Daily Horoscope 27 June: ಇಂದಿನ ರಾಶಿಭವಿಷ್ಯ, ಈ ರಾಶಿಯವರು ತಮ್ಮ ಖರ್ಚಿನಿಂದ ಸ್ನೇಹಿತರಿಗೆ ಭೋಜನ ಹಾಕಲಿದ್ದಾರೆ
ಇಂದಿನ (2023 ಜೂನ್ 27) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.
ಶುಭೋದಯ ಗೆಳೆಯರೇ.. ಪ್ರತಿಯೊಬ್ಬರ ಜೀವನದಲ್ಲಿ ರಾಶಿ ಭವಿಷ್ಯ ವಿಭಿನ್ನವಾಗಿರುತ್ತದೆ. ಕೆಲವರು ಪ್ರತಿನಿತ್ಯ ಬೆಳಗ್ಗೆ ಎದ್ದ ಕೂಡಲೇ ತಮ್ಮ ರಾಶಿ ಭವಿಷ್ಯ (Daily horoscope) ನೋಡುವ ಹವ್ಯಾಸವನ್ನು ಇಟ್ಟುಕೊಂಡಿರುತ್ತಾರೆ. ಇಂದಿನ ರಾಶಿ ಭವಿಷ್ಯ ಏನು ಹೇಳುತ್ತದೆ ಅಥವಾ ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು, ಏನು ಮಾಡಬಾರದು? ಹೀಗೆ ಎಲ್ಲವನ್ನು ತಿಳಿದುಕೊಳ್ಳುತ್ತಾರೆ. ಇದರ ಜೊತೆಗೆ ನಿತ್ಯಪಂಚಾಂಗ ಕೂಡ ಓದುತ್ತಾರೆ. ಹಾಗಾದರೆ ಇಂದಿನ (2023 ಜೂನ್ 27) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಮಿಥುನ ಮಾಸ, ಮಹಾನಕ್ಷತ್ರ: ಆರ್ದ್ರಾ, ಮಾಸ: ಆಷಾಢ, ಪಕ್ಷ: ಶುಕ್ಲ, ವಾರ: ಮಂಗಳ, ತಿಥಿ: ನವಮೀ, ನಿತ್ಯನಕ್ಷತ್ರ: ಚಿತ್ರಾ, ಯೋಗ: ಪರಿಘ, ಕರಣ: ಬಾಲವ, ಸೂರ್ಯೋದಯ ಬೆಳಗ್ಗೆ 06 ಗಂಟೆ 07 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 07 ಗಂಟೆ 03 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 03:49 ರಿಂದ 05:26ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 09:21 ರಿಂದ 10:58 ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 12:35 ರಿಂದ 02:12ರ ವರೆಗೆ.
ಮೇಷ: ನೀವು ಇಟ್ಟ ನಂಬಿಕೆಗೆ ಮೋಸವಾಗುವ ಸಾಧ್ಯತೆ ಇದೆ. ಹಣಕಾಸಿನ ಮೌಲ್ಯವನ್ನು ನೀವು ಇಂದು ತಿಳಿದುಕೊಳ್ಳುವಿರಿ. ಇಂದು ನಿಮ್ಮ ಮನಸ್ಸು ಬಹಳ ಡೋಲಾಯಮಾನವಾಗಿ ಇರಲಿದೆ. ನಿಮಗೆ ಆಗದ ವಿಚಾರವನ್ನು ಮತ್ತೆ ಮತ್ತೆ ಸಹೋದ್ಯೋಗಿಗಳು ನೆನಪಿಸುವರು. ಉದ್ಯೋಗದಲ್ಲಿ ಬದಲಾವಣೆಯನ್ನು ನೀವು ಬಯಸುವಿರಿ. ಮನೆಯ ಹೆಚ್ಚಿನ ವಿಚಾರಗಳು ನಿಮಗೆ ಗೊತ್ತಾಗದೇ ಹೋಗಬಹುದು. ನಿಮ್ಮ ಖರ್ಚಿನಿಂದ ಸ್ನೇಹಿತರಿಗೆ ಭೋಜನ ಹಾಕಿಸುವಿರಿ. ಸರ್ಕಾರದಲ್ಲಿ ಆಗಬೇಕಾದ ಕೆಲಸವನ್ನು ಪ್ರಭಾವದ ಮೂಲಕ ಮಾಡಿಸಿಕೊಳ್ಳುವಿರಿ.
