Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಸೆಪ್ಟೆಂಬರ್ 15ರಿಂದ 21ರ ತನಕ ವಾರಭವಿಷ್ಯ

ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ವಾರಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಸೆಪ್ಟೆಂಬರ್ 15ರಿಂದ 21ರ ತನಕ ವಾರಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ. 

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಸೆಪ್ಟೆಂಬರ್ 15ರಿಂದ 21ರ ತನಕ ವಾರಭವಿಷ್ಯ
ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಸೆಪ್ಟೆಂಬರ್ 15ರಿಂದ 21ರ ತನಕ ವಾರಭವಿಷ್ಯ
Follow us
| Updated By: ಗಂಗಾಧರ​ ಬ. ಸಾಬೋಜಿ

Updated on: Sep 15, 2024 | 11:32 PM

ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ವಾರಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಸೆಪ್ಟೆಂಬರ್ 15ರಿಂದ 21ರ ತನಕ ವಾರಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.

ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1)

ಹೊಸತನಕ್ಕೆ ತುಡಿಯುತ್ತಿರುವವರಿಗೆ ಅತ್ಯುತ್ತಮವಾದ ವಾರ ಇದಾಗಿರಲಿದೆ. ಹಳೇ ಸಂಪ್ರದಾಯಗಳನ್ನು ಮುರಿಯುವಂಥ ಹಲವು ಯೋಜನೆಗಳನ್ನು ಅನುಷ್ಠಾನಕ್ಕೆ ತರಲಿದ್ದೀರಿ. ನಿಮ್ಮ ಬೆನ್ನಿಗೆ ನಿಂತವರ ನಿರೀಕ್ಷೆಗಳನ್ನು ಸಾಕಾರ ಮಾಡುವುದಕ್ಕೆ ಹೆಚ್ಚಿನ ಸಮಯವನ್ನು ಮೀಸಲಿಡಬೇಕಾಗುತ್ತದೆ. ನೀವು ಈಗಾಗಲೇ ನೀಡಿದಂಥ ಹಣವನ್ನು ವಾಪಸ್ ವಸೂಲಿ ಮಾಡುವುದಕ್ಕೆ ಹೆಚ್ಚಿನ ಪ್ರಯತ್ನವನ್ನು ಮಾಡಲಿದ್ದೀರಿ. ಯಾರು ಮನೆಯಲ್ಲಿನ ಶುಭ ಕಾರ್ಯಕ್ಕಾಗಿ ಸಾಲಕ್ಕೆ ಪ್ರಯತ್ನ ಮಾಡುತ್ತಿರುವಿರಿ ಅಂಥವರಿಗೆ ಹಣಕಾಸಿನ ಹೊಂದಾಣಿಕೆ ಮಾಡಿಕೊಳ್ಳುವುದಕ್ಕೆ ವಿವಿಧ ಮಾರ್ಗಗಳು ಗೋಚರ ಆಗಲಿವೆ. ಇನ್ನು ಉದ್ಯೋಗ ಸ್ಥಳದಲ್ಲಿ ಕೆಲವು ಬದಲಾವಣೆಗಳು ಆಗಲಿದ್ದು, ಒಂದು ಅಥವಾ ಎರಡು ಪ್ರಾಜೆಕ್ಟ್ ಗಳನ್ನು ಮುನ್ನಡೆಸುವುದಕ್ಕೆ ನಿಮ್ಮನ್ನು ಕೇಳಬಹುದು. ಯಾವುದೇ ಕೆಲಸಕ್ಕೆ ಸರಿಯಾದ ಯೋಜನೆಯನ್ನು ಮಾಡಿಕೊಂಡು ಮುಂದುವರಿಯಿರಿ. ಕೃಷಿಕರು ಕೆಲವು ಯಂತ್ರೋಪಕರಣಗಳನ್ನು ಖರೀದಿ ಮಾಡುವ ಬಗ್ಗೆ ಆಲೋಚನೆ ಮಾಡಲಿದ್ದೀರಿ. ಅಥವಾ ನಿಮ್ಮಲ್ಲಿ ಕೆಲವರು ಕೊಳ್ಳುವ ಅವಕಾಶವೇ ಕಾಣುತ್ತಿದೆ. ಆದರೆ ಇದಕ್ಕಾಗಿ ಸಾಲ ಮಾಡಲಿದ್ದೀರಿ. ಇದೇ ಕಾರಣಕ್ಕೆ ಕುಟುಂಬ ಸದಸ್ಯರು ಭಿನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸಬಹುದು. ಇದಕ್ಕೆ ನಿಮ್ಮ ಪ್ರತಿಕ್ರಿಯೆ ಹೇಳುತ್ತಿದ್ದೀರಿ ಅಂತಾದಲ್ಲಿ ಇತರರಿಗೆ ನೋವಾಗದಂತೆ ಹೇಳಿ. ವೃತ್ತಿನಿರತರು ವಿಚಿತ್ರ ಸನ್ನಿವೇಶದಲ್ಲಿ ಸಿಲುಕಿಕೊಳ್ಳಲಿದ್ದೀರಿ. ನೀವು ಮುಂದೆ ಏನು ಮಾಡಬೇಕು ಎಂದಿದ್ದೀರಿ ಅದನ್ನು ಹೇಳಿಕೊಂಡು ಬಿಡುತ್ತೀರಿ. ಅದರಲ್ಲಿ ತಮ್ಮನ್ನು ಸಹ ಸೇರಿಸಿಕೊಳ್ಳಿ ಎಂದು ದುಂಬಾಲು ಬೀಳಲಿದ್ದಾರೆ, ಮತ್ತೆ ಕೆಲವರು ನಿಮಗೆ ಬಹಳ ಆಪ್ತರಾದವರಿಂದ ಶಿಫಾರಸು ಸಹ ಮಾಡಿಸಬಹುದು. ನಿಮಗೆ ಅವರಿಗೆ ಬೇಡ ಎನ್ನಲೂ ಸಾಧ್ಯವಾಗದೆ, ಹೌದು ಎನ್ನಲಾಗದೆ ಕಸಿವಿಸಿಗೆ ಸಿಲುಕಿಕೊಳ್ಳುತ್ತೀರಿ. ವಿದ್ಯಾರ್ಥಿಗಳಿಗೆ ಮನೆಯಲ್ಲಿ ನಿರೀಕ್ಷಿತ ಮಟ್ಟದ ಬೆಂಬಲ ದೊರೆಯುವುದಿಲ್ಲ. ನೀವು ಸೇರಿಕೊಳ್ಳಬೇಕು ಎಂದಿರುವ ಕೋರ್ಸ್ ಗೆ ಅಥವಾ ಟ್ಯೂಷನ್ ಗೆ ಸೇರಿಕೊಳ್ಳುವುದಕ್ಕೆ ಪೋಷಕರಿಂದ ವಿರೋಧ ವ್ಯಕ್ತವಾಗಬಹುದು. ಇನ್ನು ಸ್ನೇಹಿತರಿಂದ ಅವಮಾನ ಆಗಬಹುದು. ಅದನ್ನು ಗಂಭೀರವಾಗಿ ತೆಗೆದುಕೊಳ್ಳಬೇಡಿ, ಇದು ಕೇವಲ ತಾತ್ಕಾಲಿಕವಾದ ಹಿನ್ನಡೆ ಮಾತ್ರ ಎಂಬುದನ್ನು ನೆನಪಿನಲ್ಲಿ ಇಟ್ಟುಕೊಳ್ಳಿ. ಮಹಿಳೆಯರಿಗೆ ಬೆನ್ನು ನೋವು, ಹಾರ್ಮೋನ್ ಸಮಸ್ಯೆ, ರಕ್ತಕ್ಕೆ ಸಂಬಂಧಿಸಿದ ತೊಂದರೆಗಳು, ಕಣ್ಣಿನ ಪೊರೆ ಇಂಥ ಅನಾರೋಗ್ಯ ಸಮಸ್ಯೆಗಳು ಕಾಡಬಹುದು. ಪ್ರಯಾಣಕ್ಕೆ ತೆರಳಬೇಕು ಎಂದಿರುವವರು ಸರಿಯಾದ ಸಿದ್ಧತೆ ಮಾಡಿಕೊಳ್ಳುವುದು ಮುಖ್ಯ. ಇಲ್ಲದಿದ್ದಲ್ಲಿ ಬಹಳ ಬೇಗ ವಾಪಸ್ ಬರಲೇಬೇಕಾದ ಸನ್ನಿವೇಶ ನಿರ್ಮಾಣ ಆಗುತ್ತದೆ.

ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2)

ಕೆಲವು ಅಪ್ ಡೇಟ್ ಗಳನ್ನು ಮಾಡಿಕೊಳ್ಳಲಿದ್ದೀರಿ. ನಿಮ್ಮ ಜೀವನದಲ್ಲಿ ಬಹಳ ಬದಲಾವಣೆಗಳನ್ನು ಮಾಡಿಕೊಳ್ಳಬೇಕು ಎನಿಸುವುದಕ್ಕೆ ಶುರು ಆಗುತ್ತದೆ. ಅದರ ಆರಂಭ ಹೀಗೂ ಆಗಬಹುದು; ಈಗ ಇರುವಂಥ ಕೆಲವು ಚಿನ್ನದ ಒಡವೆಗಳನ್ನು ವಾಪಸ್ ಕೊಟ್ಟು ಅಥವಾ ಕರಗಿಸಿ ಹೊಸದಾಗಿ ಬೇರೆ ಒಡವೆಗಳನ್ನು ಮಾಡಿಸಿಕೊಳ್ಳುವುದಕ್ಕೆ ತೀರ್ಮಾನ ಮಾಡಲಿದ್ದೀರಿ. ಇನ್ನು ನಿರ್ದಾಕ್ಷಿಣ್ಯವಾಗಿ ನೀವಾಡುವ ಮಾತುಗಳಿಂದ ಹಲವರಿಗೆ ಬೇಸರಕ್ಕೆ ಕಾರಣ ಆಗಬಹುದು. ಅದರಲ್ಲೂ ಸೈಟು ಖರೀದಿ, ಮನೆ ಕಟ್ಟುವ ವಿಚಾರಕ್ಕೆ ಸಂಗಾತಿಯ ಜತೆಗೆ ಮಾತಿಗೆ ಮಾತು ಬೆಳೆದು, ಮನಸ್ಸಿಗೆ ಹಿಂಸೆ ಆಗುತ್ತದೆ. ಮಕ್ಕಳ ಶಿಕ್ಷಣಕ್ಕೆ ಅಂತಲೇ ನೀವು ಕೂಡಿಟ್ಟಿದ್ದ ದುಡ್ಡನ್ನು ಬೇರೆ ಕಾರಣಕ್ಕೆ ಬಳಸಿಕೊಳ್ಳುವಂತಾಗಬಹುದು. ಇನ್ನು ಚೀಟಿಯಲ್ಲಿ ಹಣ ತೊಡಗಿಸಿರುವವರು ಅದನ್ನು ವಾಪಸ್ ಪಡೆದುಕೊಳ್ಳುವ ಅವಕಾಶ ಇದೆ. ಏನೇ ಭಿನ್ನಾಭಿಪ್ರಾಯ ಅಂತ ಇದ್ದರೂ ಸಣ್ಣ ಅಳತೆಯ ಸೈಟು ಖರೀದಿ ಮಾಡಬೇಕು ಎಂದು ಹುಡುಕಾಡುತ್ತಿರುವವರಿಗೆ ಮನಸ್ಸಿಗೆ ಮೆಚ್ಚುವಂಥ ಸ್ಥಳ ದೊರೆಯಲಿದ್ದು, ಈ ವಾರವೇ ಅಡ್ವಾನ್ಸ್ ಕೂಡ ಮಾಡುವಂಥ ಯೋಗ ಇದೆ. ಕೃಷಿಕರಿಗೆ ಅಂದುಕೊಂಡ ಸಮಯಕ್ಕೆ ಹಾಗೂ ಅಂದುಕೊಂಡ ರೀತಿಯಲ್ಲಿ ಸರ್ಕಾರದ ಕೆಲಸಗಳು ಮುಗಿಯದೆ ಬಹಳ ಒತ್ತಡ ಸೃಷ್ಟಿ ಆಗಲಿದೆ. ನಿಮಗೆ ಬಹಳ ಕೆಲಸ ಇದೆ ಎಂಬ ಕಾರಣಕ್ಕೆ ನೀವು ಇತರರಿಗೆ ವಹಿಸಿದ ಜವಾಬ್ದಾರಿಗಳನ್ನು ಸಹ ಒಮ್ಮೆ ಸಾದ್ಯಂತವಾಗಿ ಪರೀಕ್ಷೆ ಮಾಡಬೇಕಾದಂತಹ ಅಗತ್ಯ ಕಂಡುಬರಲಿದೆ. ನಿಮ್ಮದೇ ವೃತ್ತಿಯಲ್ಲಿ ಇರುವಂಥ ಸ್ನೇಹಿತರು ತಮ್ಮ ಕೆಲಸಗಳನ್ನು ಪೂರ್ತಿ ಮಾಡುವ ಸಲುವಾಗಿ ನಿಮ್ಮ ಹೆಸರನ್ನು ಹಾಗೂ ಪ್ರಭಾವವನ್ನು ಬಳಸಿಕೊಳ್ಳುವುದಕ್ಕೆ ಮುಂದಾಗಲಿದ್ದಾರೆ. ಏನನ್ನೂ ವಿಚಾರಿಸದೆ ನೀವು ಅವರಿಗೆ ಹೂಂ ಎನ್ನುವ ಮೊದಲಿಗೆ ಆ ಕೆಲಸ ಯಾವುದು ಎಂಬುದನ್ನು ಕೇಳಿ, ತಿಳಿದುಕೊಂಡು ಆ ನಂತರ ನಿಮ್ಮ ಅಭಿಪ್ರಾಯವನ್ನು ಹೇಳುವುದು ಒಳ್ಳೆಯದು. ಇಲ್ಲದಿದ್ದರೆ ನೀವು ಮುಜುಗರಕ್ಕೆ ಒಳಗಾಗಲಿದ್ದೀರಿ. ವೃತ್ತಿನಿರತರು ಇದ್ದಲ್ಲಿ ಯಾರು ನಿಮ್ಮ ಸಾಮರ್ಥ್ಯದ ಮೇಲೆ ಅನುಮಾನ ವ್ಯಕ್ತಪಡಿಸುತ್ತಾರೋ ಅವರೇ ನಿಮ್ಮ ಸಹಾಯವನ್ನು ಕೇಳಿಕೊಂಡು ಬರುವಂತಹ ಪರಿಸ್ಥಿತಿ ಉದ್ಭವಿಸಲಿದೆ. ಹಣಕಾಸಿನ ವಿಚಾರವಾಗಿ ಅಥವಾ ಆಸ್ತಿ ವಿಚಾರವಾಗಿ ತಂದೆಯೊಂದಿಗೆ ಅಥವಾ ತಂದೆ ಸಮಾನರಾದವರೊಂದಿಗೆ ಅಭಿಪ್ರಾಯ ಭೇದಗಳು ಅಥವಾ ಭಿನ್ನಾಭಿಪ್ರಾಯಗಳು ಕಾಣಿಸಿಕೊಳ್ಳಬಹುದು. ವಿದ್ಯಾರ್ಥಿಗಳು ಇತರರಿಗೆ ಸಹಾಯ ಮಾಡಲು ಹೋಗಿ ನೀವೇ ಸಮಸ್ಯೆಗೆ ಸಿಲುಕಿಕೊಳ್ಳಲಿದ್ದೀರಿ. ದೂರ ಪ್ರಯಾಣಕ್ಕಾಗಿ ಸಿದ್ಧತೆ ಮಾಡಿಕೊಳ್ಳಬೇಕಾಗುತ್ತದೆ. ಸೋಷಿಯಲ್ ಮೀಡಿಯಾಗಳಲ್ಲಿ ಇತರರ ವೈಯಕ್ತಿಕ ವಿಚಾರಗಳನ್ನು ಪೋಸ್ಟ್ ಮಾಡುವುದಕ್ಕೆ ಹೋಗಬೇಡಿ. ಮಹಿಳೆಯರಿಗೆ ಒಂದೇ ಸಮಯಕ್ಕೆ ಹಲವು ಕೆಲಸಗಳು ನಿಮ್ಮ ಮೈ ಮೇಲೆ ಬೀಳಲಿವೆ. ಒತ್ತಡದಲ್ಲಿ ನೀವು ತೆಗೆದುಕೊಂಡ ತೀರ್ಮಾನಗಳು ಕೆಲವು ಬೂಮ್ ರಾಂಗ್ ಆಗಬಹುದು.

ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3)

