AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜಿಬಿಎ ಹಗರಣಗಳ ತನಿಖೆಗೆ ಆರ್. ಅಶೋಕ್ ಆಗ್ರಹ: ಸಚಿವ ಕೃಷ್ಣಭೈರೇಗೌಡ ವಿರುದ್ಧ ವಿಪಕ್ಷ ನಾಯಕನ ತೀವ್ರ ವಾಗ್ದಾಳಿ!

ಬಿಬಿಎಂಪಿ ವ್ಯಾಪ್ತಿಯಲ್ಲಿ ಒಂದು ಸಸಿ ನೆಡಲು 3,108  ರೂ. ವೆಚ್ಚ ಹಾಗೂ ಶ್ವಾನ ಸಂತಾನಹರಣಕ್ಕೆ 42.50 ರೂ. ಕೋಟಿ ಲೂಟಿ ಮಾಡಲಾಗಿದೆ ಎಂದು ಆರೋಪಿಸಿ ವಿಪಕ್ಷ ನಾಯಕ ಆರ್. ಅಶೋಕ್ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಸಚಿವ ಕೃಷ್ಣಭೈರೇಗೌಡ ಅವರು ಸಭೆಗಳಲ್ಲಿ ಕೇವಲ ಸಣ್ಣ ಅಧಿಕಾರಿಗಳನ್ನು ಬೈದು ರೀಲ್ಸ್ ಮಾಡುವುದನ್ನು ಬಿಟ್ಟು, ಈ ಮಹಾಲೂಟಿಯ ಹಿಂದಿರುವ ಅಸಲಿ ತಿಮಿಂಗಲಗಳನ್ನು ಪತ್ತೆಹಚ್ಚಿ ಜನರ ತೆರಿಗೆ ಹಣ ವಸೂಲಿ ಮಾಡಬೇಕೆಂದು ಆಗ್ರಹಿಸಿದ್ದಾರೆ.

ಜಿಬಿಎ ಹಗರಣಗಳ ತನಿಖೆಗೆ ಆರ್. ಅಶೋಕ್ ಆಗ್ರಹ: ಸಚಿವ ಕೃಷ್ಣಭೈರೇಗೌಡ ವಿರುದ್ಧ ವಿಪಕ್ಷ ನಾಯಕನ ತೀವ್ರ ವಾಗ್ದಾಳಿ!
ಸಚಿವ ಕೃಷ್ಣಭೈರೇಗೌಡ ವಿರುದ್ಧ ವಿಪಕ್ಷ ನಾಯಕ ಆರ್. ಅಶೋಕ್ ತೀವ್ರ ವಾಗ್ದಾಳಿ!
ಕಿರಣ್​ ಹನಿಯಡ್ಕ
| Edited By: |

Updated on:Jul 01, 2026 | 2:08 PM

Share

ಮುಖ್ಯಾಂಶಗಳು

  • ಬಿಬಿಎಂಪಿ ಹಗರಣಗಳ ಕುರಿತು ಆರ್ ಅಶೋಕ್ ಕಾಂಗ್ರೆಸ್ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
  • ಸಸಿ ನೆಡುವ ಮತ್ತು ಶ್ವಾನ ಸಂತಾನಹರಣ ಯೋಜನೆಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿದ್ದಾರೆ.
  • ಅಧಿಕಾರಿಗಳನ್ನು ಬೈದು ರೀಲ್ಸ್ ಮಾಡುವುದನ್ನು ಬಿಟ್ಟು ಅಸಲಿ ತಿಮಿಂಗಲಗಳನ್ನು ಪತ್ತೆಹಚ್ಚಿ ಎಂದಿದ್ದಾರೆ.

ಬೆಂಗಳೂರು, ಜುಲೈ 01: ಬೆಂಗಳೂರು ನಗರಾಭಿವೃದ್ಧಿ ಇಲಾಖೆ ಸಭೆಯಲ್ಲಿ ಸಚಿವ ಕೃಷ್ಣಭೈರೇಗೌಡ (Krishna Byre Gowda) ಅವರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಬೆನ್ನಲ್ಲೇ, ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್ ಅವರು ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ನಾಯಿಗಳ ಸಂತಾನಹರಣ ಮತ್ತು ಸಸಿ ನೆಡುವ ಯೋಜನೆಯಲ್ಲಿ ಕೋಟ್ಯಂತರ ರೂಪಾಯಿ ಭ್ರಷ್ಟಾಚಾರ ನಡೆದಿದ್ದು, ಸ್ವತಃ ಸಚಿವರೇ ಸರ್ಕಾರದ ಲೂಟಿಯನ್ನು ಬಯಲು ಮಾಡಿದ್ದಾರೆ ಎಂದು ಅವರು ತಮ್ಮ ಎಕ್ಸ್ ಖಾತೆಯಲ್ಲಿ ಟೀಕಿಸಿದ್ದಾರೆ.

