Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಫೆಬ್ರವರಿ ಮಾಸಭವಿಷ್ಯ 

ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ಮಾಸ ಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಫೆಬ್ರವರಿ ಮಾಸಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ. 

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಫೆಬ್ರವರಿ ಮಾಸಭವಿಷ್ಯ 
Image Credit source: iStock Photo
Follow us
TV9 Web
| Updated By: ರಮೇಶ್ ಬಿ. ಜವಳಗೇರಾ

Updated on: Feb 01, 2024 | 1:20 AM

ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ಮಾಸ ಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಫೆಬ್ರವರಿ ಮಾಸಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.

ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1)

ನೀವು ಮಾಡಿಕೊಳ್ಳುವ ಗೊಂದಲದಿಂದ ಇತರರನ್ನೂ ಸಮಸ್ಯೆಗೆ ಸಿಲುಕಿಸುವ ಸಾಧ್ಯತೆಗಳಿವೆ. ನಿಮಗೆ ಆತಂಕವಾಯಿತು, ಅನುಮಾನ ಮೂಡಿತು ಅಂತಾದರೆ ಅದನ್ನು ಬಗೆಹರಿಸಿಕೊಳ್ಳುವುದು ಹೇಗೆ, ಅದರಿಂದ ಆಚೆ ಬರುವುದು ಹೇಗೆ ಎಂಬುದರ ಬಗ್ಗೆ ಆಲೋಚನೆ ಮಾಡಿ. ಅದನ್ನು ಬಿಟ್ಟು ಇತರರಿಗೆ ಅದನ್ನು ಹಬ್ಬಿಸುವುದಕ್ಕೆ ಹೋಗಬೇಡಿ. ಸಣ್ಣ- ಪುಟ್ಟ ಸಂಗತಿಗಳಿಗೂ ಅತಿಯಾದ ಪ್ರತಿಕ್ರಿಯೆ ನೀಡಬೇಡಿ. ನೀವೇನಾದರೂ ಮಾನಸಿಕ ಖಿನ್ನತೆ, ಉದ್ವೇಗ ಅಥವಾ ಆತಂಕಕ್ಕಾಗಿ ಚಿಕಿತ್ಸೆಯನ್ನು ಪಡೆಯುತ್ತಿದ್ದೀರಿ ಅಂತಾದಲ್ಲಿ ಔಷಧೋಪಚಾರದ ಬಗ್ಗೆ ನಿರ್ಲಕ್ಷ್ಯ ಮಾಡಬೇಡಿ. ಅಥವಾ ನಿಮಗೆ ಯಾರಾದರೂ ಸಲಹೆ ನೀಡಿದರು ಎಂಬ ಕಾರಣದಿಂದ ವೈದ್ಯರನ್ನು ಬದಲಾಯಿಸುವುದಕ್ಕೆ ಹೋಗಬೇಡಿ. ಮೇಲ್ನೋಟಕ್ಕೆ ನಿಮ್ಮ ಪರವಾಗಿ ಇದ್ದಾರೆ ಎಂದು ಭಾವಿಸಿದಂಥ ಜನರು ನಿಮ್ಮ ಕೆಲಸದ ವೈಖರಿ, ಮನೋಭಾವ ಇತ್ಯಾದಿಗಳ ಬಗ್ಗೆ ದೂರನ್ನು ಹೇಳಬಹುದು. ಅಥವಾ ನಿಮ್ಮ ಪರವಾಗಿ ಮಾತನಾಡಬೇಕಾದ ಸಂದರ್ಭ ಎದುರಾದಾಗ ದಿಢೀರ್ ಬದಲಾಗಿ ಬಿಡಬಹುದು. ಆದ್ದರಿಂದ ಯಾರನ್ನೂ ಅತಿಯಾಗಿ ನಂಬಬೇಡಿ. ಈಗಾಗಲೇ ಪ್ರೀತಿಯಲ್ಲಿ ಇದ್ದೀರಿ ಎಂದಾದಲ್ಲಿ ಅನುಮಾನಗಳು ಸೃಷ್ಟಿಯಾಗಲಿವೆ. ಸುಮ್ಮನೆ ಇರಬೇಕಾದ ಕಡೆಯಲ್ಲಿ ವಿಪರೀತ ಮಾತನಾಡಿ ಹಾಗೂ ಎಲ್ಲಿ ಮಾತನಾಡಬೇಕೋ ಅಲ್ಲಿ ಮಾತೇ ಆಡದೆ ನೀವು ಇದ್ದು ಬಿಡುವುದರಿಂದ ಕೆಲವು ಸಮಸ್ಯೆಗಳು ಜಾಸ್ತಿ ಆಗುತ್ತವೆ. ಮೊದಲಿದ್ದ ಹುಮ್ಮಸ್ಸಿನಿಂದ ಕೆಲವು ಕೆಲಸಗಳಲ್ಲಿ ನಿಮಗೆ ತೊಡಗಿಕೊಳ್ಳುವುದಕ್ಕೆ ಸಾಧ್ಯವಾಗುವುದಿಲ್ಲ. ಬ್ಯಾಂಕ್ ನಿಂದಲೋ ಅಥವಾ ಹಣಕಾಸು ಸಂಸ್ಥೆಗಳಿಂದಲೋ ಅಥವಾ ಖಾಸಗಿ ವ್ಯಕ್ತಿಗಳಿಂದಲೋ ಸಾಲಕ್ಕಾಗಿ ಪ್ರಯತ್ನ ಮಾಡುತ್ತಿದ್ದಲ್ಲಿ ಅದು ಕೈಗೆ ಬಂದಂತೆಯೇ ಸನ್ನಿವೇಶ ಸೃಷ್ಟಿ ಆಗಿ, ಕೊನೆಯ ಕ್ಷಣದಲ್ಲಿ ಅಡೆತಡೆಗಳು ಎದುರಗಾಬಹುದು. ಸೂಕ್ತವಾದ ಕಾಗದ-ಪತ್ರಗಳು, ದಾಖಲಾತಿಗಳನ್ನು ಸಲ್ಲಿಕೆ ಮಾಡಿದ್ದೀರಾ ಎಂಬುದನ್ನು ಒಂದಕ್ಕೆ ನಾಲ್ಕು ಬಾರಿ ಪರಿಶೀಲಿಸಿಕೊಳ್ಳಿ. ವಾಹನ ಚಾಲನೆ ವೇಳೆ ಏಕಾಗ್ರತೆಯನ್ನು ಕಾಯ್ದುಕೊಳ್ಳಿ. ನಿಮಗೆ ಸಣ್ಣ ಪ್ರಮಾಣದಲ್ಲಿಯಾದರೂ ಅಪಘಾತವಾಗುವ ಸಾಧ್ಯತೆಗಳಿವೆ. ಅದು ಕೂಡ ನಿಮ್ಮದೇ ನಿರ್ಲಕ್ಷ್ಯದ ಕಾರಣಕ್ಕೆ ಸಮಸ್ಯೆಗಳಾಗಬಹುದು.

ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2)

ನಿಮ್ಮ ಗುರಿಯ ಕಡೆಗೆ ಪ್ರಮುಖವಾದ ಹೆಜ್ಜೆಗಳನ್ನು ಹಾಕಲಿದ್ದೀರಿ. ಇಷ್ಟು ಸಮಯ ಯಾವ್ಯಾವುದೋ ಕಾರಣಗಳಿಂದ ತಡೆ ಆಗುತ್ತಿದ್ದ ಕಾರ್ಯಗಳನ್ನು ಮಾಡಿ ಮುಗಿಸುವುದಕ್ಕೆ ನೀವು ಸಫಲರಾಗುತ್ತೀರಿ. ನಿಮ್ಮಲ್ಲಿ ಯಾರು ಅಡಿಕೆ ಕೃಷಿ ಮಾಡುತ್ತಿದ್ದೀರಿ, ಅಂಥವರಿಗೆ ಆದಾಯದಲ್ಲಿ ಹೆಚ್ಚಳ ಮಾಡಿಕೊಳ್ಳುವುದಕ್ಕೆ ಮಾರ್ಗೋಪಾಯಗಳು ಗೋಚರ ಆಗುತ್ತವೆ. ಬಹಳ ಧೈರ್ಯ ಮಾಡಿ, ನೀವು ತೆಗೆದುಕೊಂಡಂಥ ಆರ್ಥಿಕ ನಿರ್ಧಾರಗಳು ಫಲ ನೀಡುತ್ತವೆ. ಕೋರ್ಟ್- ಕಚೇರಿಗಳಲ್ಲಿ ವ್ಯಾಜ್ಯಗಳು ನಡೆಯುತ್ತಿದ್ದಲ್ಲಿ ಸಂಧಾನದ ಮೂಲಕವಾಗಿ ಬಗೆಹರಿಸಿಕೊಳ್ಳ ಬಹುದಾದ ಅವಕಾಶಗಳು ತೆರೆದುಕೊಳ್ಳಲಿವೆ. ನಿಮ್ಮ ಆರೋಗ್ಯದ ವಿಚಾರವು ಪ್ರಾಮುಖ್ಯ ಪಡೆದುಕೊಳ್ಳುತ್ತದೆ. ಅದಕ್ಕೂ ಮುನ್ನ ಆಹಾರ- ನೀರು ಸೇವನೆಯಲ್ಲಿ ಸಣ್ಣ- ಪುಟ್ಟ ಸಮಸ್ಯೆಗಳಾಗಬಹುದು. ಇನ್ನು ಇಷ್ಟು ಸಮಯ ನೀವು ತೆಗೆದುಕೊಳ್ಳುತ್ತಿದ್ದ ಔಷಧಿಗಳಲ್ಲಿ ಬದಲಾವಣೆಯನ್ನು ಮಾಡುವ ಸಾಧ್ಯತೆಗಳಿವೆ. ಫಾಲೋ ಅಪ್ ಚೆಕಪ್ ಗಳನ್ನು ತಪ್ಪಿಸಬೇಡಿ. ನಿಮ್ಮ ತಾಯಿಯವರ ಕಡೆಯ ಸಂಬಂಧಿಕರ ಕಡೆಯಿಂದ ಆಸ್ತಿಗಳ ಬಗ್ಗೆ ಮಾಹಿತಿ ಸಿಗಬಹುದು. ಅಥವಾ ಜಮೀನು ಅಥವಾ ಸೈಟು ಮಾರಾಟಕ್ಕಿದೆ, ಅದನ್ನು ಕಡಿಮೆ ಬೆಲೆಗೆ ಕೊಡಿಸುತ್ತೇವೆ ಎಂದು ಕೆಲವರು ನಿಮ್ಮ ಬಳಿಗೆ ಬರುವಂಥ ಸಾಧ್ಯತೆಗಳಿವೆ. ಮದುವೆ ವಯಸ್ಕರಾಗಿದ್ದು, ಅದಕ್ಕಾಗಿ ಪ್ರಯತ್ನವನ್ನು ಪಡುತ್ತಿದ್ದಲ್ಲಿ ನಿಮ್ಮ ಮನಸ್ಸಿಗೆ ಹಿಡಿಸುವಂಥ ಸಂಬಂಧಗಳು ಹುಡುಕಿಕೊಂಡು ಬರಲಿವೆ. ಇನ್ನು ನಿಮ್ಮಲ್ಲಿ ಕೆಲವರಿಗೆ ಮದುವೆ ನಿಶ್ಚಯ ಆಗುವಂಥ ಯೋಗ ಸಹ ಕಂಡುಬರುತ್ತಿದೆ. ಐಟಿ, ಬಿಪಿಒ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಪ್ರಮುಖ ಹುದ್ದೆಗಳನ್ನು ನಿರ್ವಹಿಸುತ್ತಿದ್ದೀರಿ ಅಂತಾದಲ್ಲಿ ಕೈ ಕೆಳಗೆ ಕೆಲಸ ಮಾಡುವವರ ಅಗತ್ಯ, ನಿರೀಕ್ಷೆಗಳೇನು ಎಂಬುದರ ಬಗ್ಗೆ ಕೇಳಿ ತಿಳಿದುಕೊಳ್ಳುವುದು ಮುಖ್ಯವಾಗುತ್ತದೆ. ವಿದೇಶಗಳಲ್ಲಿ ವ್ಯವಹಾರ, ವ್ಯಾಪಾರ ಅಥವಾ ಉದ್ಯಮಗಳನ್ನು ನಡೆಸುತ್ತಿರುವವರು ಇನ್ನೂ ಹೆಚ್ಚಿನ ಹೂಡಿಕೆ ಮಾಡುವ ಬಗ್ಗೆ ತೀರ್ಮಾನ ಕೈಗೊಳ್ಳಲಿದ್ದೀರಿ. ಮನೆಗೆ ಏಸಿ, ಏರ್ ಕೂಲರ್ ಇಂಥವುಗಳನ್ನು ಖರೀದಿ ಮಾಡುವಂಥ ಯೋಗ ಇದೆ. ನಿಮ್ಮ ಬಗ್ಗೆ ಕಾಳಜಿ, ಪ್ರೀತಿ ತೋರಿಸುವವರ ಸಲಹೆ- ಸೂಚನೆಗಳನ್ನು ಗಂಭೀರವಾಗಿ ಪರಿಗಣಿಸಿ.

ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3)

