Daily Horoscope: ಈ ರಾಶಿಯವರಿಗೆ ಸಂಗಾತಿಯ ಮೇಲೆ ಪ್ರೀತಿಯು ಹೆಚ್ಚಾಗಬಹುದು
14 ಡಿಸೆಂಬರ್ 2024: ಶನಿವಾರದಂದು ಮೇಷ, ವೃಷಭ, ಮಿಥುನ, ಕರ್ಕಾಟಕ, ಸಿಂಹ, ಕನ್ಯಾ ರಾಶಿಯವರ ರಾಶಿ ಭವಿಷ್ಯ ಹೇಗಿದೆ? ನಿಮ್ಮ ವಾಹನದಿಂದ ನಿಮಗೆ ಅಲ್ಪ ಲಾಭವಾಗುವುದು. ನಕಾರಾತ್ಮಕ ಆಲೋಚನೆಯನ್ನು ಇಂದು ಹೆಚ್ಚು ಮಾಡುವಿರಿ. ಮಕ್ಕಳ ವಿವಾಹಕ್ಕಾಗಿ ನೀವು ಓಡಾಡಿ ಆಯಾಸಪಡುವಿರಿ. ಹಾಗಾದರೆ ಡಿಸೆಂಬರ್ 14ರ ದಿನ ಭವಿಷ್ಯ ಮತ್ತು ಪಂಚಾಂಗ ಇಲ್ಲಿದೆ ನೋಡಿ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ದಕ್ಷಿಣಾಯನ, ಹೇಮಂತ ಋತು, ವೃಶ್ಚಿಕ ಮಾಸ, ಮಹಾನಕ್ಷತ್ರ: ಜ್ಯೇಷ್ಠಾ, ಮಾಸ: ಮಾರ್ಗಶಿರ, ಪಕ್ಷ: ಶುಕ್ಲ, ವಾರ: ಶನಿ, ತಿಥಿ: ಚತುರ್ದಶೀ, ನಿತ್ಯನಕ್ಷತ್ರ: ರೋಹಿಣೀ, ಯೋಗ: ಸಿದ್ಧಿ, ಕರಣ: ವಣಿಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 50 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 04 ನಿಮಿಷಕ್ಕೆ, ರಾಹು ಕಾಲ ಬೆಳಿಗ್ಗೆ 09:39 ರಿಂದ 11:03ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 01:52 ರಿಂದ 03:16 ರವರೆಗೆ, ಗುಳಿಕ ಕಾಲ ಸಂಜೆ 06:50 ರಿಂದ 08:15 ರವರೆಗೆ.
ಮೇಷ ರಾಶಿ: ಬೇಡವೆಂದರೂ ಬಿಡದ ಸ್ನೇಹಿತಬಳಗದಿಂದ ಸೋಲುವಿರಿ. ನಿಮಗೆ ನಂಬಿಕೆಯ ಮೇಲೆ ಆದ ಪ್ರಹಾರವನ್ನು ಸಹಿಸಲಾಗದು. ಅಲ್ಪಾವಧಿಯಲ್ಲಿ ಹೆಚ್ಚು ಪಡೆಯಬೇಕು ಎನ್ನುವ ಅತಿಯಾದ ಆಸೆ ಬೇಡ. ಸಂಗಾತಿಯ ಜೊತೆ ಕಲಹವಾಡಿ ಯಾವ ಕಾರ್ಯವನ್ನೂ ಮಾಡಲು ಹೋಗುವುದು ಬೇಡ. ಹಣದ ಮೇಲೆ ಸ್ವಲ್ಪ ನಿಯಂತ್ರಣ ಇಂದು ಅವಶ್ಯಕ. ವೈವಾಹಿಕ ಜೀವನದಲ್ಲಿ ಸಂತೋಷದ ಕ್ಷಣಗಳು ಬರಲಿದೆ. ಅನಿರೀಕ್ಷಿತವಾಗಿ ಕೆಲವು ವ್ಯಕ್ತಿಗಳ ಸಹಕಾರವು ಸಿಕ್ಕಿ ಸಂತೋಷವಾಗುವುದು. ಬೇಡದ ವಿಚಾರಗಳನ್ನು ಮಾತನಾಡುತ್ತ ಇರುವುದನ್ನು ಬಿಟ್ಟು ನಿಮ್ಮ ಕೆಲಸದಲ್ಲಿ ತೊಡಗಿ. ಪ್ರೀತಿಯಿಂದ ಹೇಳಿದರೆ ನಿಮ್ಮ ಕೆಲಸವು ಸಲೀಸಾಗಿ ಆಗುವುದು. ಅನ್ಯಾನ್ಯ ಆಲೋಚನೆಯನ್ನು ಮಾಡುವ ಮನಸ್ಸಿಗೆ ಸರಿಯಾದ ಕೆಲಸವನ್ನು ಕೊಡಿ. ಅನುರೂಪವಾದ ಸಂಗಾತಿಯ ಅನ್ವೇಷಣೆಯನ್ನು ಮಾಡುವಿರಿ. ವಿದ್ಯೆಯು ನಿಮ್ಮ ಬಳಕೆಗೆ ಬರಲಿದೆ. ಎಲ್ಲ ಮೋಡಗಳೂ ನಿಮಗೆ ಮಳೆಯನ್ನು ಸುರಿಸದು.
