ಮೂರನೇ ಅಲೆಯಲ್ಲಿ ಸೋಂಕಿಗೊಳಗಾಗುವ ವ್ಯಕ್ತಿ ಯಾವ ರೂಪಾಂತರಿ ವೈರಸ್​​​ನಿಂದ ಪೀಡಿತನಾಗಿದ್ದಾನೆ ಅಂತ ಗೊತ್ತಾಗುತ್ತದೆಯೇ? ವಿವರ ಇಲ್ಲಿದೆ

ಸೋಂಕಿತರು ಯಾವ ರೂಪಾಂತರಿಯಿಂದ ಪೀಡಿತರಾಗಿದ್ದಾರೆ ಅಂತ ನಿಖರವವಾಗಿ ಪತ್ತೆ ಹಚ್ಚುವ ವಿಶೇಷ ಲ್ಯಾಬ್​ಗಳು ನಮ್ಮಲ್ಲಿಲ್ಲ. ಆದ್ದರಿಂದ, ಸಾರ್ವಜನಿಕ ಆರೋಗ್ಯದ ದೃಷ್ಟಿಕೋನದಿಂದ, ಸಂಖ್ಯೆಗಳು ಏರುತ್ತಿರುವುದರಿಂದ ಹೆಚ್ಚಿನವರು ಒಮೈಕ್ರಾನ್‌ ರೂಪಾಂತರಿಯಿಂದ ಸೋಂಕಿಗೆ ಒಳಗಾಗಿದ್ದಾರೆ ಎಂದು ಭಾವಿಸುವುದು ಸೇಫ್ ಅನಿಸುತ್ತಿದೆ,’ ಎಂದು ಡಾ ಜಯಪ್ರಕಾಶ್ ಮುಲಿಯಿಲ್ ಹೇಳುತ್ತಾರೆ.

ಮೂರನೇ ಅಲೆಯಲ್ಲಿ ಸೋಂಕಿಗೊಳಗಾಗುವ ವ್ಯಕ್ತಿ ಯಾವ ರೂಪಾಂತರಿ ವೈರಸ್​​​ನಿಂದ ಪೀಡಿತನಾಗಿದ್ದಾನೆ ಅಂತ ಗೊತ್ತಾಗುತ್ತದೆಯೇ? ವಿವರ ಇಲ್ಲಿದೆ
ಒಮೈಕ್ರಾನ್ ಟೆಸ್ಟ್​

ಭಾರತದಲ್ಲಿ ಒಮೈಕ್ರಾನ್ ರೂಪಾಂತರಿ ಸೋಂಕಿನಿಂದ ಬಳಲುತ್ತಿರುವವರ ಸಂಖ್ಯೆ ಈಗ 4,868 ಆಗಿದ್ದು 1281 ಸೋಂಕಿತರನ್ನು ಹೊಂದಿರುವ ಮಹಾರಾಷ್ಟ್ರ ಆಗ್ರಸ್ಥಾನದಲ್ಲಿದೆ. 645 ಪ್ರಕರಣಗಳನ್ನು ಹೊಂದಿರುವ ರಾಜಸ್ತಾನ ಎರಡನೇ ಸ್ಥಾನದಲ್ಲಿದೆ. ತಜ್ಞರ ಪ್ರಕಾರ ಮುಂಬರುವ ದಿನಗಳಲ್ಲಿ ಪ್ರಕರಣಗಳ ಸಂಖ್ಯೆ ಅಪಾರವಾಗಿ ಹೆಚ್ಚಲಿದ್ದು ದಿನವೊಂದಕ್ಕೆ ಒಂದು ಕೋಟಿ ಜನ ಸೋಂಕಿಗೊಳಗಾಗುವ ಸಾಧ್ಯತೆ ಇದೆ. ಒಮೈಕ್ರಾನ್ ಅಲ್ಲದೆ ಒಟ್ಟಾರೆ ಕೊರೊನಾ ಪ್ರಕರಣಗಳ ಸಂಖ್ಯೆಯೂ ಭೀತಿ ಹುಟ್ಟಿಸುವ ರೀತಿಯಲ್ಲಿ ಹೆಚ್ಚುತ್ತಿದೆ. ಬುಧವಾರದಂದು ದೇಶದಲ್ಲಿ 1.9 ಲಕ್ಷ ಪ್ರಕರಣಗಳು ವರದಿಯಾಗಿದ್ದು ಮಂಗಳವಾರದ ಪ್ರಕರಣಗಳಿಗೆ ಹೋಲಿಸಿದರೆ ಇದು ಶೇಕಡಾ 17 ರಷ್ಟು ಹೆಚ್ಚಿದೆ. ಪ್ರಸ್ತುತವಾಗಿ ಭಾರತದಲ್ಲಿ ಈಗ 9,55,319 ಸಕ್ರಿಯ ಪ್ರಕರಣಗಳಿವೆ ಮತ್ತು ಕಳೆದ 211 ದಿನಗಳಲ್ಲಿ ಇದು ಗರಿಷ್ಠ ಸಂಖ್ಯೆಯಾಗಿದೆ. ಒಮೈಕ್ರಾನ್ ಕೇಸ್ಗಳ ಸಂಖ್ಯೆಯೂ ಲಂಬಾವಾಗಿ ಏರಿಕೆಯಾಗುತ್ತಿರುವದನ್ನು ನೋಡುತ್ತಿದ್ದರೆ ಅದು ಇಷ್ಟರಲ್ಲೇ ಡೆಲ್ಟಾ ರೂಪಾಂತರಿ ಸೋಂಕಿನ ಪ್ರಕರಣಗಳನ್ನು ಭಾರತದಲ್ಲಿ ಮಾತ್ರವಲ್ಲ ಜಾಗತಿಕವಾಗಿಯೂ ಹಿಂದಿಕ್ಕಲಿದೆ.

ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂ ಹೆಚ್ ಒ) ಬಿಡುಗಡೆ ಮಾಡಿರುವ ಕೋವಿಡ್-19 ಸಾಪ್ತಾಹಿಕ ಎಪಿಡೆಮಿಯೋಲಾಜಿಕಲ್ ಅಪ್‌ಡೇಟ್ ಪ್ರಕಾರ, ಜನವರಿ 3-9 ರ ವಾರದಲ್ಲಿ ಜಾಗತಿಕವಾಗಿ 15 ಮಿಲಿಯನ್‌ಗೂ ಹೆಚ್ಚು ಹೊಸ ಕೋವಿಡ್ ಪ್ರಕರಣಗಳು ವರದಿಯಾಗಿವೆ. ಹಿಂದಿನ ವಾರಕ್ಕೆ ಹೋಲಿಸಿದರೆ ಸುಮಾರು 9.5 ಮಿಲಿಯನ್ ಪ್ರಕರಣಗಳು ಹೆಚ್ಚಾಗಿದ್ದು ಹೆಚ್ಚಳದ ಪ್ರಮಾಣ ಶೇಕಡಾ 55 ರಷ್ಟು ಇದೆ. ಡಬ್ಲ್ಯೂ ಹೆಚ್ ಒ ನೀಡಿರುವ ಅಪ್ಡೇಟ್ ಪ್ರಕಾರ ಒಮೈಕ್ರಾನ್ ಪ್ರಬಲವಾದ ರೂಪಾಂತರವಾಗಿದೆ ಮತ್ತು ಗಣನೀಯ ಬೆಳವಣಿಗೆಯನ್ನು ತೋರಿದೆ. ಇದು ಇತರ ರೂಪಾಂತರಗಳನ್ನು ಬಹಳ ಶೀಘ್ರವಾಗಿ ಹಿಂದಟ್ಟುತ್ತಿದೆ ಎಂದು ವರದಿ ಹೇಳಿದೆ.

ಯಾವ ರೂಪಾಂತರಿಯ ಸೋಂಕು ಅಂತ ಗೊತ್ತಾಗುತ್ತದೆಯೇ? ಕೋವಿಡ್-19 ಸೋಂಕಿನಿಂದ ಬಳಲುತ್ತಿರುವ ವ್ಯಕ್ತಿಯೊಬ್ಬನಿಗೆ ತಾನು ಪೀಡಿತನಾಗಿರುವುದು ಒಮೈಕ್ರಾನ್ ರೂಪಾಂತರಿಯಿಂದಲೋ ಅಥವಾ ಡೆಲ್ಟಾ ರೂಪಾಂತರಿಯಿಂದಲೋ ಅನ್ನೋದು ಗೊತ್ತಾಗುತ್ತದೆಯೇ ಅಂತ ಟಿವಿ9 ಡಿಜಿಟಲ್ ಕನ್ನಡ ಆವೃತ್ತಿಯ ಸೋದರ ಆವೃತ್ತಿಯಾಗಿರುವ ನ್ಯೂಸ್9 ಕೆಲ ತಜ್ಞರಿಗೆ ಕೇಳಿ ಅವರಿಂದ ಪ್ರತಿಕ್ರಿಯೆಗಳನ್ನು ಪಡೆದಿದೆ. ಅವರು ಹೇಳಿದ್ದು ಕೇಳಗಿನಂತಿದೆ.