ನಿಮ್ಮ ಮಾತಿಗೆ ಇತರರು ಆಕ್ಷೇಪ ವ್ಯಕ್ತಪಡಿಸಬಹುದು. ಅದರಲ್ಲೂ ಮುಖ್ಯವಾಗಿ ಕಾರ್ಯಕ್ರಮಗಳ ಆಯೋಜನೆ, ಪ್ರವಾಸ ಇತ್ಯಾದಿ ಸಂಗತಿಗಳಿಗೆ ಸಂಬಂಧಿಸಿದಂತೆ ನಿಮ್ಮ ನಿರ್ಧಾರಗಳ ಬಗ್ಗೆ ಅಸಮಾಧಾನ ವ್ಯಕ್ತವಾಗಲಿದೆ. ಇತ್ತೀಚೆಗಷ್ಟೆ ಶುರು ಮಾಡಿದ ವ್ಯವಹಾರ, ವ್ಯಾಪಾರ, ಉದ್ಯಮ ಅಥವಾ ಸ್ವಂತ ಉದ್ಯೋಗಗಳು ಇದ್ದಲ್ಲಿ ನೀವು ನಿರೀಕ್ಷೆ ಮಾಡಿದ ಮಟ್ಟಕ್ಕೆ ಬೆಳವಣಿಗೆ ಕಾಣಿಸುವುದಿಲ್ಲ. ನಿಮಗೆ ಹಣಕಾಸಿನ ನೆರವೋ ಅಥವಾ ಬೇರೆ ಯಾವುದಾದರೂ ರೀತಿಯಲ್ಲಾದರೂ ಸಹಾಯ ಮಾಡುವುದಾಗಿ ಹೇಳಿದ್ದ ವ್ಯಕ್ತಿಗಳು ದಿಢೀರ್ ಅಂತ ನಿಮ್ಮ ಜತೆಗೆ ಮಾತನಾಡುವುದನ್ನೇ ಬಿಟ್ಟುಬಿಡಬಹುದು ಅಥವಾ ನೀವು ಎಷ್ಟು ಬಾರಿ ಕರೆ ಮಾಡಿದರೂ ಅವರು ಸ್ವೀಕರಿಸದಿರಬಹುದು. ಇದರಿಂದಾಗಿ ನಿಮಗೆ ಆತ್ಮಸ್ಥೈರ್ಯವೇ ಕುಸಿದಂತೆ ಆಗುತ್ತದೆ. ಈ ಹಿಂದೆ ಯಾವುದೋ ಸಮಯದಲ್ಲಿ ಗೊತ್ತಿದ್ದೋ ಅಥವಾ ಗೊತ್ತಿಲ್ಲದೆಯೋ ಆಡಿದ ಮಾತನ್ನು ಮುಂದೆ ಮಾಡಿಕೊಂಡು ನಿಮ್ಮ ಮೇಲೆ ದ್ವೇಷ ಸಾಧನೆಗೆ ಕೆಲವರು ಪ್ರಯತ್ನ ಮಾಡಲಿದ್ದಾರೆ. ನಿಮಗೆ ಗೊತ್ತಿರಬೇಕಾದ ಸಂಗತಿ ಏನೆಂದರೆ, ಹಳೆಯ ವಿಚಾರಗಳಲ್ಲವಾ ಮರೆತು ಹೋಗಿರಬಹುದು ಅಂತ ಅಂದುಕೊಂಡು ಸಹಾಯವನ್ನು ಅಪೇಕ್ಷಿಸಿದಿರೋ ಅವಮಾನದ ಪಾಲಾಗಲಿದ್ದೀರಿ, ಎಚ್ಚರವಾಗಿರಿ. ಸಂಗಾತಿ ಜತೆಗೆ ಪ್ರವಾಸಕ್ಕೆ ತೆರಳಬೇಕು ಎಂದು ಬಹಳ ಸಮಯದಿಂದ ಯೋಚನೆ ಮಾಡುತ್ತಿರುವವರಿಗೆ ಅದು ಸಾಧ್ಯವಾಗಲಿದೆ. ಮಕ್ಕಳ ಮದುವೆ ಮಾಡುವ ಸಲುವಾಗಿ ಪ್ರಯತ್ನ ಆರಂಭಿಸಿರುವವರಿಗೆ ನಿಮ್ಮ ಮನಸ್ಸಲ್ಲಿ ಇರುವಂಥ ಕಡೆಯಿಂದ ಸಂಬಂಧಗಳು ದೊರೆಯುವ ಅವಕಾಶಗಳಿವೆ. ಯಾರು ಬೇಕರಿ ಅಥವಾ ಕಾಂಡಿಮೆಂಟ್ಸ್ ನಡೆಸುತ್ತಿದ್ದೀರಿ ಅಂಥವರು ವ್ಯವಹಾರ ವಿಸ್ತರಣೆ ಮಾಡುವುದಕ್ಕೆ ಅಲೋಚನೆ ಮಾಡಲಿದ್ದೀರಿ. ಇದರ ಜತೆಗೆ ಹಣಕಾಸು ಹೂಡಿಕೆಯ ಅಗತ್ಯ ಕಂಡುಬಂದು, ಸಾಲ ಮಾಡುವ ಸಾಧ್ಯತೆಗಳು ಸಹ ಕಂಡುಬರುತ್ತಿದೆ. ವೈಜ್ಞಾನಿಕ ಆವಿಷ್ಕಾರ, ಸಂಶೋಧನೆ ಇಂಥ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸುವವರಿಗೆ ಒತ್ತಡ ಅನುಭವಿಸಬೇಕಾಗುತ್ತದೆ. ನಿಮ್ಮದೊಂದು ಸಣ್ಣ ಅಜಾಗರೂಕತೆಯಿಂದಾಗಿ ಇಷ್ಟು ಸಮಯ ನೀವು ಉಳಿಸಿಕೊಂಡು, ಗಳಿಸಿಕೊಂಡು ಬಂದಿದ್ದ ವಿಶ್ವಾಸಾರ್ಹತೆ ಕಳೆದುಕೊಳ್ಳುವಂತೆ ಆಗಬಹುದು.

ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4)

ನೇರವಂತಿಕೆಯಿಂದ ನಡೆದುಕೊಳ್ಳಿ. ಒಂದು ಸಣ್ಣ ಸುಳ್ಳು, ಪೂರ್ತಿ ಗೊತ್ತಿಲ್ಲದಿರುವ ವಿದ್ಯೆಯನ್ನು ಗೊತ್ತಿದೆ ಎನ್ನುವುದು ಅಪಾಯಕಾರಿಯಾಗಿ ಮಾರ್ಪಡುತ್ತದೆ. ಆದ್ದರಿಂದ ಪ್ರಾಮಾಣಿಕವಾಗಿ ನಡೆದುಕೊಳ್ಳಿ. ಸರ್ಕಾರಿ ಉದ್ಯೋಗಗಳಿಗಾಗಿ ಪ್ರಯತ್ನ ಮಾಡುತ್ತಿರುವವರಿಗೆ ಸೂಕ್ತ ಮಾರ್ಗದರ್ಶನ, ಅವಕಾಶಗಳು ದೊರೆಯಲಿವೆ. ಇನ್ನು ಖಾಸಗಿ ಕಂಪನಿಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವವರಿಗೆ ನಿಮ್ಮ ಅನುಭವಕ್ಕೆ ಹಾಗೂ ನಿರೀಕ್ಷೆಗೆ ಮೀರಿದ ಭಾರೀ ವೇತನದ ಕೆಲಸವೊಂದು ಹುಡುಕಿಕೊಂಡು ಬರಬಹುದು. ಇನ್ನು ಈ ರೀತಿ ಏಕಕಾಲಕ್ಕೆ ಎರಡೆರಡು ಕಡೆಯಿಂದ ಉದ್ಯೋಗಾವಕಾಶಗಳು ಹುಡುಕಿಕೊಂಡು ಬರಬಹುದು. ಇದರಿಂದ ಸ್ವಲ್ಪ ಮಟ್ಟಿಗೆ ಅಹಂಕಾರವೂ ಜತೆಗೆ ಗೊಂದಲವೂ ಸೃಷ್ಟಿ ಆಗಲಿದೆ. ನೀವು ಮಾಡಬೇಕಾದದ್ದೆಲ್ಲ ಇಷ್ಟೇ; ಗಣಪತಿಯ ಆರಾಧನೆಯನ್ನು ಮಾಡಿ. ಇದರಿಂದ ನಿಮ್ಮ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ ವೃದ್ಧಿಯಾಗುತ್ತದೆ ಹಾಗೂ ಆಯ್ಕೆ ಮಾಡಿಕೊಳ್ಳುವಾಗಿನ ಗೊಂದಲ ನಿವಾರಣೆ ಆಗುತ್ತದೆ. ಶೈಕ್ಷಣಿಕವಾಗಿ ಉನ್ನತ ಸಾಧನೆ ಮಾಡುವ ಹಾದಿಯಲ್ಲಿ ಇರುವವರಿಗೆ ಉತ್ತಮವಾದ ಬೆಂಬಲ ದೊರೆಯಲಿದೆ. ನಿಮಗೆ ಅಗತ್ಯ ಇರುವ ಸವಲತ್ತುಗಳು ದೊರೆಯಲಿವೆ. ವಿವಾಹಕ್ಕೆ ಪ್ರಯತ್ನ ಮಾಡುತ್ತಿರುವವರಿಗೆ ನಿಮ್ಮ ಜತೆಗೆ ವ್ಯಾಸಂಗ ಮಾಡಿರುವವರು ಅಥವಾ ಒಂದೇ ಕಡೆ ಕೆಲಸ ಮಾಡುವಂಥವರು ಸಂಗಾತಿಯಾಗಿ ದೊರೆಯುವ ಅವಕಾಶಗಳು ಹೆಚ್ಚಿವೆ. ಯಾವ ವ್ಯಕ್ತಿಯನ್ನಾದರೂ ಭೇಟಿ ಆಗುವ ಮುನ್ನ ಸಿದ್ಧತೆಯನ್ನು ಚೆನ್ನಾಗಿ ಮಾಡಿಕೊಳ್ಳಿ. ಉದ್ದೇಶಪೂರ್ವಕವಾಗಿ ಮಾಡಿದ ಕೆಲಸಗಳು ಅತ್ಯುತ್ತಮ ಫಲಿತಾಂಶಗಳನ್ನು ನೀಡಲಿವೆ. ಲೇವಾದೇವಿ ವ್ಯವಹಾರ ಮಾಡುವಂಥವರು ನಿಧಾನಕ್ಕೆ ಅದರಿಂದ ಹಿಂದಕ್ಕೆ ಬಂದುಬಿಡುವುದಕ್ಕೆ ನಿರ್ಧಾರವನ್ನು ಕೈಗೊಳ್ಳಲಿದ್ದೀರಿ. ಅದಕ್ಕೆ ಪೂರಕವಾಗಿ ಹಣವನ್ನು ವಾಪಸ್ ವಸೂಲಿಯನ್ನು ಆರಂಭಿಸಲಿದ್ದೀರಿ. ಮರೆತು ಹೋದಂತೆಯೇ ಆಗಿದ್ದ ಸ್ನೇಹಿತರು ದೊಡ್ಡ ಮಟ್ಟದಲ್ಲಿ ಸಹಾಯಕ್ಕೆ ಒದಗಿ ಬರಲಿದ್ದಾರೆ. ಹಳೇ ವಸ್ತುಗಳು ಅಥವಾ ಬಳಕೆಯಾದ ವಸ್ತುಗಳ ಕ್ರಯ- ಖರೀದಿ ಮಾಡುವಂಥ ವ್ಯವಹಾರದಲ್ಲಿ ನೀವು ಇದ್ದೀರಿ ಅಂತಾದರೆ ಆದಾಯದಲ್ಲಿ ಭಾರೀ ಏರಿಕೆ ಆಗಲಿದೆ. ನಿಮ್ಮ ವ್ಯವಹಾರಕ್ಕೆ ಬೇಕಾದ ಗೋಡೌನ್ ಸ್ಥಳ ಖರೀದಿ ಅಥವಾ ಬಾಡಿಗೆಗೆ ಪಡೆದುಕೊಳ್ಳಲಿದ್ದೀರಿ.

ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5)

ಈ ತಿಂಗಳು ನಿಮ್ಮ ಏಕಾಗ್ರತೆ ಅದ್ಭುತವಾಗಿರುತ್ತದೆ. ಜತೆಗೆ ನಿಮ್ಮ ಎದುರಿಗೆ ಇರುವ ವ್ಯಕ್ತಿಯ ಉದ್ದೇಶಗಳು ಹಾಗೂ ಲೆಕ್ಕಾಚಾರವನ್ನು ಸರಿಯಾಗಿ ಗ್ರಹಿಸಲಿದ್ದೀರಿ. ನಮ್ಮ ಪಾಲಿಗೆ ಬಂದದ್ದು ಅಚ್ಚುಕಟ್ಟಾಗಿ ಮಾಡಿ ಮುಗಿಸೋಣ ಎಂಬ ನಿಮ್ಮ ಸ್ವಭಾವಕ್ಕೆ ಪ್ರತಿಫಲ ದೊರೆಯಲಿದೆ. ಹೊಸ ಅವಕಾಶಗಳು ತೆರೆದುಕೊಳ್ಳಬಹುದು. ವ್ಯವಹಾರವೊಂದನ್ನು ಸಂಪೂರ್ಣವಾಗಿ ನೋಡಿಕೊಳ್ಳುವಂತೆ ನಿಮಗೆ ವಹಿಸಿಕೊಡಬಹುದು. ಒಂದು ವೇಳೆ ಸಂಬಳಕ್ಕೆ ಕೆಲಸ ಮಾಡುವವರಾಗಿದ್ದಲ್ಲಿ ಲಾಭದಲ್ಲಿ ಪಾಲು ಕೊಡುವಂತೆ ಹೇಳಿ, ಇಡೀ ವ್ಯವಹಾರ, ಹಣಕಾಸು ಲೆಕ್ಕಾಚಾರ ನಿಮಗೇ ವಹಿಸಿಬಿಡುವಂಥ ಸಾಧ್ಯತೆ ಇದೆ. ಇಂಥದ್ದು ಬಂದಲ್ಲಿ ಅವಕಾಶ ಅಂತಲೇ ಭಾವಿಸಿ. ಇಷ್ಟು ದೊಡ್ಡ ಜವಾಬ್ದಾರಿ ನಿರ್ವಹಿಸುವುದಕ್ಕೆ ಸಾಧ್ಯವೆ ಎಂಬ ಹಿಂಜರಿಕೆ ಬೇಡ. ಸಮಾಧಾನವಾಗಿ ಮಾಡುವಂಥ ಕೆಲಸಗಳಲ್ಲಿ ಯಶಸ್ಸು ಸಿಗಲಿದೆ. ಇದು ಉಪದೇಶ ಅಂದುಕೊಳ್ಳಬೇಡಿ. ಈ ಹಿಂದೆ ಮಾಡಿದ ಕೆಲಸವೇ ಅಲ್ಲವಾ ಎಂದು ಆಲೋಚನೆಯನ್ನು ಪಕ್ಕಕ್ಕೆ ಇಟ್ಟು, ಆತುರದಿಂದ ಕೆಲಸ ಶುರು ಮಾಡಿಕೊಂಡರೆ ಒಂದನ್ನೇ ಪದೇ ಪದೇ ಮಾಡಬೇಕಾಗುತ್ತದೆ. ಷೇರು ಮಾರುಕಟ್ಟೆಯಲ್ಲಿ ಹಣ ತೊಡಗಿಸಿದವರಿಗೆ ನಿರೀಕ್ಷೆ ಮಾಡಿದ್ದಕ್ಕಿಂತ ಹೆಚ್ಚಿನ ಲಾಭ ದೊರೆಯಲಿದೆ. ಅದನ್ನು ತೆಗೆದುಕೊಳ್ಳಬೇಕಾ ಅಥವಾ ಹಾಗೆ ಆ ಮೊತ್ತವನ್ನೇ ಮತ್ತೆ ಹೂಡಿಕೆ ಮಾಡಬೇಕಾ ಎಂಬ ಪ್ರಶ್ನೆ ಕಾಡಲಿದೆ. ಅಗತ್ಯ ಕಂಡುಬಂದಲ್ಲಿ ಹಿರಿಯರ – ಅನುಭವಿಗಳ ಮಾರ್ಗದರ್ಶನವನ್ನು ಪಡೆದುಕೊಳ್ಳಿ. ಸೈನ್ಯದಲ್ಲಿ ಕೆಲಸ ಮಾಡುತ್ತಿರುವಂಥವರಿಗೆ ವರ್ಗಾವಣೆ ಆಗುವಂಥ ಯೋಗ ಇದೆ. ಅಥವಾ ನಿಮ್ಮಲ್ಲಿ ಕೆಲವರಿಗೆ ನಿಯೋಜನೆ ಮೇಲೆ, ಅಲ್ಪ ಕಾಲಕ್ಕಾದರೂ ಬೇರೆ ಕಡೆ ಕೆಲಸಕ್ಕೆ ಹಾಕಬಹುದು. ಇದರಿಂದ ನಿಮಗೆ ಅನುಕೂಲಗಳು ಆಗಲಿವೆ. ಭವಿಷ್ಯದಲ್ಲಿ ಆಗಬಹುದಾದ ಅತಿ ಮುಖ್ಯ ಬೆಳವಣಿಗೆಯೊಂದರ ಸುಳಿವು ದೊರೆಯಲಿದೆ. ಯಾರು ವಿದೇಶಗಳಲ್ಲಿ ವ್ಯಾಸಂಗ ಮಾಡುವ ಸಲುವಾಗಿ ಪ್ರವೇಶ ಪರೀಕ್ಷೆಗಳನ್ನು ತೆಗೆದುಕೊಂಡಿರುತ್ತೀರೋ ಅಂಥವರಿಗೂ ಇದು ಉತ್ತಮವಾದ ಸಮಯ. ಹಣಕಾಸಿನ ಸಮಸ್ಯೆ ಕೂಡ ಏನಾದರೂ ಇದ್ದಲ್ಲಿ ಅದನ್ನು ಕೂಡ ಯಶಸ್ವಿಯಾಗಿ ನಿಭಾಯಿಸುವುದಕ್ಕೆ ಸಾಧ್ಯವಾಗುತ್ತದೆ. ಉದ್ಯಮ- ವ್ಯಾಪಾರ ಮಾಡುತ್ತಿರುವವರು ಕೆಲಸಗಾರರ ಸಂಖ್ಯೆಯನ್ನು ಹೆಚ್ಚು ಮಾಡುವುದಕ್ಕೆ ನಿರ್ಧಾರ ಮಾಡಲಿದ್ದೀರಿ.

ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6)

ನಿಮ್ಮ ನಿರ್ಧಾರ, ದೂರದೃಷ್ಟಿ ಹಾಗೂ ತೀರ್ಮಾನ ತೆಗೆದುಕೊಳ್ಳುವ ಸಾಮರ್ಥ್ಯದ ಬಗ್ಗೆ ಕುಟುಂಬ ಮತ್ತು ಸ್ನೇಹಿತರ ವಲಯದಲ್ಲಿ ಮೆಚ್ಚುಗೆ ಕೇಳಿಬರಲಿದೆ. ಇನ್ನು ನಿಮ್ಮ ಶಿಫಾರಸಿನ ಮೂಲಕ ಕೆಲವರಿಗೆ ಸಹಾಯ ಕೂಡ ಮಾಡಲಿದ್ದೀರಿ. ರಾಜಕಾರಣದಲ್ಲಿ ಇರುವವರಿಗೆ ಹೆಚ್ಚಿನ ಹುದ್ದೆ, ಜವಾಬ್ದಾರಿಗಳು ದೊರೆಯುವಂಥ ಯೋಗ ಇದೆ. ಹಣದ ಆದಾಯ ಹೆಚ್ಚು ಮಾಡಿಕೊಳ್ಳಬೇಕು ಎಂಬ ನಿಮ್ಮ ಪ್ರಯತ್ನಗಳು ಫಲ ನೀಡುವುದಕ್ಕೆ ಶುರು ಮಾಡುತ್ತವೆ. ಪ್ರಯಾಣದಿಂದ ಲಾಭವಾಗುವಂಥ ಯೋಗ ಇದೆ. ಅಂದರೆ ಕೆಲಸ- ಕಾರ್ಯದ ನಿಮಿತ್ತ ದೂರ- ಭಾರ ಹೋಗಬೇಕಿರುವಂಥದ್ದು ಅಪೇಕ್ಷಿತ ಮತ್ತು ನಿರೀಕ್ಷಿತ ಫಲಿತಾಂಶವನ್ನು ನೀಡಲಿದೆ. ಹೊಸ ವಾಹನಗಳ ಖರೀದಿಗಾಗಿ ಮುಂಗಡವನ್ನು ಪಾವತಿಸಲಿದ್ದೀರಿ. ಇದಕ್ಕಾಗಿ ಮೊದಲಿಗೆ ಸಾಲ ಮಾಡಬೇಕು ಎಂದುಕೊಂಡವರಿಗೆ ಪೂರ್ತಿಯಾಗಿ ಸಾಲ ಮಾಡಬೇಕಾಗುವುದಿಲ್ಲ ಎಂಬಂತೆ ಹಣದ ಹರಿವು ಸರಾಗ ಆಗಲಿದೆ. ಸ್ನೇಹಿತರು ಅಥವಾ ಪರಿಚಯಸ್ಥರ ಮೂಲಕ ಒಳ್ಳೆ ಆಫರ್ ಗಳು ಸಹ ಈ ಅವಧಿಯಲ್ಲಿ ದೊರೆಯಲಿದೆ. ಮಾರುಕಟ್ಟೆ ಅಥವಾ ಮಾರಾಟ ವಿಭಾಗದಲ್ಲಿ ಕೆಲಸ ಮಾಡುವಂಥವರಿಗೆ ಸ್ವಲ್ಪ ಮಟ್ಟಿಗೆ ಒತ್ತಡ ಇರುತ್ತದೆ. ಏಕೆಂದರೆ, ನಿಮ್ಮ ಬಳಿ ಮಾತು ನೀಡಿದವರು ಅದರಂತೆ ನಡೆದುಕೊಳ್ಳುವುದಿಲ್ಲ ಅಥವಾ ಅವರಿಗೇ ಏನಾದರೂ ಸಮಸ್ಯೆಗಳು ಎದುರಾಗಿ, ಅಂದುಕೊಂಡಂತೆ ಏನೂ ಆಗುವುದಿಲ್ಲ. ಆದ್ದರಿಂದ ಕೆಲಸ ಆಗುವ ಮುಂಚೆಯೇ ಎಲ್ಲ ಕಡೆ ಹೇಳಿಕೊಂಡು ಬರಬೇಡಿ. ಹೇಗಿದ್ದರೂ ಗುರಿ ತಲುಪಿ ಬಿಡ್ತೀನಿ ಎಂದು ಮೈ ಮರೆಯಬೇಡಿ. ಮನೆ ಕಟ್ಟಿಸುತ್ತಿರುವವರಿಗೆ ಪ್ಲಾನ್ ನಲ್ಲಿ ದೊಡ್ಡ ಬದಲಾವಣೆ ಮಾಡಿಕೊಳ್ಳಬೇಕಾಗಬಹುದು. ಅಥವಾ ನೀವೇ ಹೊಸದಾಗಿ ಏನೇನೋ ಮಟಿರೀಯಲ್ ಗಳನ್ನು ಆಯ್ಕೆ ಮಾಡಿಕೊಳ್ಳುವುದರಿಂದ ವೆಚ್ಚದ ಪ್ರಮಾಣ ಕೈ ಮೀರಿ ಹೋಗಲಿದೆ.ತಮ್ಮ ಸ್ನೇಹಿತರ ವಲಯದಲ್ಲಿ, ಉಪನ್ಯಾಸಕರಿಂದ ಅಥವಾ ಪೋಷಕರಿಂದ ವಿದ್ಯಾರ್ಥಿಗಳು ಅಹಂಕಾರಿಗಳು ಎಂದೆನಿಸಿಕೊಳ್ಳಲಿದ್ದೀರಿ. ಇದರಿಂದ ನಿಮ್ಮ ಮನಸ್ಸಿಗೂ ಬೇಸರ ಆಗಲಿದೆ. ವ್ಯಾಪಾರ- ವ್ಯವಹಾರ ಮಾಡಿಕೊಂಡಿರುವವರು ಒಂದು ವಿಭಾಗವನ್ನೋ ಅಥವಾ ಸ್ವಲ್ಪ ಪ್ರಮಾಣ ಪಾಲನ್ನೋ ಮಾರಾಟ ಮಾಡುವ ಬಗ್ಗೆ ಆಲೋಚನೆ ಮಾಡಲಿದ್ದೀರಿ.

ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7)

ಯಾರು ಹಣಕಾಸಿನ ವಿಚಾರದಲ್ಲಿ ಶಿಸ್ತಿನಿಂದ ನಡೆದುಕೊಳ್ಳುತ್ತಿರುವುದಿಲ್ಲವೋ ಅಂಥವರಿಗೆ ಚಿಂತೆಗೆ ಕಾರಣ ಆಗುವಂಥ ಅವಧಿ ಇದು. ಏಕೆಂದರೆ ಒಂದು ಖರ್ಚು ಮುಗಿಯಿತು, ಇನ್ನೇನು ಉಳಿತಾಯದ ಬಗ್ಗೆ ಆಲೋಚಿಸಬಹುದು ಎಂದುಕೊಳ್ಳುವಷ್ಟರಲ್ಲಿ ಮತ್ತೊಂದು ಖರ್ಚು ತಲೆ ಎತ್ತಲಿದೆ. ಈ ಹಿಂದೆ ನೀವು ಭಾವನಾತ್ಮಕವಾಗಿ ಆಲೋಚನೆ ಮಾಡಿದ್ದರಿಂದ ನೀಡಿದ ಮಾತಿಗೆ ಈಗ ಬೆಲೆಯನ್ನು ತೆರಬೇಕಾಗುತ್ತದೆ. ಆದ್ದರಿಂದ ಹಣಕಾಸಿನ ಹೊಂದಾಣಿಕೆಯನ್ನು ಮಾಡಿಕೊಳ್ಳುವ ಕಡೆಗೆ ಗಮನವನ್ನು ನೀಡಿ. ಒಂದು ವೇಳೆ ಆಸ್ತಿಯನ್ನೋ ಅಥವಾ ಯಾವುದಾದರೂ ವಾಹನವನ್ನೋ ಮಾರಾಟ ಮಾಡಿ, ಅದರಿಂದ ಹಣ ಬಂತು ಅಂತಾದರೆ ಯಾವ್ಯಾವುದಕ್ಕೆ ಖರ್ಚು ಎಂಬ ಬಗ್ಗೆ ಸರಿಯಾದ ಬಜೆಟ್ ವೊಂದನ್ನು ಮಾಡಿಕೊಳ್ಳಿ. ಸಂಗಾತಿ ಹಾಗೂ ಕುಟುಂಬಸ್ಥರು ಏನನ್ನು ಬಯಸುತ್ತಿದ್ದಾರೆ ಹಾಗೂ ಆಲೋಚಿಸುತ್ತಿದ್ದಾರೆ ಎಂಬ ಬಗ್ಗೆ ಲಕ್ಷ್ಯ ಇರಲಿ. ನೀವು ಕೆಲಸ ಮಾಡುವ ಸ್ಥಳದಲ್ಲಿ ಹಲವು ಬದಲಾವಣೆಗಳು ಕಾಣಿಸಿಕೊಳ್ಳಲಿವೆ. ಇಷ್ಟು ಸಮಯ ಬಡ್ತಿ ಸಿಕ್ಕೇಬಿಟ್ಟಿತು, ಸಂಬಳ ಹೆಚ್ಚಳ ಮಾಡಿಯೇ ಬಿಡುತ್ತಾರೆ ಅಂತೆಲ್ಲ ಅಂದುಕೊಂಡಿದ್ದರೆ ಆ ನಿರೀಕ್ಷೆಯನ್ನು ಬಿಟ್ಟುಬಿಡಬೇಕು ಎಂಬುದು ನಿಮ್ಮ ಮನಸ್ಸಿಗೇ ಖಾತ್ರಿ ಆಗಲಿದೆ. ಭುಜದ ನೋವು ಅಂತ ಈ ಹಿಂದೆ ಕಾಡಿದ್ದರೆ ಅದು ಈಗ ಉಲ್ಬಣ ಆಗಬಹುದು. ಫಿಸಿಯೋ ಥೆರಪಿ ಮಾಡಿಸಿಕೊಳ್ಳುತ್ತಿದ್ದಲ್ಲಿ ಆಲಸ್ಯದ ಕಾರಣಕ್ಕೋ ಅಥವಾ ನಿರ್ಲಕ್ಷ್ಯದ ಕಾರಣಕ್ಕೋ ನಿಲ್ಲಿಸಬೇಡಿ. ದ್ವಿಚಕ್ರ ವಾಹನ ಖರೀದಿಸಬೇಕು ಎಂದಿರುವ ವಿದ್ಯಾರ್ಥಿಗಳು ಇನ್ನೂ ಕೆಲ ಕಾಲ ಆ ನಿರ್ಧಾರವನ್ನು ಮುಂದಕ್ಕೆ ಹಾಕಬೇಕಾದ ಸನ್ನಿವೇಶ ಎದುರಾಗಲಿದೆ. ಐವತ್ತರ ವಯಸ್ಸನ್ನು ದಾಟಿದ್ದಲ್ಲಿ ಅಂಥವರಿಗೆ ಮಕ್ಕಳ ಶಿಕ್ಷಣ, ಮದುವೆ ಅಥವಾ ಭವಿಷ್ಯಕ್ಕಾಗಿ ಅಂತ ಕೂಡಿಟ್ಟಿದ್ದ ದುಡ್ಡನ್ನು ವೈಯಕ್ತಿಕ ಖರ್ಚಿನ ಕಾರಣಕ್ಕೆ ತೆಗೆಯಬೇಕಾಗಬಹುದು. ಈ ರೀತಿಯ ತೀರ್ಮಾನಕ್ಕೆ ಬಂದಿದ್ದೀರಿ ಅಂತಾದರೆ ಒಂದಕ್ಕೆ ನಾಲ್ಕು ಬಾರಿ ಸರಿಯಾಗಿ ಆಲೋಚಿಸಿ, ನಿರ್ಧರಿಸಿ. ಸ್ವಂತ ವ್ಯವಹಾರ ಮಾಡುತ್ತಿರುವವರಿಗೆ ಹೊಸದಾಗಿ ಪಾರ್ಟನರ್ ಷಿಪ್ ಪ್ರಸ್ತಾವಗಳು ಬರಬಹುದು. ಈ ವ್ಯವಹಾರದಲ್ಲಿ ನಿಮ್ಮ ಕೈ ಮೇಲಾಗಿರುತ್ತದೆ. ಆದ್ದರಿಂದ ಇಂಥ ಪ್ರಸ್ತಾವ ಏನಾದರೂ ಬಂದಲ್ಲಿ ಗಂಭೀರವಾಗಿ ಆಲೋಚನೆಯನ್ನು ಮಾಡಿ.

ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8)

ಯಾವುದೂ ಅಂದುಕೊಂಡಂತೆ ಸಾಗುತ್ತಿಲ್ಲವೇನೋ ಎಂದೆನಿಸುವುದಕ್ಕೆ ಆರಂಭವಾಗುತ್ತದೆ. ಮುಖ್ಯವಾಗಿ ನಿಮ್ಮದೇ ವಯಸ್ಸಿನ, ವೃತ್ತಿಯ ಅಥವಾ ಹುದ್ದೆಯಲ್ಲಿರುವ ವ್ಯಕ್ತಿಗಳ ಜತೆಗೆ ನಿಮ್ಮನ್ನು ನೀವು ಹೋಲಿಕೆ ಮಾಡಿಕೊಳ್ಳುವುದಕ್ಕೆ ಆರಂಭ ಮಾಡುತ್ತೀರಿ. ಬಾಡಿಗೆ ಮನೆಯಲ್ಲಿ ಇರುವವರ ಪೈಕಿ ಕೆಲವರಿಗೆ ಬದಲಾವಣೆ ಮಾಡಲೇಬೇಕಾದ ಅನಿವಾರ್ಯ ಎದುರಾಗಲಿದೆ. ಅಥವಾ ನೀವೇ ಮಾತಿನ ಓಘದಲ್ಲಿ ಕುಟುಂಬಸ್ಥರಿಗೆ ಭರವಸೆ ನೀಡಬಹುದು ಅಥವಾ ಮಾಲೀಕರ ಜತೆಗಿನ ಮಾತುಕತೆ ವೇಳೆ, ಮನೆ ಖಾಲಿ ಮಾಡ್ತೀನಿ ಹೋಗ್ರೀ ಎಂದು ಬಿಡಬಹುದು. ಆದರೆ ಇದರಿಂದ ನಿಮಗೆ ಒಳ್ಳೆಯದೇ ಆಗಲಿದೆ. ಇನ್ನು ಬಹಳ ಸಮಯದಿಂದ ತೆರಳಬೇಕು ಎಂದಿದ್ದ ಪ್ರವಾಸಕ್ಕೆ ಕುಟುಂಬ ಸಮೇತರಾಗಿ ಹೋಗುವಂಥ ಯೋಗ ಇದೆ. ಒಂದು ವೇಳೆ ವಿಮಾನ ಪ್ರಯಾಣ ಮಾಡುತ್ತೀರಿ ಎಂದಾದರೆ ಕೊನೆ ಕ್ಷಣದಲ್ಲಿ ಒಂದಿಷ್ಟು ಆತುರ, ಗೊಂದಲ ಏರ್ಪಡಬಹುದು. ಮನೆಯಿಂದ ಸ್ವಲ್ಪ ಮುಂಚಿತವಾಗಿಯೇ ಹೊರಡುವುದರ ಕಡೆಗೆ ಗಮನ ಇರಲಿ. ಈ ತಿಂಗಳ ಮೂರನೇ ವಾರದಲ್ಲಿ ನಿಮಗೆ ಪಾರ್ಟಿ ಅಥವಾ ಸಂಬಂಧಿಕರ ಮನೆಯ ಕಾರ್ಯಕ್ರಮಗಳು, ಸ್ನೇಹಿತರ ಕಡೆಯಿಂದ ಔತಣ ಕೂಟಗಳಿಗೆ ಆಹ್ವಾನ ಬರುವುದು ಇಂಥದ್ದು ಆಗುತ್ತದೆ. ನಾಲಗೆ ಮೇಲೆ ಹಿಡಿತ ಇರಲಿ. ಆಹಾರದ ವಿಚಾರವೇ ಆಗಿರಲಿ ಅಥವಾ ಆಡುವ ಮಾತು, ಬಳಸುವ ಪದಗಳೇ ಬರಲಿ. ಎಚ್ಚರಿಕೆ ವಹಿಸುವುದು ಮುಖ್ಯವಾಗುತ್ತದೆ. ಶಿಕ್ಷಣ ಸಂಸ್ಥೆಗಳಲ್ಲಿ ಪ್ರಮುಖ ಹುದ್ದೆಯಲ್ಲಿ ಇರುವವರಿಗೆ ಹೊಸ ಜವಾಬ್ದಾರಿ, ಗುರಿಗಳನ್ನು ನೀಡಲಾಗುತ್ತದೆ. ಇದರ ಜತೆಗೆ ಇಷ್ಟೇ ಸಮಯದಲ್ಲಿ ಪೂರ್ಣಗೊಳಿಸಬೇಕು ಎಂದು ನಿರ್ದಿಷ್ಟವಾದ ಕಾರ್ಯಗಳನ್ನು ವಹಿಸಲಿದ್ದಾರೆ. ಪ್ರೀತಿ- ಪ್ರೇಮದಲ್ಲಿ ಇರುವವರು ಅದನ್ನು ಮದುವೆ ಹಂತಕ್ಕೆ ಒಯ್ಯಲು ತೀರ್ಮಾನ ಮಾಡಲಿದ್ದೀರಿ. ಮನೆಯಲ್ಲಿ ಈ ಬಗ್ಗೆ ಪ್ರಸ್ತಾವ ಮಾಡುವ ಸಾಧ್ಯತೆಗಳು ಹೆಚ್ಚಿವೆ. ಗುರುವಾರಗಳಂದು ತುಂಬ ಮುಖ್ಯ ಕೆಲಸಗಳನ್ನು ಮಾಡಿ. ವ್ಯಾಪಾರ- ವ್ಯವಹಾರ ಮಾಡುವವರು ಈಗ ಮಾಡುತ್ತಿರುವುದರ ಜತೆಗೆ ಹೊಸ ವ್ಯವಹಾರ ಮಾಡುವ ಬಗ್ಗೆ ನಿರ್ಧಾರ ಕೈಗೊಳ್ಳಲಿದ್ದೀರಿ. ಇದಕ್ಕಾಗಿ ದೊಡ್ಡ ಮಟ್ಟದ ಹೂಡಿಕೆಯೊಂದನ್ನು ಮಾಡಬೇಕಾಗುತ್ತದೆ. ಆ ಕಾರಣಕ್ಕೆ ಬ್ಯಾಂಕ್ ಗಳಲ್ಲಿ ಸಾಲ ಮಾಡಬೇಕಾಗುತ್ತದೆ.

ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9)

