ಇನ್ನು ದರ್ಶನ್ ಪಾಲಿಗೆ ಕಡುಕಷ್ಟದ ದಿನಗಳು; ಕರ್ನಾಟಕ ಖ್ಯಾತ ಜ್ಯೋತಿಷಿಯಿಂದ ಜಾತಕ ವಿಶ್ಲೇಷಣೆ
ನಟ ದರ್ಶನ ಅವರಿಗೆ ಸುಪ್ರೀಂ ಕೋರ್ಟ್ ಇಂದು ಜಾಮೀನು ಅರ್ಜಿಯನ್ನು ರದ್ದು ಮಾಡಿ ಆದೇಶ ನೀಡಿದೆ. ಇದೀಗ ಅವರಿಗೆ ಜೈಲು ವಾಸ ಖಂಡಿತ. ಇದೀಗ ಅವರ ಜನ್ಮ ಜಾತಕದಲ್ಲಿ ದೋಷ ಇದೆ ಎಂದು ಹೇಳಲಾಗಿದೆ. ಅವರಿಗೆ ಬರುತ್ತಿರುವ ಇಂತಹ ಸಂಕಷ್ಟಕ್ಕೆ ಅವರು ಈ ದೋಷಗಳೇ ಕಾರಣ ಎಂದು ಹೇಳಲಾಗಿದೆ. ಈ ಬಗ್ಗೆ ಕರ್ನಾಟಕ ಖ್ಯಾತ ಜ್ಯೋತಿಷಿ ಪ್ರಕಾಶ್ ಅಮ್ಮಣ್ಣಾಯ ಅವರು ಕೆಲವೊಂದು ವಿಚಾರಗಳನ್ನು ಇಲ್ಲಿ ತಿಳಿಸಿದ್ದಾರೆ.

ಗ್ರಹ- ಜ್ಯೋತಿಷ್ಯ ಇವುಗಳನ್ನು ನಂಬುವಂಥವರಿಗೆ ನೆನಪಿಸಬೇಕಾದ ಸಂಗತಿ ಹಾಗೂ ನ್ಯಾಯಾಲಯದ ತೀರ್ಪು ವ್ಯಕ್ತಿಗತವಾಗಿ ಏನು ಪರಿಣಾಮ- ಪ್ರಭಾವ ಬೀರಬಹುದು ಎಂಬುದನ್ನು ಮನಸ್ಸಿನಲ್ಲಿಟ್ಟುಕೊಂಡು, ಸೂಕ್ಷ್ಮ ಸನ್ನಿವೇಶದಲ್ಲಿ ಆಲೋಚಿಸಿ ನಿಮ್ಮೆದುರು ತರುತ್ತಿರುವ ಲೇಖನವಿದು. ನಟ ದರ್ಶನ್ (Darshan) ಗೆ ಹೈ ಕೋರ್ಟ್ ನಿಂದ ಸಿಕ್ಕಿದ್ದ ಜಾಮೀನು ಇದೀಗ ಸುಪ್ರೀಂ ಕೋರ್ಟ್ (Supreme Court) ನಿಂದ ರದ್ದಾಗಿದೆ. ಅವರ ಜಾತಕದ ವಿಶ್ಲೇಷಣೆ ಈ ಹಿಂದೆ ಎರಡ್ಮೂರು ಬಾರಿ ನಾನೇ ಮಾಡಿದ್ದೇನೆ. ಪದೇಪದೇ ಪ್ರಸ್ತಾವವೂ ಮಾಡಿದ್ದ ಸಂಗತಿ ಏನೆಂದರೆ, ಅವರ ಜನ್ಮ ಜಾತಕದಲ್ಲಿ ಕರ್ಕಾಟಕದಲ್ಲಿ ಶನಿ ಗ್ರಹ ಇದೆ. ಹಾಗೆ ಜನ್ಮ ಜಾತಕದಲ್ಲಿ ಶನಿ ಗ್ರಹ ಯಾವ ಸ್ಥಾನದಲ್ಲಿ ಇರುತ್ತದೋ ಅಲ್ಲಿಂದ ನಾಲ್ಕು, ಐದು ಅಥವಾ ಎಂಟನೇ ಸ್ಥಾನಕ್ಕೆ ಗೋಚಾರದ (ಅಂದರೆ ಆಯಾ ಸಮಯದಲ್ಲಿನ ಗ್ರಹ ಸಂಚಾರ) ಶನಿ ಬಂದಾಗ ನಾನಾ ಬಗೆಯ ಸಮಸ್ಯೆಗಳನ್ನು ಎದುರಿಸುತ್ತಾರೆ.