ಹೈದರಾಬಾದ್‌ನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ (ಐಐಟಿ) ಪ್ರಾಧ್ಯಾಪಕ ಮತ್ತು ರಾಷ್ಟ್ರೀಯ ಕೋವಿಡ್-19 ಸೂಪರ್ ಮಾಡೆಲ್ ಸಮಿತಿಯ ಮುಖ್ಯಸ್ಥ ಡಾ ಎಂ ವಿದ್ಯಾಸಾಗರ್ ಹೇಳುವ ಪ್ರಕಾರ, ಸೋಂಕಿತನಿಗೆ ಅದು ಗೊತ್ತಾಗುವುದಿಲ್ಲ ಮತ್ತು ಅದರ ಅಗತ್ಯವೂ ಇಲ್ಲ. ನಿಖರವಾದ ರೂಪಾಂತರಿಯ ಜ್ಞಾನವು ಸಾಂಕ್ರಾಮಿಕ ರೋಗಶಾಸ್ತ್ರಜ್ಞರಿಗೆ ಮಾತ್ರ ಗೊತ್ತಾಗುವ ವಿಷಯವಾಗಿದೆ, ಸೋಂಕು ತಾಕಿದ್ದು ಒಮೈಕ್ರಾನ್ ನಿಂದಲೋ ಅಥವಾ ಡೆಲ್ಟಾದಿಂದಲೋ ಎಂದು ತಿಳಿದುಕೊಳ್ಳಬೇಕಾದ ಅವಶ್ಯಕತೆ ತನ್ನಂಥ ಸಂಶೋಧಕರಿಗೆ ಮಾತ್ರ ಇದೆ ಎಂದು ಅವರು ಹೇಳುತ್ತಾರೆ.

ಯಾವುದೇ ರೂಪಾಂತರಿಯಿಂದ ಬಳಲುತ್ತಿದ್ದರೂ ಒಂದೇ ಬಗೆಯ ಪ್ರೋಟೋಕಾಲ್ ! ‘ಒಬ್ಬ ಸಾಮಾನ್ಯ ವ್ಯಕ್ತಿಗೆ, ಯಾವ ರೂಪಾಂತರದಿಂದ ಬಳಲುತ್ತಿದ್ದೇನೆ ಅನ್ನೋದು ಮುಖ್ಯವಲ್ಲ. ಅವನು ಯಾವುದೇ ರೂಪಾಂತರಿಯಿಂದ ಬಳಲುತ್ತಿದ್ದರೂ ಒಂದೇ ಬಗೆಯ ಪ್ರೋಟೋಕಾಲ್ ಅನ್ನು ಅನುಸರಿಸಬೇಕಾಗುತ್ತದೆ. ಚಿಕಿತ್ಸೆಯು ಹೆಚ್ಚು ಕಡಿಮೆ ಒಂದೇ ತೆರನಾಗಿರುತ್ತದೆ. ಗಮನಿಸಬೇಕಾದ ವಿಷಯವೆಂದರೆ ಒಮೈಕ್ರಾನ್‌ ಸೋಂಕಿನ ಚೇತರಿಕೆ ಸಮಯವು ಹಿಂದಿನ ರೂಪಾಂತರಗಳಿಂದ ಉದ್ಭವಿಸಿದ ಸೋಂಕಿಗಿಂತ ಹೆಚ್ಚು ವೇಗವಾಗಿರುತ್ತದೆ. ಒಬ್ಬ ವ್ಯಕ್ತಿಯು ಯಾವ ರೂಪಾಂತರಿಯಿಂದದ ಬಳಲುತ್ತಿದ್ದಾನೆ ಎಂಬ ನಿಖರವಾದ ಜ್ಞಾನವು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವ ನಮ್ಮಂಥ ಸಂಶೋಧಕರಿಗೆ ಮಾತ್ರ ಆಸಕ್ತಿಯ ವಿಷಯವಾಗಿದೆ, ಯಾಕೆಂದರೆ ಮಹಾಮಾರಿಯ ಪಥವು ಭಿನ್ನವಾಗಿರುತ್ತದೆ-ಅದು ಓಮಿಕ್ರಾನ್ ಸೋಂಕೋ ಅಥವಾ ಡೆಲ್ಟಾ ಸೋಂಕೋ ಎನ್ನುವುದರ ಮೇಲೆ ಅದು ಅವಲಂಬಿತವಾಗಿರುತ್ತದೆ,’ ಎಂದು ಅವರು ತಿಳಿಸಿದರು.