ವೃಷಭ: ಇಂದಿನ ನಿಮ್ಮ ಆರಂಭವು ಬಹಳ ಸಂತೋಷದಿಂದ ಇರಲಿದೆ. ಸ್ವಾಭಿಮಾನವನ್ನು ಬಿಟ್ಟು ಯಾವುದನ್ನೂ ಮಾಡಲಾರಿರಿ. ಕೋಪವನ್ನು ಸ್ವಲ್ಪ ಕಡಿಮೆ ಮಾಡಿಕೊಳ್ಳುವುದು ಉತ್ತಮ. ನಿಮ್ಮ ಅಮೂಲ್ಯ ವಸ್ತುಗಳನ್ನು ಜಾಗರೂಕತೆಯಿಂದ ಇಟ್ಟುಕೊಳ್ಳಿ. ಕ್ಷಣಕ್ಷಣದ ಚಿತ್ತಚಾಂಚಲ್ಯಕ್ಕೆ ಧ್ಯಾನವೊಂದೇ ಔಷಧವಾಗಲಿದೆ. ಸಂಗಾತಿಯನ್ನು ನೀವು ಕೆಲವು ವಿಚಾರಗಳಿಗೆ ಬೇಸರಿಸುವಿರಿ. ಅಸಮಯದ ಭೋಜನದಿಂದ ನಿಮಗೆ ಆರೋಗ್ಯವು ಹಾಳಾಗಬಹುದು. ನೀವು ಯತ್ನಿಸಿದ ಕೆಲಸವು ಪೂರ್ಣಫಲಪ್ರದವಾಗದು. ಸಾಗಿದ ದಾರಿಯನ್ನು ನೀವು ನೆನಪಿಸಿಕೊಳ್ಳುವಿರಿ.
ಮಿಥುನ: ನಿಮ್ಮ ಆಸ್ತಿಯ ಬಗ್ಗೆ ನಿಮಗೇ ಸಂಪೂರ್ಣವಾದ ಮಾಹಿತಿ ಕೊರತೆಯಾಗುವುದು. ಮನಸ್ಸಿನಲ್ಲಿ ಇರುವುದನ್ನು ಯಾರ ಜೊತೆಗಾದರೂ ಹೇಳಿಕೊಳ್ಳುವಿರಿ. ನಿಮ್ಮ ನೋವಿಗೆ ಸ್ಪಂದಿಸಲು ಯಾರಾದರೂ ಸಿಕ್ಕಾರು. ನಿಮ್ಮ ಒಳ್ಳೆಯ ಚಿಂತನೆಗೆ ಪ್ರಶಂಸೆ ಸಿಗಲಿದೆ. ಎಷ್ಟೋ ವಿಚಾರಗಳನ್ನು ನೀವು ನಿಮ್ಮಲ್ಲಿಯೇ ಇಟ್ಟಕೊಂಡು ಅನುಭವಿಸುವಿರಿ. ನಿಮಗೆ ಇಷ್ಟವಾದುದನ್ನು ನೀವು ಪಡೆಯುವಿರಿ. ಅಧಿಕಖರ್ಚನ್ನು ನಿಮಗೆ ತಡೆಯುವುದು ಕಷ್ಟವಾದೀತು. ಮಕ್ಕಳಿಂದ ಸಂಕಟವು ಕಡಿಮೆ ಆದೀತು. ಸಂಜೆಯ ವಿಹಾರವು ನಿಮಗೆ ಹಿತವೆನಿಸುವುದು.
