Money Astrology: ಯಾವ ರಾಶಿಯವರಿಗೆ ಯಾವ ದೇವತಾರಾಧನೆಯಿಂದ ಹೆಚ್ಚಿನ ಧನಲಾಭ ಗೊತ್ತೆ? ಇಲ್ಲಿದೆ ಅಖಂಡ ಧನ ಲಾಭದ ಮಾಹಿತಿ
Money Astrology: ಇಂದಿನ ಲೇಖನದಲ್ಲಿ ಯಾವ ರಾಶಿಯವರು ಯಾವ ಗ್ರಹದ ಆರಾಧನೆ ಮಾಡಬೇಕು ಅನ್ನೋದನ್ನು ತಿಳಿಸಲಾಗುತ್ತಿದೆ. ಈ ಮೂಲಕವಾಗಿ ಆರ್ಥಿಕ ಬಾಧೆಗಳಿಂದ ಹೊರಬನ್ನಿ. ಅಷ್ಟೇ ಅಲ್ಲ, ಸರಾಗವಾದ ಹಣದ ಹರಿವು ಕೂಡ ಆಗುತ್ತದೆ.
ಹಣದ ಸಮಸ್ಯೆಗಳಿಂದ ಹೊರಬರಬೇಕು, ಆರ್ಥಿಕ ಅನುಕೂಲ ಆಗಬೇಕು ಅಂದರೆ ಯಾವ ದೇವತಾರಾಧನೆ ಮಾಡಬೇಕು ಅಂತ ಬಹಳ ಜನ ಕೇಳುತ್ತಾರೆ. ಇದಕ್ಕೆ ಸರಳವಾದ ಉತ್ತರ ಏನೆಂದರೆ ಆಯಾ ರಾಶಿಯ ಎರಡನೇ ಮನೆಯ ಅಧಿಪತಿ ಯಾವ ಗ್ರಹ ಇರುತ್ತದೋ ಆ ಗ್ರಹದ ಅಭಿಮಾನಿ ದೇವತಾರಾದನೆಯನ್ನು ಮಾಡಬೇಕು. ಇಂದಿನ ಲೇಖನದಲ್ಲಿ ಯಾವ ರಾಶಿಯವರು ಯಾವ ಗ್ರಹದ ಆರಾಧನೆ ಮಾಡಬೇಕು ಅನ್ನೋದನ್ನು ತಿಳಿಸಲಾಗುತ್ತಿದೆ. ಈ ಮೂಲಕವಾಗಿ ಆರ್ಥಿಕ ಬಾಧೆಗಳಿಂದ ಹೊರಬನ್ನಿ. ಅಷ್ಟೇ ಅಲ್ಲ, ಸರಾಗವಾದ ಹಣದ ಹರಿವು ಕೂಡ ಆಗುತ್ತದೆ.
ಮೀನ- ತುಲಾ ಈ ಎರಡು ರಾಶಿಗಳ ಎರಡನೇ ಮನೆಯ ಅಧಿಪತಿ ಕುಜ ಗ್ರಹ. ಅಂದರೆ ಮೀನದಿಂದ ಎರಡನೇ ಮನೆಯಾದ ಮೇಷ ಹಾಗೂ ತುಲಾದಿಂದ ಎರಡನೇ ಮನೆ ವೃಶ್ಚಿಕಕ್ಕೆ ಅಧಿಪತಿ ಕುಜ. ಆದ್ದರಿಂದ ಕುಜ ಗ್ರಹದ ಅಧಿಪತಿಯಾದ ಸುಬ್ರಹ್ಮಣ್ಯನ ಆರಾಧನೆ ಮಾಡಬೇಕು. ಪ್ರತಿ ಮಂಗಳವಾರ, ಸಾಧ್ಯವಾದಲ್ಲಿ ಪ್ರತಿ ದಿನ ಕೆಂಪು ಹೂವುಗಳಿಂದ ಸುಬ್ರಹ್ಮಣ್ಯನ ಆರಾಧನೆಯನ್ನು ಮಾಡಿದರೆ ಒಳ್ಳೆಯದು. ಇನ್ನು ಋಣ ವಿಮೋಚನ ಅಂಗಾರಕ ಸ್ತೋತ್ರ ಎಂಬುದಿದೆ. ಅದನ್ನು ಹೇಳಿಕೊಳ್ಳುವುದರಿಂದ ಸಾಲ ಬಾಧೆಯಿಂದ ಮುಕ್ತಿ ಸಿಗುತ್ತದೆ.