ಪರಿಸ್ಥಿತಿ ಹಾಗಿದ್ದರೆ ವಿಶ್ವದಾದ್ಯಂತ ಒಮೈಕ್ರಾನ್ ಕೇಸ್​​​ಗಳ ಬಗ್ಗೆ ನಿರ್ದಿಷ್ಟವಾದ ಡಾಟಾ ಯಾಕೆ ಲಭ್ಯವಿದೆ? ಒಮೈಕ್ರಾನ್ ರೂಪಾಂತರಿಯ ಕುರಿತು ವಿಜ್ಞಾನಿಗಳು ಆಧ್ಯಯನ ಮಾಡುವುದಕ್ಕಾಗಿ ಡಾಟಾ ಸಂಗ್ರಹಿಸಲಾಗುತ್ತಿದೆ, ಎಂದು ವಿದ್ಯಾಸಾಗರ್ ಹೇಳಿದರು. ‘ನಾವು ತಿಳಿದುಕೊಳ್ಳಬೇಕಾಗಿರುವ ಅಂಶವೇನೆಂದರೆ, ಕೆಲವು ವೈರಾಲಜಿಸ್ಟ್‌ಗಳು ಸೋಂಕು ಅತಿ ವೇಗದಲ್ಲಿ ಹೆಚ್ಚುತ್ತಿರುವುದಕ್ಕೆ ಅದು ಡೆಲ್ಟಾ ರೂಪಾಂತರಿಯಿಂದ ಅಗಿರುವ ಸೋಂಕು ಅಲ್ಲ ಅಂತ ಹೇಳುತ್ತಾರೆ, ಅವರ ತರ್ಕದ ಹಿಂದಿನ ಕಾರಣವೆಂದರೆ ಡೆಲ್ಟಾ ರೂಪಾಂತರಿಯು ನಮ್ಮನ್ನು ಸ್ಯಾಚುರೇಟೆಡ್ ಮಾಡಿದೆ. ಈ ಹಿಂದೆ ಸೋಂಕಿಗೆ ಒಳಗಾಗದವರಿಗೆ ಡೆಲ್ಟಾ ರೂಪಾಂತರಿಯ ಸೋಂಕು ಈಗಲೂ ತಗುಲಬಹುದು, ಆದರೆ ಆ ಸಂಖ್ಯೆಯು ತುಂಬಾ ಚಿಕ್ಕದಾಗಿರುತ್ತದೆ,’ ಎಂದು ವಿದ್ಯಾಸಾಗರ್ ಹೇಳುತ್ತಾರೆ.

ಸೋಂಕಿನ ಪ್ರಕರಣಗಳಲ್ಲಿ ವರ್ಟಿಕಲ್ ಹೆಚ್ಚಳ! ‘ಡಿಸೆಂಬರ್-ಜನವರಿಯಲ್ಲಿ ಪ್ರಕರಣಗಳು ಒಂದೇ ಸಮನೆ ಲಂಬವಾಗಿ ಹೆಚ್ಚುತ್ತಿರುವುದನ್ನು ನಾವು ಗಮನಿಸಿದ್ದೇವೆ, ವಿಶೇಷವಾಗಿ ಮುಂಬೈ ಮತ್ತು ದೆಹಲಿಯಲ್ಲಿ ವರ್ಟಿಕಲ್ ಹೆಚ್ಚಳ ಕಂಡುಬರುತ್ತಿದೆ. ಅವರೆಲ್ಲರ ಆರ್‌ಟಿ-ಪಿಸಿಆರ್ ರಿಸಲ್ಟ್ ಪಾಸಿಟಿವ್ ಬಂದಿದೆ. ಅದರರ್ಥ ಸೋಂಕಿತರೆಲ್ಲರಿಗೂ ಕೋವಿಡ್ ಇದೆ. ತಜ್ಞರು ಇದನ್ನು ಸುಲಭವಾಗಿ ಪತ್ತೆಹಚ್ಚುತ್ತಾರೆ. ಒಮೈಕ್ರಾನ್ ರೂಪಾಂತರದ ವಿಶಿಷ್ಟ ಲಕ್ಷಣವಾಗಿರುವ ಎಸ್-ಜೀನ್ ಡ್ರಾಪ್ ಇದೆ. ಆದರೆ ನಾವು ಈ ನಿರ್ದಿಷ್ಟ ಪ್ರಕಾರದ ಆರ್‌ಟಿ-ಪಿಸಿಆರ್ ಟೆಸ್ಟ್ ಎಲ್ಲೂ ಮಾಡಲು ಸಾಧ್ಯವಿಲ್ಲ.