ಕಟಕ: ಇಂದು ನಿಮಗೆ ಸ್ಥಿರವಾದ ಬುದ್ಧಿಯನ್ನು ಇಟ್ಟುಕೊಳ್ಳಲು ಕಷ್ಡವಾದೀತು. ಏನೇನೋ ಯೋಚನೆಗಳು ಬರಬಹುದು. ಇಂದಿನ ಕೆಲಸವನ್ನು ಸರಿಯಾಗಿ ಮಾಡಲು ಕಷ್ಟಪಡುವಿರಿ. ತಾಯಿಯ ಮಾತನ್ನೂ ನೀವು ಕೇಳದೇ ನಿಮ್ಮದೇ ದಾರಿಯಲ್ಲಿ ಸಾಗುವಿರಿ. ಸಾಹಸ ಕೆಲಸಕ್ಕೆ ಹೋಗುವ ಸಾಧ್ಯತೆ ಇದೆ. ದೇಹಕ್ಕೆ ಪೆಟ್ಟುಮಾಡಿಕೊಳ್ಳಲು ನೀವು ಹೋಗುವುದು ಬೇಡ. ನಿಮಗೆ ಸಿಗಬೇಕಾದ ಹಣವು ವಿಳಂಬವಾಗಿದ್ದಕ್ಕೆ ಬೇಸರಗೊಳ್ಳಬಹುದು. ನಿಮ್ಮ ನೈಪುಣ್ಯತೆಯನ್ನು ಕೆಲಸದಲ್ಲಿ ತೋರಿಸಿ. ವಾಗ್ವಾದಕ್ಕೆ ಹೋಗಿ ಮನಸ್ಸನ್ನು ಹಾಳುಮಾಡಿಕೊಳ್ಳುವುದು ಬೇಡ.
ಸಿಂಹ: ಇಂದು ನೀವು ಅಧಿಕವಾಗಿ ಮಾತನಾಡದೇ ಸುಮ್ಮನಿರುವುದು ಉತ್ತಮ. ಕಾಲಹರಣಕ್ಕೆ ನಿಮಗೆ ಇನ್ನೊಬ್ಬರ ವಿಚಾರವನ್ನು ಆಡಿಕೊಳ್ಳುವಿರಿ. ನಿಮ್ಮಲ್ಲಿ ದೂರದರ್ಶಿತ್ವದ ಕೊರತೆ ಹೆಚ್ಚು ಕಾಣಬಹುದು. ಎಂದೋ ಮಾಡಿದ ಕೆಲಸಕ್ಕೆ ಇಂದು ಪಶ್ಚಾತ್ತಾಪ ಪಡಬೇಕಾದೀತು. ಸಂಗಾತಿಯ ಮನಸ್ಸನ್ನು ನೋಯಿಸಿ ಅದನ್ನು ಸರಿಪಡಿಸುವಿರಿ. ಹಳೆಯ ಸ್ನೇಹಿತರ ಜೊತೆ ದೂರಪ್ರಯಾಣವನ್ನು ಮಾಡುವಿರಿ. ತಂದೆಯನ್ನು ನೋಡುವ ಹಂಬಲ ಅಧಿಕವಾಗುದು. ನಿಮ್ಮ ಲೆಕ್ಕಾಚಾರವು ಬುಡಮೇಲಾದೀತು. ಆರೋಗ್ಯಕ್ಕೆ ಸಂಬಂಧಿಸಿದಂತೆ ವೈದ್ಯರನ್ನು ಭೇಟಿಯಾಗಿ. ನಿಮ್ಮ ಒಳ್ಳೆಯ ಸ್ವಭಾವದ ಬಗ್ಗೆ ಮಾತನಾಡುವರು.
