Twitter CEO: ಮತ್ತೊಮ್ಮೆ ಭಾರತೀಯ ಮೂಲದ ವ್ಯಕ್ತಿಗೆ ಟ್ವಿಟರ್ ಸಿಇಒ ಹುದ್ದೆ? ನಿಭಾಯಿಸಲು ಸಿದ್ಧ ಎಂದ ಶಿವ ಅಯ್ಯದೊರೆ
Dr. Shiva Ayyadurai: ಭಾರತೀಯ ಮೂಲದವರಾದ, ಮ್ಯಾಸಚೂಸೆಟ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ವಿದ್ವಾಂಸ ಡಾ. ಶಿವ ಅಯ್ಯದೊರೆ ಎಂಬವರು ಟ್ವಿಟರ್ ಸಿಇಒ ಹುದ್ದೆ ನಿಭಾಯಿಸಲು ಉತ್ಸುಕರಾಗಿರುವುದಾಗಿ ಟ್ವೀಟ್ ಮಾಡಿದ್ದಾರೆ.
ನವದೆಹಲಿ: ಮೈಕ್ರೋ ಬ್ಲಾಗಿಂಗ್ ತಾಣ ಟ್ವಿಟರ್ (Twitter) ಮುಖ್ಯ ಕಾರ್ಯನಿರ್ವಹಣಾಧಿಕಾರಿ (CEO) ಹುದ್ದೆ ತ್ಯಜಿಸಲು ಸಿದ್ಧ ಎಂದು ಮಾಲೀಕ ಎಲಾನ್ ಮಸ್ಕ್ (Elon Musk) ಇತ್ತೀಚೆಗೆ ಹೇಳಿದ್ದು, ಹೊಸ ಸಿಇಒ ಹುಡುಕಾಟದಲ್ಲಿರುವ ಬಗ್ಗೆ ವರದಿಯಾಗಿತ್ತು. ಇದರ ಬೆನ್ನಲ್ಲೇ, ಇದೀಗ ಮತ್ತೆ ಭಾರತೀಯ ಮೂಲದ ವ್ಯಕ್ತಿಯೇ ಟ್ವಿಟರ್ಗೆ ಸಿಇಒ ಆಗಿ ನೇಮಕಗೊಳ್ಳಲಿದ್ದಾರೆಯೇ ಎಂಬ ಕುತೂಹಲ ಮೂಡಿದೆ. ಇದಕ್ಕೆ ಕಾರಣವಿದೆ. ಭಾರತೀಯ ಮೂಲದವರಾದ, ಮ್ಯಾಸಚೂಸೆಟ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (MIT) ವಿದ್ವಾಂಸ ಡಾ. ಶಿವ ಅಯ್ಯದೊರೆ ಎಂಬವರು ಟ್ವಿಟರ್ ಸಿಇಒ ಹುದ್ದೆ ನಿಭಾಯಿಸಲು ಉತ್ಸುಕರಾಗಿರುವುದಾಗಿ ಟ್ವೀಟ್ ಮಾಡಿದ್ದಾರೆ. ಒಂದು ವೇಳೆ ಎಲಾನ್ ಮಸ್ಕ್ ಒಪ್ಪಿದರೆ ಮತ್ತೆ ಭಾರತೀಯ ಮೂಲದವರೇ ಟ್ವಿಟರ್ನ ಉನ್ನತ ಹುದ್ದೆಗೇರಲಿದ್ದಾರೆ. ಈ ಹಿಂದೆ ಭಾರತೀಯ ಮೂಲದ ಪರಾಗ್ ಅಗರ್ವಾಲ್ ಟ್ವಿಟರ್ ಸಿಇಒ ಆಗಿದ್ದರು. ಮಸ್ಕ್ ಮಾಲೀಕತ್ವ ವಹಿಸಿಕೊಂಡ ಬೆನ್ನಲ್ಲೇ ಅವರನ್ನು ವಜಾಗೊಳಿಸಲಾಗಿತ್ತು.
