Daily Horoscope: ಈ ರಾಶಿಯವರಿಗೆ ಎಲ್ಲಾ ಇದ್ದರೂ ಸಂತೃಪ್ತಿಯ ಕೊರತೆ
ಇಂದಿನ (2023 ಮೇ 10) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ, ಯಾರಿಗೆ ನಷ್ಟ, ಶುಭ, ಅಶುಭಗಳ ಮಾಹಿತಿಯನ್ನು ತಿಳಿದುಕೊಳ್ಳಿ.
ಶುಭೋದಯ ಓದುಗರೇ. ಪ್ರತಿಯೊಬ್ಬರ ಜೀವನದಲ್ಲಿ ರಾಶಿ ಭವಿಷ್ಯ ವಿಭಿನ್ನವಾಗಿರುತ್ತದೆ. ಹಾಗಾಗಿ ಕೆಲವರು ಬೆಳಗ್ಗೆ ಎದ್ದ ಕೂಡಲೇ ಇಂದಿನ ತಮ್ಮ ಭವಿಷ್ಯ (Daily horoscope) ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು, ಏನು ಮಾಡಬಾರದು? ಹೀಗೆ ನಿತ್ಯಭವಿಷ್ಯ ಜೊತೆಗೆ ನಿತ್ಯಪಂಚಾಂಗ ನೋಡುತ್ತಾರೆ. ಹಾಗಾದ್ರೆ ಇಂದಿನ (2023 ಮೇ 10) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ, ಯಾರಿಗೆ ನಷ್ಟ, ಶುಭ, ಅಶುಭಗಳ ಮಾಹಿತಿಯನ್ನು ತಿಳಿದುಕೊಳ್ಳಿ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ವಸಂತ ಋತು, ಮೇಷ ಮಾಸ, ಮಹಾನಕ್ಷತ್ರ : ಭರಣೀ, ಮಾಸ : ವೈಶಾಖ, ಪಕ್ಷ : ಕೃಷ್ಣ, ವಾರ : ಬುಧ, ತಿಥಿ : ಪಂಚಮೀ, ನಿತ್ಯನಕ್ಷತ್ರ : ಪೂರ್ವಾಷಾಢ, ಯೋಗ: ಸಾಧ್ಯ, ಕರಣ: ತೈತಿಲ, ಸೂರ್ಯೋದಯ ಬೆಳಗ್ಗೆ 06 ಗಂಟೆ 08 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಬೆಳಗ್ಗೆ 49 ನಿಮಿಷಕ್ಕೆ, ರಾಹು ಕಾಲ 12:29 ರಿಂದ 02:04ರ ವರೆಗೆ, ಯಮಘಂಡ ಕಾಲ 07:43 ರಿಂದ 09:18ರ ವರೆಗೆ, ಗುಳಿಕ ಕಾಲ 10:54 ರಿಂದ 12:29ರ ವರೆಗೆ.
ಮೇಷ: ಹಣಕಾಸಿನ ವ್ಯವಹಾರದಲ್ಲಿ ನಿಮಗೆ ಹೆಚ್ಚು ಸಂದೇಹಗಳು ಬರಬಹುದು. ಅತ್ಯಾಪ್ತರನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ. ಮನೋರಂಜನೆಯನ್ನು ಇಂದು ಹೆಚ್ಚು ಇಷ್ಟಪಡುವಿರಿ. ನಿಮ್ಮ ಪರಿಕಲ್ಪನೆಯಂತೆ ಹೊಸ ಕಾರ್ಯಗಳು ಆರಂಭವಾಗಲಿದೆ. ಅದೃಷ್ಟವನ್ನು ನಂಬಿ ಮಾಡದಿದ್ದರೂ ಇರುವ ಅದೃಷ್ಟವೇ ನಿಮ್ಮನ್ನು ಕೈ ಹಿಡಿದು ನಡೆಸಲಿದೆ. ಸಾಮಾಜಿಕ ಕೆಲಸವನ್ನು ಮಾಡುವ ಹುಮ್ಮಸ್ಸು ಇಂದು ಇರಲಿದೆ. ಕೇಳಿದ ಬಂದವರಿಗೆ ಯಥಾಯೋಗ್ಯ ಸಹಾಯವನ್ನು ಮಾಡುವಿರಿ. ಕೋಪವನ್ನು ಕಡಿಮೆ ಮಾಡಿಕೊಂಡಿದ್ದರ ಪರಿಣಾಮ ನಿಮ್ಮ ಆಪ್ತರ ಸಂಖ್ಯೆ ಹೆಚ್ಚಾಗಿದೆ. ಇರುವ ಕೆಲಸದಿಂದ ಲಾಭವನ್ನು ದ್ವಿಗುಣಗೊಳಿಸಿಕೊಲ್ಳುವುದು ಉತ್ತಮ.
