AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Sun in Libra: ತುಲಾ ರಾಶಿಯಲ್ಲಿ ರವಿ ಗ್ರಹವಿದ್ದರೂ ನ. 2ರ ನಂತರ ನೀಚಭಂಗ ರಾಜಯೋಗ; ಯಾವ ರಾಶಿಗೆ ಶುಭ ಫಲ?

ಅಕ್ಟೋಬರ್ 17 ರಿಂದ ನವೆಂಬರ್ 16 ರವರೆಗೆ ಸೂರ್ಯ ತುಲಾ ರಾಶಿಯಲ್ಲಿ ಸಂಚರಿಸುತ್ತಾನೆ. ನವೆಂಬರ್ 2 ರ ನಂತರ ನೀಚ ಸ್ಥಿತಿಯ ಪರಿಣಾಮ ಕಡಿಮೆಯಾಗುತ್ತದೆ. ಪ್ರತಿ ರಾಶಿಯ ಮೇಲೆ ಈ ಸಂಕ್ರಮಣದ ಪ್ರಭಾವ ಹೇಗಿರುತ್ತದೆ ಎಂಬುದನ್ನು ಇಲ್ಲಿ ವಿವರಿಸಲಾಗಿದೆ. ಶುಕ್ರ ಗ್ರಹವು ನವೆಂಬರ್ 2 ರಿಂದ ತನ್ನ ಸ್ವಕ್ಷೇತ್ರವಾದ ತುಲಾ ರಾಶಿಯನ್ನು ಪ್ರವೇಶಿಸುತ್ತದೆ. ಪ್ರತಿ ರಾಶಿಯವರಿಗೆ ಸೂಕ್ತವಾದ ಪರಿಹಾರಗಳನ್ನು ಸಹ ಈ ಲೇಖನ ಒಳಗೊಂಡಿದೆ.

Sun in Libra: ತುಲಾ ರಾಶಿಯಲ್ಲಿ ರವಿ ಗ್ರಹವಿದ್ದರೂ ನ. 2ರ ನಂತರ ನೀಚಭಂಗ ರಾಜಯೋಗ; ಯಾವ ರಾಶಿಗೆ ಶುಭ ಫಲ?
Sun In Libra
ಸ್ವಾತಿ ಎನ್​ಕೆ
| Edited By: |

Updated on: Sep 20, 2025 | 4:03 PM

Share

ಅಕ್ಟೋಬರ್ 17ನೇ ತಾರೀಕು ರವಿ ಗ್ರಹ ತನ್ನ ನೀಚ ಸ್ಥಾನವಾದ ತುಲಾ ರಾಶಿಯನ್ನು ಪ್ರವೇಶ ಮಾಡುತ್ತಿದೆ. ನವೆಂಬರ್ ಹದಿನಾರನೇ ತಾರೀಕಿನ ತನಕ ಅದೇ ತುಲಾ ರಾಶಿಯಲ್ಲಿ ಇರುತ್ತದೆ. ಆದರೆ ನೆನಪಿಟ್ಟುಕೊಳ್ಳಬೇಕಾದ್ದು ಏನೆಂದರೆ, ನವೆಂಬರ್ ಎರಡನೇ ತಾರೀಕಿನ ನಂತರದಲ್ಲಿ ನೀಚ ಸ್ಥಿತಿಯಲ್ಲಿ ಅಲ್ಲ. ರವಿ ಗ್ರಹಕ್ಕೆ ಸಿಂಹ ರಾಶಿಯು ಸ್ವಕ್ಷೇತ್ರವಾದರೆ, ಮೇಷ ರಾಶಿ ಉಚ್ಚ ಕ್ಷೇತ್ರವಾಗುತ್ತದೆ. ಇನ್ನು ಆರಂಭದಲ್ಲಿಯೇ ಹೇಳಿದಂತೆ ತುಲಾ ರಾಶಿಯು ನೀಚ ಸ್ಥಿತಿ ಆಗುತ್ತದೆ. ಆದರೂ ರವಿ ಹೇಗೆ ತನ್ನ ನೀಚ ಸ್ಥಿತಿ ಫಲವನ್ನು ತುಲಾ ರಾಶಿಯಲ್ಲಿ ನೀಡುವುದಿಲ್ಲ ಎಂಬುದನ್ನು ಈ ಲೇಖನದಲ್ಲಿ ವಿವರಿಸಲಾಗುವುದು.

