
ಬೆಂಗಳೂರು: ನಗರಗಳಲ್ಲಿ ವಾಸವಿರುವ ಬಡವರಿಗೆ ನೆರವಾಗಲೆಂದು ಕರ್ನಾಟಕ ಸರ್ಕಾರದ ಆರೋಗ್ಯ ಇಲಾಖೆಯು ರಾಜ್ಯದಾದ್ಯಂತ ರೂಪಿಸಿರುವ 114 ‘ನಮ್ಮ ಕ್ಲಿನಿಕ್’ಗಳು (Namma Clinic) ಇಂದಿನಿಂದ (ಡಿ 14) ಕಾರ್ಯಾರಂಭ ಮಾಡಲಿವೆ. ನಗರದಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಈ ಸಂಬಂಧ ಮಾಹಿತಿ ನೀಡಿದ್ದ ಆರೋಗ್ಯ ಸಚಿವ ಡಾ ಕೆ ಸುಧಾಕರ (Dr K Sudhakar), ‘ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನಮ್ಮ ಕ್ಲಿನಿಕ್ಗಳಿಗೆ ಚಾಲನೆ ನೀಡಲಿದ್ದಾರೆ. ರಾಜ್ಯದಲ್ಲಿ ಒಟ್ಟು 114 ನಮ್ಮ ಕ್ಲಿನಿಕ್ಗಳು ಏಕಕಾಲಕ್ಕೆ ಕಾರ್ಯಾರಂಭ ಮಾಡಲಿವೆ’ ಎಂದು ಹೇಳಿದ್ದರು. ಇನ್ನು ಒಂದು ತಿಂಗಳ ಅವಧಿಯಲ್ಲಿ, ಅಂದರೆ ಜನವರಿ 2023ರಲ್ಲಿ ರಾಜ್ಯದ ನಮ್ಮ ಕ್ಲಿನಿಕ್ಗಳ ಸಂಖ್ಯೆಯನ್ನು 438ಕ್ಕೆ ಹೆಚ್ಚಿಸಲು ಸರ್ಕಾರವು ಕ್ರಮ ವಹಿಸಲಿದೆ. ಇದಕ್ಕಾಗಿ ಕೆಲಸಗಳು ನಡೆಯುತ್ತಿವೆ ಎಂದು ತಿಳಿಸಿದರು.
ಈ ಪೈಕಿ ಬಿಬಿಎಂಪಿ ವ್ಯಾಪ್ತಿಯಲ್ಲಿ 243 ನಮ್ಮ ಕ್ಲಿನಿಕ್ಗಳು ಕಾರ್ಯಾರಂಭ ಮಾಡಲಿವೆ. ಇವೆಲ್ಲವೂ ಸಾರ್ವಜನಿಕರ ಸೇವೆಗೆ ಜನವರಿ ತಿಂಗಳ 2ನೇ ವಾರದಲ್ಲಿ ಲಭ್ಯವಾಗುವಂತೆ ಮಾಡುವ ಪ್ರಯತ್ನಗಳು ನಡೆಯುತ್ತಿವೆ. ಕನಿಷ್ಠ 150 ಕ್ಲಿನಿಕ್ಗಳು ಶೀಘ್ರ ಕಾರ್ಯಾರಂಭ ಮಾಡಲಿವೆ ಎಂದು ಅವರು ಹೇಳಿದರು.
ನಮ್ಮ ಕ್ಲಿನಿಕ್ಗಳು ಎಂದರೇನು?
ಕೊಳಗೇರಿ ನಿವಾಸಿಗಳು, ದಿನಗೂಲಿ ಕಾರ್ಮಿಕರು ಮತ್ತು ಸಮಾಜದಲ್ಲಿರುವ ಇತರ ದುರ್ಬಲ ವರ್ಗಗಳಿಗೆ ಸುಲಭವಾಗಿ ವೈದ್ಯಕೀಯ ಸೇವೆ ದೊರಕಿಸಬೇಕು ಎನ್ನುವ ದೃಷ್ಟಿಯಿಂದ ನಮ್ಮ ಕ್ಲಿನಿಕ್ಗಳು ಕಾರ್ಯಾರಂಭ ಮಾಡುತ್ತಿವೆ. ಪ್ರತಿ ನಮ್ಮ ಕ್ಲಿನಿಕ್ 10ರಿಂದ 20 ಸಾವಿರ ಜನರಿಗೆ ಸೇವೆ ಒದಗಿಸಲಿದೆ.