ದಶಾ- ಭುಕ್ತಿ, ಅಂತರ್ ಭುಕ್ತಿ, ಸೂಕ್ಷ್ಮ ದಶಾ, ಅಷ್ಟಕ ವರ್ಗ, ಅದೇ ರೀತಿ ವಿವಿಧ ಅಂಶಗಳಲ್ಲಿನ ಗ್ರಹ ಸ್ಥಿತಿ ಇವೆಲ್ಲ ಮತ್ತೂ ಆಳವಾದ ಜ್ಯೋತಿಷ್ಯದ ವಿಚಾರಗಳಾದವು. ಆದರೆ ಜಾತಕದ ಆಳವಾದ ವಿಶ್ಲೇಷಣೆ ಅಗತ್ಯವಿಲ್ಲದೆ ಮೇಲ್ನೋಟಕ್ಕೆ ಗಮನಿಸಿಯೇ ಅಕ್ಷರವನ್ನು ಓದಬಲ್ಲ ಹಾಗೂ ಕನಿಷ್ಠ ಜ್ಯೋತಿಷ್ಯ ಶಾಸ್ತ್ರದ ಗ್ರಹಿಕೆ ಇರುವಂಥವರು ಸಹ ಹೇಳಬಹುದಾದದ್ದು ಏನೆಂದರೆ, ಮಂದಸ್ಯ ಮಂದಾಷ್ಟಮ ದುಃಖದಾಯಕ. ಜನ್ಮಜಾತಕದಲ್ಲಿನ ಶನಿಯಿಂದ ಎಂಟನೇ ಸ್ಥಾನಕ್ಕೆ ಶನಿಯು ಬಂದಾಗ ದುಃಖ ತರುತ್ತಾನೆ.
ಜನ್ಮಜಾತಕದಲ್ಲಿ ಕರ್ಕಾಟಕ ಶನಿ
ಈ ಹಿಂದೆ ಟಿವಿ9 ಕನ್ನಡ ವೆಬ್ ಸೈಟ್ ಗಾಗಿಯೇ ಬರೆದಂಥ ಲೇಖನವಿದೆ. ಅದು ಎಲ್ಲರೂ ಓದಬಹುದು. ಏನೆಂದರೆ, ಜುಲೈನಿಂದ ನಾಲ್ಕೂವರೆ ತಿಂಗಳ ಕಾಲ ಶನಿ ವಕ್ರೀ ಸಂಚಾರ ಮಾಡುತ್ತಾನೆ. ಆ ವೇಳೆ ಕುಂಭ ರಾಶಿಯಲ್ಲಿ ಶನಿ ಇದ್ದಾಗ ಯಾವ ಫಲ ನೀಡಿದ್ದನೋ ಅದೇ ಫಲ ಕೊಡುತ್ತಾನೆ. ಆದ್ದರಿಂದ ಯಾರಿಗೆ ಜನ್ಮ ಜಾತಕದಲ್ಲಿ ಕರ್ಕಾಟಕ ಶನಿ ಇತ್ತೋ ಅಂಥವರು ಸಮಸ್ಯೆಗೆ ಸಿಲುಕಿಕೊಳ್ಳುತ್ತಾರೆ ಎಂದು ತಿಳಿಸಲಾಗಿತ್ತು. ಇದರ ಜೊತೆಗೆ ಕಳೆದ ಮೇ ಹದಿನೆಂಟನೇ ತಾರೀಕಿನಿಂದ ಕುಂಭ ರಾಶಿಗೆ ರಾಹು ಗ್ರಹ, ಸಿಂಹಕ್ಕೆ ಕೇತು ಗ್ರಹದ ಪ್ರವೇಶ ಆಗಿದೆ. ಅದು ಕೂಡ ಜನ್ಮಜಾತಕದಲ್ಲಿ ಶನಿ ಇರುವ ಸ್ಥಾನದಿಂದ ಎಂಟನೇ ಮನೆ ಆಗುತ್ತದೆ. ಶನಿವತ್ ರಾಹು ಎಂದು ಜ್ಯೋತಿಷ್ಯದಲ್ಲಿದೆ. ಶನಿಯು