ದೇಶದಲ್ಲಿ ಮೆಡಿಕಲ್ ಆಕ್ಸಿಜನ್ ಕೊರತೆ ಇಲ್ಲ; ಪೂರೈಕೆಗೆ ಸಮಯ ತೆಗೆದುಕೊಳ್ಳುತ್ತಿದೆ ಎಂದ ನವೀನ್ ಜಿಂದಾಲ್
ಕೊರೊನಾ ಎರಡನೇ ಅಲೆಯ ಹಿನ್ನೆಲೆಯಲ್ಲಿ ದೇಶದಲ್ಲಿ ವೈದ್ಯಕೀಯ ಆಮ್ಲಜನಕದ ಕೊರತೆ ಇದ್ದು, ಈ ಬಗ್ಗೆ ಜಿಂದಾಲ್ ಸ್ಟೀಲ್ ಅಂಡ್ ಪವರ್ ಅಧ್ಯಕ್ಷ ನವೀನ್ ಜಿಂದಾಲ್ ಈ ಬಗ್ಗೆ ಮಾತನಾಡಿದ್ದಾರೆ.
ಇತ್ತೀಚಿನ ವಾರಗಳಲ್ಲಿ ಏರುತ್ತಿರುವ ಕೊರೊನಾ ಪ್ರಕರಣಗಳ ಕಾರಣಕ್ಕೆ ಎರಡನೇ ಅಲೆ ಅದೆಷ್ಟು ಮಾರಣಾಂತಿಕ ಎಂಬುದು ಸಾಬೀತಾಗುತ್ತಿದೆ. ಈ ಸಲ ಹೆಚ್ಚೆಚ್ಚು ಮಂದಿ ಉಸಿರಾಟದ ಸಮಸ್ಯೆ ಬಗ್ಗೆ ದೂರುತ್ತಿದ್ದು, ಅವರಿಗೆ ಆಕ್ಸಿಜನ್ (ಆಮ್ಲಜನಕ) ಬೆಂಬಲದ ಅಗತ್ಯ ಇದೆ. ದಿಢೀರನೆ ಬೇಡಿಕೆ ಹೆಚ್ಚಾಗಿರುವುದರಿಂದ ಆಮ್ಲಜನಕ ಪೂರೈಕೆ ಕಡಿಮೆಯಾಗಿದೆ. ಕೇಂದ್ರ ಸರ್ಕಾರದಿಂದ ಬಂದಿರುವ ಆಮ್ಲಜನಕ ಉತ್ಪಾದನೆ ಹೆಚ್ಚಿಸಬೇಕು ಎಂಬ ಮನವಿಗೆ ಸ್ಪಂದಿಸಿ, ದೊಡ್ಡ ದೊಡ್ಡ ಖಾಸಗಿ ಉಕ್ಕು ಉದ್ಯಮಗಳು ಹಾಗೂ ಸರ್ಕಾರಿ ಸ್ವಾಮ್ಯದ ಉಕ್ಕು ಮತ್ತು ತೈಲ ಉದ್ಯಮಗಳು ಅಗತ್ಯ ಪ್ರಮಾಣದ ಆಮ್ಲಜನಕವನ್ನು ಪೂರೈಕೆ ಮಾಡುತ್ತಿವೆ.