ನಮ್ಮ ಕ್ಲಿನಿಕ್ಗಳಲ್ಲಿ 12 ರೀತಿಯ ವೈದ್ಯಕೀಯ ಸೇವೆಗಳು ಲಭ್ಯವಿದೆ. ಪ್ರತಿ ನಮ್ಮ ಕ್ಲಿನಿಕ್ನಲ್ಲಿಯೂ ವೈದ್ಯಕೀಯ ಅಧಿಕಾರಿ, ನರ್ಸ್, ಲ್ಯಾಬ್ ಟೆಕ್ನೀಷಿಯನ್ ಮತ್ತು ಗ್ರೂಪ್ ಡಿ ನೌಕರ ಇರುತ್ತಾರೆ. ಇಲ್ಲಿ ಲಭ್ಯವಿರುವ 12 ಸೇವೆಗಳಲ್ಲಿ ಗರ್ಭಿಣಿಯರ ತಪಾಸಣೆ ಮತ್ತು ಆರೈಕೆ, ನವಜಾತ ಶಿಶುಗಳ ಆರೈಕೆ, ಶಿಶುಗಳಿಗೆ ಚಿಕಿತ್ಸೆ, ಮಕ್ಕಳು ಮತ್ತು ಹದಿಹರೆಯದವರ ಆರೋಗ್ಯ ಕಾಳಜಿ, ಲಸಿಕೆ ಸೇವೆ, ಕುಟುಂಬ ನಿಯಂತ್ರಣ, ಸೋಂಕು ರೋಗಗಳ ನಿರ್ವಹಣೆ, ಸಕ್ಕೆ ಕಾಯಿಲೆ, ರಕ್ತದೊತ್ತಡ ನಿರ್ವಹಣೆ, ಸಣ್ಣಪುಟ್ಟ ಗಾಯಗಳಿಗೆ ಆರೈಕೆ, ಮರುಕಳಿಸುವ ಕಾಯಿಲೆಗಳು ಸೇರಿವೆ. ಹೆಚ್ಚಿನ ಚಿಕಿತ್ಸೆ ಅಗತ್ಯವಿರುವ ಸಮಸ್ಯೆಗಳಿಗೆ ಸಂಬಂಧಿಸಿದ ಆಸ್ಪತ್ರೆಗಳಿಗೆ ರೆಫರಲ್ ಸೇವೆಗಳನ್ನೂ ಉಚಿತವಾಗಿ ಒದಗಿಸಲಾಗುವುದು.
ವಯೋವೃದ್ಧರ ಆರೈಕೆ, ತುರ್ತು ವೈದ್ಯಕೀಯ ಸೇವೆಗಳು, ಅರೋಗ್ಯ ತಪಾಸಣೆ ಮತ್ತು ಔಷಧಿಗಳನ್ನು ಸಂಪೂರ್ಣ ಉಚಿತವಾಗಿ ಒದಗಿಸಲಾಗುವುದು. 14 ಬಗೆಯ ಲ್ಯಾಬ್ ಟೆಸ್ಟ್ಗಳು, ಟೆಲಿ ಕನ್ಸಲ್ಟೇಶನ್ ಸೌಲಭ್ಯ, ರೋಗ ಬಾರದಂತೆ ಮುನ್ನೆಚ್ಚರಿಕೆ ವಹಿಸಲು ಸಲಹೆಗಳು ಉಚಿತವಾಗಿ ದೊರೆಯುತ್ತವೆ. ಸೋಮವಾರದಿಂದ ಶನಿವಾರದವರೆಗೆ ಬೆಳಿಗ್ಗೆ 9ರಿಂದ ಸಂಜೆ 4.30ರವರೆಗೆ ನಮ್ಮ ಕ್ಲಿನಿಕ್ಗಳು ಕಾರ್ಯನಿರ್ವಹಿಸುತ್ತವೆ. ಜನವಸತಿಗಳಿಗೆ ಹತ್ತಿರದಲ್ಲಿ ಕ್ಲಿನಿಕ್ಗಳನ್ನು ಆರಂಭಿಸುವುದರಿಂದ ಜನರಿಗೆ ಆರೋಗ್ಯ ಸೇವೆಗಳು ಸುಲಭವಾಗಿ ಸಿಗಲು ಸಾಧ್ಯವಾಗುತ್ತದೆ. ಅಷ್ಟೇ ಅಲ್ಲ, ಸರ್ಕಾರಿ ಆಸ್ಪತ್ರೆಗಳ ಮೇಲಿರುವ ಒತ್ತಡವೂ ಕಡಿಮೆಯಾಗುತ್ತದೆ.
ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಬರಹ ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:14 am, Wed, 14 December 22