ಕೊಡುವ ಫಲವನ್ನೇ ರಾಹು ಗ್ರಹ ಕೊಡುತ್ತದೆ. ಅಲ್ಲಿಗೆ ಶನಿ ಮತ್ತು ರಾಹು ಎರಡೂ ಅಷ್ಟಮದ ಫಲ ಕೊಡುತ್ತಿವೆ. ದರ್ಶನ್ ಗೆ ಜಾತಕ ರೀತಿಯಾಗಿ ಕಳೆದ ಮೇ ತಿಂಗಳಿಂದ ಹಿಡಿತ ಬಿಗಿಯಾಗಿದೆ. ಯಾವಾಗ ಜುಲೈನಿಂದ ಶನಿಯು ವಕ್ರ ಸ್ಥಿತಿಗೆ ಬಂತೋ ಅಲ್ಲಿಗೆ ಪೂರ್ತಿ ಸಮಸ್ಯೆ ಆವರಿಸಿಕೊಂಡಿತು.
ಸಿಕ್ಕಾಪಟ್ಟೆ ಖರ್ಚು- ದೈಹಿಕ ಅಸ್ವಾಸ್ಥ್ಯ
ಈ ಸಂದರ್ಭದಲ್ಲಿ ಗೋಚಾರವನ್ನು ಗಮನಿಸಿ. ಅವರದು ಉತ್ತರಾಷಾಢ ನಕ್ಷತ್ರ, ಮಕರ ರಾಶಿ. ಆ ರಾಶಿಗೆ ಎಂಟನೇ ಮನೆಯಲ್ಲಿ ಕೇತು, ಆರನೇ ಮನೆಯಲ್ಲಿ ಗುರು (ವ್ಯಯ ಸ್ಥಾನಾಧಿಪತಿ ಆದ ಗುರು ಗ್ರಹ ಶತ್ರು ಅಥವಾ ರೋಗ ಸ್ಥಾನದಲ್ಲಿದೆ) ಸಂಚರಿಸುತ್ತಿದೆ. ದರ್ಶನ್ ಗೆ ಈ ಅವಧಿಯಲ್ಲಿ ಆಗುವ ಖರ್ಚು- ವೆಚ್ಚ, ಶಾರೀರಿಕ ಅಸ್ವಾಸ್ಥ್ಯ ಪದಗಳಲ್ಲಿ ಹೇಳಿ ಮುಗಿಸಲು ಸಾಧ್ಯವಿಲ್ಲದ್ದು. ದೇಹದಲ್ಲಿ ತ್ರಾಣ ಇಲ್ಲದಷ್ಟು ಸುಸ್ತು, ಜ್ವರ ಬಾಧೆ, ವಿಟಮಿನ್ ಗಳಿಗೆ ಸಂಬಂಧಿಸಿದ ತೊಂದರೆ, ನರಕ್ಕೆ ಸಂಬಂಧಿಸಿದ ತೊಂದರೆ ವಿಪರೀತ ಬಾಧಿಸುತ್ತದೆ. ಇದರ ಆಚೆಗೆ ಅಷ್ಟಮ ಶನಿಯ ಪ್ರಭಾವದಿಂದಾಗಿ ಈ ಹಿಂದೆಂದೂ ಕೇಳಿಸಿಕೊಂಡಿರದಂಥ, ಎದುರಿಸದೆ ಇದ್ದಂಥ ಮಾನಸಿಕ ಯಾತನೆ ಆಗುವ ಮಾತುಗಳನ್ನು ಕೇಳಿಸಿಕೊಳ್ಳಬೇಕಾಗುತ್ತದೆ. ರಾಹು ಗ್ರಹದ ಪ್ರಭಾವದಿಂದಾಗಿ “ಧರ್ಮಭ್ರಷ್ಟತೆ” ಆರೋಪ ಹಾಗೂ ನಿಜವಾಗಿಯೂ ಧರ್ಮಭ್ರಷ್ಟ ಕಾರ್ಯಗಳನ್ನು ಮಾಡುವಂತೆ ಆಗುತ್ತದೆ.
