ಏನ್ ಫಾಸ್ಟ್ಯಾಗ್ ಬಂದರೇನು ಈ ಹೈವೇ ಟೋಲ್ ಪ್ಲಾಜಾಗಳಲ್ಲಿ ನಿಲ್ಲೋದು ತಪ್ಪಲಿಲ್ಲ. ಕೊಡೋ ದುಡ್ಡನ್ನ ಕೊಟ್ಟು, ಹೀಗೆ ರಸ್ತೆಯಲ್ಲಿ ಸಮಯ ಕಳೆಯಬೇಕಾಗಿದೆ ಎಂದು ಬೇಸರ ಮಾಡಿಕೊಳ್ಳುತ್ತಿದ್ದಲ್ಲಿ ನಿಮಗಾಗಿಯೇ ಆಸಕ್ತಿಕರ ಮಾಹಿತಿ ಇಲ್ಲಿದೆ. ಟೋಲ್ ಪ್ಲಾಜಾಗಳಿಗೆ ಸಂಬಂಧಿಸಿದಂತೆ ನ್ಯಾಷನಲ್ ಹೈವೇಸ್ ಅಥಾರಿಟಿ ಆಫ್ ಇಂಡಿಯಾ (NHAI)ಯಿಂದ ಹೊಸ ಮಾರ್ಗದರ್ಶಿ ಸೂತ್ರಗಳನ್ನು ವಿತರಣೆ ಮಾಡಲಾಗಿದೆ. ಆ ಸೂಚನೆಯಲ್ಲಿ ಇರುವ ಪ್ರಕಾರ, ಟೋಲ್ ಪ್ಲಾಜಾಗಳಲ್ಲಿ ವಾಹನಗಳ ಸರದಿ 100 ಮೀಟರ್ಗಳನ್ನು (328.084 ಅಡಿಗಳು) ದಾಟುವಂತಿಲ್ಲ. ಕಾಯುವ ಅವಧಿ ಕಡಿಮೆ ಮಾಡಬೇಕು ಎಂಬ ಕಾರಣಕ್ಕೆ ಈ ಆದೇಶ ಬಂದಿದೆ. ಇದೇ ಕಾರಣಕ್ಕೆ NHAI ಕೂಡ ಟೋಲ್ ಫೀ ಸಂಗ್ರಹಿಸುವ ಅವಧಿ ಒಂದು ವಾಹನಕ್ಕೆ ಗರಿಷ್ಠ 10 ಸೆಕೆಂಡ್ಗೆ ಮೊಟಕುಗೊಳಿಸುವ ಉದ್ದೇಶ ಇರಿಸಿಕೊಂಡಿದೆ. ಬಹಳ ದಟ್ಟಣೆ ಇರುವಂಥ ಸಮಯದಲ್ಲೂ ಈ 10 ಸೆಕೆಂಡ್ ಗುರಿ ಮೀರಬಾರದು ಎಂದುಕೊಂಡು ಪ್ರಯತ್ನಿಸಲಾಗುತ್ತಿದೆ.