ವೃಷಭ: ನಿರೀಕ್ಷೆ ಮೀರಿದ ಅನುಕೂಲತೆಗಳು ಇದ್ದರೂ ಸಂತೃಪ್ತಿಯು ಇರಲಾರದು. ಪ್ರಣಯದಲ್ಲಿ ಅತಿಯಾದ ಆಸಕ್ತಿಯೂ ಇರಲಾರದು. ಹಳೆಯ ಘಟನೆಯು ಇಂದು ಕಾರಣಾಂತರದಿಂದ ನೆನಪಾಗಿ ಕಾಡಲಿದೆ. ಬಂಧುವರ್ಗವು ನಿಮಗೆ ವಿವಾಹಕ್ಕೆ ಸಂಬಂಧಿಸಿದ ಸಹಾಯವನ್ನು ಮಾಡಬಹುದು. ಕೃತಜ್ಞತೆಯನ್ನು ಇಟ್ಟುಕೊಳ್ಳುವುದನ್ನು ಮರೆಯಬೇಡಿ. ಖುಷಿಯಿಂದ ದಿನವನ್ನು ಕಳೆಯುವಿರಿ. ದೇಶವನ್ನು ಸುತ್ತುವ ಮನಸ್ಸಾದೀತು. ವೈದ್ಯಕೀಯ ವಿಚಾರದಲ್ಲಿ ನಿಮಗೆ ಕೆಲವು ಕುತೂಹಲವು ಉಂಟಾಗಬಹುದು. ಆಪ್ತರ ಜೊತೆ ಸಮಾಲೋಚನೆ ನಡೆಸುವಿರಿ.
ಮಿಥುನ: ಯಾರನ್ನೂ ಹಗುರವಾಗಿ ಕಾಣುವುದು ಬೇಡ. ನಿಮ್ಮ ಸಾಮರ್ಥ್ಯವನ್ನು ಪ್ರದರ್ಶಿಸುವ ಅವಶ್ಯಕತೆ ಇಲ್ಲ. ಅದು ತಾನಾಗಿಯೇ ಗೊತ್ತಾಗಲಿದೆ. ನೂತನ ಅಧಿಕಾರವೂ ನಿಮಗಾಗಿ ಸೃಷ್ಟಿಯಾದೀತು. ಕಾರ್ಯದಲ್ಲಿ ಇರುವ ದಕ್ಷತೆಯನ್ನು ಎಲ್ಲರೂ ಮೆಚ್ಚುವರು. ಸಮಯಕ್ಕೆ ಹೆಚ್ಚು ಮಹತ್ವವನ್ನು ನೀವು ಕೊಡಲಿದ್ದೀರಿ. ಕಛೇರಿಯ ಕೆಲಸವೇ ಇಂದು ಅಧಿಕವಾದೀತು. ನಿಮ್ಮ ಆಲೋಚನೆಗಳನ್ನು ಅನುಷ್ಠಾನಕ್ಕೆ ತರುವ ಪ್ರಯತ್ನ ಮಾಡುವಿರಿ. ಇನ್ನೊಬ್ಬರ ಸ್ಥಿತಿಯನ್ನು ಕಂಡು ನೀವು ನೆಮ್ಮದಿಯಿಂದ ಇರುವಿರಿ. ಸಂಗಾತಿಯಿಂದ ಅನಿರೀಕ್ಷಿತ ಸಮಾಚಾರ ಬರಬಹುದು.
