Migraine: ವರ್ಕ್ ಫ್ರಂ ಹೋಮ್ ಒತ್ತಡಕ್ಕೆ ಶುರುವಾಯ್ತಾ ಮೈಗ್ರೇನ್? ಇದರಿಂದ ಹೊರಬರಲು ಈ ವಿಧಾನಗಳನ್ನು ಅನುಸರಿಸಿ
Health Tips: ಮೈಗ್ರೇನ್ ವೈಯಕ್ತಿಕ, ಸಾಮಾಜಿಕ ಅಥವಾ ವೃತ್ತಿ ಜೀವನದಲ್ಲಿನ ಒತ್ತಡದಿಂದಾಗಿ ಉದ್ಭವಿಸುತ್ತದೆ. ಅದರಲ್ಲೂ ಇತ್ತೀಚೆಗೆ ವರ್ಕ್ ಫ್ರಂ ಹೋಮ್ ಚಾಲ್ತಿಯಲ್ಲಿದ್ದು, ಹೆಚ್ಚಿನ ಜನರು ಮೈಗ್ರೇನ್ಗೆ ಗುರಿಯಾಗುತ್ತಿದ್ದಾರೆ. ಇದಕ್ಕೆ ಕಾರಣ ಬದಲಾದ ಜೀವನಶೈಲಿ, ಆಹಾರ ಪದ್ದತಿಯಲ್ಲಿನ ವ್ಯತ್ಯಾಸ, ಅಧಿಕ ಮಾನಸಿಕ ಒತ್ತಡವೇ ಆಗಿದೆ.
ಮೈಗ್ರೇನ್ ಎಂದರೆ ಮೆದುಳಿನ ಸುತ್ತಮುತ್ತ ಇರುವ ರಕ್ತನಾಳಗಳನ್ನು ಏಕಾಏಕಿ ಹಿಗ್ಗಿಸುವ ಕಾಯಿಲೆ. ಹೀಗಾದಾಗ ನರಗಳ ಮೇಲೆ ಒತ್ತಡ ಬೀರುವುದಲ್ಲದೆ, ವಿವಿಧ ರೀತಿಯ ರಾಸಾಯನಿಕಗಳು ಬಿಡುಗಡೆಯಾಗುತ್ತದೆ. ಇದು ಭರಿಸಲಾಗದಷ್ಟು ತಲೆನೋವನ್ನು ಉಂಟುಮಾಡುತ್ತದೆ. ಇದು ಒಂದು ದುರ್ಬಲಗೊಳಿಸುವ ನರವೈಜ್ಞಾನಿಕ ಕಾಯಿಲೆಯಾಗಿದ್ದು, ವಿಶ್ವದಾದ್ಯಂತ ಪ್ರಮುಖ 10 ಕಾಯಿಲೆಗಳಲ್ಲಿ ಮೈಗ್ರೇನ್ ಕೂಡ ಒಂದು. ಮೈಗ್ರೇನ್ನ (migraine) ಮುಖ್ಯ ಲಕ್ಷಣವೆಂದರೆ ವಿಪರೀತ ತಲೆನೋವು, ತಲೆಯ ಒಂದು ಬದಿ ಅಥವಾ ಎರಡೂ ಬದಿ ಪೂರ್ತಿ ಸಿಡಿದು ಹೋಗುತ್ತಿರುವಂತೆ ಭಾಸವಾಗುವುದು, ಕಣ್ಣಿನ ಸುತ್ತ, ತಲೆಯ ಹಿಂಭಾಗದಲ್ಲಿ ನೋವು, ವಾಕರಿಕೆ, ಅತಿಯಾದ ಬೆಳಕು, ಗಲಾಟೆ ಕೇಳಲು ಸಾಧ್ಯವಾಗದ ಸ್ಥಿತಿಯೇ ಆಗಿದೆ. ಆದರೆ ಹೆಚ್ಚಿನ ಜನ ಈ ತಲೆನೋವನ್ನು ಸಾಮಾನ್ಯವೆಂಬಂತೆ ನಿರ್ಲಕ್ಷಿಸುತ್ತಾರೆ ಮತ್ತು ಅದರೊಂದಿಗೆ ಜೀವನ ಸಾಗಿಸುತ್ತಾರೆ. ಆದರೆ ಇದು ಉತ್ತಮ ಬೆಳವಣಿಗೆಯಲ್ಲ.