ಕನ್ಯಾ: ಯಥೇಚ್ಛ ಸುತ್ತಾಟವು ನಿಮಗೆ ಆಯಾಸವನ್ನು ತಂದೀತು. ಔಷಧ ವ್ಯಾಪಾರಿಗಳು ಹೆಚ್ಚಿನ ಲಾಭವನ್ನು ಗಳಿಸುವರು. ನಿಮಗೆ ಭೂಮಿಯನ್ನು ಕೊಡುವುದು ಅನಿವಾರ್ಯವಾಗಿದ್ದು ಅಲ್ಪ ಮೌಲ್ಯಕ್ಕೆ ಮಾರಾಟ ಮಾಡುವಿರಿ. ಇಂದು ಗುಂಪಿನಲ್ಲಿ ಕೆಲಸಮಾಡುವುದು ನಿಮಗೆ ಕಿರಿಕಿರಿಯಾದೀತು. ನಿಮಗೆ ಸಂಬಂಧಿಸದ ವಿಚಾರಕ್ಕೆ ತಲೆಹಾಕುವುದನ್ನು ನಿಲ್ಲಿಸಿ. ನಿಮ್ಮ ಸಂತೋಷವನ್ನು ಇತರರ ಜೊತೆ ಹಂಚಿಕೊಳ್ಳಲು ಇಷ್ಟಪಡುವುದಿಲ್ಲ. ನೂತನವಾಗಿ ಖರೀದಿಸಿದ ಯಂತ್ರವು ಕೈ ಕೊಡಬಹುದು. ನಿಮ್ಮ ಮನಸ್ಸನ್ನು ಬದಲಿಸಲು ಬಹಳ ಪ್ರಯತ್ನ ನಡೆಯುವುದು. ಹಿಂದಿನ ಘಟನೆಯೇ ಪುನರಾವರ್ತನೆ ಆಗುವುದು.
ತುಲಾ: ನಿಮ್ಮ ಪ್ರಯತ್ನಕ್ಕೆ ಪ್ರತಿಫಲವು ಸಿಗಬೇಕೆಂದು ನೀವು ಅಂದುಕೊಳ್ಳುವುದು ಸರಿಯಾಗದು. ನಿಮ್ಮವರಲ್ಲದವರ ಮೇಲೆ ದ್ವೇಷವನ್ನು ಬೆಳೆಸಿಕೊಳ್ಳುವುದು ಬೇಡ. ಹಣಕಾಸಿನ ತೊಂದರೆಯನ್ನು ನೀವು ಕಡಿಮೆ ಮಾಡಿಕೊಳ್ಳಲು ನಿಮಗೆ ಸರಳವಾದ ಮಾರ್ಗವು ಸಿಗುವುದು. ನಿಮ್ಮ ಇಂದಿನ ಮಾತಿನಿಂದ ಕುಟುಂಬದಲ್ಲಿ ಉಂಟಾಗುವ ಕಲಹವನ್ನು ತಪ್ಪಿಸಬಹುದು. ಆಪ್ತರನ್ನು ಕಳೆದುಕೊಂಡ ಸುದ್ದಿಯು ನಿಮಗೆ ದುಃಖವನ್ನು ತರಬಹುದು. ಗೌರವಗಳನ್ನು ಪಡೆಯಲು ನಿಮಗೆ ಮನಸ್ಸಾಗದು. ಮಾಧ್ಯಮದ ವೃತ್ತಿಯನ್ನು ಮಾಡುವವರಿಗೆ ಹೆಚ್ಚಿನ ಭತ್ಯೆಯು ಸಿಗಬಹುದು.
ವೃಶ್ಚಿಕ: ಇಂದು ನೀವು ಗಟ್ಟಿ ಮನಸ್ಸಿನಿಂದ ಹೊರಡರೂ ಕಾರ್ಯಸ್ಥಳವು ನಿಮಗೆ ಕೆಲವು ಕಹಿಯನ್ನು ಕೊಟ್ಟು ಬೇಸರ ತರಿಸಬಹುದು. ಸಂಗಾತಿಯನ್ನು ಮಾತನಾಡಿಸಲು ಹೋಗಿ ಅವರ ಜೊತೆ ಕಲಹವಾಡಿ ಬರುವಿರಿ. ಮಕ್ಕಳಾಡದ ಮನಃಸ್ಥಿತಿ ಇಂದು ನಿಮ್ಮಲ್ಲಿ ಇರಲಿದೆ. ನಿಮಗೆ ಇಂದು ಕಲೆಯ ಬಗ್ಗೆ ನಿಮಗೆ ಆಸಕ್ತಿ ಕಡಿಮೆಯಾಗಬಹುದು. ದೇವಾಲಯದಲ್ಲಿ ಸ್ವಲ್ಪ ಕಾಲ ಕಳೆದು ಬರುವ ಮನಸ್ಸಾಗಲಿದೆ. ವಿದ್ಯಾರ್ಥಿಗಳು ಒಮ್ಮನಸ್ಸಿನಿಂದ ಓದಲು ಕುಳಿತುಕೊಳ್ಳುವುದು ಅವಶ್ಯಕ. ಧಾರ್ಮಿಕ ಆಚರಣೆಯಲ್ಲಿ ಭಾಗವಹಿಸಯವಿರಿ.