ವೃಷಭ- ಸಿಂಹ ಈ ಎರಡೂ ರಾಶಿಯವರು ಬುಧನ ಆರಾಧನೆ ಮಾಡಬೇಕು. ಬುಧನ ಆರಾಧನೆ ಅಂದರೆ ಹಸಿರು ವಸ್ತ್ರದಲ್ಲಿ ಹೆಸರುಕಾಳು ದಾನ ಮಾಡಬೇಕು. ಇನ್ನು ಬುಧನ ಅಭಿಮಾನಿ ದೇವತೆಯಾದ ವಿಷ್ಣುವಿನ ಆರಾಧನೆಯನ್ನು ಮಾಡಬೇಕು. ಅಂದರೆ ವಿಷ್ಣುವಿನ ಅವತಾರಗಳಾದ ರಾಮ, ಕೃಷ್ಣ, ನರಸಿಂಹ, ರಂಗನಾಥ ಹೀಗೆ ಯಾವುದಾದರೂ ವಿಷ್ಣುವಿಗೆ ಸಂಬಂಧಿಸಿದ ದೇವತಾರಾಧನೆಯನ್ನು ಮಾಡಬೇಕು. ಬುಧವಾರಗಳಂದು ದೇವರಿಗೆ ತುಳಸಿಯಲ್ಲಿ ಅರ್ಚನೆ ಮಾಡಿಸುವುದು ಬಹಳ ಶ್ರೇಷ್ಠ. ಇನ್ನು ಪ್ರತಿದಿನ ವಿಷ್ಣು ಸಹಸ್ರನಾಮ ಕೇಳಿದರೆ, ಓದಿದರೆ ಸಾಕು, ಆರ್ಥಿಕ ಬಾಧೆಗಳು ಕಡಿಮೆ ಆಗುತ್ತದೆ.
ಮಿಥುನ ಈ ರಾಶಿಯವರ ಎರಡನೇ ಮನೆ ಕರ್ಕಾಟಕ ರಾಶಿ ಆಗುತ್ತದೆ. ಅದರ ಅಧಿಪತಿ ಚಂದ್ರ. ಇದರ ಆರಾಧನೆ ಅಂದರೆ ಅನ್ನ ದಾನ. ಯಾವುದಾದರೂ ಅನ್ನದಾನ ನಡೆಯುವಂಥ ದೇವಸ್ಥಾನಗಳಿಗೆ ಅಕ್ಕಿ ಕೊಡಿಸಬಹುದು. ಸೋಮವಾರದಂದು ಅಕ್ಕಿ ದಾನ, ಬಿಳಿಯ ವಸ್ತ್ರದಲ್ಲಿ ಅಕ್ಕಿ ದಾನ ಮಾಡುವಂಥದ್ದು ಶ್ರೇಷ್ಠ. ಸೋಮವಾರದಂದು ಈಶ್ವರ ದೇವಸ್ಥಾನದಲ್ಲಿ ಶಿವನಿಗೆ ಹಾಲಿನಲ್ಲಿ ರುದ್ರಾಭಿಷೇಕ ಮಾಡಿಸುವಂಥದ್ದು ಒಳ್ಳೆಯದು. ಚಂದ್ರ ಅಷ್ಟೋತ್ತರ ಪಠಣ, ಶಿವ ಅಷ್ಟೋತ್ತರ ಪಠಣ ಕೂಡ ಶ್ರೇಷ್ಠ.
ಕರ್ಕಾಟಕ ಈ ರಾಶಿಯವರು ಭಾನುವಾರಗಳಲ್ಲಿ ಕೆಂಪು ವಸ್ತ್ರದಲ್ಲಿ ಗೋಧಿ ದಾನ ಮಾಡಬೇಕು. ಆದಿತ್ಯ ಸ್ತೋತ್ರ ಪಠಣ ಮಾಡಬೇಕು. ರವಿ ಗ್ರಹದ ಅಷ್ಟೋತ್ತರ ಪಠಣ ಒಳ್ಳೆಯದು. ಭಾನುವಾರಗಳಲ್ಲಿ ಈಶ್ವರನ ಆರಾಧನೆ ಮಾಡುವಂಥದ್ದು ಉತ್ತಮ. ಈಶ್ವರನಿಗೆ ಭಸ್ಮಾರ್ಚನೆ, ರುದ್ರಾಭಿಷೇಕ ಮಾಡಿಸುವುದು ಒಳ್ಳೆಯದು.