ಧರ್ಮಭ್ರಷ್ಟತೆ ಆರೋಪ
ಇಲ್ಲಿ “ಧರ್ಮಭ್ರಷ್ಟತೆ” ಎಂಬ ಪದದ ವ್ಯಾಪ್ತಿಯನ್ನು ವಿವರಿಸಬೇಕು. ಒಂದು ಕೊಲೆ ಆರೋಪದ ಪ್ರಕರಣದಲ್ಲಿ ಇರುವ ವ್ಯಕ್ತಿಯು ಅನುಸರಿಸಬೇಕಾದ “ಧರ್ಮ”ಗಳು ಏನಿರುತ್ತವೆಯೋ ಅದನ್ನು ಜ್ಞಾನತಃ (ತಿಳಿದೋ), ಅಜ್ಞಾನತಃ (ತಿಳಿಯದೆಯೋ) ಮೀರುತ್ತಾರೆ. ಇದರಿಂದಾಗಿ ಸಮಸ್ಯೆ ಇನ್ನೂ ಬಿಗಡಾಯಿಸುತ್ತದೆ. ನವೆಂಬರ್ ಇಪ್ಪತ್ತೆಂಟನೇ ತಾರೀಕಿನ ತನಕ, ಅಂದರೆ ಎಲ್ಲಿಯವರೆಗೆ ಶನಿ ಗ್ರಹವು ವಕ್ರೀ ಸ್ಥಿತಿಯಲ್ಲಿ ಇರುತ್ತದೋ ಅಲ್ಲಿಯ ತನಕ ಇದು ತೀವ್ರತರದ ಸಮಸ್ಯೆಯಾಗಿ ಕಾಡುತ್ತದೆ. ಇನ್ನು ದರ್ಶನ್ ಅವರ ಜನ್ಮಜಾತಕದ ವಿಶ್ಲೇಷಣೆ ಮಾಡಿದರೆ, ಈಗಿನ ಪರಿಸ್ಥಿತಿ ಏನಿದೆಯೋ ಅವರಿಗೆ ಈ ಪರಿಸ್ಥಿತಿಯ ಅಂದಾಜು ಇರುತ್ತದೆ. ಬಹುತೇಕ ಈ ಸನ್ನಿವೇಶಕ್ಕೆ ಮಾನಸಿಕವಾಗಿ ಸಿದ್ಧರಾಗಿಯೂ ಇರುತ್ತಾರೆ ಅಂತ ಖಚಿತವಾಗಿ ಹೇಳಬಹುದು. ಆದರೆ ಈ ಬಾರಿಯ ಸನ್ನಿವೇಶ ಸ್ವಲ್ಪವಾದರೂ ತಿಳಿಯಾಗಬೇಕು ಅಂತಾದರೆ, ಕನಿಷ್ಠ ಅಕ್ಟೋಬರ್ ಹದಿನೆಂಟನೇ ತಾರೀಕು ಬರಬೇಕು.
ಇದನ್ನೂ ಓದಿ: ದರ್ಶನ್ ಜಾತಕದಲ್ಲಿನ ಸಮಸ್ಯೆ ಹದಿಮೂರು ವರ್ಷದ ಹಿಂದೆಯೇ ಎಚ್ಚರಿಸಲಾಗಿತ್ತೆ?