ಕಟಕ: ಸ್ವಾಭಿಮಾನಕ್ಕೆ ಧಕ್ಕೆ ಬಂದು ಮನಸ್ಸಿನಲ್ಲಿ ಬಹಳ ಹಿಂಸೆಯನ್ನು ಅನುಭವಿಸಬಹುದು. ಸ್ನೇಹಿತರ ಜೊತೆ ಸುತ್ತಟ ಹಾಗೂ ಭೋಜನವನ್ನು ಮಾಡುವಿರಿ. ದಾಂಪತ್ಯದಲ್ಲಿ ಸುಖವಿದ್ದರೂ ಸಣ್ಣ ಕಿರಿಕಿರಿಗಳು ಬಂದು ಹೋಗಬಹುದು. ದಿನಚರ್ಯೆಯಲ್ಲಿ ವ್ಯತ್ಯಾಸವನ್ನು ಇಂದು ಕಾಣಬಹುದಾಗಿದೆ. ಹಠ ಸ್ವಭಾವವನ್ನು ಸ್ವಲ್ಪ ಕಡಿಮೆ ಮಾಡಿಕೊಳ್ಳುವುದು ಉತ್ತಮ. ಕ್ಷಣದ ಕೋಪವು ನಿಮ್ಮ ಉತ್ಸಾಹವನ್ನು ಕುಂದಿಸೀತು. ಮಾತಿನಲ್ಲಿ ಕಠೋರತಯು ಕಡಿಮೆಯಾದರೆ ಒಳ್ಳೆಯದು. ಕಫಪ್ರಕೃತಿಯು ನಿಮ್ಮನ್ನು ಹಿಂಸಿಸಬಹುದು.
ಸಿಂಹ: ಆಸ್ತಿಯ ವಿಚಾರಕ್ಕೆ ಸಹೋದರರ ನಡುವೆ ವೈಮನಸ್ಯ ಉಂಟಾಗಬಹುದು. ದೂರ ಪ್ರಯಾಣದಿಂದ ಆಯಾಸವಾಗಲಿದೆ. ಆಹಾರ ಸೇವೆಯನ್ನು ಮಿತವಾಗಿ ಮಾಡುವುದು ಒಳ್ಳೆಯದು. ಸೊಂಟದ ನೋವು ನಿಮ್ಮನ್ನು ಕಾಡೀತು. ಅಲ್ಪ ಜ್ಞಾನಿಗಳ ಸಹವಾಸದಿಂದ ನಿಮ್ಮ ಮಾರ್ಯಾದೆಯೂ ಹೋಗಬಹುದು. ಸಮ್ಮಾನಗಳು ಸಂತೋಷವನ್ನು ತರುವುದು. ವಿದೇಶದಲ್ಲಿ ಇದ್ದವರಿಗೆ ಸ್ವದೇಶಕ್ಕೆ ಹೋಗಲು ಅವಕಾಶ ಸಿಗಲಿದೆ. ತಪ್ಪು ನಿರ್ಧಾರಗಳನ್ನು ಮಾಡಿ ಕಷ್ಟಪಡಬೇಕಾದೀತು. ಅಧಿಕ ಖರ್ಚಿಗೆ ಮೊದಲೇ ಕಡಿವಾಣ ಹಾಕಿಕೊಳ್ಳುವುದು ಉತ್ತಮ.