ಆದರೆ, ವಾಸ್ತವದಲ್ಲಿ 10 ಸೆಕೆಂಡ್ಗಿಂತ ಹೆಚ್ಚಿನ ಸಮಯ ಆಗುತ್ತಿದೆ. ಅದರ ಪರಿಣಾಮವಾಗಿ 100 ಮೀಟರ್ಗಳನ್ನು ದಾಟಿ ವಾಹನಗಳ ಸರದಿ ನಿಲ್ಲುತ್ತದೆ. ಹೀಗೆ ನಿಂತಲ್ಲಿ ಏನು ಮಾಡಲಾಗುತ್ತದೆ? ಹೆದ್ದಾರಿ ಪ್ರಾಧಿಕಾರ ಹೇಳುವಂತೆ ಟೋಲ್ ಶುಲ್ಕವನ್ನು ಪಾವತಿಸದೆ ಮುಂದಕ್ಕೆ ಸಾಗಬಹುದು. ಹೌದು, ತಮಾಷೆ ಮಾಡುತ್ತಿಲ್ಲ. NHAIನಿಂದ ಬಂದಿರುವ ಹೊಸ ಮಾರ್ಗದರ್ಶಿ ಸೂತ್ರದ ಪ್ರಕಾರ, 100 ಮೀಟರ್ಗಳನ್ನು ದಾಟಿ, ವಾಹನಗಳನ್ನು ಸರದಿಯಲ್ಲಿ ನಿಂತರೆ, ಸಾಲಿನ ಮುಂಭಾಗದಲ್ಲಿ ಇರುವುದು ಯಾವುದೇ ಶುಲ್ಕ ಪಾವತಿಸದೆ ತೆರಳಬಹುದು. ಈ ಮಾರ್ಗದರ್ಶಿ ಸೂತ್ರ ಅಳವಡಿಸಿಕೊಳ್ಳುವುದಾದರೂ ಹೇಗೆ ಎಂಬ ಪ್ರಶ್ನೆ ಬರುವುದು ಸಹಜ. ಟೋಲ್ ಗೇಟ್ನಿಂದ 100 ಮೀಟರ್ ದೂರದಲ್ಲಿ ಒಂದು ಹಳದಿ ಪಟ್ಟಿಯನ್ನು ಬಳಿಯಲಾಗುತ್ತದೆ.
ಭಾರತದಾದ್ಯಂತ ಇರುವ ಟೋಲ್ ಪ್ಲಾಜಾದ ಪ್ರತಿ ಬೂತ್ ಬಳಿ ಇಂಥದ್ದೊಂದು ಹಳದಿ ಪಟ್ಟಿ 100 ಮೀಟರ್ ದೂರದಲ್ಲಿ ಇರುತ್ತದೆ. ಅಂದ ಹಾಗೆ ಸದ್ಯಕ್ಕೆ ಭಾರತದ ನಾನಾ ಭಾಗಗಳಲ್ಲಿ ಸ್ಥಳೀಯವಾಗಿ ಕೊರೊನಾ ಲಾಕ್ಡೌನ್ ಇರುವುದರಿಂದ ಟೋಲ್ ಪ್ಲಾಜಾಗಳಲ್ಲಿ ಪ್ರಯಾಣಿಸುವುದಕ್ಕೆ ಅವಕಾಶ ಇಲ್ಲ. ಆದರೆ ಫಾಸ್ಟ್ಯಾಗ್ ಜಾರಿಯಾದ ಮೇಲೆ ಟೋಲ್ ಪ್ಲಾಜಾಗಳಲ್ಲಿ ಸಮಯ ಕಳೆಯುವುದು ಕಡಿಮೆ ಆಗಿದೆ. ಆದರೆ ಈಗಲೂ ಆ ಅವಧಿ ಕಡಿಮೆ ಆಗಬೇಕಾದ ಜರೂರತ್ತಿದೆ. ಈಗಿನ ಹೊಸ ನಿಯಮಾವಳಿಯಿಂದ ಟೋಲ್ ಬೂತ್ಗಳಲ್ಲಿ ವಾಹನಗಳ ಸಂಚಾರ ವೇಗ ಪಡೆದುಕೊಳ್ಳಬಹುದು ಎಂಬ ನಂಬಿಕೆ ಹಲವರಲ್ಲಿದೆ.
ಇದನ್ನೂ ಓದಿ: FASTag ಟೋಲ್ಗಳಲ್ಲಿ ಫಾಸ್ಟ್ಟ್ಯಾಗ್ ಕಡ್ಡಾಯ.. ಇಲ್ಲದಿದ್ರೆ ಕಟ್ಟಬೇಕಾಗುತ್ತೆ ದುಬಾರಿ ಹಣ
(If line in toll plaza crosses 100 metres, front line vehicles need not to pay fee, according to National Highway Authority Of India (NHAI))
Published On - 12:45 pm, Thu, 27 May 21