ಪೂರ್ವಜನ್ಮದ ಪಾಪ-ಪುಣ್ಯ
ಕೋರ್ಟ್- ಕಾನೂನು, ನ್ಯಾಯಾಂಗದ ತೀರ್ಮಾನಗಳನ್ನು ವಿಶ್ಲೇಷಣೆ ಮಾಡುವುದೋ ಈ ಲೇಖನದ ಉದ್ದೇಶವಲ್ಲ. ಒಬ್ಬ ಜ್ಯೋತಿಷಿಯಾಗಿ ಅಕೆಡಮಿಕ್ ಆದ ಆಸಕ್ತಿಯಿಂದ ಸಿದ್ಧಪಡಿಸಿದ್ದೇನೆ. ಏಕೆಂದರೆ, ಅದೆಂಥ ಶ್ರೀಮಂತನೇ ಆದರೂ ನಿಭಾಯಿಸಲು ಸಾಧ್ಯವಾಗದಂಥ ಖರ್ಚುಗಳು ದರ್ಶನ್ ರನ್ನು ವಿಪರೀತ ಬಾಧಿಸುತ್ತವೆ. ಅದರ ಜೊತೆಗೆ ವ್ಯಕ್ತಿತ್ವಕ್ಕೆ ಈ ಹಿಂದೆಂದಿಗಿಂತ ಹೆಚ್ಚಿನ ಹಾನಿ, ಅವಮಾನಗಳಾಗುತ್ತವೆ. ಒಬ್ಬ ವ್ಯಕ್ತಿಯ ಕರ್ಮಗಳು ಆತನ ಪೂರ್ವಜನ್ಮದ ಪಾಪ- ಪುಣ್ಯದ ಫಲಿತವಾಗಿರುತ್ತದೆ.
ದರ್ಶನ್ ಜನ್ಮಜಾತಕದಲ್ಲಿನ ಗುರು-ಕೇತು ಯುತಿ ತನ್ನ ಫಲವನ್ನು ನೀಡುವುದಕ್ಕೆ ಆರಂಭಿಸಿದೆ. ಇದರ ಜೊತೆಗೆ ಗೋಚಾರದಲ್ಲಿನ ಗ್ರಹಸ್ಥಿತಿ ಸಹ ಪ್ರಭಾವ ಬೀರುತ್ತಾ ಇದೆ. ಇದಕ್ಕೆ ವೈದಿಕ ಜ್ಯೋತಿಷ್ಯ ರೀತಿಯಾಗಿ ಕೆಲವು ಪರಿಹಾರಗಳು ಇವೆ. ಅದನ್ನು ಸಂಬಂಧಪಟ್ಟವರು ಗಮನಿಸಿ, ಮಾಡಿಕೊಂಡಲ್ಲಿ ಬಾಧೆಯ ಪ್ರಮಾಣ ಕಡಿಮೆ ಆಗುತ್ತದೆ. ಉಳಿದಂತೆ ವಿಧಿ ಹಾಗೂ ದೈವೆಚ್ಛೆ.
(ಇಲ್ಲಿ ವ್ಯಕ್ತವಾಗಿರುವ ಅಭಿಪ್ರಾಯ ಲೇಖಕರದ್ದೇ ಹೊರತು ಟಿವಿ9 ಕನ್ನಡ ವೆಬ್ ಸೈಟ್ ಆಗಲೀ ಅಥವಾ ಸೋದರ ಸಂಸ್ಥೆಗಳಾಗಲೀ ಅನುಮೋದಿಸುವುದಿಲ್ಲ ಮತ್ತು ಯಾವುದೇ ರೀತಿಯಲ್ಲೂ ಜವಾಬ್ದಾರ ಅಲ್ಲ- ಸಂಪಾದಕರು)
-ಲೇಖಕರು: ಪ್ರಕಾಶ್ ಅಮ್ಮಣ್ಣಾಯ, ಜ್ಯೋತಿಷಿ, ಕಾಪು (ಉಡುಪಿ ಜಿಲ್ಲೆ)
ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:58 pm, Thu, 14 August 25