ಧನುಸ್ಸು: ನಿಮಗೆ ಪಾಲುದಾರಿಕೆಯಲ್ಲಿ ಹೆಚ್ಚಿನ ಶ್ರಮದಿಂದ ಲಾಭವನ್ನು ಪಡೆಯುವಿರಿ. ಅಮೂಲ್ಯ ವಸ್ತುಗಳನ್ನು ಖರೀದಿಸುವಿರಿ. ನಿಮಗೆ ಕಷ್ಟವಾದ ವಿಚಾರಗಳನ್ನು ನೀವು ತಪ್ಪಿಸಿಕೊಳ್ಳಲು ಪ್ರಯತ್ನಿಸುವಿರಿ. ಮನಸ್ಸು ಭಾರವಾಗಿದ್ದು ಎಲ್ಲದರಿಂದ ದೂರವಿರಲು ಇಚ್ಛಿಸುವಿರಿ. ನಿಮ್ಮ ಮಾತುಗಳಿಗೆ ಅಪಾರ್ಥವು ಬಂದು ಅಪವಾದವೂ ಕೇಳಿ ಬರಬಲಿದೆ. ಅನಿರೀಕ್ಷಿತ ವಾರ್ತೆಯನ್ನು ನೀವು ಕೇಳುವಿರಿ. ನಿಮ್ಮ ಆತಂಕವನ್ನು ಇನ್ನೊಬ್ಬರ ಬಳಿ ಹೇಳಿಕೊಳ್ಳುವಿರಿ. ಸ್ಥಾನವನ್ನು ಬಯಸಿ ನೀವು ಇಂದು ಕೆಲಸವನ್ನು ಮಾಡುವಿರಿ. ಸಮಾರಂಭಗಳು ಇಂದು ನಿಮಗೆ ಸಪ್ಪೆ ಅನ್ನಿಸಬಹುದು.
ಮಕರ: ನಿಮ್ಮ ಪ್ರಯಾಣದಲ್ಲಿ ಕೆಲವು ತೊಂದರೆಗಳು ಆಗಬಹುದು. ನಿಮ್ಮವರ ಅನಾರೋಗ್ಯವನ್ನು ಸರಿಮಾಡಿಕೊಳ್ಳಲು ಓಡಾಟ ಮಾಡಬೇಕಾದೀತು. ಸಾಲ ಮಾಡವ ಸ್ಥಿತಿಯೂ ಬರಬಹುದು. ಏಕಾಂಗಿಯಾಗಿ ಸುತ್ತಾಡುವ ಆಸೆ ನಿಮಗೆ ಇರಲಿದೆ. ಶಿಸ್ತಿನ ಕೆಲಸಕ್ಕೆ ನಿಮ್ಮನ್ನು ಪ್ರಶಂಸಿಸಬಹುದು. ಅಧಿಕವೇತನವು ಸಿಗುವ ಕೆಲಸವನ್ನು ಅನ್ವೇಷಿಸುವಿರಿ. ಹಣದ ಹಿಂದೆ ಬಿದ್ದು, ನೀವು ಮಾಡಬಾರದ ಕೆಲಸಕ್ಕೆ ಕೈ ಹಾಕಬೇಕಾದೀತು. ನಿಮ್ಮವರು ನಿಮ್ಮನ್ನು ನಿರ್ಲಕ್ಷಿಸಬಹುದು. ಯಾವುದೋ ಯೋಚನೆಯಲ್ಲಿ ನೀವು ಮಗ್ನರಾಗಿ ಚಿಂತೆಪಡುವ ಸಾಧ್ಯತೆ ಇದೆ.