ಸರಿ- ತಪ್ಪುಗಳ ವಿವೇಚನೆ ಶುರುವಾಗುತ್ತದೆ. ದಿಢೀರನೇ ಜ್ಞಾನೋದಯ ಆದಂತೆ ನಿಮಗೆ ಅನಿಸುವುದಕ್ಕೆ ಶುರುವಾಗುತ್ತದೆ. ಇನ್ನು ಇದೇ ವೇಳೆ ನಿಮ್ಮ ಬೆನ್ನ ಹಿಂದೆ ಹಗುರವಾಗಿ ಮಾತನಾಡುತ್ತಿದ್ದವರ ಬಣ್ಣ ಕಳಚಲಿದೆ. ಯಾವುದಾದರೂ ಕೆಲಸಕ್ಕೆ ಈಗಾಗಲೇ ದುಡ್ಡು ನೀಡಿಯಾಗಿದೆ, ಆದರೆ ಈಗ ಮಾಡಿಕೊಡುತ್ತೇನೆ, ಆಗ ಮಾಡಿಕೊಡುತ್ತೇನೆ ಎಂದು ಆಟವಾಡಿಸುತ್ತಿದ್ದಲ್ಲಿ ಈ ವಾರ ಅದನ್ನು ಹಿಂಪಡೆಯುವುದಕ್ಕೆ ಸಂಬಂಧಿಸಿದಂತೆ ಪ್ರಭಾವಶಾಲಿಯೊಬ್ಬರು ನಿಮ್ಮ ಬೆನ್ನಿಗೆ ನಿಲ್ಲಲಿದ್ದಾರೆ. ಖಡಾಖಂಡಿತವಾಗಿ ವಸೂಲಿ ಮಾಡುವ ನಿಟ್ಟಿನಲ್ಲಿ ಗಟ್ಟಿಯಾದ ಧ್ವನಿಯಲ್ಲೂ ಹಣವನ್ನು ಕೇಳುವ ಸ್ಥಿತಿಯಲ್ಲಿ ನೀವು ಇರಲಿದ್ದೀರಿ. ದೊಡ್ಡ ಯೋಜನೆಗಳನ್ನು ವಹಿಸಿಕೊಳ್ಳುವ ಅವಕಾಶ ಬಂದಲ್ಲಿ ಯಾವುದಕ್ಕೂ ಅಂಜದೆ ಒಪ್ಪಿಕೊಳ್ಳಿ, ಇದರಿಂದ ನಿಮಗೆ ಖಂಡಿತಾ ಅನುಕೂಲ ಆಗಲಿದೆ. ಕೃಷಿಕರಿಗೆ ನಿಂತು ಹೋಗಿದ್ದ ಕೆಲಸ- ಕಾರ್ಯಗಳಿಗೆ ಚಾಲನೆ ದೊರೆಯಲಿದೆ. ಅಷ್ಟೇ ಅಲ್ಲ, ವೇಗ ಕೂಡ ಸಿಗಲಿದೆ. ನೀವು ನಿರೀಕ್ಷೆ ಮಾಡದ ರೀತಿಯಲ್ಲಿ ಕೆಲವರು ನಿಮಗೆ ಬೆಂಬಲ ನೀಡಲಿದ್ದಾರೆ. ಮನೆ ನಿರ್ಮಾಣಕ್ಕಾಗಿ ಸೈಟು- ನಿಮ್ಮ ಜಮೀನಿಗೆ ಹೊಂದಿಕೊಂಡಂತೆ ಇರುವ ಕೃಷಿ ಜಮೀನು ಖರೀದಿ ಮಾಡುವುದಕ್ಕೆ ಪ್ರಯತ್ನವನ್ನು ಮಾಡುತ್ತಿದ್ದಲ್ಲಿ ಮನಸ್ಸಿಗೆ ಒಪ್ಪುವಂಥದ್ದು ದೊರೆಯುವ ಯೋಗ ಇದೆ. ಈ ವಾರ ನಿಮ್ಮ ಕಿವಿಗಳನ್ನು ತೆರೆದಿರಿ, ಸಾಧ್ಯವಾದಷ್ಟೂ ಕಡಿಮೆ ಮಾತನಾಡಿದರೆ ಉತ್ತಮ. ಏಕೆಂದರೆ ನಿಮ್ಮ ಕಿವಿಗೆ ಬೀಳುವ ಮಾತುಗಳಿಂದ ಅವಕಾಶಗಳು ತೆರೆದುಕೊಳ್ಳುತ್ತವೆ. ಲಾಭ ಆಗುತ್ತದೆ. ವೃತ್ತಿನಿರತರಿಗೆ ಈ ಹಿಂದೆ ನೀವು ಮಾಡಿದ ಸಹಾಯ, ನೀಡಿದ ಸಲಹೆ- ಸೂಚನೆಗಳಿಂದ ಲಾಭವಾದಂಥವರು ಈಗ ಮತ್ತೆ ನಿಮ್ಮನ್ನು ಹುಡುಕಿಕೊಂಡು ಬಂದು, ಕೆಲವು ಕೆಲಸಗಳನ್ನು ನೀಡಲಿದ್ದಾರೆ. ವಾಹನ ಖರೀದಿ ಮಾಡಬೇಕು ಎಂಬ ಕಾರಣಕ್ಕೆ ಹಣಕಾಸಿಗೆ ಪ್ರಯತ್ನ ಮಾಡುತ್ತಿದ್ದಲ್ಲಿ ಅದು ಒದಗಿ ಬರುವ ಸಾಧ್ಯತೆ ಇದೆ. ನೀವು ತೆಗೆದುಕೊಂಡ ಕೆಲವು ನಿರ್ಧಾರಗಳು ತಕ್ಷಣವೇ ಫಲ ನೀಡುವುದಕ್ಕೆ ಆರಂಭಿಸಲಿವೆ. ಈ ವಾರದ ಮಟ್ಟಿಗೆ ನಿಮಗೆ ನೀಡುವಂಥ ಎಚ್ಚರಿಕೆ ಏನೆಂದರೆ, ನಿಮಗೆ ಸಣ್ಣ- ಪುಟ್ಟ ಅನಾರೋಗ್ಯ ಎಂದು ನಿರ್ಲಕ್ಷ್ಯ ಮಾಡುವುದು ಸರಿಯಲ್ಲ. ಕೂಡಲೇ ವೈದ್ಯರನ್ನು ಭೇಟಿ ಮಾಡಿ. ವಿದ್ಯಾರ್ಥಿಗಳು ಮನೆಯಲ್ಲಿ ತಮ್ಮ ಮೇಲೆ ನಂಬಿಕೆ ಉಳಿಸಿಕೊಳ್ಳುವುದು ಹರಸಾಹಸ ಆಗಲಿದೆ. ಸಾಧ್ಯವಾದಷ್ಟೂ ಪಾರದರ್ಶಕವಾಗಿ ನಡೆದುಕೊಳ್ಳಿ. ಅನುಮಾನಗಳನ್ನು ಪರಿಹರಿಸುವ ರೀತಿಯಲ್ಲಿ ಉತ್ತರವನ್ನು ನೀಡಿ. ಮಹಿಳೆಯರು ಖಾಸಗಿ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದಲ್ಲಿ ಹೆಚ್ಚಿನ ಜವಾಬ್ದಾರಿಗಳು ಹೆಗಲೇರಲಿವೆ. ನಿಮ್ಮಲ್ಲಿ ಕೆಲವರಿಗೆ ಪದೋನ್ನತಿ ಆಗುವ ಬಗ್ಗೆ ಸುಳಿವು ಕೂಡ ದೊರೆಯಬಹುದು.

ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4)