ಕನ್ಯಾ: ಕಳ್ಳತನದ ಅಪವಾದಗಳು ನಿಮಗೆ ಚಿಂತನೆಯನ್ನು ಕೊಡಬಹುದು. ವ್ಯಾಪಾರದಲ್ಲಿ ಮೋಸದಿಂದ ನಷ್ಟವಾಗಬಹುದು. ಹೆಚ್ಚು ಪರಿಶ್ರಮದಿಂದ ಕೆಲಸ ಮಾಡಬೇಕಾದೀತು. ವಿದ್ಯಾರ್ಥಿಗಳಿಗೆ ಓದುವಂತೆ ಒತ್ತಾಯ ಮಾಡಬೇಕಾದೀತು. ಹಣಕಾಸಿನ ತೊಂದರೆಯಿಂದ ನಿಮ್ಮ ಉತ್ಸಾಹ ಕಡಿಮೆಯಾಗಬಹುದು. ಕಛೇರಿ ಮತ್ತು ಕುಟುಂಬವನ್ನು ಮುನ್ನಡೆಸಲು ಕಷ್ಟ ಪಡುವಿರಿ. ಹೂಡಿಕೆ ಹಣವನ್ನು ತೆಗೆಯು ನಿರ್ಧಾರವನ್ನು ಮಾಡಬೇಕಾದೀತು. ಕಲ್ಪನಾಲೋಕದಿಂದ ವಾಸ್ತವಕ್ಕೆ ಬಂದು ಯೋಚನೆ ಮಾಡಿ. ಊಹೆಯಿಂದ ಎಲ್ಲವೂ ಸರಿಯಾಗದು.
ತುಲಾ: ನಿಮ್ಮ ಸಲಹೆಗಳನ್ನು ನಿಮ್ಮವರು ತೆಗೆದುಕೊಳ್ಳದೇ ಇರುವುದು ನಿಮಗೆ ಸಿಟ್ಟೂ ಬೇಸರವನ್ನೂ ಉಂಟುಮಾಡಬಹುದು. ಸತ್ಯವನ್ನು ಹೇಳುವ ಮನಸ್ಸಿದ್ದರೂ ನಿಮಗೆ ಕೆಲವು ತೊಂದರೆ ಎದುರಾಗುವುದರಿಂದ ಅದನ್ನು ಗೌಪ್ಯವಾಗಿ ಇಡುವಿರಿ. ಧಾರ್ಮಿಕ ಆಚರಣೆಗಳನ್ನು ಮಾಡಲು ಹೆಚ್ಚು ಆಸಕ್ತಿ ತೋರಿಸುವಿರಿ. ಆಪ್ತರ ಜೊತೆ ಮಾತುಕತೆಯಿಂದ ಮನಸ್ಸು ಹಗುರಾಗಬಹುದು. ಗೊಂದಲಗಳು ನಿಮ್ಮ ಕೆಲಸದ ವೇಗವನ್ನು ಕಡಿಮೆ ಮಾಡೀತು. ಬಂಧುಗಳ ಸಹವಾಸದಿಂದ ಬದಲಾಗುವ ಸಾಧ್ಯತೆ ಇದೆ.
ವೃಶ್ಚಿಕ: ಪ್ರಸಿದ್ಧ ವ್ಯಕ್ತಿಗಳ ಭೇಟಿಯಾಗಿದ್ದರಿಂದ ಜೀವನಕ್ಕೆ ಬೇಕಾದ ಒಂದಿಷ್ಟು ಅಂಶಗಳು ಗೊತ್ತಾಗಬಹುದು. ವಿದ್ಯಾರ್ಥಿಗಳು ಮುಂದಿನ ಯೋಜನೆಯನ್ನು ಹಾಕಿಕೊಳ್ಳುವುದು ಉತ್ತಮ. ಯಾರ ಮೇಲಾದರೂ ಅನುಮಾನವಿದ್ದರೆ ಅದನ್ನು ಕೂಡಲೇ ಹೇಳುವುದು ಬೇಡ. ಪರೀಕ್ಷಿಸಿ ಮತ್ತೆ ಮಾತನಾಡಿ. ಹೊಸ ಮನೆಯನ್ನು ಕಟ್ಟುವ ಯೋಚನೆಯು ಶುರುವಾಗಲಿದೆ. ಏಕಾಂತವನ್ನು ಹೆಚ್ಚು ಬಯಸಿ ದೂರ ಎಲ್ಲಿಯಾದರೂ ಹೋಗುವಿರಿ. ನಿಮ್ಮನ್ನು ಅರ್ಥಮಾಡಿಕೊಳ್ಳಲು ನಿಮ್ಮವರು ಶ್ರಮ ಪಡಬೇಕಾದೀತು.