“ಕನ್ನಡಿಗರ ಕಿವಿಯಲ್ಲಿ ದಾಸವಾಳ ಇಡಬೇಡಿ”

ಸಭೆಯಲ್ಲಿ ಸಚಿವರು “ನನ್ನ ಕಿವಿಯಲ್ಲಿ ದಾಸವಾಳ ಹೂವು ಕಾಣ್ತಾ ಇದ್ಯಾ?” ಎಂದು ಅಧಿಕಾರಿಗಳನ್ನು ಕೇಳಿದ್ದನ್ನು ಉಲ್ಲೇಖಿಸಿರುವ ಆರ್. ಅಶೋಕ್, ಅಸಲಿಗೆ ಈ ಪ್ರಶ್ನೆಯನ್ನು ಕೇಳಬೇಕಾಗಿರುವುದು ತಾವಲ್ಲ ಸ್ವಾಮಿ, ಏಳೂವರೆ ಕೋಟಿ ಕನ್ನಡಿಗರು ನಿಮ್ಮ ಕಡು ಭ್ರಷ್ಟ ಕಾಂಗ್ರೆಸ್ ಸರ್ಕಾರಕ್ಕೆ ಕೇಳುತ್ತಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ.

ಕೋತಿ ತಾನು ಮೊಸರು ತಿಂದು ಮೇಕೆ ಮೂತಿಗೆ ಒರೆಸಿದಂತೆ, ಕೆಳಮಟ್ಟದ ಅಧಿಕಾರಿಗಳ ಮೇಲೆ ರೋಷಾವೇಶ ತೋರಿಸಿದರೆ ಏನು ಪ್ರಯೋಜನ? ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಬಿಟ್ಟಂತೆ ಮೀಟಿಂಗ್‌ಗಳಲ್ಲಿ ಸಣ್ಣಪುಟ್ಟ ಅಧಿಕಾರಿಗಳನ್ನು ಬೈದು ರೀಲ್ಸ್ ಮಾಡಿದರೆ ಲೂಟಿ ಹೊಡೆದ ಹಣ ವಾಪಸ್ ಬರುತ್ತಾ? ಈ ಮಹಾಲೂಟಿಯ ಹಿಂದಿರುವ ದೊಡ್ಡ ದೊಡ್ಡ ತಿಮಿಂಗಲಗಳು ಯಾರು ಎನ್ನುವುದನ್ನು ತನಿಖೆ ಮಾಡಿಸಿ ಪತ್ತೆ ಹಚ್ಚಿ ಎಂದು ಅಶೋಕ್ ಸಚಿವರಿಗೆ ಸವಾಲು ಹಾಕಿದ್ದಾರೆ.

ಸಸಿ ನೆಡಲು 3,108 ಕೋಟಿ ರೂ., ನಾಯಿಗಳ ಆಪರೇಷನ್‌ಗೆ 42.50 ಕೋಟಿ ರೂ. ಲೂಟಿ!

ಬೆಂಗಳೂರಿನಲ್ಲಿ ಒಂದು ಸಸಿ ನೆಡಲು ಬರೋಬ್ಬರಿ 2,300 ರೂಪಾಯಿಯಿಂದ 3,108 ರೂಪಾಯಿವರೆಗೆ ವೆಚ್ಚ ಮಾಡಲಾಗುತ್ತಿದೆ. ಆದರೆ ರಸ್ತೆ ಬದಿಯಲ್ಲಿ ಸರಿಯಾಗಿ ಗುಣಿಯನ್ನೇ ತೆಗೆಯದೆ, ಗೊಬ್ಬರ ಹಾಕದೆ ಕೇವಲ ಕಾಗದದ ಮೇಲೆ ಗಿಡ ನೆಟ್ಟು ಕೋಟ್ಯಂತರ ರೂಪಾಯಿ ಸಾರ್ವಜನಿಕರ ತೆರಿಗೆ ಹಣವನ್ನು ನುಂಗಿ ನೀರು ಕುಡಿಯಲಾಗಿದೆ ಎಂದು ಆರೋಪಿಸಿದ್ದಾರೆ.

