‘ಇಂಧನ ದರ ಏರಿಕೆಯಿಂದ ಕಷ್ಟವಾಗುತ್ತಿದೆ ಎಂದು ಗೊತ್ತಿದೆ, ಆದರೆ..’ ಇಂಧನ ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿದ್ದೇನು?
Fuel Price Hike: ಪೆಟ್ರೋಲ್ ಮತ್ತು ಡೀಸೆಲ್ ಅತ್ಯಧಿಕ ಬೆಲೆ ಕಂಡಿದೆ. ಕಳೆದ ಆರು ವಾರಗಳ ಅವಧಿಯಲ್ಲಿ 5.72 ರೂಪಾಯಿಯಿಂದ 6.25ರೂಪಾಯಿಯಷ್ಟು ಇಂಧನ ಬೆಲೆ ಏರಿಕೆಯಾಗಿದೆ.
ದೆಹಲಿ: ಪೆಟ್ರೋಲ್ ಬೆಲೆ ದಿನೇದಿನೇ ಹೆಚ್ಚಳವಾಗುತ್ತಿದೆ. ಇಂಧನ ದರ ಏರಿಕೆಯ ಬಿಸಿ ಜನಸಾಮಾನ್ಯರನ್ನು ಬಹಳವಾಗಿ ಕಾಡುತ್ತಿದೆ. ಈ ನಡುವೆ, ಕೇಂದ್ರ ಇಂಧನ ಸಚಿವ ಧರ್ಮೇಂದ್ರ ಪ್ರಧಾನ್ ಭಾನುವಾರ ಇಂಧನ ಬೆಲೆ ಏರಿಕೆಯ ಬಗ್ಗೆ ಮಾತನಾಡಿದ್ದಾರೆ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಹೆಚ್ಚಳವು ತೊಂದರೆ ಉಂಟುಮಾಡುತ್ತಿದೆ ಎಂದು ಗೊತ್ತಿದೆ. ಆದರೆ, ಇಂಧನ ಬೆಲೆ ತಗ್ಗಿಸಬಹುದು. ಈಗ ಸರ್ಕಾರವು ಹಣವನ್ನು ಅಭಿವೃದ್ಧಿ ಯೋಜನೆಗಳಿಗಾಗಿ ಬಳಸಲು ಸಂಗ್ರಹಿಸುತ್ತಿದೆ ಎಂದು ಧರ್ಮೇಂದ್ರ ಪ್ರಧಾನ್ ಪ್ರತಿಕ್ರಿಯಿಸಿದ್ದಾರೆ.
ಈಗಿನ ಇಂಧನ ದರವು ಜನರಿಗೆ ಸಮಸ್ಯೆ ತಂದೊಡ್ಡುತ್ತಿದೆ ಎಂದು ಅರ್ಥವಾಗುತ್ತಿದೆ. ಆದರೆ, ಅದು ರಾಜ್ಯ ಅಥವಾ ಕೇಂದ್ರ ಸರ್ಕಾರ ಆಗಿರಲಿ, ಸುಮಾರು 35,000 ಕೋಟಿಯಷ್ಟು ಹಣವು ವಾರ್ಷಿಕವಾಗಿ ಲಸಿಕೆಯ ಮೇಲೆ ಖರ್ಚು ಮಾಡುತ್ತಿದೆ ಎಂದು ತಿಳಿಸಿದ್ದಾರೆ. ಇಂತಹ ಸಂದರ್ಭದಲ್ಲಿ ನಾವು ಹಣವನ್ನು ಅಭಿವೃದ್ಧಿ ಯೋಜನೆಗಳಿಗೆ ಬಳಕೆ ಮಾಡಲು ಕೂಡಿಡುತ್ತಿದ್ದೇವೆ ಎಂದು ಪ್ರಧಾನ್ ಮಾತನಾಡಿದ್ದಾರೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿ 1 ಲಕ್ಷ ಕೋಟಿ ಮೊತ್ತವನ್ನು ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಯೋಜನೆಯ ಮೂಲಕ, 8 ತಿಂಗಳ ಕಾಲ ಬಡವರಿಗೆ ಉಚಿತ ಆಹಾರ ನೀಡಲು ಬಳಕೆ ಮಾಡಲು ಅನುಮೋದಿಸಿದ್ದಾರೆ. ಪ್ರಧಾನ ಮಂತ್ರಿ ಕಿಸಾನ್ ಯೋಜನೆಯಿಂದ, ಸಾವಿರಾರು ಕೋಟಿ ಹಣವು ರೈತರ ಖಾತೆಗೆ ನೇರವಾಗಿ ಜಮಾವಣೆಯಾಗುತ್ತಿದೆ. ಮೊನ್ನೆಯಷ್ಟೇ ಕನಿಷ್ಠ ಬೆಂಬಲ ಬೆಲೆ (ಎಮ್ಎಸ್ಪಿ) ಕೂಡ ಏರಿಕೆ ಮಾಡಲಾಗಿದೆ ಎಂದು ಧರ್ಮೇಂದ್ರ ಪ್ರಧಾನ್ ಉಲ್ಲೇಖಿಸಿದ್ದಾರೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಇಂಧನ ದರ ಏರಿಕೆಯ ವಿರುದ್ಧ ನಡೆಸುತ್ತಿರುವ ವಾಗ್ದಾಳಿ, ಪ್ರತಿಭಟನೆಗಳ ಬಗ್ಗೆಯೂ ಧರ್ಮೇಂದ್ರ ಪ್ರಧಾನ್ ಮಾತು ತೆಗೆದಿದ್ದಾರೆ. ರಾಹುಲ್ ಗಾಂಧಿಗೆ ಇಂಧನ ದರ ಏರಿಕೆಯ ಬಗ್ಗೆ ಅಷ್ಟೊಂದು ಕಾಳಜಿ ಇದ್ದರೆ, ಅವರು ತಮ್ಮ ಪಕ್ಷ ಆಡಳಿತದಲ್ಲಿ ಇರುವ ಮಹಾರಾಷ್ಟ್ರ ಹಾಗೂ ರಾಜಸ್ಥಾನದಲ್ಲಿ ಇಂಧನ ಬೆಲೆ ಇಳಿಕೆ ಮಾಡಲು ಸೂಚಿಸಲಿ ಎಂದು ಹೇಳಿದ್ದಾರೆ.
ಪೆಟ್ರೋಲ್ ಮತ್ತು ಡೀಸೆಲ್ ಅತ್ಯಧಿಕ ಬೆಲೆ ಕಂಡಿದೆ. ಕಳೆದ ಆರು ವಾರಗಳ ಅವಧಿಯಲ್ಲಿ 5.72 ರೂಪಾಯಿಯಿಂದ 6.25ರೂಪಾಯಿಯಷ್ಟು ಇಂಧನ ಬೆಲೆ ಏರಿಕೆಯಾಗಿದೆ. ಇದು ಅಂತಾರಾಷ್ಟ್ರೀಯ ಮಟ್ಟದಲ್ಲಿ ತೈಲ ಬೆಲೆ ಏರಿಕೆ ಹಾಗೂ ರಾಷ್ಟ್ರ ಮತ್ತು ರಾಜ್ಯ ಸರ್ಕಾರದ ದಾಖಲೆಯ ಮಟ್ಟದ ತೆರಿಗೆಯ ಪರಿಣಾಮವಾಗಿದೆ.
ಇದನ್ನೂ ಓದಿ: Petrol Price Today: ಏರುತ್ತಲೇ ಇದ್ದ ಪೆಟ್ರೋಲ್, ಡೀಸೆಲ್ ದರ ಇಂದು ಸಹ ಹೆಚ್ಚಳವೇ?
Published On - 7:38 pm, Sun, 13 June 21