ಮೈಗ್ರೇನ್ ವೈಯಕ್ತಿಕ, ಸಾಮಾಜಿಕ ಅಥವಾ ವೃತ್ತಿ ಜೀವನದಲ್ಲಿನ ಒತ್ತಡದಿಂದಾಗಿ ಉದ್ಭವಿಸುತ್ತದೆ. ಅದರಲ್ಲೂ ಇತ್ತೀಚೆಗೆ ವರ್ಕ್ ಫ್ರಂ ಹೋಮ್ ಚಾಲ್ತಿಯಲ್ಲಿದ್ದು, ಹೆಚ್ಚಿನ ಜನರು ಮೈಗ್ರೇನ್ಗೆ ಗುರಿಯಾಗುತ್ತಿದ್ದಾರೆ. ಇದಕ್ಕೆ ಕಾರಣ ಬದಲಾದ ಜೀವನಶೈಲಿ, ಆಹಾರ ಪದ್ದತಿಯಲ್ಲಿನ ವ್ಯತ್ಯಾಸ, ಅಧಿಕ ಮಾನಸಿಕ ಒತ್ತಡವೇ ಆಗಿದೆ.
ವೈದ್ಯಕೀಯ ತಜ್ಞರ ಪ್ರಕಾರ, ಮೈಗ್ರೇನ್ ತೀವ್ರತೆಯ ಬಗ್ಗೆ ಜನರಲ್ಲಿ ತಿಳುವಳಿಕೆಯ ಕೊರತೆಯಿದೆ. ನಾವು ಇತ್ತೀಚೆಗೆ ನಡೆಸಿದ ಅಧ್ಯಯನದಲ್ಲಿ, ಸುಮಾರು 50 ರಿಂದ 60 ಪ್ರತಿಶತದಷ್ಟು ಮೈಗ್ರೇನ್ ರೋಗಿಗಳಿಗೆ ಮರುಕಳಿಸುವ ತಲೆನೋವಿನ ಸ್ಥಿತಿ ನಿರ್ಮಾಣವಾದರೂ ಅವುಗಳ ಬಗ್ಗೆ ಗಮನಹರಿಸಿಲ್ಲ. ಏಕೆಂದರೆ ಮೈಗ್ರೇನ್ ಅನ್ನು ಪುನಃ ಪುನಃ ಬರುವವರೆಗೂ ಹೆಚ್ಚಿನವರು ಸಾಮಾನ್ಯ ತಲೆ ನೋವು ಎಂದು ಭಾವಿಸುತ್ತಾರೆ. ಬಿಡುವಿಲ್ಲದ ಕೆಲಸ, ಕೋವಿಡ್ -19 ಸೋಂಕಿಗೆ ಒಳಗಾಗುವ ಭಯ ಮತ್ತು ವೈಯಕ್ತಿಕ ಆರೈಕೆಯಲ್ಲಿನ ಗೊಂದಲ ಇದಕ್ಕೆ ಕಾರಣ. ಬದಲಿಗೆ ಒತ್ತಡ ಅಥವಾ ಖಿನ್ನತೆಯಂತಹ ಕಾಯಿಲೆಗಳು ಜನರನ್ನು ಸೇರಿ ಮೈಗ್ರೇನ್ ತೀವ್ರತೆ ಪಡೆದುಕೊಳ್ಳುತ್ತದೆ ಎಂದು ಹೇಳಿದ್ದಾರೆ.