ವೃಷಭ ರಾಶಿ: ಎಂದಿನ ಮಾತೇ ಆದರೂ ಇಂದು ನಿಮ್ಮ ನೇರ ಮಾತು ಕಹಿಯಾಗುವುದು. ಇಂದು ನೀವು ಸ್ತ್ರೀಯರ ವಿಚಾರದಲ್ಲಿ ಸೂಕ್ಷ್ಮಮತಿಗಳಾಗುವಿರಿ. ಎಲ್ಲರ ಒತ್ತಾಯಕ್ಕೆ ನೂತನ ವಾಹನದ ಖರೀದಿಗೆ ಮನಸ್ಸು ಮಾಡುವಿರಿ. ಬಾಗುವಿಕೆಯಿಂದ ಏನಾದರೂ ನಿಮ್ಮ ಒಳಗೆ ಸೇರಬಹುದು. ಔದಾರ್ಯವು ದುರ್ಬಳಕೆ ಆಗುವುದು. ಸಂತಾನದ ಬಗ್ಗೆ ಸಂಗಾತಿಯ ಜೊತೆ ಮಾತನಾಡುವಿರಿ. ನಿಮ್ಮ ಭಾವನೆಗಳಿಗೆ ಬೆಲೆಯು ಇಲ್ಲದೇ ಹೋಗಬಹುದು. ಅಪೂರ್ಣ ಮಾಡಿಕೊಂಡ ಕಛೇರಿಯ ಕೆಲಸಗಳನ್ನು ಇಂದು ಪೂರ್ಣ ಮಾಡುವಿರಿ. ಅವಿವಾಹಿತರಿಗೆ ಬಂಧುಗಳಲ್ಲಿ ಉತ್ತಮ ಸಂಬಂಧವು ಪ್ರಾಪ್ತವಾಗುವುದು. ಆಸ್ತಿಯ ವಿಚಾರವಾಗಿ ವ್ಯರ್ಥ ವಾಗ್ವಾದಗಳನ್ನು ಮಾಡುವ ಬದಲು ಕಾನೂನಾತ್ಮಕ ಕ್ರಮಗಳಿಂದ ಅವುಗಳನ್ನು ಸರಿ ಮಾಡಿಕೊಳ್ಳಿ. ಔಚಿತ್ಯಯುಕ್ತವಾದ ಮಾತಿನಿಂದ ನಿಮಗೆ ಗೌರವವು ಸಿಗುವುದು. ನಿಮ್ಮ ವಿಶ್ರಾಂತ ಸ್ಥಿತಿಯನ್ನು ಇತರರು ಹಾಸ್ಯ ಮಾಡಬಹುದು. ಸಂಗಾತಿಯ ಮೇಲೆ ಪ್ರೀತಿಯು ಹೆಚ್ಚಾಗಬಹುದು. ಆಲೋಚನೆ ಮಾಡುವಷ್ಟರಲ್ಲಿ ಕೆಲಸವೇ ಮುಗಿಯಬಹುದು.