ಅಂದಹಾಗೆ, ರಿಲಯನ್ಸ್, ಟಾಟಾ ಸ್ಟೀಲ್ ಮತ್ತಿತರ ಉಕ್ಕಿನ ಕಂಪೆನಿಗಳ ಜತೆಗೆ ಪ್ರಧಾನಮಂತ್ರಿ ಮಾತುಕತೆ ನಡೆಸಿದ್ದಾರೆ. ಲಿಕ್ವಿಡ್ ಆಕ್ಸಿಜನ್ ಅನ್ನು ಅಗತ್ಯ ಇರುವ ಕಡೆ ಪೂರೈಸುವಂತೆ ಕೇಳಿಕೊಂಡಿದ್ದಾರೆ. ಈಗಿನ ಸನ್ನಿವೇಶದಲ್ಲಿ ಜಿಂದಾಲ್ ಸ್ಟೀಲ್ ಅಂಡ್ ಪವರ್ ಅಧ್ಯಕ್ಷ ನವೀನ್ ಜಿಂದಾಲ್ ಅವರ ಎಕ್ಸ್ಕ್ಲೂಸಿವ್ ಸಂದರ್ಶನವನ್ನು ಎನ್ಡಿಟಿವಿಯಿಂದ ಮಾಡಲಾಗಿದೆ. “ಜೀವಗಳನ್ನು ಉಳಿಸುವುದು ನಮ್ಮ ಕರ್ತವ್ಯ. ನಮ್ಮ ಉಕ್ಕು ಘಟಕದಲ್ಲಿ ಬಳಸುವ ಆಕ್ಸಿಜನ್ ಅನ್ನು ವೈದ್ಯಕೀಯ ಉದ್ದೇಶಗಳಿಗೆ ಬಳಸಲು ನೀಡುತ್ತಿದ್ದೇವೆ. ಆಮ್ಲಜನಕಕ್ಕೆ ಯಾವುದೇ ಕೊರತೆ ಇಲ್ಲ ಎಂದು ಜನರಿಗೆ ಹೇಳಲು ಇಷ್ಟಪಡುತ್ತೇನೆ, ” ಎಂದು ಅವರು ಹೇಳಿದ್ದಾರೆ.
ಸಂದರ್ಶನದಲ್ಲಿ ನವೀನ್ ಜಿಂದಾಲ್ ಹೇಳಿದ ಅಂಶಗಳ ಆಯ್ದ ಭಾಗವನ್ನು ಇಲ್ಲಿ ನೀಡಲಾಗಿದೆ: * ಈಗಿನ ಕೊರೊನಾ ಬಿಕ್ಕಟ್ಟು ದೊಡ್ಡ ಮಟ್ಟದ್ದು. ಬಹಳ ಮಂದಿಗೆ ಆಮ್ಲಜನಕ ಬೇಕಿದೆ. ನಾವು ಉತ್ಪಾದಿಸುವುದಕ್ಕಿಂತ ಬೇಡಿಕೆಯು ಹೆಚ್ಚಿನ ಪ್ರಮಾಣದಲ್ಲಿದೆ. ದೇಶದ ಉಕ್ಕು ಕಾರ್ಖಾನೆ ಬಳಿ ತುಂಬ ದೊಡ್ಡ ಆಮ್ಲಜನಕ ಉತ್ಪಾದನೆ ಘಟಕಗಳಿವೆ. ಅಲ್ಲಿಂದ ಎಲ್ಲಿಗೆ ಅಗತ್ಯ ಇದೆಯೋ ಅಲ್ಲಿಗೆ ತಿರುಗಿಸುತ್ತಿದ್ದೇವೆ. * ನಾನೀಗ ಒಡಿಶಾದ ಅಂಗುಲ್ನಲ್ಲಿದ್ದೇನೆ. ನಾವು ಉತ್ಪಾದಿಸುವುದು ಅನಿಲ ರೂಪದ ಆಮ್ಲಜನಕ. ಆದರೆ ನಮ್ಮ ಘಟಕಗಳಲ್ಲಿ ಲಿಕ್ವಿಡ್ ಆಕ್ಸಿಜನ್ ಉತ್ಪಾದಿಸುವುದು ಕಡಿಮೆ. ಈಗ ಶುರು ಮಾಡಿದ್ದೇವೆ. ನಮಗೆ ಈಗ ಮಧ್ಯಪ್ರದೇಶ, ದೆಹಲಿ ಮುಖ್ಯಮಂತ್ರಿಗಳು, ಪ್ರಧಾನಮಂತ್ರಿಯಿಂದಲೂ ಬೇಡಿಕೆ ಬರುತ್ತಿದೆ. ಎಲ್ಲ ಕಡೆಗೂ ತಲುಪಿಸಬೇಕು ಅಂದರೆ ಸಮಯ ತೆಗೆದುಕೊಳ್ಳುತ್ತದೆ. * ಈಗಾಗಲೇ ತುರ್ತು ಅಗತ್ಯಕ್ಕೆ ಏನು ಮಾಡಬೇಕೋ ಅದೆಲ್ಲ ಶುರು ಮಾಡಲಾಗಿದೆ. ಈಗಿರುವುದು ಸಂಕಷ್ಟದ ಸನ್ನಿವೇಶ. ಸಾಗಾಟ ಸಲೀಸಾಗಬೇಕು. ಈ ಬಗ್ಗೆ ಈಗಾಗಲೇ ಪ್ರಧಾನಮಂತ್ರಿ ಹೇಳಿದ್ದಾರೆ. ದೇಶದಲ್ಲಿ ಅಗತ್ಯ ಪ್ರಮಾಣದ ಆಕ್ಸಿಜನ್ ಇದೆ. ಆದರೆ ಇದು ಅನಿರೀಕ್ಷಿತ ಸನ್ನಿವೇಶ. ದೇಶದ ನಾನಾ ಭಾಗಗಳಿಗೆ ಕಳುಹಿಸಬೇಕಾಗಿದೆ. ಟ್ಯಾಂಕರ್ಗಳ ಚಾಲಕರು ಆಯಾ ಸ್ಥಳಗಳಿಗೆ ತಲುಪಿಸುವುದಕ್ಕೆ ಶ್ರಮ ಹಾಕುತ್ತಿದ್ದಾರೆ. ಜೀವಗಳನ್ನು ಉಳಿಸಲು ನಮ್ಮ ಎಲ್ಲ ಪ್ರಯತ್ನವನ್ನು ಹಾಕುತ್ತಿದ್ದೇವೆ. * ನಾವು ಸ್ವಲ್ಪ ಪ್ರಮಾಣದಲ್ಲಿ ಲಿಕ್ವಿಡ್ ಆಕ್ಸಿಜನ್ ಉತ್ಪಾದಿಸಬಹುದು. ಹೊರಗಿನಿಂದ ಖರೀದಿಸುತ್ತೇವೆ. ಈ ಹಿಂದೆ ನಾವು ಅನಿಲ ಸ್ವರೂಪದಲ್ಲಿ ತಯಾರಿಸುತ್ತಿದ್ದೆವು. ಈಗ ಲಿಕ್ವಿಡ್ ಆಕ್ಸಿಜನ್ಗೆ ಪರಿವರ್ತನೆ ಮಾಡಿ, ಪೂರೈಸುತ್ತಿದ್ದೇವೆ. ಉತ್ಪಾದನೆ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತದೆ.
Two more tankers of medical #Oxygen have left Odisha's Angul for Visakhapatnam under police escort to be supplied in #OxygenCrisis Deficit States. @CMO_Odisha@MPNaveenJindal @odisha_police @ArvindKejriwal @OfficeofUT pic.twitter.com/sj3YbNbPgI
— Suffian सूफ़ियान سفیان (@iamsuffian) April 24, 2021
ಇದನ್ನೂ ಓದಿ: ಆಮ್ಲಜನಕ ಉತ್ಪಾದನೆಗೆ ಸಂಬಂಧಿಸಿದಂತೆ ಅಂಬಾನಿ ಸೇರಿದಂತೆ ಪ್ರಮುಖರ ಜತೆ ಮೋದಿ ಚರ್ಚೆ
ಇದನ್ನೂ ಓದಿ: JSW steel: ದಿನಕ್ಕೆ 400 ಟನ್ ದ್ರವೀಕೃತ ಆಮ್ಲಜನಕ ಪೂರೈಕೆಗೆ ಜೆಎಸ್‌ಡಬ್ಲ್ಯೂ ಸ್ಟೀಲ್ ಸಮ್ಮತಿ
(Jindal Steel And Power chairman Naveen Jindal said in an exclusive interview, India have enough oxygen to supply, but requires some time to reach out)