ಧನು: ಸಂಗಾತಿಯ ನಡವಿನ ಭಿನ್ನಾಭಿಪ್ರಾಯಗಳು ಹೆಚ್ಚಾಗಬಹುದು. ಇದರ ಪ್ರಭಾವವು ಕಛೇರಿಯ ಕೆಲಸದಲ್ಲಿಯೂ ಕಾಣಬಹುದು. ಕೆಲಸಗಳು ಅಸ್ತವ್ಯಸ್ತವಾಗಿ ದಿಕ್ಕು ತೋಚದಾದೀತು. ಮಕ್ಕಳು ನಿಮ್ಮನ್ನು ಹಾಸ್ಯ ಮಾಡಿಯಾರು. ಅನ್ಯರ ಸಂಬಂಧವು ನಿಮಗೆ ಅಪರಕೀರ್ತಿಯನ್ನು ತರಬಹುದು. ಎಲ್ಲ ಆಗು ಹೋಗುಗಳಿಗೂ ವಿಧಿಯನ್ನು ತೋರಿಸಿ ಸಮಾಧಾನ ಮಾಡಿಕೊಳ್ಳಬಹುದು. ಪ್ರಯತ್ನಕ್ಕೆ ತಕ್ಕ ಫಲವನ್ನು ನಿರೀಕ್ಷಿಸದೇ ಕೆಲಸ ಮಾಡಿ. ಸಂತೋಷವಾಗಿ ಇರಬಹುದು. ಅತಿ ಆಸೆಯಿಂದ ಇರುವುದನ್ನೂ ಕಳೆದುಕೊಳ್ಳಬೇಕಾದೀತು.
ಮಕರ: ನಿಮ್ಮ ಕೆಲಸದಲ್ಲಿ ನಿಷ್ಠೆ ಇರಲಿದೆ. ಯಂತ್ರೋಪಕರಣಗಳ ಮೇಲೆ ಅಧಿಕ ಮೋಹವಿರಲಿದೆ. ಇಂದು ಕೆಲಸದಲ್ಲಿ ಹೆಚ್ಚು ಆಯಾಸವಾಗಲಿದೆ. ಸಿಗಬೇಕಾದುದು ಕೈ ತಪ್ಪಿ ಹೋಗಬಹುದು. ಮೊದಲು ನಿಮ್ಮ ನಿರ್ಧಾರವನ್ನು ನೀವು ಮಾಡಿಕೊಳ್ಳಿ. ಇಲ್ಲವಾದರೆ ಇತರರ ತೀರ್ಮಾನಕ್ಕೆ ಶರಣಾಗಬೇಕಾದೀತು. ದ್ವಿಚಕ್ರ ವಾಹನ ಸವಾರರು ನಿಮ್ಮ ರಕ್ಷಣೆಯಲ್ಲಿ ನೀವು ಇರುವುದು ಒಳ್ಳೆಯದು. ಕುಟುಂಬದ ಕೆಲಸದಲ್ಲಿ ಭಾಗವಹಿಸುವಿರಿ. ಕಡಿಮೆ ಅವಧಿಯಲ್ಲಿ ಹೆಚ್ಚು ಕೆಲಸವನ್ನು ಮಾಡಬಹುದು ಎಂದು ತೋರಿಸುವಿರಿ. ಕೃಷಿಯ ಚಟುವಟಿಕೆ ಹೆಚ್ಚು ಆಸಕ್ತಿಯಿಂದ ತೊಡಗುವಿರಿ.