ಮಿಥುನ ರಾಶಿ: ನೋವನ್ನು ನುಂಗುವುದು ಕಷ್ಟವಾದರೂ ಇಂದು ಅನಿವಾರ್ಯವೇ. ನಿಮ್ಮದೇ ಸರಿ ಎನ್ನುವ ಅಹಂಭಾವ ಬಿಟ್ಟರೆ ನೆಮ್ಮದಿಯೂ ನಿಮ್ಮದೇ. ನಕಾರಾತ್ಮಕ ಯೋಚನೆಗಳು ನಿಮ್ಮನ್ನು ಸುಮ್ಮನಿರಲು ಬಿಡದು. ನಿರೀಕ್ಷಿತ ಬಂಧುಗಳ ಆಗಮನದಿಂದ ಸಂತೋಷವಾಗುವುದು. ಸಮಾರಂಭದಲ್ಲಿ ನೀವು ಭಾಗವಹಿಸಲು ಉತ್ಸುಕರಾಗಿರುವಿರಿ. ನಿಮ್ಮ ಮಕ್ಕಳ ಮಾತಿಗೆ ಕೊಡುವ ಬೆಲೆಯಿಂದ ಅವರಿಗೆ ಸಂತೋಷವಾಗಿ ನಿಮ್ಮನ್ನು ಹೆಚ್ಚು ಇಷ್ಟಪಡುವರು. ದೂರ ಪ್ರಯಾಣದಿಂದ ಸುಖ ಪಡುವಿರಿ. ಮುಖಸ್ತುತಿಯನ್ನು ಯಾರಾದರೂ ಮಾಡಬಹುದು. ನ್ಯಾಯಾಲಯದಲ್ಲಿ ನಿಮ್ಮ ಕಾರ್ಯಗಳು ವಿಳಂಬವಾಗಿ ನಿಮ್ಮ ಮುಂದಿನ ಕಾರ್ಯಗಳಿಗೆ ತೊಂದರೆಯಾಗುವಂತೆ ತೋರುವುದು. ಯಾರಿಂದಲೋ ಅಧ್ಯಾತ್ಮದ ಕಡೆ ಪ್ರಭಾವಿತರಾಗುವಿರಿ. ದೀರ್ಘಕಾಲದ ಗೆಳೆತನವು ಕಲಹದಲ್ಲಿ ಮುಕ್ತಾಯವಾಗಬಹುದು. ಸಂಕೀರ್ಣತೆಯನ್ನು ನೀವು ಕಡಿಮೆ ಮಾಡಿಕೊಂಡರೆ ಉತ್ತಮ.
ಕರ್ಕಾಟಕ ರಾಶಿ: ಮತ್ತಿನಿಂದ ಕುತ್ತು ತಂದುಕೊಳ್ಳುವ ಸಂಭವವಿದೆ. ಸಂಗಾತಿಯ ಎಲ್ಲ ಮಾತಿಗೂ ನಿಮ್ಮ ಒಮ್ಮತ ಇರದು. ಇದು ಕಲಹಕ್ಕೆ ಕಾರಣವಾಗಬಹುದು. ನೀವು ಇಂದು ಏನನ್ನು ಕೊಡುವುದಿದ್ದರೂ ಮನಃಪೂರ್ವಕವಾಗಿ ಕೊಡುವುದು ಉತ್ತಮ. ನಿಮಗೆ ಆಗಬೇಕಾದ ಕಾರ್ಯಕ್ಕೆ ಹಣವೂ ಓಡಾಟವೂ ಅತಿಯಾಯಿತು ಎಂದು ಅನ್ನಿಸುವುದು. ಬಾರದಿರುವ ಹಣದ ಬಗ್ಗೆ ತಲೆ ಕೆಡಿಸಿಕೊಳ್ಳದೇ ವಿಧಿಚಿತ್ತದಂತೆ ಆಗುತ್ತದೆ ಎಂದು ಕೈ ಚೆಲ್ಲಿ ಕೂರುವಿರಿ. ಕಛೇರಿಯ ಒತ್ತಡದಿಂದ ಬೇರೆ ಯೋಚನೆಯ ಕಡೆ ಮನಸ್ಸು ಹೋಗದು. ಋಜುತ್ವವು ನಿಮ್ಮಿಂದ ಕಂಗೆಡಿಸುವುದು. ಹೊಸ ವಿಚಾರಗಳು ನಿಮ್ಮ ಆಸಕ್ತಿಯನ್ನು ಹೆಚ್ಚಿಸುವುದು. ಬಂಧುಗಳ ಸಹಾಯದಿಂದ ಉದ್ಯೋಗ ಪ್ರಾಪ್ತಿಯ ಸಂಭವವಿದೆ. ಪ್ರಭಾವೀ ವ್ಯಕ್ತಿಗಳನ್ನು ವೈಯಕ್ತಿಕ ಕಾರ್ಯಗಳಿಗೆ ಬಳಸಿಕೊಳ್ಳುವಿರಿ. ಕೆಟ್ಟ ಮಾರ್ಗವನ್ನು ನೀವು ಗೊತ್ತಿಲ್ಲದೇ ಅನುಸರಿಸುವಿರಿ.
