ಜ್ಯೋತಿಷಿ ಹಾಗೂ ಮಾಡರ್ನ್ ಅಸ್ಟ್ರಾಲಜಿ ಮಾಸ ಪತ್ರಿಕೆಯ ಸಂಪಾದಕಿ ಗಾಯತ್ರಿ ದೇವಿ ವಾಸುದೇವ್ ಅವರ ಬಗ್ಗೆ ಮತ್ತೊಮ್ಮೆ ಬರೆಯಬೇಕಿದೆ. ಬೆಂಗಳೂರಿನ ವಿದ್ಯಾಪೀಠಕ್ಕೆ ಸಮೀಪದಲ್ಲೇ ಮಾಡರ್ನ್ ಅಸ್ಟ್ರಾಲಜಿ ಪತ್ರಿಕೆ ಕಚೇರಿ ಇದೆ. ಈ ಹಿಂದಿನ ಲೇಖನವೊಂದರಲ್ಲಿ ತಿಳಿಸಿದಂತೆ ಗಾಯತ್ರಿ ದೇವಿ ಅವರು ಪ್ರಖ್ಯಾತ ಜ್ಯೋತಿಷಿಗಳಾದ ಬಿ.ವಿ. ರಾಮನ್ ಅವರ ಮಗಳು. ಸದ್ಯಕ್ಕೆ ಪತ್ರಿಕೆಯ ಜವಾಬ್ದಾರಿಯನ್ನು ವಹಿಸಿಕೊಂಡು, ಜ್ಯೋತಿಷ್ಯದಲ್ಲಿ ಬಹಳ ಆಸಕ್ತಿಕರವಾದ ಸಂಗತಿಗಳನ್ನು ಬರೆಸುತ್ತಾರೆ, ಬರೆಯುತ್ತಾರೆ. ಈಗ ಹೇಳ ಹೊರಟಿರುವುದು ಆ ಜ್ಯೋತಿಷ್ಯ (Astrology) ಪತ್ರಿಕೆಯಲ್ಲಿ ಜನವರಿ ತಿಂಗಳಲ್ಲಿ ಬಂದಂಥ ಸಂಪಾದಕೀಯದ ಬಗ್ಗೆ. ಮಾಡರ್ನ್ ಅಸ್ಟ್ರಾಲಜಿ ಇಂಗ್ಲಿಷ್ ಪತ್ರಿಕೆಯ 2022ರ ಜನವರಿ ತಿಂಗಳ ಸಂಚಿಕೆ ಡಿಸೆಂಬರ್ ಮಧ್ಯದ ಹೊತ್ತಿಗೇ ಮಾರುಕಟ್ಟೆಗೆ ಬರುತ್ತದೆ. ಇನ್ನು ಈ ಸಂಪಾದಕೀಯವನ್ನು ಬರೆದಿರುವುದು 2021ರ ನವೆಂಬರ್ 22ರಂದು. ಆ ಸಂಪಾದಕೀಯದಲ್ಲಿ ಬರೆದ ಸಂಗತಿಯೇ ಈಗ ನಿಮ್ಮೆದುರು ಪ್ರಸ್ತಾವ ಮಾಡುತ್ತಿರುವುದು.
“ರಷ್ಯಾವು ಸೇನೆಯು 2022ರ ಆರಂಭ ಹಾಗೂ 2023ರ ಶುರುವಿನಲ್ಲಿ ನೆರೆಯ ದೇಶಗಳಲ್ಲಿ ಕಾರ್ಯಾಚರಣೆಯಲ್ಲಿ ತೊಡಗಿಕೊಳ್ಳಬಹುದು. ಇದಕ್ಕೆ ಯಾವುದೇ ಪರಿಹಾರ ಕಾಣುವುದಿಲ್ಲ. ಆ ಭಾಗದಲ್ಲಿ ಉದ್ವಿಗ್ನತೆಯನ್ನು ಉಳಿಸುವ ರಷ್ಯಾದ ಉದ್ದೇಶವನ್ನು ಸಂಪೂರ್ಣವಾಗಿ ಗೌರವಿಸುವುದು ಸಾಧ್ಯ ಆಗದಿರಬಹುದು.” -ಹೀಗೆ ಬರೆಯಲಾಗಿದೆ. ಅಷ್ಟೇ ಅಲ್ಲ, ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಜನ್ಮ ಜಾತಕದ ಪ್ರಕಾರ, ವರ್ಷದ ಕೊನೆಗೆ ಸಾಗುತ್ತಾ ಬಂದಂತೆ ಅವರು ಇನ್ನಷ್ಟು ಬಲಿಷ್ಠರಾಗುತ್ತಾರೆ. ಪುಟಿನ್ ಆರೋಗ್ಯದ ಬಗ್ಗೆ ಇರುವ ವದಂತಿಗಳು ಈಗಿನ ಸೂಚನೆಗಳ ಮೇಲೆ ಯಾವುದೇ ಪ್ರಭಾವ ಬೀರುವುದಿಲ್ಲ. ಜಾತಕದಲ್ಲಿ 9ನೇ ಮನೆಯ ಅಧಿಪತಿಯಾಗಿ ಬಲಿಷ್ಠ ಬುಧನ ದಶಾ ಕಾಲದಲ್ಲಿ ಭಾರೀ ಬುದ್ಧಿವಂತಿಕೆಯಿಂದ ಪುಟಿನ್ ತಂತ್ರಗಳನ್ನು ಹೆಣೆಯುತ್ತಾರೆ. ಭಾರತದ ಸಂಬಂಧವು ರಷ್ಯಾ ಜತೆಗೆ ಸ್ವಲ್ಪ ಮಟ್ಟಿಗೆ ಬಳಲಲಿದೆ.
