Scorpio Ugadi Horoscope 2025: ವೃಶ್ಚಿಕ ರಾಶಿಯವರ ವಿಶ್ವಾವಸು ಸಂವತ್ಸರ ಯುಗಾದಿ ವರ್ಷ ಭವಿಷ್ಯದ ಫಲಾಫಲ ಇಲ್ಲಿದೆ
ಮಾರ್ಚ್ 30ರಿಂದ ವಿಶ್ವಾವಸು ಸಂವತ್ಸರ ಶುರುವಾಗಿದೆ. ಈ ಸಂವತ್ಸರದಲ್ಲಿ ಮೇಷದಿಂದ ಮೀನದ ತನಕ ಹನ್ನೆರಡು ರಾಶಿಗಳವರಿಗೆ ಶುಭಾಶುಭ ಫಲಗಳು ಏನಿವೆ ಎಂಬುದರ ವಿವರ ನೀಡಲಾಗಿದೆ. ಇದಕ್ಕಾಗಿ ಶನಿ, ಗುರು, ರಾಹು- ಕೇತು ಗ್ರಹಗಳನ್ನು ಪರಿಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಇದು ಗ್ರಹ ಗೋಚಾರದಲ್ಲಿ ತಿಳಿಸುವ ಭವಿಷ್ಯ. ವೈಯಕ್ತಿಕ ಜಾತಕದಲ್ಲಿನ ಗ್ರಹ ಸ್ಥಿತಿ ಹಾಗೂ ದಶಾಭುಕ್ತಿ ಇತ್ಯಾದಿ ವಿಚಾರಗಳನ್ನು ಸಹ ಪರಾಂಬರಿಸಬೇಕು. ಆದರೆ ಗೋಚಾರ ರೀತಿಯಾಗಿ ಗ್ರಹಗಳು ಬೀರುವಂಥ ಪ್ರಭಾವವು ಇದ್ದೇ ಇರುತ್ತದೆ.

ಮಾರ್ಚ್ ಇಪ್ಪತ್ತೊಂಬತ್ತನೇ ತಾರೀಕಿನಂದು ಶನಿ ಗ್ರಹ ಮೀನ ರಾಶಿ ಪ್ರವೇಶ ಮಾಡುತ್ತದೆ. ಮೇ 14ಕ್ಕೆ ಗುರು ಗ್ರಹವು ಮಿಥುನ ರಾಶಿಯನ್ನು ಪ್ರವೇಶಿಸುತ್ತದೆ. ಇನ್ನು ಮೇ ಹದಿನೆಂಟನೇ ತಾರೀಕಿನಂದು ರಾಹು ಗ್ರಹವು ಕುಂಭ ರಾಶಿಯಲ್ಲೂ ಹಾಗೂ ಕೇತು ಗ್ರಹವು ಸಿಂಹ ರಾಶಿಯಲ್ಲೂ ಸಂಚರಿಸುತ್ತದೆ. ಗುರು ಗ್ರಹ ಅಕ್ಟೋಬರ್ 18ನೇ ತಾರೀಕಿನಂದು ಕರ್ಕಾಟಕ ರಾಶಿಯನ್ನು ಪ್ರವೇಶಿಸಿ, ಡಿಸೆಂಬರ್ 5ನೇ ತಾರೀಕಿನಂದು ಮತ್ತೆ ಮಿಥುನ ರಾಶಿಯಲ್ಲಿ ಸಂಚರಿಸುತ್ತಾ ಸಂವತ್ಸರ ಪರ್ಯಂತವಾಗಿ ಅದೇ ರಾಶಿಯಲ್ಲಿ ಇರುತ್ತದೆ.
ವೃಶ್ಚಿಕ ರಾಶಿಯವರ ಯುಗಾದಿ ವರ್ಷ ಭವಿಷ್ಯ:
ಶನಿ (ಐದನೇ ಮನೆ ಸಂಚಾರ):
ನಿಮ್ಮಿಂದ ಆದ ಒಂದೊಂದು ತಪ್ಪುಗಳು ಈಗ ಸಮಸ್ಯೆಯಾಗಿ ಸುತ್ತಿಕೊಳ್ಳಲು ಆರಂಭಿಸುತ್ತವೆ. ಮನೆ ಕಾಗದ- ಪತ್ರಗಳು, ಬ್ಯಾಂಕ್ ವ್ಯವಹಾರಗಳು, ಷೇರು- ಮ್ಯೂಚುವಲ್ ಫಂಡ್ ಇಂಥವುಗಳ ವ್ಯವಹಾರಕ್ಕೆ ಸಂಬಂಧಿಸಿದಂತೆ ಏನಾದರೂ ತಪ್ಪುಗಳು ನಿಮ್ಮಿಂದ ಆಗಿವೆಯೇ ಎಂಬುದನ್ನು ಒಮ್ಮೆ ಪರಿಶೀಲಿಸಿಕೊಳ್ಳಿ. ನಿಮಗಿರುವ ಸ್ನೇಹ, ಪರಿಚಯ, ಅಧಿಕಾರದಿಂದ ಕೆಲಸಗಳನ್ನು ಮಾಡಿಸಿಕೊಳ್ಳಬಹುದು ಅಂದುಕೊಂಡಿದ್ದದ್ದು ಸಾಧ್ಯವಾಗದೇ ಹೋಗಲಿದೆ. ಇಷ್ಟು ಸಮಯದೊಳಗೆ ಕೊಡುವುದಾಗಿ ಹೇಳಿದ್ದ ಹಣವನ್ನೋ ಮಾಡಿಕೊಡುವುದಾಗಿ ಹೇಳಿದ್ದ ಕೆಲಸಗಳನ್ನು ಮಾಡಿಕೊಡಲಾಗದೆ ಹೆಸರು- ವರ್ಚಸ್ಸು ಹಾನಿಯಾಗಲಿದೆ. ಗರ್ಭ ಧರಿಸಿದ ಸ್ತ್ರೀಯರು ಬಹಳ ಜಾಗ್ರತೆಯಿಂದ ಇರಬೇಕು. ಇನ್ನು ಮಕ್ಕಳೊಂದಿಗಿನ ಆಸ್ತಿ ಹಂಚಿಕೆ ವ್ಯಾಜ್ಯಗಳು ಕೋರ್ಟ್- ಕಚೇರಿ ಮೆಟ್ಟಿಲೇರುವ ಸಾಧ್ಯತೆ ಇದೆ.