ವರ್ಕ್ ಫ್ರಂ ಹೋಮ್ ನಡುವೆ ಮೈಗ್ರೇನ್ ಅನ್ನು ನಿರ್ವಹಿಸಲು ಈ 5 ಮಾರ್ಗಗಳನ್ನು ಅನುಸರಿಸಿ
ಆಹಾರ ಮತ್ತು ಜೀವನಶೈಲಿಯಲ್ಲಿ ಸರಿಯಾದ ಆಯ್ಕೆ ಮಾಡಿ ವರ್ಕ್ ಫ್ರಂ ಹೋಮ್ ಮಾಡುವುದು ಕೆಲವರಿಗೆ ಕಷ್ಟವಾಗಬಹುದು. ಆದರೆ ನಿಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಉತ್ತಮಗೊಳಿಸುವ ದಿನಚರಿಯು ಮೈಗ್ರೇನ್ ಅನ್ನು ದೂರವಿರಿಸಲು ಸಹಾಯ ಮಾಡುತ್ತದೆ. ಸೂಕ್ತ ಸಮಯದಲ್ಲಿ ಆರೋಗ್ಯಕರ ಊಟವನ್ನು ತಿನ್ನದೆ ಇರುವುದು ಮೈಗ್ರೇನ್ಗೆ ಕಾರಣವಾಗಿದೆ. ಹೀಗಾಗಿ ನಿಯಮಿತವಾಗಿ ಕೆಲಸದಿಂದ ವಿರಾಮಗಳನ್ನು ತೆಗೆದುಕೊಳ್ಳುವುದು, ಸರಿಯಾದ ಸಮಯಕ್ಕೆ ಊಟ ಮಾಡುವುದು, ಕಣ್ಣಿನ ಮೇಲಿನ ಅತಿಯಾದ ಒತ್ತಡವನ್ನು ದೂರ ಮಾಡುತ್ತದೆ. ಆ ಮೂಲಕ ಮೈಗ್ರೇನ್ ಪರಿಣಾಮ ಕಡಿಮೆ ಮಾಡಬಹುದು.
ಧೂಮಪಾನವನ್ನು ನಿಲ್ಲಿಸುವುದು ಮತ್ತು ಮದ್ಯಪಾನ ಸೇವನೆಯನ್ನು ಕಡಿಮೆ ಮಾಡುವುದು ಸೇರಿದಂತೆ ನಿಮ್ಮ ಜೀವನಶೈಲಿಯಲ್ಲಿ ಕೆಲವೊಂದಿಷ್ಟು ಮಾರ್ಪಾಡುಗಳನ್ನು ಮಾಡುವುದು ಉತ್ತಮ. ಜತೆಗೆ ಸೂಕ್ತ ನಿದ್ರೆಯ ಅಭ್ಯಾಸವನ್ನು ನಿರ್ವಹಿಸುವುದು, ನಿಯಮಿತವಾಗಿ ವ್ಯಾಯಾಮ ಮಾಡುವುದು ಮೈಗ್ರೇನ್ ಅನ್ನು ನಿರ್ವಹಿಸಲು ಪ್ರಮುಖವಾಗಿದೆ.
ತಜ್ಞರನ್ನು ಸಂಪರ್ಕಿಸಿ ನಿಮ್ಮ ದಿನಚರಿಗೆ ಅಡ್ಡಿಪಡಿಸುವ ತೀವ್ರ ತಲೆನೋವನ್ನು ಅನುಭವಿಸುತ್ತಿರುವಾಗ ವೈದ್ಯಕೀಯ ತಜ್ಞರನ್ನು ಸಂಪರ್ಕಿಸುವುದು ಮುಖ್ಯ. ಬಹಳಷ್ಟು ಮೈಗ್ರೇನರ್‌ಗಳು ವೈದ್ಯಕೀಯ ಸಹಾಯ ಪಡೆಯಲು ಹಿಂಜರಿಯುತ್ತಾರೆ. ಮೈಗ್ರೇನ್ ತೀವ್ರತೆಯ ತಿಳುವಳಿಕೆಯ ಕೊರತೆ, ಸಮಯದ ಕೊರತೆ, ಅಥವಾ ಇತ್ತೀಚೆಗೆ ಕೋವಿಡ್ -19 ಸೋಂಕಿನ ಭಯದಿಂದಾಗಿ ಆಸ್ಪತ್ರೆಗೆ ಭೇಟಿ ನೀಡಲು ಜನರು ಭಯ ಪಡುತ್ತಾರೆ. ಅದಾಗ್ಯೂ, ನರತಜ್ಞರನ್ನು ಸಂಪರ್ಕಿಸುವುದು ಮುಖ್ಯ. ದೂರವಾಣಿ ಮೂಲಕವೂ ನಿಮ್ಮ ಸ್ಥಿತಿಯ ಬಗ್ಗೆ ವೈದ್ಯರೊಂದಿಗೆ ಮಾತನಾಡಬಹುದು ಮತ್ತು ಸೂಕ್ತ ಸಲಹೆ ಪಡೆಯಬಹುದು.