ಸೋಂಕಿತರು ಯಾವ ರೂಪಾಂತರಿಯಿಂದ ಪೀಡಿತರಾಗಿದ್ದಾರೆ ಅಂತ ನಿಖರವವಾಗಿ ಪತ್ತೆ ಹಚ್ಚುವ ವಿಶೇಷ ಲ್ಯಾಬ್​ಗಳು ನಮ್ಮಲ್ಲಿಲ್ಲ. ಆದ್ದರಿಂದ, ಸಾರ್ವಜನಿಕ ಆರೋಗ್ಯದ ದೃಷ್ಟಿಕೋನದಿಂದ, ಸಂಖ್ಯೆಗಳು ಏರುತ್ತಿರುವುದರಿಂದ ಹೆಚ್ಚಿನವರು ಒಮೈಕ್ರಾನ್‌ ರೂಪಾಂತರಿಯಿಂದ ಸೋಂಕಿಗೆ ಒಳಗಾಗಿದ್ದಾರೆ ಎಂದು ಭಾವಿಸುವುದು ಸೇಫ್ ಅನಿಸುತ್ತಿದೆ,’ ಎಂದು ಡಾ ಜಯಪ್ರಕಾಶ್ ಮುಲಿಯಿಲ್ ನ್ಯೂಸ್ 9 ಗೆ ನೀಡಿದ ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ.

ಯಾವ ರೂಪಾಂತರಿಯಿಂದ ಸೋಂಕು ತಗುಲಿದೆ ಎಂದು ತಿಳಿಸುವ ಯಾವುದೇ ಟೆಸ್ಟ್ ಇಲ್ಲವೇ? ನಮಗೆ ಯಾವ ರೂಪಾಂತರಿಯಿಂದ ಸೋಂಕು ಉಂಟಾಗಿದೆ ಎಂದು ಅರಿಯುವುದು ಅಸಾಧ್ಯವೇನೂ ಅಲ್ಲ. ಒಬ್ಬ ವ್ಯಕ್ತಿಯ ಆರ್‌ಟಿ-ಪಿಸಿಆರ್ ಟೆಸ್ಟ್ ಪಾಸಿಟಿವ್ ಬಂದರೆ ನಿಖರವಾದ ರೂಪಾಂತರವನ್ನು ಕಂಡುಹಿಡಿಯಲು ಟಕ್ ಪಾತ್ ‘ಎಸ್’ ಜೀನ್ ಕೋವಿಡ್-19 ಡಯಾಗ್ನೋಸ್ಟಿಕ್ ಕಿಟ್ ಎಂಬ ವಿಭಿನ್ನ ರೀತಿಯ ಆರ್‌ಟಿ-ಪಿಸಿಆರ್ ಟೆಸ್ಟ್ಗೆ ಹೋಗಬಹುದು. ಈ ಟೆಸ್ಟ್ ಸೀಕ್ವೆನ್ಸಿಂಗ್ ಮಾಡುವ ಹಾಗೆಯೇ ನಿಖರವಾಗಿರುತ್ತದೆ ಮತ್ತು ಇದು ಸಾಮಾನ್ಯ ಆರ್‌ಟಿ-ಪಿಸಿಆರ್ ಟೆಸ್ಟ್ ನಷ್ಟೇ ಸಮಯವನ್ನು ತೆಗೆದುಕೊಳ್ಳುತ್ತದೆ. ನಾನು ಈಗಲೂ ರೋಗಲಕ್ಷಣವುಳ್ಳ ಜನರಿಗೆ ಸಾಮಾನ್ಯ ಆರ್‌ಟಿ-ಪಿಸಿಆರ್ ಟೆಸ್ಟ್ ಆಯ್ಕೆ ಮಾಡಲು ಸಲಹೆ ನೀಡುತ್ತೇನೆ. ಈ ಟೆಸ್ಟ್ ವ್ಯಕ್ತಿಯು ತನ್ನನ್ನು ತಾನು ಪ್ರತ್ಯೇಕಿಸಿಕೊಳ್ಳಬೇಕೆ ಅಥವಾ ಬೇಡವೇ ಎಂಬುದನ್ನು ನಿಮಗೆ ತಿಳಿಸುತ್ತದೆ,’ ಎಂದು ಡಾ. ವಿದ್ಯಾಸಾಗರ್ ಹೇಳುತ್ತಾರೆ.