‘ನಾನು ಟ್ವಿಟರ್ನ ಸಿಇಒ ಹುದ್ದೆ ನಿರ್ವಹಿಸಲು ಆಸಕ್ತಿ ಹೊಂದಿದ್ದೇನೆ. ಎಂಐಟಿಯಿಂದ ನಾಲ್ಕು ಪದವಿ ಪಡೆದಿದ್ದು, 7 ಹೈಟೆಕ್ ಸಾಫ್ಟ್ವೇರ್ ಕಂಪನಿಗಳನ್ನು ಯಶಸ್ವಿಯಾಗಿ ನಿಭಾಯಿಸಿದ್ದೇನೆ. ಅರ್ಜಿ ಸಲ್ಲಿಸುವ ವಿಧಾನದ ಬಗ್ಗೆ ಸಲಹೆ ನೀಡಿ. ವಿಧೇಯತೆಯಿಂದ ಡಾ. ಶಿವ ಅಯ್ಯದೊರೆ, ಎಂಐಟಿ ಪಿಎಚ್ಡಿ, ಇ-ಮೇಲ್ ಅನ್ವೇಷಕ’ ಎಂದು ಅಯ್ಯದೊರೆ ಇತ್ತೀಚೆಗೆ ಟ್ವೀಟ್ ಮಾಡಿದ್ದರು.
ಇದನ್ನೂ ಓದಿ: ಎಲಾನ್ ಮಸ್ಕ್ ತಮ್ಮ ಹುದ್ದೆಯಿಂದ ಕೆಳಗಿಳಿಯಬೇಕಂದ ಶೇ. 57ರಷ್ಟು ಜನ, ಈ ಟ್ವಿಟ್ಟರ್ ಸಮೀಕ್ಷೆಯ ಒಳ ಮರ್ಮವೇನು?
Dear Mr. Musk(@elonmusk):
I am interested in the CEO position @Twitter. I have 4 degrees from MIT & have created 7 successful high-tech software companies. Kindly advise of the process to apply.
Sincerely,
Dr. Shiva Ayyadurai, MIT PhD The Inventor of Email
m:1-617-631-6874
— Dr.SHIVA Ayyadurai, MIT PhD. Inventor of Email (@va_shiva) December 24, 2022
ನಂತರ, ‘ನಿಮ್ಮ ಬೆಂಬಲಕ್ಕೆ ಧನ್ಯವಾದಗಳು ಎಲಾನ್ ಮಸ್ಕ್. ಈ ಜವಾಬ್ದಾರಿ ವಹಿಸಿಕೊಳ್ಳಲಿರುವವರು ಪಾರದರ್ಶಕವಾಗಿರಬೇಕು ಮತ್ತು ತಮ್ಮ ಅರ್ಹತೆಗಳನ್ನು ಬಹಿರಂಗವಾಗಿ ಘೋಷಿಸಬೇಕು ಎಂದು ನಾನು ಬಯಸುತ್ತೇನೆ. 14ನೇ ವರ್ಷದಲ್ಲಿ ಇ-ಮೇಲ್ ಅಭಿವೃದ್ಧಿಪಡಿಸುವುದರೊಂದಿಗೆ ನನ್ನ ವೃತ್ತಿ ಅನುಭವ ಆರಂಭಗೊಂಡಿದೆ’ ಎಂದು ಮತ್ತೊಂದು ಟ್ವೀಟ್ನಲ್ಲಿ ಅವರು ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ: Elon Musk: ಟ್ವಿಟರ್ಗೆ ಹೊಸ ಸಿಇಒ ಹುಡುಕಾಟದಲ್ಲಿದ್ದಾರೆ ಎಲಾನ್ ಮಸ್ಕ್
ಡಾ. ಶಿವ ಅಯ್ಯದೊರೆ ತಮಿಳುನಾಡು ಮೂಲದವರಾಗಿದ್ದಾರೆ. ಈ ಕುರಿತು ಇನ್ವೆಂಟರ್ ಆಫ್ ಇ-ಮೇಲ್ ವೆಬ್ಸೈಟ್ನಲ್ಲಿ ಮಾಹಿತಿ ಇದೆ. ಟ್ವಿಟರ್ ಸಿಇಒ ಸ್ಥಾನಕ್ಕೆ ಬೇರೊಬ್ಬರು ಸಿಕ್ಕಿದ ಕೂಡಲೇ ಸದ್ಯದಲ್ಲೇ ರಾಜೀನಾಮೆ ನೀಡಲಿದ್ದೇನೆ. ಆ ನಂತರ ಸಾಫ್ಟ್ವೇರ್ ಹಾಗೂ ಸರ್ವರ್ ತಂಡಗಳನ್ನಷ್ಟೇ ನೋಡಿಕೊಳ್ಳಲಿದ್ದೇನೆ ಎಂದು ಮಸ್ಕ್ ಟ್ವೀಟ್ ಮಾಡಿದ್ದರು.
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:28 am, Tue, 27 December 22