ಅಂದ ಹಾಗೆ ನವೆಂಬರ್ 2ನೇ ತಾರೀಕು ಶುಕ್ರ ಗ್ರಹ ಅದರದೇ ಸ್ವಕ್ಷೇತ್ರವಾದ ತುಲಾ ರಾಶಿಯನ್ನು ಪ್ರವೇಶಿಸುತ್ತದೆ. ಅಲ್ಲಿಂದ ಅದೇ ತಿಂಗಳ 26ನೇ ತಾರೀಕಿನ ತನಕ ತುಲಾ ರಾಶಿಯಲ್ಲಿಯೇ ಇರುತ್ತದೆ. ಹೀಗೆ ಒಂದು ಗ್ರಹ ತನ್ನ ನೀಚ ಸ್ಥಿತಿಯ ರಾಶಿಯನ್ನು ತಲುಪಿದಾಗ ಆ ರಾಶಿಯ ಅಧಿಪತಿ ಗ್ರಹವು ಅಲ್ಲಿಗೆ ಪ್ರವೇಶಿಸಿದರೆ ಅಥವಾ ಅದಾಗಲೇ ಅಲ್ಲಿಯೇ ಇದ್ದರೆ ನೀಚತ್ವ ಭಂಗ ಆಗಿ, ರಾಜಯೋಗವನ್ನು ನೀಡುತ್ತದೆ. ನವೆಂಬರ್ 2ನೇ ತಾರೀಕಿನ ಆಚೆಗೆ ರವಿಯ ತುಲಾ ರಾಶಿಯ ಸ್ಥಿತಿಯನ್ನು ನೀಚ ಎಂದು ಪರಿಗಣಿಸಬೇಕಿಲ್ಲ.

ಅಕ್ಟೋಬರ್ 17ನೇ ತಾರೀಕಿನಿಂದ ನವೆಂಬರ್ 2ನೇ ತಾರೀಕಿನ ತನಕ ಮೇಷಾದಿ ಮೀನದ ತನಕ ಯಾವ ರಾಶಿಗೆ ಏನು ಫಲ ಎಂಬ ವಿವರ ಹೀಗಿದೆ:

ಮೇಷ:

ನಿಮಗೆ ಇಷ್ಟ ಇಲ್ಲದ ವಿಭಾಗ, ಊರು, ಇಲಾಖೆಗೆ ತೆರಳಬೇಕಾಗುತ್ತದೆ. ನೀವು ಯಾರ ಜೊತೆಗೆ ಕೆಲಸ ಮಾಡಬಾರದು ಎಂದುಕೊಂಡಿರುತ್ತೀರೋ ಅವರ ಜೊತೆಗೇ ಅಥವಾ ಅಂಥವರ ಜೊತೆಗೆ ಇದ್ದುಕೊಂಡೇ ಕೆಲಸ ಮಾಡಬೇಕಾದ ಅನಿವಾರ್ಯ ಸೃಷ್ಟಿ ಆಗುತ್ತದೆ.

ವೃಷಭ:

ನಿಮಗೆ ಬರಬೇಕಾದ ಹಣವೇ ಬರುವುದು ತಡವಾಗುತ್ತದೆ. ಕೊಟ್ಟ ಮಾತಿನಂತೆ ನಡೆದುಕೊಳ್ಳಲಿಲ್ಲ ಎಂಬ ಕಾರಣಕ್ಕೆ ಜೋರು ಮಾತುಕತೆ ಆಡಿ, ಕೆಲವರು ಪೊಲೀಸ್ ಠಾಣೆ ಮೆಟ್ಟಿಲೇರಿದ ಮೇಲೆ ಹಣ ವಾಪಸ್ ಬರುತ್ತದೆ. ಸರ್ಕಾರದ ಜೊತೆಗಿನ ವ್ಯವಹಾರಗಳಲ್ಲಿ ತಾಳ್ಮೆಯಿಂದ ವರ್ತಿಸಿ.