ಕುಂಭ: ಆಕಸ್ಮಿಕ ಪ್ರಯಾಣವು ಬಂದಿದ್ದು, ಇದರಿಂದ ನಿಮಗೆ ಉದ್ಯೋಗದಲ್ಲಿ ತೊಂದರೆಯಾಗಬಹುದು. ನೂಲೆಳೆತ ಅಂತರದಲ್ಲಿ ನೀವು ಪ್ರಾಣಾಪಾಯದಿಂದ ಬದುಕಿ ಉಳಿಯುವ ಸಾಧ್ಯತೆ ಇದೆ. ತಂದೆಯ ಸಹಕಾರದಿಂದ ಹೊಸ ಉದ್ಯೋಗವನ್ನು ನೀವು ಪಡೆಯುವಿರಿ. ವಿದ್ಯಾರ್ಥಿಗಳು ಅಧ್ಯಯನಕ್ಕೆ ಪರಿಸರವನ್ನು ಬದಲಿಸುವ ಸಾಧ್ಯತೆ ಇದೆ. ಸಹೋದ್ಯೋಗಿಗಳ ಸಹಕಾರವಿಲ್ಲದೇ ಇಂದು ನಿಮ್ಮ ಕೆಲಸವು ಆಗಲಿದೆ. ಸ್ನೇಹಿತರ ಜೊತೆ ಮನೋರಂಜನೆಯಲ್ಲಿ ಕಾಲವನ್ನು ಕಳೆಯುವಿರಿ. ನಿಮ್ಮ ಮಾನಸಿಕತೆಯನ್ನು ತಿಳಿಯಲು ಕಷ್ಟಪಡುವರು. ನಿಮ್ಮದಲ್ಲದ್ದನ್ನು ಇಷ್ಟಪಡುವುದು ಬೇಡ.
ಮೀನ: ನಿಮ್ಮ ದಿನಚರಿಯನ್ನು ವ್ಯವಸ್ಥಿತವಾಗಿ ಮಾಡಿಕೊಳ್ಳುವುದು ಉತ್ತಮ. ಹಗುರಾದ ಮನಸ್ಸಿನಿಂದ ಉತ್ಸಾಹವು ಅಧಿಕವಾಗುವುದು. ಇಂದು ನೀವು ನಿಯಮಗಳನ್ನು ಪಾಲಿಸಲು ಕಷ್ಟಪಡಬೇಕಾದಿಕತು. ಆರ್ಥಿಕ ಹಿಂಜರಿಕೆಯು ನಿಮಗೆ ಅರಗಿಸಿಕೊಳ್ಳದ ತುತ್ತಾಗಬಹುದು. ವ್ಯಕ್ತಿಗಳ ಮೇಲೆ ನಂಬಿಕೆಯನ್ನು ನೀವು ಕಳೆದುಕೊಳ್ಳುವಿರಿ. ಕೆಲಸಗಳು ಮಂದಗತಿಯಲ್ಲಿ ಸಾಗಲಿದೆ. ಸಹೋದರನಿಂದ ನಿಮಗೆ ಸಲಹೆಗಳು ಸಿಗಬಹುದು. ಕಛೇರಿಯಲ್ಲಿ ಇಂದು ಕೆಲಸ ಮಾಡಲು ಆಸಕ್ತಿ ಕಡಿಮೆ ಇರಲಿದೆ. ಪಿತ್ರಾರ್ಜಿತ ಆಸ್ತಿಯನ್ನು ನೀವು ಪಡೆದುಕೊಳ್ಳಬಹುದು.
-ಲೋಹಿತಶರ್ಮಾ ಇಡುವಾಣಿ (ವಾಟ್ಸ್ಆ್ಯಪ್- 8762924271)
Published On - 12:01 am, Tue, 27 June 23