ಕುಂಭ: ನಿರುದ್ಯೋಗದಿಂದ ನಿಮಗೆ ಬಹಳ ಬೇಸರವಾದೀತು. ಎಲ್ಲರೂ ನಿಮ್ಮ ಬಗ್ಗೆ ಮಾತನಾಡಿಕೊಳ್ಳುವರು. ಹೊಸ ಉದ್ಯಮವನ್ನು ಆರಂಭಿಸಲು ಹೋಗುವುದು ಬೇಡ. ಸಾಮಾನ್ಯರು ಬಹಳ ಕಷ್ಟವನ್ನು ಅನುಭವಿಸುವರು. ಹಣದ ಹರಿವೂ ಸದ್ಯಕ್ಕೆ ಅಷ್ಟಕ್ಕೆಷ್ಟೇ ಇರಲಿದೆ. ಸಣ್ಣ ವಾಗ್ವಾದವು ಅನ್ಯರ ಜೊತೆ ನಡೆಯಲಿದೆ. ಮಾತಿನ ಮೇಲೆ ಹಿಡಿತವಿರಲಿ. ಇಲ್ಲವಾದರೆ ಕಷ್ಟವಾದೀತು. ಸಮಾರಂಭಗಳಿಗೆ ನೀವು ಹೋಗಲಿದ್ದೀರಿ. ನಿಮ್ಮ ಜವಾಬ್ದಾರಿಯ ಕೆಲಸವನ್ನು ಬೇಗ ಮುಗಿಸಿ ಇನ್ನೊಬ್ಬರಿಗೆ ಸಹಾಯ ಮಾಡಲಿರುವಿರಿ. ಅಕಸ್ಮಾತ್ ಬಂದ ಸುದ್ದಿಯು ನಿಮಗೆ ಆತಂಕವನ್ನು ಉಂಟುಮಾಡೀತು.
ಮೀನ: ಖುಷಿಯಲ್ಲಿ ಕೊಟ್ಟ ಮಾತಿನಿಂದ ನಿಮಗೆ ಇಂದು ತೊಂದರೆಯಾದೀತು. ಆರೋಗ್ಯದ ವ್ಯತ್ಯಾಸದಿಂದ ವಿಶ್ರಾಂತಿಯನ್ನು ಪಡೆಯುವಿರಿ. ಎಷ್ಟೋ ಕಾಲದ ಅನಂತರ ನಿಮ್ಮ ನಡುವೆ ಆಪ್ತತೆ ಇರಲಿದೆ. ಖರ್ಚಿನ ವಿಚಾರದಲ್ಲಿ ಹೆಚ್ಚಿನ ಜಾಗರೂಕತೆ ಅವಶ್ಯಕ. ಅಧಿಕಾರಿ ವರ್ಗದಿಂದ ಕಿರಿಕಿರಿ ಆಗಬಹುದು. ಇದೇ ಕಾರಣಕ್ಕೆ ಎಲ್ಲರ ಮೇಲೂ ಕೋಪಗೊಳ್ಳುವ ಸಾಧ್ಯತೆ ಇದೆ. ಮಾನಸಿಕವಾಗಿ ಬೇರೆಯವರಿಗೆ ಹಿಂಸೆಯನ್ನು ಕೊಡಬಹುದು. ಲಾಭವಿಲ್ಲದೇ ಇಂದು ನೀವು ಯಾವ ಕೆಲಸವನ್ನೂ ಮಾಡಲಾರಿರಿ. ನಿಮಗೆ ಪ್ರಶಂಸೆಯು ಸಿಗಬಹುದು.
ಲೋಹಿತಶರ್ಮಾ 8762924271 (what’s app only)