ಮಿಥುನ:

ಕಣ್ಣು, ಹೃದಯಕ್ಕೆ ಸಂಬಂಧಿಸಿದ ಅನಾರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳಲಿವೆ. ಕಣ್ಣು ಉರಿ, ಕಣ್ಣಿನ ಕಾರಣದಿಂದ ವಿಪರೀತ ತಲೆ ನೋವು, ಎದೆಯುರಿ ಇಂಥ ಆರೋಗ್ಯ ಸಮಸ್ಯೆಗಳು ಕಾಡಲಿವೆ. ಇನ್ನು ನಾನಾ ವೈದ್ಯಕೀಯ ತಪಾಸಣೆಯಿಂದ ಹೆಚ್ಚಿನ ಖರ್ಚಾಗಲಿದೆ.

ಕರ್ಕಾಟಕ:

ನಿಮಗಿಂತ ಬಲಿಷ್ಠರಾದವರು ಶತ್ರುಗಳಾಗಲಿದ್ದಾರೆ. ಸರ್ಕಾರದ ಮಟ್ಟದಲ್ಲಿ ಕೆಲಸ- ಕಾರ್ಯಗಳು ಆಗಬೇಕು ಎಂದಾದಲ್ಲಿ ಸಂಘರ್ಷ ಇಲ್ಲದೆ ಅವುಗಳನ್ನು ಮುಗಿಸಿಕೊಳ್ಳಲು ಪ್ರಯತ್ನಿಸಿ. ಲೈಸೆನ್ಸ್, ಪರ್ಮಿಷನ್ ತೆಗೆದುಕೊಂಡು ಮಾಡಬೇಕಾದ ಕೆಲಸಗಳಲ್ಲಿ ಸರಿಯಾಗಿ ನಿಯಮ ಪಾಲಿಸಿ. ವ್ಯಾಜ್ಯಗಳು ಕೋರ್ಟ್- ಕಚೇರಿ ಮೆಟ್ಟಿಲೇರದಂತೆ ನೋಡಿಕೊಳ್ಳಿ.

ಸಿಂಹ:

ಸೋದರ ಸಂಬಂಧಿಗಳ ಮನೆಗಳಲ್ಲಿ ಶುಭ ಕಾರ್ಯಗಳು ನಡೆಯಲಿವೆ. ಇಲ್ಲಿಯ ತನಕ ಅಣ್ಣ- ತಮ್ಮಂದಿರು, ಅಕ್ಕ- ತಂಗಿಯರ ಜೊತೆಗೆ ಅಭಿಪ್ರಾಯ ಭೇದ, ಮನಸ್ತಾಪಗಳು ಇದ್ದಲ್ಲಿ ಅವುಗಳನ್ನು ಬಗೆಹರಿಸಿಕೊಳ್ಳಲು ವೇದಿಕೆ ದೊರೆಯಲಿದೆ. ನಿಮಗೆ ಬರಬೇಕಾದ ಹಣಕ್ಕೆ ಪ್ರಯತ್ನ ಪಟ್ಟಲ್ಲಿ ನಿಮ್ಮ ಕೈ ಸೇರಲಿದೆ.

ಕನ್ಯಾ:

ನಾನಾ ಬಗೆಯ ಚಿಂತೆಗಳು ಕಾಡಲಿವೆ. ತಂದೆಯ ಜೊತೆ ಅಥವಾ ತಂದೆ ಸಮಾನರಾದವರ ಜೊತೆಗಿನ ಮನಸ್ತಾಪದಿಂದ ನೆಮ್ಮದಿ ಇಲ್ಲದಂತಾಗುತ್ತದೆ. ಏನಾದರೊಂದು ಕಾರಣದಿಂದ ಸರ್ಕಾರಕ್ಕೆ ದಂಡ ಪಾವತಿಸುವಂಥ ಸನ್ನಿವೇಶ ಸೃಷ್ಟಿ ಆಗಲಿದೆ.