ಗುರು (ಎಂಟನೇ ಮನೆ ಮತ್ತು ಒಂಬತ್ತನೇ ಮನೆ):
ನಿಮ್ಮ ಮೇಲೆ ಹಣಕಾಸಿನ ಅವ್ಯವಹಾರದ ಆರೋಪ ಬರಲಿದೆ. ಈ ಹಿಂದೆ ನೀವು ನೀಡಿದ ಲೆಕ್ಕಪತ್ರಗಳಲ್ಲಿ- ವ್ಯವಹಾರಗಳಲ್ಲಿ ತಪ್ಪುಗಳಾಗಿವೆ, ನೀವು ಅಧಿಕಾರ ದುರುಪಯೋಗ ಮಾಡಿಕೊಂಡಿದ್ದೀರಿ ಎಂಬ ಆರೋಪಗಳನ್ನು ಹೊತ್ತುಕೊಳ್ಳಬೇಕಾಗುತ್ತದೆ. ಸರ್ಕಾರಿ ಕೆಲಸಗಳಲ್ಲಿ ಇರುವಂಥವರಿಗೆ ಬೇಡದ ಇಲಾಖೆಗಳು, ಸ್ಥಳ, ವಿಭಾಗಗಳಿಗೆ ವರ್ಗಾವಣೆ ಆಗಲಿದೆ. ಇಲಾಖಾ ವಿಚಾರಣೆಗಳು ನಡೆಯಲಿವೆ. ಅಕ್ಟೋಬರ್ ನಿಂದ ಡಿಸೆಂಬರ್ ಮಧ್ಯೆ ನಿಮ್ಮ ಕೆಲವು ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವುದಕ್ಕೆ ಅವಕಾಶಗಳು ದೊರೆಯಲಿವೆ.
ಇದನ್ನೂ ಓದಿ: ಕನ್ಯಾ ರಾಶಿಯವರ ವಿಶ್ವಾವಸು ಸಂವತ್ಸರ ಯುಗಾದಿ ವರ್ಷ ಭವಿಷ್ಯದ ಫಲಾಫಲ ಇಲ್ಲಿದೆ
ರಾಹು (ನಾಲ್ಕನೇ ಮನೆ), ಕೇತು (ಹತ್ತನೇ ಮನೆ):
ಮನೆ ದುರಸ್ತಿ, ವಾಹನ ದುರಸ್ತಿ ಇಂಥವುಗಳಿಗೆ ವಿಪರೀತ ಖರ್ಚಾಗಲಿದೆ. ತಾಯಿಯ ಅನಾರೋಗ್ಯದಿಂದಾಗಿ ವೈದ್ಯಕೀಯ ಖರ್ಚುಗಳು ಹೆಚ್ಚಾಗಲಿವೆ. ವಿದ್ಯಾರ್ಥಿಗಳಿಗೆ ಓದಿನಲ್ಲಿ ಆಸಕ್ತಿ ಇಲ್ಲದಂತಾಗುತ್ತದೆ. ಓದಿದ್ದು ನೆನಪಿನಲ್ಲಿಯೇ ಉಳಿಯದಂತಾಗಿ, ಇದಕ್ಕಾಗಿ ವೈದ್ಯರ ಬಳಿ ಚಿಕಿತ್ಸೆ ಪಡೆಯ ಬೇಕಾಗುತ್ತದೆ. ಉದ್ಯೋಗ ಸ್ಥಳದಲ್ಲಿ ನಿಮ್ಮ ಅಜಾಗರೂಕತೆಯಿಂದ ನಷ್ಟ ಅನುಭವಿಸುವಂತಾಗಿ, ದುಡ್ಡು ಕಟ್ಟಿಕೊಡುವಂತೆ ಆಗಬಹುದು. ನಿಮಗಿಂತ ವಯಸ್ಸು- ಅನುಭವದಲ್ಲಿ ಕಡಿಮೆ ಇರುವವರಿಗೆ ಬಡ್ತಿ, ವೇತನ ಹೆಚ್ಚಳ ದೊರಕುವುದರಿಂದ ನಿಮಗೆ ಬೇಸರ ಆಗಲಿದೆ. ಮನೆಯಲ್ಲಿ ಇರುವ ಹಿರಿಯರ ಅನಾರೋಗ್ಯದಿಂದಾಗಿ ನೆಮ್ಮದಿ ಕಳೆದುಕೊಳ್ಳುವಂತೆ ಆಗುತ್ತದೆ.
ಪರಿಹಾರ:
ಪಂಚಮ ಶನಿ ಹಾಗೂ ಅಷ್ಟಮ ಗುರು ಸಂಚಾರ ಇರುವುದರಿಂದ ಶಾಂತಿ- ಹೋಮ ಮಾಡಿಸಿಕೊಳ್ಳುವುದು ಕ್ಷೇಮ.
ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