ಮೇಷ-ಕನ್ಯಾ ಈ ಎರಡು ರಾಶಿಯವರು ಶುಕ್ರ ಗ್ರಹದ ಆರಾಧನೆ ಮಾಡಬೇಕು. ಹಾಗಂದರೆ, ಶುಕ್ರಗ್ರಹ ಅಷ್ಟೋತ್ತರ ಪಠಣ, ದುರ್ಗಾ ಅಷ್ಟೋತ್ತರ ಪಠಣ, ಲಕ್ಷ್ಮೀನಾರಾಯಣ ಹೃದಯಂ ಶ್ರವಣ- ಪಠಣ, ಶುಕ್ರವಾರಗಳಂದು ದುರ್ಗಾದೇವಿ ದೇವಸ್ಥಾನದಲ್ಲಿ ಕುಂಕುಮಾರ್ಚನೆ ಮಾಡಿಸುವುದು, ಮುತ್ತೈದೆಯರಿಗೆ ಅರಿಶಿನ- ಕುಂಕುಮ, ಬಳೆ, ವೀಳ್ಯದೆಲೆ, ದಕ್ಷಿಣೆ, ಹಣ್ಣು, ಕುಪ್ಪುಸದ ಕಣ, ಸೀರೆ ಮೊದಲಾದವುಗಳನ್ನು ನೀಡಿ, ಆಶೀರ್ವಾದ ಪಡೆಯುವುದು, ಬಿಳಿಯ ವಸ್ತ್ರದಲ್ಲಿ ಅವರೇಬೇಳೆ ದಾನ ಮಾಡುವುದು ಶ್ರೇಷ್ಠ.
ವೃಶ್ಚಿಕ- ಕುಂಭ ಈ ಎರಡು ರಾಶಿಯವರು ಗುರು ಗ್ರಹದ ಆರಾಧನೆ ಮಾಡಬೇಕು. ಪ್ರತಿ ಗುರುವಾರ ಹತ್ತಿರದ ರಾಘವೇಂದ್ರ ಸ್ವಾಮಿ ಮಠ, ಸಾಯಿ ಬಾಬ ದೇವಸ್ಥಾನ, ದತ್ತಾತ್ರೇಯ ದೇವಸ್ಥಾನಕ್ಕೆ ತೆರಳಿ ಪ್ರದಕ್ಷಿಣೆ ನಮಸ್ಕಾರವನ್ನು ಮಾಡಿ. ಗುರುವಾರದಂದು ಅರಿಶಿಣ ಬಣ್ಣದ ಬಟ್ಟೆಯಲ್ಲಿ ಕಡಲೇಕಾಳು ದಾನ ಮಾಡಬೇಕು. ಗುರು ಗ್ರಹದ ಅಷ್ಟೋತ್ತರ ಪಠಣ ಮಾಡಬೇಕು.ಕನಿಷ್ಠ ವರ್ಷಕ್ಕೊಮ್ಮೆ ಗಾಣಗಾಪುರ, ಮಂತ್ರಾಲಯ, ಶಿರಡಿಯಂಥ ಗುರು ಕ್ಷೇತ್ರಕ್ಕೆ ತೆರಳಿದರೆ ಉತ್ತಮ.
ಧನು-ಮಕರ ಈ ಎರಡೂ ರಾಶಿಯವರು ಶನೈಶ್ಚರ ಆರಾಧನೆಯನ್ನು ಮಾಡಬೇಕು. ಶನೈಶ್ಚರ ಅಂದರೆ ಶನಿಯ ಆರಾಧನೆಯನ್ನೇ ಮಾಡಬೇಕು. ಶನೈಶ್ಚರ ದೇವಾಲಯಕ್ಕೆ ತೆರಳಿ ಪ್ರದಕ್ಷಿಣೆ ನಮಸ್ಕಾರವನ್ನು ಮಾಡಬೇಕು. ಪ್ರತಿ ದಿನ ಶನೈಶ್ಚರ ಅಷ್ಟೋತ್ತರವನ್ನು ಪಠಣ ಮಾಡಬೇಕು. ಶನಿವಾರಗಳಲ್ಲಿ ಕರಿ ಎಳ್ಳು ದಾನ ಮಾಡಬೇಕು. ಶನಿವಾರದಂದು ಉತ್ತಮ ಗುಣಮಟ್ಟದ ಎಳ್ಳೆಣ್ಣೆಯನ್ನು ಒಂದು ಬಾಣಲೆಯಲ್ಲಿ ಹಾಕಿ, ಅದರಲ್ಲಿ ಮುಖ ನೋಡಿ, ದಾನ ಮಾಡಬೇಕು. ಹೀಗೆ ತಿಂಗಳಲ್ಲಿ ಒಮ್ಮೆ ಮಾಡಿದರೂ ಸಾಕು. ಶನೈಶ್ಚರನಿಗೆ ಎಳ್ಳೆಣ್ಣೆ ಅಭಿಷೇಕ ಮಾಡಿಸುವಂಥದ್ದು ಶ್ರೇಷ್ಠ.
ಲೇಖಕರು: ಜ್ಯೋತಿಷಿ ಪಂಡಿತ್ ವಿಠ್ಠಲ ಭಟ್ ಸಂಪರ್ಕ ಸಂಖ್ಯೆ: 8105682380, 6361335497