ಸಿಂಹ ರಾಶಿ: ನಿಮ್ಮೊಳಗಿನ ತುಮುಲವು ಏನನ್ನೂ ಮಾಡಿಸದು. ಧಾರ್ಮಿಕ ಮುಖಂಡರ ಅಧಿಕಾರದ ವಿಚಾರದಲ್ಲಿ ಗೊಂದಲ ಉಂಟಾಗುವುದು. ನಿಮ್ಮ ಪ್ರತಿಷ್ಠೆಗಳಿಂದ ಯಾರಿಗೂ ತೊಂದರೆಯಾಗದು. ನೌಕರರ ವಿಚಾರಕ್ಕೆ ನೀವು ಸಿಟ್ಟುಗೊಳ್ಳುವಿರಿ. ಮತ್ತೆ ಮತ್ತೆ ನಿಮಗೆ ಅನಾರೋಗ್ಯವು ಕಾಣಿಸಿಕೊಂಡಿದ್ದು ವೈದ್ಯರಿಂದ ಚಿಕಿತ್ಸೆ ಪಡೆಯಿರಿ ಮತ್ತು ದೈವಜ್ಞರನ್ನು ಸಂಪರ್ಕಿಸಿ ದೈವಾನುಕೂಲದ ಬಗ್ಗೆಯೂ ಮಾತನಾಡಿ. ಔದಾರ್ಯವನ್ನು ತೆರೆದಿಡಬೇಕಾಗುವುದು. ನಿಮ್ಮ ಪೊರ್ವಯೋಜಿತ ಕಾರ್ಯಗಳನ್ನು ಕ್ರಿಯಾರೂಪಕ್ಕೆ ತರಲು ನಿಮಗೆ ಸಾಧ್ಯವಾಗದು. ಏನಾದರೂ ಅಡೆತಡೆಗಳು ಬರಬಹುದು. ನಿಮಗೆ ಯಾರೂ ಸ್ಪಂದನೆ ಕೊಡದೇ ಹೋಗಬಹುದು. ಪುಣ್ಯ ಕ್ಷೇತ್ರಗಳ ದರ್ಶನವನ್ನು ಮಾಡಲು ಪ್ರಯಾಣ ಮಾಡುವಿರಿ. ನಿಮ್ಮ ಉನ್ನತ ಸ್ಥಾನಕೊಡುವ ಬಗ್ಗೆ ಒಮ್ಮತದ ಅಭಿಪ್ರಾಯವು ಬರಲಿದೆ.
ಕನ್ಯಾ ರಾಶಿ: ಬೀಳುವ ಕಾರ್ಯವನ್ನು ತಡೆದು ನಿಲ್ಲಿಸುವಿರಿ. ಅಷ್ಟೇ ಸಾಕು ಮುಂದಿನ ಬೆಳವಣಿಗೆಗೆ. ಬೇಕಾದಷ್ಟು ವಿಶ್ರಾಂತಿ ಪಡೆದು ಕಾರ್ಯದಲ್ಲಿ ಪ್ರವೃತ್ತರಾಗಿ. ಮಹಿಳೆಯರ ಜೊತೆ ಕೆಲಸ ಮಾಡುವುದು ಕಷ್ಟವಾಗುವುದು. ನಿಮ್ಮ ವಾಹನದಿಂದ ನಿಮಗೆ ಅಲ್ಪ ಲಾಭವಾಗುವುದು. ನಕಾರಾತ್ಮಕ ಆಲೋಚನೆಯನ್ನು ಇಂದು ಹೆಚ್ಚು ಮಾಡುವಿರಿ. ಮಕ್ಕಳ ವಿವಾಹಕ್ಕಾಗಿ ನೀವು ಓಡಾಡಿ ಆಯಾಸಪಡುವಿರಿ. ನಿಮ್ಮ ಜವಾಬ್ದಾರಿಯ ಮನೋಭಾವಕ್ಕೆ ಹೆಚ್ಚು ಒತ್ತಡವು ಬರಬಹುದು. ನಿಮ್ಮ ಇಂದಿನ ವರ್ತನೆಯಿಂದ ಬಂಧುಗಳಿಗೆ ಅಸಮಾಧಾನವಾಗುವುದು. ಸರ್ಕಾರದಿಂದ ಆಗಬೇಕಾದ ಕಾರ್ಯಗಳಲ್ಲಿ ಹಿನ್ನಡೆಯಾಗುವುದು. ನಿಮ್ಮ ಹಣವನ್ನು ಉಚಿತ ಸ್ಥಳದಲ್ಲಿ ಹೂಡಿಕೆ ಮಾಡಿ. ಯಾವುದೇ ಸಾಹಸ ಕಾರ್ಯವನ್ನು ಮಾಡಲು ಹೋಗುವುದು ಬೇಡ. ಕಷ್ಟಕಾಲದಲ್ಲಿ ಸಹಾಯ ಮಾಡಿದವರನ್ನು ನೀವು ಸ್ಮರಿಸಿಕೊಳ್ಳುವಿರಿ. ಗೃಹೋದ್ಯಮ ನಡೆಸುವವರಿಗೆ ಲಾಭವಿದೆ. ಅಪರಿಚಿತರ ಜೊತೆ ಮಾತುಕತೆ ಮಿತಿಯಲ್ಲಿ ಇರಲಿ.