ಕುಜ- ಗುರುವಿನ ಸಂಯೋಗ ಆಗುವ ಏಪ್ರಿಲ್ 29, 2022 ಹಾಗೂ ರಾಹು- ಕುಜ ಸಂಯೋಗದ ಆಗಸ್ಟ್ 1, 2022ರಲ್ಲಿ ರಷ್ಯಾದ ಮೇಲೆ ಪ್ರಮುಖ ಭಯೋತ್ಪಾದನೆ ದಾಳಿ ಆಗಬಹುದು. ಆದರೆ ಇದೇ ಅವಧಿಯಲ್ಲಿ ಪುಟಿನ್ ಮೇಲೆ ಯಾವುದೇ ದಾಳಿ ಸಾಧ್ಯತೆಗಳಿಲ್ಲ. ಯಾವುದೇ ದೈಹಿಕ ಅಪಾಯಗಳು ಇಲ್ಲದೆ ಅವರ ರಕ್ಷಣೆ ಮಾಡಲಾಗುತ್ತದೆ. ಈ ಹಿಂಸಾಚಾರದಲ್ಲಿ ಕ್ರೆಮ್ಲಿನ್ನ ಹಿರಿಯ ಸದಸ್ಯರು ಅಪಾಯಕ್ಕೆ ಈಡಾಗಬಹುದು. ಹನ್ನೆರಡನೇ ಮನೆಯಲ್ಲಿನ ರಾಹು ತೈಲ ಸಂಗ್ರಹಕ್ಕೆ ಉತ್ತಮ ಲಕ್ಷಣ ಅಲ್ಲ. ನೆರೆಯ ದೇಶದಲ್ಲಿನ ಅಗ್ನಿ ಅವಘಡ ರಷ್ಯಾದ ಆರ್ಥಿಕತೆಗೆ ದೊಡ್ಡ ಹೊಡೆತವನ್ನು ನೀಡಬಹುದು ಎಂದಿದ್ದಾರೆ.
ರಷ್ಯಾದಿಂದ ನೆರೆಯ ದೇಶದ ಮೇಲೆ ಸೇನಾ ಕಾರ್ಯಾಚರಣೆ ನಡೆಯುತ್ತದೆ ಎಂದು ಹೇಳಿರುವುದಕ್ಕಾದರೂ ಕಾರಣ ಏನು ಎಂಬ ಬಗ್ಗೆ ಟಿವಿ9ಕನ್ನಡ ಡಿಜಿಟಲ್ನಿಂದ ಗಾಯತ್ರಿ ದೇವಿ ಅವರನ್ನೇ ಮಾತನಾಡಿಸಲಾಯಿತು. ಅವರು ಹೇಳಿದ್ದು ಹೀಗೆ: “ಈ ಬಾರಿ ಯುಗಾದಿ ಸಮಯಕ್ಕೆ ಕುಂಡಲಿಯನ್ನು ರಚಿಸಲಾಗುತ್ತದೆ. ಅದರಲ್ಲಿ ರಷ್ಯಾ ಮಿಥುನ ರಾಶಿ ಬರುತ್ತದೆ. ಅದರ ಎರಡನೇ ಮನೆಯನ್ನು 6 ಹಾಗೂ 11ನೇ ಮನೆಯ ರಾಶ್ಯಾಧಿಪತಿಯಾದ ಉಚ್ಚ ಕುಜನು ವೀಕ್ಷಣೆ ಮಾಡುತ್ತಾನೆ. ಇದು ಮಿಲಿಟರಿಗಾಗಿ ಹೆಚ್ಚಿನ ಖರ್ಚು ಮಾಡುವುದು ಹಾಗೂ ಸೇನಾ ಕಾರ್ಯಾಚರಣೆಗಳನ್ನು ಸೂಚಿಸುತ್ತದೆ,” ಎಂದು ವಿವರಿಸಿದರು.
Published On - 11:34 am, Sat, 26 February 22