ಕುಟುಂಬದವರಿಗೆ ಅವರ ಬೇಡಿಕೆ ಈಡೇರಿಸುವುದಕ್ಕೆ ತೀರ್ಮಾನ ಮಾಡಲಿದ್ದೀರಿ. ಖರ್ಚಿಗೆ ನೀವೇ ದಾರಿ ಮಾಡಿಕೊಳ್ಳಲಿದ್ದೀರಿ. ಆದರೆ ಇದರಿಂದ ನಿಮ್ಮ ಮನಸಿಗೆ ದುಃಖವೇನೂ ಆಗುವುದಿಲ್ಲ. ಮನೆಗೆ ವಿಲಾಸಿ ವಸ್ತುಗಳನ್ನು ಖರೀದಿಸುವಂಥ ಯೋಗ ಈ ವಾರ ನಿಮಗೆ ಇದೆ. ನಿಮ್ಮಲ್ಲಿ ಕೆಲವರು ಮನೆಗೆ ಅಗತ್ಯ ಎಂಬ ಕಾರಣಕ್ಕೆ ಹೆಚ್ಚುವರಿ ಕೋಣೆಗಳ ನಿರ್ಮಾಣಕ್ಕೆ ಮುಂದಾಗಬಹುದು. ಅದರಲ್ಲೂ ಮಕ್ಕಳ ಸಲುವಾಗಿ ಕೆಲವು ಅನುಕೂಲಗಳನ್ನು ಮಾಡಿಕೊಡಲಿದ್ದೀರಿ. ಮೂರನೇ ವ್ಯಕ್ತಿಯ ಮಧ್ಯಪ್ರವೇಶದಿಂದ ಇಷ್ಟು ಕಾಲ ನಿಮಗೆ ಆಪ್ತರಾಗಿದ್ದವರ ಜತೆಗೆ ಇದ್ದ ಅಭಿಪ್ರಾಯ ಭೇದಗಳು ನಿವಾರಣೆ ಆಗುವಂಥ ಅವಕಾಶಗಳು ಇವೆ. ಆದ್ದರಿಂದ ಮಾತುಕತೆ ಮೂಲಕ ಸಮಸ್ಯೆಗಳನ್ನು ನಿವಾರಣೆ ಮಾಡಿಕೊಳ್ಳಬಹುದು. ಯಾವುದನ್ನೂ ಸಣ್ಣ- ಪುಟ್ಟ ವಿಚಾರಗಳು ಎಂದು ನೀವು ನಿರ್ಲಕ್ಷ್ಯ ಮಾಡುವುದಕ್ಕೆ ಹೋಗಬೇಡಿ. ನಿಮ್ಮ ಪಾಲಿನ ಜವಾಬ್ದಾರಿಯನ್ನು ಬೇರೆಯವರಿಗೆ ವರ್ಗಾವಣೆ ಮಾಡುವುದಕ್ಕೆ ಹೋಗಬೇಡಿ. ಖಾಸಗಿ ಕಂಪನಿಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವವರಿಗೆ ಹೊಸ ಪ್ರಾಜೆಕ್ಟ್ ನಲ್ಲಿ ಪ್ರಮುಖ ಜವಾಬ್ದಾರಿ ವಹಿಸುವ ಅವಕಾಶಗಳಿವೆ. ಕೃಷಿಕರಿಗೆ ಜಮೀನು- ಭೂಮಿಗೆ ಸಂಬಂಧಿಸಿದಂತೆ ನೀವು ಅಂದುಕೊಂಡ ಮೊತ್ತಕ್ಕೆ, ನಿರೀಕ್ಷೆ ಮಾಡಿದ್ದ ರೀತಿಯಲ್ಲಿ ಸಮಯಕ್ಕೆ ವ್ಯವಹಾರ ಇತ್ಯರ್ಥ ಮಾಡುವುದಕ್ಕೆ ಸಾಧ್ಯವಾಗದೇ ಹೋಗಬಹುದು. ಇನ್ನು ಇತ್ತೀಚೆಗಷ್ಟೇ ಹೊಸದಾಗಿ ಪರಿಚಯ ಆದವರ ಮೇಲೆ ಹಣಕಾಸು ವಿಚಾರಕ್ಕೆ ಸಂಬಂಧಿಸಿದಂತೆ ವಿಪರೀತವಾದ ಅವಲಂಬನೆ ಬೇಡ. ಅದು ಯಾವುದೇ ವಿಷಯ ಇರಬಹುದು, ನಿಮಗೆ ಗೊತ್ತಿಲ್ಲ ಎಂದಾದಲ್ಲಿ ಅನುಭವಿಗಳು, ಹಿರಿಯರ ಮಾರ್ಗದರ್ಶನವನ್ನು ಪಡೆದುಕೊಳ್ಳುವುದು ಉತ್ತಮ. ವೃತ್ತಿನಿರತರು ಆತ್ಮಗೌರವಕ್ಕೆ ಪೆಟ್ಟು ಬೀಳುವಂತಹ ಮಾತುಗಳನ್ನು ಕೇಳಿಸಿಕೊಳ್ಳಬೇಕಾಗುತ್ತದೆ. ನಿಮಗೆ ಆಹ್ವಾನ ಇಲ್ಲ ಎಂದ ಕಡೆ ಯಾವುದೇ ಕಾರಣಕ್ಕೂ ಹೋಗಬೇಡಿ. ನೀವು ನೀಡಿದ ಮಾಹಿತಿ ಅಥವಾ ಸಲಹೆಯನ್ನು ಬಳಸಿಕೊಂಡು ಕೆಲವರು ಲಾಭ ಮಾಡಿಕೊಳ್ಳಲಿದ್ದಾರೆ. ಆದ್ದರಿಂದ ನಿಮ್ಮ ತಲೆಯಲ್ಲಿ ಆಲೋಚನೆಯ ಮಟ್ಟದಲ್ಲಿ ಇರುವಂಥದ್ದನ್ನು ಇತರರೊಂದಿಗೆ ಹಂಚಿಕೊಳ್ಳಬೇಡಿ. ಹೀಗೆ ಮಾಡಿದಲ್ಲಿ ನಿಮಗೆ ಸಿಗಬೇಕಾದ ಯಶಸ್ಸಿನ ಪಾಲು ಇತರರಿಗೆ ಸಿಗಲಿದೆ. ವಿದ್ಯಾರ್ಥಿಗಳು ನಿಮ್ಮ ಸಾಮರ್ಥ್ಯ ಮತ್ತು ಮಿತಿ ಎರಡನ್ನೂ ಅರಿತಲ್ಲಿ ಒಳ್ಳೆಯದು. ನಿಮಗೆ ಮಾಡಲು ಆಗದಂತಹ ಕೆಲಸಗಳನ್ನು ಸಹ ಯಾವುದಾದರೂ ಕಾರಣಗಳಿಂದಾಗಿ ಒಪ್ಪಿಕೊಂಡು ಬಿಟ್ಟರೆ ಅವಮಾನದ ಪಾಲಾಗುವ ಸಾಧ್ಯತೆಗಳಿವೆ. ಮಹಿಳೆಯರು ಎಲ್ಲರನ್ನೂ ಒಪ್ಪಿಸಿಯೇ ನಿರ್ಧಾರ ಕೈಗೊಳ್ಳುತ್ತೀನಿ ಎಂಬ ನಿಮ್ಮ ಪ್ರಯತ್ನ ಪೂರ್ಣ ಪ್ರಮಾಣದಲ್ಲಿ ಕೈಗೂಡುವುದಿಲ್ಲ. ನೀವು ಒಪ್ಪಿಕೊಂಡ ಕೆಲಸದಲ್ಲೋ ಅಥವಾ ಮಾಡುತ್ತಿರುವ ಕಾರ್ಯದಲ್ಲೋ ಲಾಭದ ಪ್ರಮಾಣ ನಿಮಗೆ ಹೆಚ್ಚಿಗೆ ಸಿಗಲಿದೆ ಎಂಬ ಆರೋಪ ಅಥವಾ ಗುಮಾನಿಗಳು ಕೇಳಿಸಿಕೊಳ್ಳಬೇಕಾಗುತ್ತದೆ.

ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5)

ಯಾರನ್ನು ಹೇಗೆ ಸಂಭಾಳಿಸಬೇಕು ಎಂದು ತಲೆ ಕೆಡಿಸಿಕೊಳ್ಳುವಂತಾಗುತ್ತದೆ. ಒಂದು ರೀತಿಯಲ್ಲಿ ಮನಸ್ಸಿಗೆ ಮಂಕು ಬಡಿದಂತೆ ಅನಿಸಲಿದೆ. ನೀವು ಗಮನ ನೀಡಬೇಕಾದ ಸಂಗತಿಗಳು ಹಲವು ಇವೆ. ಅದರಲ್ಲೂ ನಿಮ್ಮಲ್ಲಿ ಕೆಲವರು ಈಗಾಗಲೇ ಯಾವುದಾದರೂ ದೇವರಿಗೆ ಹರಕೆ ಹೊತ್ತುಕೊಂಡಿದ್ದಲ್ಲಿ ಅದನ್ನು ಪೂರೈಸಿಲ್ಲ ಎಂದಾದರೆ ಈ ವಾರ ಕಡ್ಡಾಯವಾಗಿ ಅದನ್ನು ಪೂರೈಸುವ ಕಡೆಗೆ ಗಮನವನ್ನು ನೀಡಿ. ನಿಮಗೆ ಅರಿವೇ ಇಲ್ಲದಂತೆ ಸಿಟ್ಟು ತುಂಬಾ ಜಾಸ್ತಿಯಾಗಿದೆ. ತುಂಬಾ ಸರಳವಾಗಿಯೇ ಮೇಲ್ನೋಟಕ್ಕೆ ಕಾಣುವಂತಹ ಸಂಗತಿಗಳಲ್ಲೂ ಏನೇನೋ ತಪ್ಪುಗಳು ಕಾಣುವುದಕ್ಕೆ ಆರಂಭವಾಗುತ್ತದೆ. ಆಪ್ತರು ನಿಮ್ಮ ಒಳಿತನ್ನೇ ಬಯಸುವವರು ಹೇಳುವ ಮಾತುಗಳನ್ನು ಕಿವಿ ಕೊಟ್ಟು ಕೇಳಿಸಿಕೊಳ್ಳಿ. ಅದರ ಹಿಂದೆ ಏನೋ ಲಾಭವಿದೆ, ಆ ಕಾರಣಕ್ಕೆ ಅವರು ಹೇಳುತ್ತಿದ್ದಾರೆ ಈ ರೀತಿಯಾಗಿ ಆಲೋಚನೆ ಮಾಡುವುದಕ್ಕೆ ಹೋಗಬೇಡಿ. ಯಾವುದೇ ಮುಖ್ಯವಾದ ಕೆಲಸಗಳಿಗೆ ತೆರಳುವ ಮುನ್ನ ಮನಸ್ಸಿನಲ್ಲಿ ಗಣಪತಿಯನ್ನು ಸ್ಮರಿಸಿ. ಕೃಷಿಕರಾಗಿದ್ದಲ್ಲಿ ಸೆಕೆಂಡ್ ಹ್ಯಾಂಡ್ ವಾಹನಗಳನ್ನು ಖರೀದಿ ಮಾಡಬೇಕು ಎಂದಿದ್ದರೆ ದಯವಿಟ್ಟು ಅದನ್ನು ಕೈ ಬಿಡುವುದು ಉತ್ತಮ. ಬಹಳ ಕಡಿಮೆ ಮೊತ್ತಕ್ಕೆ ಸಿಗುತ್ತಿದೆ, ಅದನ್ನು ಈಗ ಬಿಟ್ಟರೆ ಮತ್ತೆ ಸಿಗುವುದಿಲ್ಲ ಎಂದುಕೊಂಡು ಒಂದು ವೇಳೆ ಸೆಕೆಂಡ್ ಹ್ಯಾಂಡ್ ವಾಹನವನ್ನೇ ಖರೀದಿ ಮಾಡಿದಲ್ಲಿ ಅದರ ದುರಸ್ತಿಗಾಗಿಯೇ ಸಿಕ್ಕಾಪಟ್ಟೆ ಖರ್ಚು ಮಾಡಲಿದ್ದೀರಿ. ನಿಮ್ಮ ದೂರದ ಸಂಬಂಧಿಗಳು ಸಾಲವನ್ನು ಕೇಳಿಕೊಳ್ಳುವ ಸಾಧ್ಯತೆಗಳಿವೆ. ಈ ವಿಚಾರದಲ್ಲಿ ಸರಿಯಾದ ತೀರ್ಮಾನವನ್ನು ತೆಗೆದುಕೊಳ್ಳುವುದು ಮುಖ್ಯವಾಗುತ್ತದೆ. ವೃತ್ತಿಪರರಿಗೆ ಸುಖಾ ಸುಮ್ಮನೆ ಖರ್ಚುಗಳು ಮೈಮೇಲೆ ಬರಲಿವೆ. ನಿಮ್ಮ ವೃತ್ತಿಗೆ ಅನುಕೂಲ ಆಗಲಿ ಎಂದುಕೊಂಡು ಖರೀದಿ ಮಾಡಿದ್ದ ಸಲಕರಣೆಗಳಿಂದ ನಷ್ಟವನ್ನು ಅನುಭವಿಸಲಿದ್ದೀರಿ. ಈಗಿರುವ ಕಚೇರಿಯಿಂದ ಬೇರೆಯದಕ್ಕೆ ಬದಲಾವಣೆ ಮಾಡಬೇಕು ಅಂದುಕೊಂಡಿರುವವರು ಕೊನೆ ಕ್ಷಣದಲ್ಲಿ ಬೇಡ ಅಂದುಕೊಳ್ಳುವ ಸಾಧ್ಯತೆಗಳಿವೆ. ನಿಮ್ಮ ಯಾವುದೇ ತೀರ್ಮಾನದಲ್ಲಿ ಗೊಂದಲಗಳು ಎದ್ದು ಕಾಣಲಿವೆ. ವಿದ್ಯಾರ್ಥಿಗಳು ತಮ್ಮ ಸಹಪಾಠಿಗಳಿಂದಲೇ ನಾನಾ ಬಗೆಯಲ್ಲಿ ಆರೋಪಗಳನ್ನು ಎದುರಿಸಬೇಕಾಗುತ್ತದೆ. ನಿಮ್ಮದು ಯಾವುದೇ ತಪ್ಪಿಲ್ಲ ಎಂಬುದನ್ನು ಸಾಬೀತು ಮಾಡಿಕೊಳ್ಳುವುದರಲ್ಲಿ ಹೈರಾಣಗಳಿದ್ದೀರಿ. ಸಣ್ಣ ಸಣ್ಣ ಸಂಗತಿಗಳು ಎಂದುಕೊಂಡು ನೀವು ನಿರ್ಲಕ್ಷ್ಯ ಮಾಡಿದಂತಹ ವಿಚಾರಗಳು ಸಮಸ್ಯೆಗಳನ್ನು ತಂದಿಡಲಿವೆ. ಯುವತಿಯರಿಗೆ ಪ್ರೀತಿ ಪ್ರೇಮದ ವಿಚಾರದಲ್ಲಿ ನಿರಾಸೆ ಆಗಬಹುದು. ನೀವು ಪ್ರೀತಿಸಿದ ವ್ಯಕ್ತಿಯು ಕೊಟ್ಟ ಮಾತಿನಂತೆ ನಡೆದುಕೊಳ್ಳದೆ ಬೇಸರಕ್ಕೆ ಕಾರಣರಾಗಲಿದ್ದಾರೆ. ಈ ಸಿಟ್ಟಿನ ಕಾರಣಕ್ಕೆ ಅವರ ಬಗ್ಗೆ ಎಲ್ಲಾ ಕಡೆ ನಕಾರಾತ್ಮಕವಾಗಿ ಹೇಳಿಕೊಂಡು ಬರುವಂತಹ ಕೆಲಸ ಮಾತ್ರ ಮಾಡಬೇಡಿ. ಏಕೆಂದರೆ ಈ ವಾರ ಕಳೆದ ನಂತರ ಸಂಬಂಧ ಮತ್ತೆ ಸರಿ ಹೋಗುವ ಸಾಧ್ಯತೆಗಳು ಇವೆ.

ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6)

ಒಂದು ಕೆಲಸಕ್ಕೆ ವಿಪರೀತ ಹೆಸರು- ಗೌರವವನ್ನು ನಿರೀಕ್ಷಿಸದಿರುವುದು ಉತ್ತಮ. ನಿಮ್ಮಲ್ಲಿ ಕೆಲವರಿಗೆ ಈ ವಾರ ಮೇಲರಿಮೆಗೆ ಪೆಟ್ಟು ಬೀಳುವಂತಹ ಬೆಳವಣಿಗೆಗಳು ಆಗಲಿವೆ. ಈ ಮುಂಚೆಯೆಲ್ಲ ನಿಮ್ಮ ಮಾತಿಗೆ ಗೌರವ ನೀಡುತ್ತಿದ್ದವರು ಹಾಗೂ ತಕ್ಷಣವೇ ಅದನ್ನು ಮಾಡುತ್ತಿದ್ದವರು ನಿರ್ಲಕ್ಷ್ಯ ಮಾಡುತ್ತಿದ್ದಾರೆ ಎಂಬುದು ಬಲವಾಗಿ ಅನಿಸುತ್ತದೆ. ಎಲ್ಲವೂ ಸರಿಯಾಗಿದೆ ಎಂದು ಇಷ್ಟು ಸಮಯ ನೀವು ಭ್ರಮೆಯಲ್ಲಿ ಇದ್ದಿರೇನೋ ಎಂದೆನಿಸುವುದಕ್ಕೆ ಶುರು ಆಗುತ್ತದೆ. ಇದೇ ವೇಳೆ ಉದ್ಯೋಗ ಸ್ಥಳದಲ್ಲಿ ವಿರೋಧಿಗಳ ಸಮಸ್ಯೆ ಹೆಚ್ಚಾಗುವ ಸಾಧ್ಯತೆಗಳಿವೆ. ಅದಕ್ಕೆ ತಕ್ಕಂತೆ ನಿಮ್ಮದೇ ಅಜಾಗರೂಕತೆಯಿಂದ ಕೆಲವು ತಪ್ಪುಗಳು ಸಹ ಆಗಬಹುದು. ಈ ವಾರ ನೀವು ಕೆಲಸಕ್ಕೆ ತೆರಳುವ ಸ್ಥಳದಲ್ಲಿ ಪದೇ ಪದೇ ಅನುಮತಿ ಪಡೆದು, ಬೇಗ ಮನೆಗೆ ತೆರಳುವುದು ಅಥವಾ ತಡವಾಗಿ ಕೆಲಸಕ್ಕೆ ಹೋಗುವುದು ಮಾಡಬೇಡಿ. ಇದರಿಂದ ನಿಮ್ಮ ವರ್ಚಸ್ಸಿಗೆ ಸಮಸ್ಯೆ ಆಗಲಿದೆ. ಅದರ ಹೊರತಾಗಿಯೂ ಕೆಲವು ಸವಾಲುಗಳನ್ನು ಎದುರಿಸಬೇಕಾಗುತ್ತದೆ. ದಿಢೀರನೇ ಕಾಣಿಸಿಕೊಳ್ಳುವ ಆರೋಗ್ಯ ಸಮಸ್ಯೆಗಳಿಗಾಗಿ ಹಣವನ್ನು ಖರ್ಚು ಮಾಡಬೇಕಾಗುತ್ತದೆ. ಇದಕ್ಕಾಗಿಯೇ ಸಾಲ ಮಾಡಬೇಕಾದ ಸನ್ನಿವೇಶ ಸಹ ಎದುರಾಗಬಹುದು. ಆದ್ದರಿಂದ ಈ ಸಮಯದಲ್ಲಿ ಆರೋಗ್ಯಕರ ಅಭ್ಯಾಸಗಳನ್ನು ಅಳವಡಿಸಿಕೊಳ್ಳಬೇಕಾಗುತ್ತದೆ. ಸಣ್ಣ- ಪುಟ್ಟ ಅನಾರೋಗ್ಯ ಸಮಸ್ಯೆ ಎಂದು ನಿರ್ಲಕ್ಷ್ಯ ಮಾಡದೆ ವೈದ್ಯಕೀಯ ಚಿಕಿತ್ಸೆಯನ್ನು ಪಡೆದುಕೊಳ್ಳಬೇಕು. ದೈನಂದಿನ ದಿನಚರಿ ಮತ್ತು ಕೆಲಸಕ್ಕೆ ಸಂಬಂಧಿಸಿದ ವಿಷಯಗಳಿಗೆ ಹೆಚ್ಚಿನ ಆದ್ಯತೆಯನ್ನು ನೀಡಬೇಕು. ಹೊಸ ಉದ್ಯೋಗಾವಕಾಶಗಳು, ಬಡ್ತಿಗಳು ಅಥವಾ ಮಾಡುವ ಕೆಲಸದಲ್ಲಿ ಹಾಕುವ ಪ್ರಯತ್ನಗಳಿಗೆ ನಿರೀಕ್ಷಿತವಾದ ಫಲಿತಾಂಶ ದೊರೆಯುವುದು ಕಷ್ಟ. ಕೃಷಿಕರು ಹೊಸ ಕೌಶಲಗಳನ್ನು ಅಳವಡಿಸಿಕೊಳ್ಳುವ ಕಡೆಗೆ ನಿಗಾ ಕೊಡಬೇಕು. ಹೆಚ್ಚಿನ ಕೆಲಸದ ಹೊರೆ ಇರುತ್ತದೆ. ಬಾಕಿ ಬರಬೇಕಾದ ಹಣ ಇದ್ದಲ್ಲಿ ಅದು ಬರುವಂಥ ಅವಕಾಶಗಳಿವೆ. ಆದರೆ ಅದಕ್ಕಾಗಿ ಬಲವಾದ ಪ್ರಯತ್ನ ಹಾಕಬೇಕು. ವೃತ್ತಿನಿರತರಿಗೆ ತಮ್ಮ ಜತೆಗೆ ಕೆಲಸ ಮಾಡುವವರ ಜತೆಗೆ ಘರ್ಷಣೆಗಳು ಏರ್ಪಡುವ ಸಾಧ್ಯತೆ ಇದೆ ಹೀಗಾಗದಂತೆ ಎಚ್ಚರಿಕೆಯನ್ನು ವಹಿಸುವುದು ಮುಖ್ಯ. ವ್ಯವಹಾರ ವಿಸ್ತರಣೆಗಾಗಿ ಪ್ರಯತ್ನ ಮಾಡುವುದಿದ್ದಲ್ಲಿ ಸಾಲ ಪಡೆಯುವುದು, ಸಾಲ ನೀಡುವುದು ಎರಡರಿಂದಲೂ ಒಂದಲ್ಲ ಒಂದು ಸಮಸ್ಯೆಗಳು ಕಾಡಲಿದೆ. ಆದ್ದರಿಂದ ಈ ಬಗ್ಗೆ ಎಚ್ಚರಿಕೆಯಿಂದ ಇರುವುದು ಮುಖ್ಯ. ವಿದ್ಯಾರ್ಥಿಗಳು ಎಜುಕೇಷನ್ ಲೋನ್ ಗಾಗಿ ಬ್ಯಾಂಕ್ ಗಳಲ್ಲಿ ಪ್ರಯತ್ನ ಪಡುತ್ತಿದ್ದಲ್ಲಿ ಅದರಲ್ಲಿ ಯಶ ಕಾಣಲಿದ್ದೀರಿ. ಉನ್ನತ ಹುದ್ದೆಯಲ್ಲಿ ಇರುವಂಥವರು ನಿಮ್ಮ ನೆರವಿಗೆ ಬರಲಿದ್ದಾರೆ. ಮಹಿಳೆಯರು ರಾಜಕಾರಣದಲ್ಲಿ ಇರುವಂಥವರಾಗಿದ್ದರೆ ಸ್ಥಾನ- ಮಾನಗಳು ಹೆಚ್ಚಾಗಲಿವೆ. ಇದರಿಂದ ನಿಮ್ಮ ಆತ್ಮವಿಶ್ವಾಸ ಜಾಸ್ತಿ ಆಗಲಿದ್ದು, ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಲಿದ್ದೀರಿ.

ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7)

ಹಣಕಾಸಿನ ವಿಚಾರದಲ್ಲಿ ಒತ್ತಡ ಕಡಿಮೆ ಆಗುವುದಕ್ಕೆ ಅವಕಾಶ ಇದ್ದು, ಒಂದು ವೇಳೆ ನೀವೇನಾದರೂ ಕೃಷಿ ಜಮೀನು, ಮನೆ ಮಾರಾಟ ಅಥವಾ ಆಸ್ತಿ ಮಾರಾಟ ಅಂತ ಮಾಡುತ್ತಾ ಇದ್ದಲ್ಲಿ ನಂತರ ಮುಂದೇನು ಮಾಡಬೇಕು ಎಂಬ ಬಗ್ಗೆ ಸರಿಯಾಗಿ ಆಲೋಚಿಸುವುದು ಮುಖ್ಯವಾಗುತ್ತದೆ. ನಿಮ್ಮ ಆತ್ಮವಿಶ್ವಾಸ ವಿಪರೀತ ಹೆಚ್ಚಾಗಿರುತ್ತದೆ. ಇದೇ ವೇಳೆ ನೀವು ಅಂದುಕೊಂಡಂತೆಯೇ ಕೆಲವು ಕೆಲಸಗಳು ಸಹ ಆಗಲಿವೆ. ಆ ಕಾರಣದಿಂದಾಗಿ ಬೇರೆಯವರು ಆಲೋಚಿಸುವುದಕ್ಕೂ ಒಂದು ಕ್ಷಣ ಚಿಂತಿಸುವ ವಿಚಾರವನ್ನು ಈ ವಾರ ನೀವು ಪ್ರಯತ್ನವೇ ಮಾಡುವುದಕ್ಕೆ ನಿರ್ಧಾರ ಮಾಡಲಿದ್ದೀರಿ. ಅದು ಶಿಕ್ಷಣ ಇರಬಹುದು, ಉದ್ಯೋಗ, ವ್ಯವಹಾರ ಅಥವಾ ವ್ಯಾಪಾರ, ಕೊನೆಗೆ ಪ್ರೀತಿ- ಪ್ರೇಮವೇ ಇರಬಹುದು. ಇತರರು ಸವಾಲು ಎಂಬ ಭಾವಿಸುವಂಥದ್ದನ್ನು ನೀವು ಧೈರ್ಯವಾಗಿ ಮಾಡಲಿದ್ದೀರಿ. ಗಟ್ಟಿ ಧ್ವನಿಯಲ್ಲಿ ನಿಮಗೆ ಅನಿಸಿದ್ದನ್ನು ಹೇಳಲಿದ್ದೀರಿ. ಈ ಎಲ್ಲದರ ಕಾರಣಕ್ಕಾಗಿ ಒತ್ತಡವು ಅನುಭವಕ್ಕೆ ಬರಲಿದೆ. ನಿಮ್ಮ ಕುಟುಂಬದೊಳಗೆ ಭಾವನಾತ್ಮಕ ವಿಚಾರಗಳು ಮುನ್ನೆಲೆಗೆ ಬರಲಿದೆ. ಕೆಲವು ಸಂಗತಿಗಳಲ್ಲಿ ಹೌದು ಅಥವಾ ಇಲ್ಲ ಎಂಬುದನ್ನು ನಿಂತ ನಿಲುವಿನಲ್ಲೇ ಹೇಳಬೇಕು ಎಂದು ಕೇಳಬಹುದು. ಹಣದ ವಿಚಾರಕ್ಕಾಗಿ ನಿಮ್ಮ ಮನಸ್ಸಿಗೆ ಬೇಸರ ಆಗುವಂಥ ಕೆಲವು ಮಾತುಗಳು ಕೇಳಿಸಿಕೊಳ್ಳಬೇಕಾಗುತ್ತದೆ. ನಿಮ್ಮಲ್ಲಿ ಕೆಲವರಿಗೆ ಹೊಸ ಪ್ರಾಜೆಕ್ಟ್ ಆರಂಭಿಸುವ ಬಗ್ಗೆ ಮುಖ್ಯ ವ್ಯಕ್ತಿಗಳ ಜತೆಗೆ ಚರ್ಚೆ ಮಾಡುವಂಥ ಸಾಧ್ಯತೆಗಳಿವೆ. ಸಣ್ಣದಾಗಿ ಶುರುವಾದ ಚರ್ಚೆಯು ಭವಿಷ್ಯದ ಅತಿಮುಖ್ಯ ನಿರ್ಧಾರವನ್ನು ತೆಗೆದುಕೊಳ್ಳುವ ತನಕ ಕರೆದುಕೊಂಡು ಹೋಗಬಹುದು. ಸಾಧ್ಯವಾದಷ್ಟೂ ಒಂದು ತೀರ್ಮಾನಕ್ಕೆ ಬದ್ಧರಾದರೆ ಒಳ್ಳೆಯದು. ಕೃಷಿಕರಿಗೆ ನಿಮ್ಮ ಜೀವನದ ಅತಿ ಮುಖ್ಯ ಘಟ್ಟವೊಂದನ್ನು ದಾಟಬೇಕು ಎಂಬ ಬಗ್ಗೆ ಬಲವಾಗಿ ಅನಿಸಲಿದೆ. ನಿಮ್ಮಲ್ಲಿ ಕೆಲವರು ಆಸ್ತಿಯನ್ನು ಭಾಗ ಮಾಡುವುದಕ್ಕೆ ನಿರ್ಧರಿಸಿ, ವಕೀಲರು ಹಾಗೂ ನಿಮಗೆ ಆಪ್ತರು ಎನಿಸಿದವರ ಜತೆಗೆ ಚರ್ಚೆ ಮಾಡಲಿದ್ದೀರಿ. ನಿಮ್ಮ ತೀರ್ಮಾನಕ್ಕೆ ಕೆಲವರು ವಿರೋಧ ಸಹ ವ್ಯಕ್ತಪಡಿಸಬಹುದು. ಇನ್ನಷ್ಟು ಸಮಯ ಹೀಗೆ ಮಾಡಬೇಡಿ ಎಂದು ಕೇಳಿಕೊಳ್ಳಬಹುದು. ವೃತ್ತಿನಿರತರಿಗೆ ಕೆಲವು ಡೀಲ್ ಗಳು ಪ್ರತಿಷ್ಠೆಯ ಪ್ರಶ್ನೆಯಾಗಲಿದೆ. ಹೇಗಾದರೂ ಅದನ್ನು ದಕ್ಕಿಸಿಕೊಳ್ಳಬೇಕು ಎಂಬ ಪ್ರಯತ್ನದ ಭಾಗವಾಗಿ ಪ್ರಭಾವಿಗಳ ಜತೆಗೆ ಮಾತುಕತೆ ನಡೆಸಲಿದ್ದೀರಿ. ಅವರ ಮೂಲಕವಾಗಿ ಶಿಫಾರಸು ಮಾಡಿಸುವುದಕ್ಕೂ ಮುಂದಾಗಲಿದ್ದೀರಿ. ವಿದ್ಯಾರ್ಥಿಗಳು ಈಗ ತೆಗೆದುಕೊಂಡಿರುವ ಕೋರ್ಸ್ ಬದಲಾವಣೆ ಮಾಡಿಕೊಳ್ಳುವುದಕ್ಕೆ ಸಂಬಂಧಪಟ್ಟವರ ಜತೆಗೆ ಹಾಗೂ ಪೋಷಕರೊಂದಿಗೆ ಮಾತುಕತೆ ನಡೆಸುವುದಕ್ಕೆ ನಿರ್ಧರಿಸುವಿರಿ. ಮಹಿಳೆಯರಿಗೆ ಕೆಲವು ವ್ಯಕ್ತಿಗಳು ಮಾನಸಿಕ ಕಿರುಕುಳ ನೀಡುವುದಕ್ಕೆ ಪ್ರಯತ್ನಿಸಬಹುದು, ಅವರಿಗೆ ತಕ್ಕ ಉತ್ತರ ನೀಡಲಿದ್ದೀರಿ.

ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8)

ಯಾವುದಾದರೂ ಕೆಲಸವನ್ನು ಮಾಡುವುದಕ್ಕೆ ಮುಂಚೆ ಗೊಂದಲ ಕಾಡಿದಲ್ಲಿ ಅನುಭವಿಗಳ ಮಾರ್ಗದರ್ಶನ ಪಡೆದುಕೊಳ್ಳಿ. ಈ ವಾರ ಯಾವುದೇ ಕೆಲಸ ಮಾಡುವುದಕ್ಕೆ ಮುಂದಾದರೂ ನಿಮ್ಮಲ್ಲಿ ಒಂದು ಬಗೆಯ ಆತಂಕ ಕಾಡುತ್ತದೆ. ಅದರಲ್ಲೂ ಏನೋ ಮರೆತು ಹೋದಂತೆ ಅಥವಾ ಬಿಟ್ಟು ಹೋದಂತೆ ಮಾನಸಿಕವಾಗಿ ತಲ್ಲಣಗಳು ಕಾಡುತ್ತವೆ. ಇದೇ ವೇಳೆ ಉದ್ಯೋಗ ಸ್ಥಳದಲ್ಲೇ ಆಗಲಿ ಅಥವಾ ಕುಟುಂಬದ ಒಳಗೇ ಆಗಲಿ ಬಹಳ ಕೆಲಸಗಳು ಅಥವಾ ಜವಾಬ್ದಾರಿಗಳು ನಿರ್ವಹಿಸಬೇಕಾದ ಸನ್ನಿವೇಶ ನಿರ್ಮಾಣ ಆಗಲಿದೆ. ನೀವು ನಿರೀಕ್ಷೆ ಕೂಡ ಮಾಡಿರದಷ್ಟು ಖರ್ಚುಗಳು ಮಾಡಬೇಕಾಗಬಹುದು. ನಿಮ್ಮಲ್ಲಿ ಕೆಲವರು ಚಿನ್ನವನ್ನು ಅಡವಿಟ್ಟು ಸಾಲವನ್ನು ಪಡೆಯುವಂಥ ಸಾಧ್ಯತೆಗಳಿವೆ. ಇದಕ್ಕೆ ಕುಟುಂಬದಲ್ಲಿ ಕೆಲವರು ಅಸಮಾಧಾನ ವ್ಯಕ್ತಪಡಿಸಬಹುದು ಅಥವಾ ಇದೇ ವಿಚಾರಕ್ಕೆ ಸಂಗಾತಿ ಜತೆಗೆ ಜಗಳವೇ ಆಗುವಂಥ ಅವಕಾಶಗಳಿವೆ. ನೀವು ಬಹಳ ಹಿಂದೆ ಅಪ್ಲೈ ಮಾಡಿದ್ದಂಥ ಸೈಟು ಅಥವಾ ಮನೆ ಅಥವಾ ಅಪಾರ್ಟ್ ಮೆಂಟ್ ಖರೀದಿಯನ್ನು ಈಗ ಮಾಡಬಹುದು ಎಂಬ ಮಾಹಿತಿ ದೊರೆಯುವ ಸಾಧ್ಯತೆಗಳಿವೆ. ಇನ್ನು ಇದೇ ವೇಳೆ ಇಂಟಿರೀಯರ್ ಡೆಕೋರೇಷನ್ ಮಾಡಿಸುವ ಬಗ್ಗೆ ಕೆಲವರ ಜತೆಗೆ ಮಾತುಕತೆ ನಡೆಸುವಂಥ ಯೋಗ ಇದೆ. ಇತ್ತೀಚೆಗೆ ನೀವು ಖರೀದಿಸಿದ್ದ ಚಿನ್ನದ ಒಡವೆಗಳು ಅಥವಾ ಬೆಳ್ಳಿ ವಸ್ತುಗಳನ್ನು ಎಕ್ಸ್ ಚೇಂಜ್ ಮಾಡಿಸುವ ಅಥವಾ ಅವುಗಳ ಡಿಸೈನ್ ಇಷ್ಟವಾಗಲಿಲ್ಲ ಎಂದು ಹಿಂತಿರುಗಿಸುವ ಸಾಧ್ಯತೆ ಇದೆ. ಕೃಷಿಕರಿಗೆ ಅನಗತ್ಯ ವೆಚ್ಚಗಳು ಸಿಕ್ಕಾಪಟ್ಟೆ ಜಾಸ್ತಿ ಆಗಲಿದೆ. ಸಣ್ಣ ಮೊತ್ತದಲ್ಲಿ ಕೆಲಸಗಳನ್ನು ಮುಗಿಸಿಕೊಂಡು ಬಿಡೋಣ ಎಂದು ಬಜೆಟ್ ಹಾಕಿಕೊಂಡರೂ ಅಷ್ಟರೊಳಗೆ ಕಾರ್ಯವನ್ನು ಮುಗಿಸುವುದು ಸಾಧ್ಯವಾಗುವುದಿಲ್ಲ. ಇತರರು ತಮ್ಮ ಅಭಿಪ್ರಾಯಗಳನ್ನು ನಿಮ್ಮ ಮೇಲೆ ಹೇರುತ್ತಿದ್ದಾರೆ ಎಂದು ಬಲವಾಗಿ ಅನಿಸುವುದಕ್ಕೆ ಶುರುವಾಗುತ್ತದೆ. ಅದರಲ್ಲೂ ಒಡಹುಟ್ಟಿದವರ ವರ್ತನೆಯಿಂದ ಮನಸ್ಸಿಗೆ ಬೇಸರ ಆಗಲಿದೆ. ಇನ್ನು ಕೃಷಿ ಕೂಲಿ ಕಾರ್ಮಿಕರಾಗಿ ಕಾರ್ಯ ನಿರ್ವಹಿಸುತ್ತಿರುವವರಿಗೆ ಇನ್ನು ಮುಂದೆ ಕೆಲಸಕ್ಕೆ ಬರುವುದು ಬೇಡ ಎಂದು ಹೇಳುವ ಸಾಧ್ಯತೆಗಳು ಸಹ ಹೆಚ್ಚಿವೆ. ವೃತ್ತಿನಿರತರು ತಮ್ಮ ಕಣ್ತಪ್ಪಿನಿಂದ ಕೆಲವು ವಿಚಾರಗಳನ್ನು ಮರೆತು, ಕೊನೆ ಕ್ಷಣದಲ್ಲಿ ಒತ್ತಡವನ್ನು ಎದುರಿಸಬೇಕಾಗುತ್ತದೆ. ನಿಮ್ಮಲ್ಲಿ ಕೆಲವರು ಸರ್ಕಾರಕ್ಕೆ ದಂಡ ಕಟ್ಟಬೇಕಾಗುವಂತೆ ಆಗುತ್ತದೆ. ನಿಮ್ಮ ಸಾಮರ್ಥ್ಯದ ಬಗ್ಗೆ ಹಾಗೂ ಜವಾಬ್ದಾರಿ ಬಗ್ಗೆಯೇ ಅಸಮಾಧಾನ ವ್ಯಕ್ತವಾಗುತ್ತದೆ. ವಿದ್ಯಾರ್ಥಿಗಳು ಶಿಕ್ಷಣ ಸಂಸ್ಥೆಗಳ ಮೂಲಕ ತೆರಳುವ ಪ್ರವಾಸದ ವೇಳೆ ತಮಗೆ ಸಂಬಂಧವೇ ಪಡದಿದ್ದರೂ ನಿಂದೆ- ಆರೋಪಗಳನ್ನು ಎದುರಿಸಬೇಕಾಗುತ್ತದೆ. ಮಹಿಳೆಯರು ವಸ್ತ್ರಾಭರಣಗಳ ಖರೀದಿಗಾಗಿ ಖರ್ಚು ಮಾಡುವ ಯೋಗ ಇದ್ದು, ನಿಮ್ಮಲ್ಲಿ ಕೆಲವರಿಗೆ ಉಡುಗೊರೆ ಸಿಗಬಹುದು.

ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9)

ಸಂಬಂಧಿಗಳು ಸಾಲಕ್ಕಾಗಿ ನಿಮ್ಮ ಬಳಿ ಬರಲಿದ್ದಾರೆ. ಸವಾಲುಗಳಿಗೆ ಸಿದ್ಧವಾಗಲೇ ಬೇಕಾದ ಸನ್ನಿವೇಶದಲ್ಲಿ ನೀವು ಇರುತ್ತೀರಿ. ಒಂದು ವೇಳೆ ನೀವು ಮಾಧ್ಯಮ ಸಂಸ್ಥೆಗಳಲ್ಲಿ, ಆಡಿಟಿಂಗ್ ಸಂಸ್ಥೆಗಳಲ್ಲಿ ಅಥವಾ ಕಂಪ್ಯೂಟರ್ ನೆಟ್ ವರ್ಕ್ ನಿರ್ವಹಿಸುವ ಸಂಸ್ಥೆಗಳಲ್ಲಿ ಉದ್ಯೋಗಸ್ಥರಾಗಿದ್ದಲ್ಲಿ ತಾತ್ಕಾಲಿಕವಾಗಿಯಾದರೂ ಬೇರೆ ಸ್ಥಳಗಳಿಗೆ ತೆರಳಬೇಕಾದ ಸನ್ನಿವೇಶ ಎದುರಾಗಲಿದೆ. ಭಾವನಾತ್ಮಕವಾಗಿ ಈ ವಾರ ಬಹಳ ಮುಖ್ಯವಾಗಿರುತ್ತದೆ. ಯಾವುದೇ ವಿಚಾರದಲ್ಲಿ ಈ ಹಿಂದೆ ಇದ್ದಂತೆ ಪಟ್ಟು ಹಿಡಿದು ಕೂರುವ ಮನಸ್ಥಿತಿಯಲ್ಲಿ ನೀವು ಇರುವುದಿಲ್ಲ. ಆದ್ದರಿಂದ ಒಂದು ವೇಳೆ ದಂಪತಿ ಮಧ್ಯೆ ಭಿನ್ನಾಭಿಪ್ರಾಯಗಳು ಇದ್ದಲ್ಲಿ ಅದನ್ನು ಬಗೆಹರಿಸಿಕೊಳ್ಳುವುದಕ್ಕೆ ಬಹಳ ಒಳ್ಳೆ ಸಮಯ. ಒಂದು ವೇಳೆ ಪ್ರೇಮಿಗಳಾಗಿದ್ದು, ಇದಕ್ಕಿಂತ ಮುಂಚೆ ಮನಸ್ತಾಪಗಳು, ಅಭಿಪ್ರಾಯ ಭೇದಗಳು ಮೂಡಿ ದೂರವಾಗಿದ್ದಲ್ಲಿ ಈ ವಾರ ಒಗ್ಗೂಡುವಂಥ, ಸಂತೋಷವಾಗಿ ಸಮಯವನ್ನು ಕಳೆಯುವಂಥ ಯೋಗ ಇದೆ. ಇನ್ನು ಯಾರು ಪಾರ್ಟನರ್ ಷಿಪ್ ವ್ಯವಹಾರಗಳನ್ನು ಮಾಡುತ್ತಿದ್ದೀರೋ ಅಂಥವರಿಗೆ ಆದಾಯದಲ್ಲಿ ಸ್ಥಿರತೆ ಕಂಡುಬರಲಿದೆ. ಆದರೆ ಅಪಾಯವನ್ನು ಮೈ ಮೇಲೆ ಎಳೆದುಕೊಳ್ಳುವಂಥ ಯಾವುದೇ ಹೂಡಿಕೆಯನ್ನು ಮಾಡುವುದಕ್ಕೆ ಹೋಗಬೇಡಿ. ಕೃಷಿಕರಿಗೆ ಯಾವುದೇ ವಿಚಾರಗಳಲ್ಲಿ ಒಮ್ಮತ ಈ ತನಕ ಆಗಿಲ್ಲ ಎಂದಾದರೆ ಈಗ ಮೂಡಿಬರಲಿದೆ. ಜಮೀನು- ಮನೆಯಲ್ಲಿನ ಪಾಲು ವಿಚಾರಕ್ಕೆ ಅಂತಿಮ ತೀರ್ಮಾನ ಕೈಗೊಳ್ಳುವುದಕ್ಕೆ ಅವಕಾಶ ಇದೆ. ಸೋದರ- ಸೋದರಿಯರ ಜತೆಗೆ ಇಷ್ಟು ಸಮಯ ಇದ್ದಂಥ ಮನಸ್ತಾಪಗಳನ್ನು ದೂರ ಮಾಡಿಕೊಳ್ಳುವುದಕ್ಕೆ ಅವಕಾಶ ದೊರೆಯಲಿದೆ. ಇನ್ನು ಮನೆಯಲ್ಲಿನ ಶುಭ ಕಾರ್ಯಗಳು ನಡೆಸುವಂಥ ಜವಾಬ್ದಾರಿ ನಿಮ್ಮ ಮೇಲೆ ಬರಲಿದೆ. ತಮ್ಮ ಮನೆಯ ನಿರ್ಮಾಣಕ್ಕೆ ಅಥವಾ ತೋಟ- ಗದ್ದೆಗಳ ಅಭಿವೃದ್ಧಿಗಾಗಿ ಹಣದ ಅಗತ್ಯ ಇದೆಯೆಂದು ಸೋದರ ಸಂಬಂಧಿಗಳು ನಿಮ್ಮಿಂದ ನೆರವು ಕೇಳಿಕೊಂಡು ಬರಲಿದ್ದಾರೆ. ಒಂದು ವೇಳೆ ವೃತ್ತಿನಿರತರಾಗಿದ್ದು, ಇಬ್ಬರು ಅಥವಾ ಅದಕ್ಕಿಂತ ಹೆಚ್ಚು ಮಂದಿ ಕೂಡಿ ಒಂದು ವ್ಯವಹಾರಕ್ಕೆ ಅಂತ ಕೈ ಹಾಕಿದಲ್ಲಿ ಅದರಲ್ಲಿ ಯಶಸ್ಸು ದೊರೆಯಲಿದೆ. ಇನ್ನು ವೃತ್ತಿಯಲ್ಲಿ ಇರುವಂಥ ಅವಿವಾಹಿತರಿಗೆ ಅದೇ ವೃತ್ತಿಯಲ್ಲಿ ಇರುವಂಥ ವಧು/ವರರ ಸೂಕ್ತವಾದ ವಿವಾಹ ಸಂಬಂಧಗಳು ದೊರೆಯುವಂಥ ಅವಕಾಶಗಳಿವೆ. ಹೊಸ ವಾಹನಗಳ ಖರೀದಿ ಬಗ್ಗೆ ಆಲೋಚನೆ ಮಾಡಲಿದ್ದೀರಿ. ಒಂದು ವೇಳೆ ಈಗಾಗಲೇ ಅಡ್ವಾನ್ಸ್ ನೀಡಿಯಾಗಿದೆ, ಹಣಕಾಸಿನ ಹೊಂದಾಣಿಕೆಗೆ ಪ್ರಯತ್ನ ಮಾಡುತ್ತಿದ್ದೀರಿ ಎಂದಾದಲ್ಲಿ ಮೊತ್ತ ಹೊಂದಾಣಿಕೆ ಸಹ ಆಗಲಿದೆ. ಇದರಿಂದ ನಿಮ್ಮ ಮನಸ್ಸಿಗೆ ಸಮಾಧಾನ ದೊರೆಯಲಿದೆ. ವಿದ್ಯಾರ್ಥಿಗಳು ತಮ್ಮ ಸ್ನೇಹಿತರ ಜತೆಗೆ ಉತ್ತಮ ಸಮಯವನ್ನು ಕಳೆಯುವಂಥ ಯೋಗ ಇದೆ. ಪ್ರವಾಸಕ್ಕೆ ತೆರಳಲಿದ್ದೀರಿ. ಮಹಿಳೆಯರು ಅಡುಗೆ ಮನೆಯಲ್ಲಿ ಕೆಲಸ ಮಾಡುವ ವೇಳೆ ಗ್ಯಾಸ್ ಸಿಲಿಂಡರ್ ಯಾವುದೇ ಸಮಸ್ಯೆಯಿಲ್ಲ ಎಂಬುದನ್ನು ಖಚಿತ ಮಾಡಿಕೊಳ್ಳಿ.

ಲೇಖನ- ಎನ್‌.ಕೆ.ಸ್ವಾತಿ