ಕುಟುಂಬದಲ್ಲಿ ಇರಬಹುದು, ಸ್ನೇಹಿತರು- ಸ್ನೇಹಿತೆಯರ ವಿಚಾರದಲ್ಲಿ ಇರಬಹುದು ಅಥವಾ ನೀವು ಕೆಲಸ ಮಾಡುವಂಥ ಸ್ಥಳದಲ್ಲಿ ಆಗಿರಬಹುದು, ಭಾವನಾತ್ಮಕವಾಗಿ ತೀವ್ರವಾಗಿ ಕಾಡುವಂಥ ಹಲವು ಸನ್ನಿವೇಶಗಳನ್ನು ಎದುರುಗೊಳ್ಳಲಿದ್ದೀರಿ. ನೀವು ನೀಡುವ ಪ್ರೀತಿ, ಸ್ನೇಹ ಇವೆಲ್ಲ ಏಕಮುಖವಾಗಿ ಹೋಯಿತಾ ಎಂದು ನಿಮ್ಮನ್ನು ಕಾಡುವುದಕ್ಕೆ ಶುರುವಾಗುತ್ತದೆ. ಈ ಆಲೋಚನೆಗೆ ಸಿಲುಕಿಕೊಂಡು, ಕೆಲವು ನಿಮ್ಮದೇ ಜವಾಬ್ದಾರಿಗಳು ಅಥವಾ ನೀವೇ ವಹಿಸಿಕೊಂಡ ಕೆಲಸಗಳಲ್ಲಿ ನ್ಯೂನ್ಯತೆ ಕಂಡುಬರಲಿದೆ. ಹೀಗಾಗದಂತೆ ನೋಡಿಕೊಳ್ಳುವುದೇ ನಿಮ್ಮ ಪಾಲಿಗೆ ಸವಾಲಾಗಲಿದೆ. ಉದ್ಯೋಗ ಬದಲಾವಣೆಗಾಗಿ ಪ್ರಯತ್ನ ಮಾಡುತ್ತಿರುವವರಿಗೆ ವೇತನ ವಿಚಾರದಲ್ಲಿ ಸಮಾಧಾನ ಆಗದಂಥ ಕೆಲವು ಆಫರ್ ಗಳು ಬರಬಹುದು. ಅವುಗಳನ್ನು ಒಪ್ಪಿಕೊಳ್ಳುವ ಮನಸ್ಥಿತಿಯಲ್ಲಿ ನೀವು ಇರುವುದಿಲ್ಲ. ವಿದೇಶಗಳಲ್ಲಿ ಉದ್ಯೋಗ ಮಾಡುತ್ತಿರುವವರು ಕಾನೂನು ವಿಚಾರಕ್ಕೆ ಸಂಬಂಧಿಸಿದಂತೆ ಕೆಲವು ಸಮಸ್ಯೆಗಳನ್ನು ಎದುರಿಸುತ್ತೀರಿ. ಇದರಿಂದ ಒತ್ತಡ ಎದುರಾಗಲಿದೆ. ಇದೇ ಮೊದಲ ಬಾರಿಗೆ ಎಂಬಂತೆ ಸಾಲ ಪಡೆದುಕೊಂಡವರಿಗೆ ಯಾವ ಉದ್ದೇಶಕ್ಕಾಗಿ ಕಡ ತೆಗೆದುಕೊಂಡಿರುತ್ತೀರೋ ಅದಕ್ಕಾಗಿಯೇ ಪೂರ್ತಿ ಹಣ ವಿನಿಯೋಗ ಮಾಡುವುದಕ್ಕೆ ಆಗುವುದೇ ಇಲ್ಲ. ಕೃಷಿ ಜಮೀನನ್ನು ನಿವೇಶನಗಳಾಗಿ ಪರಿವರ್ತನೆ ಮಾಡಿಸಿ, ಮಾರಾಟ ಮಾಡಬೇಕು ಎಂದುಕೊಂಡವರಿದ್ದಲ್ಲಿ ನಿಯಮಾವಳಿಗಳನ್ನು ಪೂರೈಸುವುದರಲ್ಲಿ ಹೈರಾಣಾಗಲಿದ್ದೀರಿ. ಮುಖ್ಯವಾಗಿ ನಿಮಗೆ ಸಹಾಯ ಮಾಡುವುದಕ್ಕೆ ಇರುವಂಥ ಮಧ್ಯವರ್ತಿಯೋ ಅಥವಾ ಅಧಿಕಾರಿಯೋ ಅಥವಾ ಸ್ನೇಹಿತರೋ ಸರಿಯಾದ ಮಾಹಿತಿ ನೀಡದ ಕಾರಣಕ್ಕೆ ವಿಪರೀತ ಸಮಯ ವ್ಯರ್ಥ ಆಗಲಿದೆ. ಆದ್ದರಿಂದ ಇಂಥ ಕೆಲಸಗಳ ಬಗ್ಗೆ ಸಂಪೂರ್ಣವಾದ ಮಾಹಿತಿ ಪಡೆದ ನಂತರವೇ ಮುಂದುವರಿಯಿರಿ. ವ್ಯಾಪಾರ- ವ್ಯವಹಾರ ಮಾಡುತ್ತಿರುವವರು ನೋಂದಣಿ, ಪರವಾನಗಿಗಳ ರಿನೀವಲ್ ಅನ್ನು ಗಡುವಿನ ದಿನಾಂಕದೊಳಗೆ ಮಾಡಿದ್ದೀರಾ ಎಂಬುದನ್ನು ಖಾತ್ರಿ ಮಾಡಿಕೊಳ್ಳುವುದು ಒಳ್ಳೆಯದು. ಒಂದು ವೇಳೆ ಈ ಜವಾಬ್ದಾರಿಯನ್ನು ಇನ್ನೊಬ್ಬರಿಗೆ ವಹಿಸಿದ್ದೀರಿ ಅಂತಾದಲ್ಲಿ ಸರಿಯಾದ ಫಾಲೋ ಅಪ್ ಮಾಡಿ. ಏಕೆಂದರೆ ಈ ತಿಂಗಳು ಇಂಥದ್ದಕ್ಕಾಗಿ ದಂಡ ಕಟ್ಟಬೇಕಾದ ಪರಿಸ್ಥಿತಿ ನೀವು ಎದುರಿಸಲಿದ್ದೀರಿ.

ಲೇಖನ- ಎನ್.ಕೆ. ಸ್ವಾತಿ

ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
ಸಚಿನ್ ಸಾವಿನ ಪ್ರಕರಣದಲ್ಲಿ ಖರ್ಗೆ ಪಾತ್ರವಿಲ್ಲ, ರಾಜೀನಾಮೆ ಯಾಕೆ? ಸುರೇಶ್
ಸಚಿನ್ ಸಾವಿನ ಪ್ರಕರಣದಲ್ಲಿ ಖರ್ಗೆ ಪಾತ್ರವಿಲ್ಲ, ರಾಜೀನಾಮೆ ಯಾಕೆ? ಸುರೇಶ್
ಚಪ್ಪಾಳೆ ಮತ್ತು ಶಿಳ್ಳೆ ಗಿಟ್ಟಿಸಲು ಸೂರಜ್ ರೇವಣ್ಣ ಮಾತಾಡಿದ್ದಾರೆ: ಶ್ರೇಯಸ್
ಚಪ್ಪಾಳೆ ಮತ್ತು ಶಿಳ್ಳೆ ಗಿಟ್ಟಿಸಲು ಸೂರಜ್ ರೇವಣ್ಣ ಮಾತಾಡಿದ್ದಾರೆ: ಶ್ರೇಯಸ್
ಕೇಂದ್ರ ಸರ್ಕಾರ ನಮಗೆ ಎಲೆಕ್ಟ್ರಿಕ್ ಬಸ್​​ಗಳನ್ನು ನೀಡುತ್ತಿಲ್ಲ: ಸಚಿವ
ಕೇಂದ್ರ ಸರ್ಕಾರ ನಮಗೆ ಎಲೆಕ್ಟ್ರಿಕ್ ಬಸ್​​ಗಳನ್ನು ನೀಡುತ್ತಿಲ್ಲ: ಸಚಿವ
ಉದಯಪುರ ಘೋಷಣೆ ಕೆಲ ರಾಜ್ಯಗಳಲ್ಲಿ ಜಾರಿಯಾಗಿಲ್ಲ: ಸತೀಶ್ ಜಾರಕಿಹೊಳಿ
ಉದಯಪುರ ಘೋಷಣೆ ಕೆಲ ರಾಜ್ಯಗಳಲ್ಲಿ ಜಾರಿಯಾಗಿಲ್ಲ: ಸತೀಶ್ ಜಾರಕಿಹೊಳಿ