ಒಮೈಕ್ರಾನ್​ಗೆ ಪ್ರತ್ಯೇಕ ಒಮೈಸೂರ್ ಟೆಸ್ಟ್​​! ಇದಲ್ಲದೆ ಒಮೈಸೂರ್ ಎಂಬ ಟೆಸ್ಟ್ ಸಹ ಇದೆ. ಇದು ಒಮೈಕ್ರಾನ್ ಪತ್ತೆಗಾಗಿ ಭಾರತದಲ್ಲಿ ತಯಾರಿಸಲಾದ ಮೊದಲ ಕಿಟ್ ಆಗಿದೆ. ಈ ಹೊಸ ಕಿಟ್ ಅನ್ನು ಐಸಿಎಂಆರ್ ಅನುಮೋದಿಸಿದೆ. ಇದು ಒಂದೇ ಟ್ಯೂಬ್‌ನೊಂದಿಗೆ ಮೂರು ಜೀನ್‌ಗಳನ್ನು ಟಾರ್ಗೆಟ್ ಮಾಡುತ್ತದೆ, ಏಕಕಾಲಿಕ ಎಸ್-ಜೀನ್ ಗುರಿ ವೈಫಲ್ಯ ಮತ್ತು ಎಸ್-ಜೀನ್ ಮ್ಯುಟೇಶನ್ ಆಂಪ್ಲಿಫಿಕೇಶನ್ ಅನ್ನು ಗುರುತಿಸುವ ರೀತಿಯಲ್ಲಿ ಸಂಪೂರ್ಣ ಮಲ್ಟಿಪ್ಲೆಕ್ಸ್ ವಿಶ್ಲೇಷಣೆಯನ್ನು ಇದು ನೀಡುತ್ತದೆ. ಸದರಿ ಕಿಟ್ ನ ಪರೀಕ್ಷಣೆಯನ್ನು ನಡೆಸಿದಾಗ ಅದು ಶೇಕಡಾ 100 ಸೂಕ್ಷ್ಮತೆ ಮತ್ತು ಒಮೈಕ್ರಾನಂಥ ರೂಪಾಂತರಿಗಳನ್ನು ಪತ್ತೆಹಚ್ಚುವಲ್ಲಿ ಶೇಕಡಾ 99.25 ರಷ್ಟು ನಿಖರತೆಯನ್ನು ತೋರಿದೆ. ತಮ್ಮ ರೋಗಿಗಳಿಗೆ ಉತ್ತಮ ಚಿಕಿತ್ಸೆಯನ್ನು ವೈದ್ಯರು ಸೂಚಿಸಲು ಒಮಿಸೂರ್ ಕಿಟ್ ಸಹಾಯ ಮಾಡುತ್ತದೆ ಎಂದು ದ್ವಾರಕಾದ ಮಣಿಪಾಲ್ ಆಸ್ಪತ್ರೆಯ ಸಾಂಕ್ರಾಮಿಕ ರೋಗಗಳ ಕನ್ಸಲ್ಟಂಟ್ ಡಾ ಅಂಕಿತಾ ಬೈದ್ಯ ಹೇಳುತ್ತಾರೆ.

‘ಒಬ್ಬ ರೋಗಿಯು ಡೆಲ್ಟಾ ಅಥವಾ ಒಮೈಕ್ರಾನ್ ನಿಂದ ಬಳಲುತ್ತಿದ್ದಾನೆಯೇ ಎಂದು ನಾವು ಖಚಿತವಾಗಿ ತಿಳಿದುಕೊಳ್ಳಲು ಸಾಧ್ಯವಾದರೆ, ಚಿಕಿತ್ಸೆಯ ಮಾರ್ಗವು ಸ್ವಲ್ಪ ಭಿನ್ನವಾಗಿರಬಹುದು ಅದರಲ್ಲೂ ವಿಶೇಷವಾಗಿ, ಪ್ರಕರಣವೊಂದು ಟ್ರಿಕ್ಕಿಯಾಗಿದ್ದರೆ. ಈ ಪರೀಕ್ಷೆಯು ಭರವಸೆದಾಯಕ ಅನಿಸುತ್ತಿದೆ ಮತ್ತು ರೋಗಲಕ್ಷಣದ ರೋಗಿಗಳಿಗೆ ಸೊಂಕು ಉಲ್ಬಣಗೊಳ್ಳುವ ಮೊದಲೇ ಈ ಟೆಸ್ಟ್ ಮಾಡಿಸಬೇಕು ಇಲ್ಲದಿದ್ದರೆ ತೀವ್ರವಾಗಿ ಅಸ್ವಸ್ಥರಾಗುತ್ತಾರೆ,’ ಎಂದು ಬೈದ್ಯ ಹೇಳುತ್ತಾರೆ.

