬೇರೆ ತರಕಾರಿ, ಹಣ್ಣುಗಳನ್ನು ಸೇವಿಸುವ ಮೂಲಕವೂ ನಿಮ್ಮ ದೇಹವನ್ನು ಹೈಡ್ರೇಟ್ ಆಗಿಡಬಹುದು. ಸೌತೆಕಾಯಿಗಳು, ಕಲ್ಲಂಗಡಿ, ಸೇಬುಗಳು, ಪೀಚ್, ಟೊಮೆಟೊಗಳು, ಹಲಸಿನ ಹಣ್ಣು, ಸ್ಟ್ರಾಬೆರಿಗಳನ್ನು ಹೆಚ್ಚಾಗಿ ಸೇವಿಸಿ.