ತುಲಾ:

ದೇಹಾಲಸ್ಯ ಜಾಸ್ತಿಯಾಗುತ್ತದೆ. ಗಡುವಿನೊಳಗೆ ಕೆಲಸ ಮುಗಿಸುವುದು ಸಾಧ್ಯವಿಲ್ಲದೆ ನಿಮ್ಮ ಮೇಲೆ ಇತರರು ಇಟ್ಟಿರುವ ವಿಶ್ವಾಸ- ನಂಬಿಕೆಯನ್ನು ಕಳೆದುಕೊಳ್ಳುತ್ತೀರಿ. ಎದೆ ನೋವು, ಕಣ್ಣಿನ ಬಾವು ಇತ್ಯಾದಿ ಆರೋಗ್ಯ ಸಮಸ್ಯೆಗಳು ಕಾಡಲಿವೆ.

ವೃಶ್ಚಿಕ:

ವಿಪರೀತ ಖರ್ಚುಗಳು ಆಗಲಿವೆ. ಅದರಲ್ಲೂ ಯಾರದೋ ಮೇಲಿನ ಸ್ಪರ್ಧೆ, ಪ್ರತಿಷ್ಠೆಗೆ ಬಿದ್ದು, ಸಾಲ ಮಾಡಿಯಾದರೂ ಕೆಲವು ಖರ್ಚುಗಳನ್ನು ಮಾಡುವಂತೆ ಆಗುತ್ತದೆ. ನೀವೇನಾದರೂ ಕ್ರೆಡಿಟ್ ಕಾರ್ಡ್ ಬಳಸುತ್ತೀರಿ ಎಂದಾದಲ್ಲಿ ಅಗತ್ಯ ಇಲ್ಲದ ವಸ್ತುಗಳ ಮೇಲೆ ವೆಚ್ಚ ಮಾಡಬೇಡಿ.

ಧನುಸ್ಸು:

ಶುಭ ಕಾರ್ಯಗಳನ್ನು ಮಾಡುವಂಥ ಯೋಗಗಳು ಒದಗಿಬರಲಿವೆ. ತಂದೆಯ ಆರೋಗ್ಯದಲ್ಲಿ ಚೇತರಿಕೆ ಕಾಣಿಸಿಕೊಳ್ಳಲಿದೆ. ಇನ್ನು ಸರ್ಕಾರದಿಂದ ಬರಬೇಕಾದ ಹಣ, ಕೆಲಸ- ಕಾರ್ಯಗಳು ಇದ್ದಲ್ಲಿ ಅದು ಬರಲಿದೆ. ಒಟ್ಟಿನಲ್ಲಿ ಮನಸ್ಸಿಗೆ ಸಮಾಧಾನ ಇರಲಿದೆ.

ಇದನ್ನೂ ಓದಿ: ಪಿತೃ ಪಕ್ಷದಲ್ಲಿ ಗಂಡ ಹೆಂಡತಿ ದೈಹಿಕ ಸಂಬಂಧ ಬೆಳೆಸಬಾರದು ಯಾಕೆ? ಶಾಸ್ತ್ರಗಳು ಹೇಳುವುದೇನು?

ಮಕರ:

ಪಿತ್ರಾರ್ಜಿತ ಆಸ್ತಿಗೆ ಸಂಬಂಧಿಸಿದ ವಿಚಾರಗಳು ಬಗೆಹರಿಯುವ ಅವಕಾಶಗಳು ಇರುತ್ತವೆ. ಸ್ವಂತ ವ್ಯಾಪಾರ- ವ್ಯವಹಾರ ಆರಂಭಿಸಬೇಕು ಎಂದು ಹಣಕಾಸು ಹೊಂದಾಣಿಕೆಗೆ ಪ್ರಯತ್ನ ಮಾಡುತ್ತಿರುವವರಿಗೆ ಅನುಕೂಲಗಳು ಒದಗಿ ಬರಲಿವೆ. ಹಣಕಾಸಿನ ಹರಿವು ಸರಾಗವಾಗಿ ಆಗಲಿದೆ.