ಈ ಎರಡು ರೂಪಾಂತರಿಗಳಿಗೆ ಭಿನ್ನವಾದ ಚಿಕಿತ್ಸೆ ಇದೆಯೇ? ಒಮೈಕ್ರಾನ್ ಸೋಂಕಿನ ಲಕ್ಷಣ ನೆಗಡಿ ಬಂದ ಹಾಗಿರುತ್ತದೆ ಎಂದು ವೈದ್ಯರು ಹೇಳುತ್ತಾರೆ. ನಮಗೆ ಲಭ್ಯವಿರುವ ಡಾಟಾವನ್ನು ಆಧಾರವಾಗಿಟ್ಟುಕೊಂಡು ಹೇಳುವುದಾದರೆ ಒಮೈಕ್ರಾನ್ ಸೋಂಕು ಡೆಲ್ಟಾ ಸೋಂಕಿಗೆ ಹೋಲಿಸಿದರೆ ಸೌಮ್ಯ ಸ್ವಭಾವದ್ದು ಅಂತ ಹೇಳಬಹುದು. ಅದರರ್ಥ ಡೆಲ್ಟಾ ರೂಪಾಂತರಿಯಿಂದ ಸೋಂಕು ತಾಕಿದ ಪ್ರಕರಣಗಳಲ್ಲಿ ಶೇಕಡಾ 40 ರಷ್ಟು ರೋಗಿಗಳನ್ನು ಆಸ್ಪತ್ರೆಗೆ ಸೇರಿಸಬೇಕಾಗಿತ್ತು. ಆದರೆ ಒಮೈಕ್ರಾನ್ ಪ್ರಕರಣಗಳಲ್ಲಿ ಶೇಕಡಾ 10 ರಷ್ಟು ರೋಗಿಗಳನ್ನು ಮಾತ್ರ ಆಸ್ಪತ್ರೆಗೆ ಸೇರಿಸಬೇಕಾಗಬಹುದು ಎಂದು ಬೈದ್ಯ ಹೇಳುತ್ತಾರೆ.

ಐಸೋಲೇಶನ್ ಅಗತ್ಯವಿರುವ ರೋಗಿಗಳಿಗೆ ಆ್ಯಂಟಿವೈರಲ್ ಮಾತ್ರೆ ಮಧ್ಯಮದಿಂದ ತೀವ್ರತರವಾದ ಡೆಲ್ಟಾ ರೋಗಿಗಳಿಗೆ ಚಿಕಿತ್ಸೆ ನೀಡಲು ನಾವು ಬಳಸುತ್ತಿದ್ದ ಎರಡು ಮೊನೊಕ್ಲೋನಲ್ ಆಂಟಿಬಾಡಿ ಕಾಕ್‌ಟೇಲ್‌ಗಳು- ಕ್ಯಾಸಿರಿವಿಮಾಬ್ ಮತ್ತು ಇಮ್ಡೆವಿಮಾಬ್ ಅನ್ನು ಸದ್ಯಕ್ಕೆ ಎಲ್ಲಾ ಕೋವಿಡ್ ಪಾಸಿಟಿವ್ ರೋಗಿಗಳಿಗೆ ಶಿಫಾರಸು ಮಾಡಲಾಗುತ್ತಿಲ್ಲ. ಮನೆಯಲ್ಲಿ ಪ್ರತ್ಯೇಕತೆಯ ಅಗತ್ಯವಿರುವ ಹೆಚ್ಚಿನ ರೋಗಿಗಳಿಗೆ, ನಾವು ಆಂಟಿವೈರಲ್ ಮಾತ್ರೆಗಳನ್ನು ಶಿಫಾರಸು ಮಾಡುತ್ತೇವೆ ಮತ್ತು ಕೆಮ್ಮು ಮತ್ತು ಮೂಗಿನ ದಟ್ಟಣೆಯಂತಹ ರೋಗಲಕ್ಷಣಗಳಿಗೆ ಚಿಕಿತ್ಸೆ ನೀಡುತ್ತೇವೆ. ತೀವ್ರಸ್ವರೂಪದ ಪ್ರಕರಣಗಳಿಗೆ, ನಾವು ಅಗತ್ಯದ ಆಧಾರದ ಮೇಲೆ ಯಾವುದಾದರೂ ಮೊನೊಕ್ಲೋನಲ್ ಚಿಕಿತ್ಸೆಯನ್ನು ಶಿಫಾರಸು ಮಾಡುತ್ತೇವೆ,’ ಎಂದು ಬೈದ್ಯ ಹೇಳಿದರು.