ಡೈರಿ ಬರೆಯಿರಿ ಮೈಗ್ರೇನ್ನ ತೀವ್ರತೆ, ರೋಗಲಕ್ಷಣಗಳು, ದೈನಂದಿನ ಆಹಾರಕ್ರಮ, ವ್ಯಾಯಾಮ ಮತ್ತು ಔಷಧ ಇವುಗಳ ಬಗ್ಗೆ ಹೆಚ್ಚಿನ ಅರಿವು ನಿಮ್ಮದಾಗಿಸಿಕೊಳ್ಳಿ. ಇದೆಲ್ಲವನ್ನು ಸರಿದೂಗಿಸಲು ಡೈರಿ ಬರೆಯುವ ಅಭ್ಯಾಸ ಮಾಡಿಕೊಳ್ಳಿ. ಇದು ಒತ್ತಡವನ್ನು ದೂರ ಮಾಡುತ್ತದೆ ಅಥವಾ ಮೈಗ್ರೇನ್ ಟ್ರ್ಯಾಕರ್ ಆ್ಯಪ್ ಅನ್ನು ಡೌನ್‌ಲೋಡ್ ಮಾಡಿ, ಇದರಲ್ಲಿನ ಸಲಹೆ ತಲೆನೋವಿನಿಂದ ಸಮಾಧಾನ ತರುತ್ತದೆ.
ಕುಟುಂಬ, ಸ್ನೇಹಿತರು ಅಥವಾ ಸಹೋದ್ಯೋಗಿಗಳಿಂದ ಬೆಂಬಲ ಪಡೆಯಿರಿ ಮೈಗ್ರೇನ್ ಜೊತೆ ಸೆಣಸಾಡುವವರು ಸ್ನೇಹಿತರು ಮತ್ತು ಕುಟುಂಬದವರೊಂದಿಗೆ ಹೆಚ್ಚು ಮಾತನಾಡಿ ಮತ್ತು ನಿಮ್ಮ ಸ್ಥಿತಿಯನ್ನು ಅವರೊಂದಿಗೆ ಹಂಚಿಕೊಳ್ಳಿ. ಇದರೊಂದಿಗೆ ನಿಮ್ಮೊಂದಿಗಿನ ಅವರ ವರ್ತನೆ ಕೂಡ ಬದಲಾಗುತ್ತದೆ. ಅಲ್ಲದೆ ಅವರಿಂದ ಸಿಗುವ ಕೆಲವು ಸಲಹೆಗಳು ನಿಮ್ಮನ್ನು ಮೈಗ್ರೇನ್ನಿಂದ ಮುಕ್ತವಾಗಿಸಬಹುದು.
ಸರಿಯಾಗಿ ನಿದ್ರೆ ಮಾಡಿ ಕನಿಷ್ಠ 6 ರಿಂದ 8 ಗಂಟೆಗಳ ಕಾಲ ನಿದ್ರೆ ಮಾಡಿ. ಇದು ಒತ್ತಡವನ್ನು ನಿವಾರಿಸುವುದಲ್ಲದೇ ಆಯಾಸವನ್ನು ಕಡಿಮೆ ಮಾಡುತ್ತದೆ. ಅಲ್ಲದೇ ಹೆಚ್ಚು ನೀರು ಕುಡಿಯುವ ಅಭ್ಯಾಸ ಮಾಡಿಕೊಳ್ಳಿ. ಇದು ಮೈಗ್ರೇನ್ನ ಸಮಸ್ಯೆಯ ತೀವ್ರತೆಯನ್ನು ಕಡಿಮೆ ಮಾಡುತ್ತದೆ.
ಇದನ್ನೂ ಓದಿ: Health Tips: ಪಿತ್ತಜನಕಾಂಗವನ್ನು ಆರೋಗ್ಯವಾಗಿಡಲು ಈ ಕ್ರಮಗಳನ್ನು ಅನುಸರಿಸಿ
Published On - 1:51 pm, Sat, 11 September 21