ಕಳೆದ 5 ವರ್ಷಗಳಲ್ಲಿ ನಾಯಿಗಳ ಸಂತಾನ ಹರಣ ಶಸ್ತ್ರಚಿಕಿತ್ಸೆಗಾಗಿ 42.50 ಕೋಟಿ ರೂಪಾಯಿ ವೆಚ್ಚ ಮಾಡಲಾಗಿದೆ. ಆದರೂ ಬೆಂಗಳೂರಿನಲ್ಲಿ ನಾಯಿಗಳ ಸಂಖ್ಯೆ ಮಾತ್ರ ದಿನೇ ದಿನೇ ಹೆಚ್ಚುತ್ತಲೇ ಇದೆ. ಹಾಗಾದರೆ ಬಡವರ ತೆರಿಗೆ ಹಣ ಯಾರ ಜೇಬು ಸೇರುತ್ತಿದೆ? ಎಂದು ಅವರು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ ಕಿವಿಯಲ್ಲಿ ದಾಸವಾಳ ಇಟ್ಟುಕೊಂಡು ಕೂತಿದ್ದೀನಾ?: ಜಿಬಿಎ ಸಭೆಯಲ್ಲಿ ಅಧಿಕಾರಿಗಳ ಮೇಲೆ ಸಚಿವ ಕೃಷ್ಣಭೈರೇಗೌಡ ಗರಂ

ಸಚಿವರ ಮೂಗಿನಡಿಯೇ ಲೂಟಿ; ಸರ್ಕಾರಕ್ಕೆ ಹಿಡಿತವಿಲ್ಲ!

ಪ್ರತಿ ಹಗರಣ ನಡೆದಾಗಲೂ ಕೇವಲ ಅಧಿಕಾರಿಶಾಹಿಯನ್ನಷ್ಟೇ ಹೊಣೆ ಮಾಡಿ ಸಚಿವರು ಕೈತೊಳೆದುಕೊಳ್ಳಲು ಸಾಧ್ಯವಿಲ್ಲ. ಅಧಿಕಾರಿಗಳ ಮೇಲೆ ನಿಗಾ ಇಡಲು ಕಾರ್ಯಾಂಗವನ್ನು ಮುನ್ನಡೆಸಲು ಮಂತ್ರಿಗಳಿರುವುದು. ಸಚಿವರ ಮೂಗಿನಡಿಯೇ ಇಷ್ಟೆಲ್ಲಾ ನಡೆಯುತ್ತಿದ್ದರೂ ಸರ್ಕಾರ ಕಣ್ಣು ಮುಚ್ಚಿ ಕುಳಿತಿತ್ತೇ? ಕಾಂಗ್ರೆಸ್ ಸರ್ಕಾರಕ್ಕೆ ಆಡಳಿತದ ಮೇಲೆ ಯಾವುದೇ ಹಿಡಿತವಿಲ್ಲ ಎಂಬುದು ಸಚಿವರ ಮಾತಿನಿಂದಲೇ ಜಗಜ್ಜಾಹೀರಾಗಿದೆ ಎಂದು ಅಶೋಕ್ ಕಿಡಿಕಾರಿದ್ದಾರೆ. ತೆರಿಗೆ ಕಟ್ಟಿ ಕಂಗಾಲಾಗಿರುವ ಜನತೆಗೆ ಈ ಸರ್ಕಾರ ಮಹಾ ದ್ರೋಹ ಮಾಡುತ್ತಿದ್ದು, ಕೇವಲ ಸಭೆ ನಡೆಸಿ ರೀಲ್ಸ್ ಮಾಡುವುದನ್ನು ಬಿಟ್ಟು ಈ ಲೂಟಿಯ ಹಿಂದಿರುವ ಅಸಲಿ ಮುಖಗಳನ್ನು ಬಯಲಿಗೆಳೆಯಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 1:38 pm, Wed, 1 July 26

Follow Us