5 ದಿನಗಳಲ್ಲಿ ರೋಗಿ ಗುಣಮುಖನಾದರೆ ಅದು ಒಮೈಕ್ರಾನ್ ಸೋಂಕು ಸೋಂಕಿತನೊಬ್ಬ 3-5 ದಿನಗಳಲ್ಲಿ ಗುಣಮುಖನಾದರೆ ಅವನು ಒಮೈಕ್ರಾನ್ ರೂಪಾಂತರಿಯಿಂದ ಪೀಡಿತನಾಗಿರುತ್ತಾನೆ. ಗಂಟಲು ಕೆರೆತ, ವಿಪರೀತ ಮೈಕೈ ನೋವಿನಿಂದ ಬಳಲಿರುತ್ತಾನೆ ಜೊತೆಗೆ ಜ್ವರವೂ ಅವನಿಗೆ ಕಾಡಿರುತ್ತದೆ. ಕೆಲವು ಪ್ರಕರಣಗಳಲ್ಲಿ ಸೋಂಕಿನ ತೀವ್ರತೆಯು ಭಿನ್ನವಾಗಿರಬಹುದು. ಒಮೈಕ್ರಾನ್ ಸೋಂಕಿತ ವ್ಯಕ್ತಿಗೆ ತೀವ್ರವಾದ ಮೂಗು ಕಟ್ಟುವಿಕೆ ಅಥವಾ ಮೂಗು ಸೋರುವಿಕೆ ಇರುತ್ತದೆ ಎಂದು ವೈದ್ಯರು ಹೇಳುತ್ತಾರೆ. ಡೆಲ್ಟಾ ರೂಪಾಂತರಿಯ ಸೋಂಕಿನಲ್ಲಿ ಇದೆಲ್ಲ ಅಷ್ಟಾಗಿ ಇರುವುದಿಲ್ಲ. ಈ ಪ್ರಸ್ತುತ ಅಲೆಯಲ್ಲಿ ಅನೇಕ ರೋಗಿಗಳು ಆಯಾಸ ಮತ್ತು ಜ್ವರದ ಬಗ್ಗೆ ದೂರಿದ್ದಾರೆ. ವೈದ್ಯರು ಸೂಚಿಸಿದ ಎರಡು ತಳಿ ರೋಗಲಕ್ಷಣಗಳ ನಡುವಿನ ಒಂದು ಪ್ರಮುಖ ವ್ಯತ್ಯಾಸವೆಂದರೆ ಡೆಲ್ಟಾ ರೂಪಾಂತರಿ ಸಮಯದಲ್ಲಿ, ರೋಗಿಗಳು ವಿಪರೀತ ಜ್ವರದಿಂದ ಬಳಲಿದ್ದರು.

2021 ರಲ್ಲಿ ಸೋಂಕಿಗೀಡಾದವರು ಐದರಿಂದ ಏಳು ದಿನಗಳವರೆಗೆ ತೀವ್ರ ಸ್ವರೂಪದ ಮೈಕೈ ನೋವು, ವಾಸನೆ ಮತ್ತು ರುಚಿ ಗೊತ್ತಾಗದಿರುವುದು, ಕೆಮ್ಮು ಮತ್ತು ಶೀತದಿಂದ ಬಳಲಿದ್ದರು. ಮೂರನೇ ಅಲೆಯಲ್ಲಿ ರೋಗಿಗಳಿಗೆ ಮೂರರಿಂದ ಐದು ದಿನಗಳವರೆಗೆ ಗಂಟಲು ಕೆರೆತ, ಶೀತ, ಕೆಮ್ಮು ಮತ್ತು ಕಡಿಮೆ ಪ್ರಮಾಣದ ಜ್ವರ ಇರುತ್ತದೆ. ನಮ್ಮ ಕ್ಲಿನಿಕಲ್ ತರ್ಕದ ಪ್ರಕಾರ, ಒಬ್ಬ ಸೋಂಕಿತ ಇಷ್ಟು ಸಮಯದೊಳಗೆ ಚೇತರಿಸಿಕೊಂಡರೆ, ಅದು ಒಮೈಕ್ರಾನ್ ರೂಪಾಂತರಿ ಸೋಂಕು. ಆದರೆ ಒಬ್ಬ ವ್ಯಕ್ತಿಯು ಹೆಚ್ಚು ಸಮಯ ತೆಗೆದುಕೊಳ್ಳುತ್ತಿದ್ದರೆ, ಅವನು ಡೆಲ್ಟಾ ರೂಪಾಂತರಿಯ ಸೋಂಕಿನಿದ ಬಳಲುತ್ತಿದ್ದಾನೆ ಎಂದರ್ಥ,’ ಎಂದು ವೈದ್ಯರು ಹೇಳುತ್ತಾರೆ.

ಇದನ್ನೂ ಓದಿ:  PM Modi: ದೇಶದಲ್ಲಿ ಏರಿಕೆಯಾಗುತ್ತಿರುವ ಕೊರೊನಾ, ಒಮಿಕ್ರಾನ್​; ಜ.13ರಂದು ಎಲ್ಲ ರಾಜ್ಯಗಳ ಸಿಎಂಗಳ ಜತೆ ಪ್ರಧಾನಿ ಮೋದಿ ಸಭೆ

Click on your DTH Provider to Add TV9 Kannada