ಕುಂಭ:

ನಿಮಗೆ ಈ ಅವಧಿ ಕಷ್ಟದ್ದಾಗಿರುತ್ತದೆ. ತಂದೆ ಅಥವಾ ತಂದೆ ಸಮಾನರಾದವರ ಆರೋಗ್ಯ ಸ್ಥಿತಿ ಹದಗೆಡಬಹುದು ಅಥವಾ ಗಂಭೀರ ಸ್ವರೂಪದ ತೊಂದರೆಗೆ ಅವರು ಸಿಲುಕಿಕೊಳ್ಳುವ ಸಾಧ್ಯತೆ ಇರುತ್ತದೆ. ನಿಮ್ಮ ವಿರುದ್ಧ ದೂರು ದಾಖಲಾಗಬಹುದು ಹಾಗೂ ಕೋರ್ಟ್- ಪೊಲೀಸ್ ಠಾಣೆ ಮೆಟ್ಟಿಲೇರುವಂತೆ ಆಗಿ, ಮಾನಸಿಕ ನೆಮ್ಮದಿ ಹಾಳಾಗುತ್ತದೆ.

ಮೀನ:

ಜ್ವರ, ವಿಪರೀತ ಮೈ- ಕೈ ನೋವು, ವಿಟಮಿನ್ ಗಳ ಕೊರತೆಯಿಂದ ಉದ್ಭವಿಸುವ ದೈಹಿಕ ಬಾಧೆಗಳು ನಿಮ್ಮನ್ನು ಕಾಡಬಹುದು. ಇತರರಿಗೆ ಜಾಮೀನು ನಿಲ್ಲದಿರುವುದು ಉತ್ತಮ. ಬ್ಯಾಂಕಿಂಗ್, ತೆರಿಗೆ ವಿಷಯಗಳಲ್ಲಿ ಎಚ್ಚರಿಕೆಯನ್ನು ವಹಿಸಿ.

ಪರಿಹಾರ:

ಕೆಂಪು ಬಟ್ಟೆಯಲ್ಲಿ ಮೂರು ಬೊಗಸೆಯಷ್ಟು ಗೋಧಿಯನ್ನು ಹಾಕಿ, ಕಟ್ಟಿ ಅದರ ಜೊತೆಗೆ ವೀಳ್ಯದೆಲೆ, ಅಡಿಕೆ, ದಕ್ಷಿಣೆ ಹಾಗೂ ತೆಂಗಿನಕಾಯಿ ಸಮೇತ ಭಾನುವಾರದ ದಿನ ದಾನವನ್ನು ಮಾಡಿ. ಇನ್ನು ಯಾರಿಗೆ ಆರೋಗ್ಯ ಸಂಬಂಧಿ ಸಮಸ್ಯೆಗಳು ಇವೆಯೋ ಅಂಥವರು ಆದಿತ್ಯ ಹೃದಯ ಸ್ತೋತ್ರವನ್ನು ಹೇಳಿಕೊಳ್ಳಿ ಅಥವಾ ಕೇಳಿಸಿಕೊಳ್ಳಿ.

ತೀಕ್ಷ್ಣತೆ ಇಳಿಮುಖ:

ನವೆಂಬರ್ 2ನೇ ತಾರೀಕಿನ ನಂತರದಲ್ಲಿ ರವಿಯ ನಕಾರಾತ್ಮಕ ಪ್ರಭಾವ ಇರುವಂಥವರಿಗೆ ಅದರ ತೀಕ್ಷ್ಣತೆ ಕಡಿಮೆ ಆಗುತ್ತದೆ. ಇನ್ನು ಯಾವ ರಾಶಿಯವರಿಗೆ ಶುಭ ಫಲ ಇದೆಯೋ ಅದು ಇನ್ನೂ ಹೆಚ್ಚು ಪರಿಣಾಮಕಾರಿ ಆಗುತ್ತದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