ಬ್ರೆಜಿಲ್​ನಲ್ಲಿ ಬರಗಾಲ, ಭಾರತದ ಸಕ್ಕರೆಗೆ ವಿಶ್ವ ಮಾರುಕಟ್ಟೆಯಲ್ಲಿ ಬೇಡಿಕೆ ಕುದುರುವ ನಿರೀಕ್ಷೆ

ಮುಂದಿನ ವರ್ಷದಿಂದ ಸಕ್ಕರೆ ಬೇಡಿಕೆ ಹೆಚ್ಚಾಗಬಹುದು ಎಂಬ ವಿಶ್ಲೇಷಣೆಗಳು ಚಾಲ್ತಿಯಲ್ಲಿದ್ದು, ಸರ್ಕಾರದ ನೆರವಿನ ಅಗತ್ಯವೇ ಇಲ್ಲದೆ ಸಕ್ಕರೆ ಕಾರ್ಖಾನೆಗಳು ಬಂಪರ್ ಲಾಭ ಪಡೆಯುವ ಅವಕಾಶಗಳಿವೆ

ಬ್ರೆಜಿಲ್​ನಲ್ಲಿ ಬರಗಾಲ, ಭಾರತದ ಸಕ್ಕರೆಗೆ ವಿಶ್ವ ಮಾರುಕಟ್ಟೆಯಲ್ಲಿ ಬೇಡಿಕೆ ಕುದುರುವ ನಿರೀಕ್ಷೆ
ಸಕ್ಕರೆ ಕಾರ್ಖಾನೆಯೊಂದರ ಸಮೀಪ ಕಬ್ಬು ಇಳಿಸುತ್ತಿರುವ ರೈತರು (ಎಡಚಿತ್ರ). ಕಾರ್ಖಾನೆಯಲ್ಲಿ ಸಿದ್ಧವಾಗಿರುವ ಸಕ್ಕರೆ
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Sep 10, 2021 | 8:08 PM

ದೆಹಲಿ: ವಿಶ್ವದ ಎರಡನೇ ಅತಿದೊಡ್ಡ ಸಕ್ಕರೆ ಉತ್ಪಾದಕ ದೇಶ ಎನಿಸಿರುವ ಭಾರತವು ಮುಂದಿನ ಕಬ್ಬು ಹಂಗಾಮಿನ ಹೊತ್ತಿಗೆ ಜಾಗತಿಕ ಮಾರುಕಟ್ಟೆಯಲ್ಲಿ ಕುದುರಬಹುದಾದ ಬೇಡಿಕೆಯ ಲಾಭ ತನ್ನದಾಗಿಸಿಕೊಳ್ಳಲು ಸಿದ್ಧತೆ ಆರಂಭಿಸಿದೆ. ಮುಂದಿನ ವರ್ಷದಿಂದ ಸಕ್ಕರೆ ಬೇಡಿಕೆ ಹೆಚ್ಚಾಗಬಹುದು ಎಂಬ ವಿಶ್ಲೇಷಣೆಗಳು ಚಾಲ್ತಿಯಲ್ಲಿದ್ದು, ಸರ್ಕಾರದ ನೆರವಿನ ಅಗತ್ಯವೇ ಇಲ್ಲದೆ ಸಕ್ಕರೆ ಕಾರ್ಖಾನೆಗಳು ಬಂಪರ್ ಲಾಭ ಪಡೆಯುವ ಅವಕಾಶಗಳಿವೆ ಎಂದು ಸಕ್ಕರೆ ವಹಿವಾಟು ನಡೆಸುವ ಉದ್ಯಮಿಗಳು ಹೇಳಿದ್ದಾರೆ.

ಮುಂದಿನ ಕಬ್ಬು ಹಂಗಾಮಿನಲ್ಲಿ 1 ಹಡಗಿನಷ್ಟು ಅಂದರೆ 12 ಲಕ್ಷ ಟನ್​ನಷ್ಟು ಸಕ್ಕರೆ ಪೂರೈಕೆಗೆ ಈಗಾಗಲೇ ಮಹಾರಾಷ್ಟ್ರ ಮತ್ತು ಕರ್ನಾಟಕದ ಸಕ್ಕರೆ ಕಾರ್ಖಾನೆಗಳಿಗೆ ಬೇಡಿಕೆ ಬಂದಿದೆ ಎಂದು ಮಯಿರ್ ಕಮಾಡಿಟಿಸ್ ಇಂಡಿಯಾ ಲಿಮಿಟೆಡ್​ನ ವ್ಯವಸ್ಥಾಪಕ ನಿರ್ದೇಶಕ ರಾಹಿಲ್ ಶೇಖ್ ಹೇಳಿದ್ದಾರೆ. ಮುಂದಿನ ಅಕ್ಟೋಬರ್​ನಿಂದಾಚೆಗೆ, ಬೆಲೆಯಲ್ಲಿ ಸ್ಥಿರತೆ ಕಂಡು ಬಂದರೆ ಭಾರತವು 50ರಿಂದ 60 ಲಕ್ಷ ಟನ್ ಸಕ್ಕರೆ ರಫ್ತು ಮಾಡಬಹುದು ಎಂದು ಅವರು ಅಭಿಪ್ರಾಯಪಟ್ಟರು.

ನ್ಯೂಯಾರ್ಕ್​ನ ವಾಯಿದಾ ವಹಿವಾಟಿನಲ್ಲಿ (ಫ್ಯೂಚರ್ಸ್​) ಕಚ್ಚಾ ಸಕ್ಕರೆಯ ಬೆಲೆಯು ನಾಲ್ಕು ವರ್ಷಗಳ ಗರಿಷ್ಠಮಟ್ಟ ಮುಟ್ಟಿದೆ. ಕಳೆದ ಒಂದೇ ವರ್ಷದಲ್ಲಿ ಶೇ 50ರಷ್ಟು ಹೆಚ್ಚಾಗಿದೆ. ಕಬ್ಬು ಬೆಳೆಯುವ ಪ್ರಮುಖ ದೇಶ ಬ್ರೆಜಿಲ್​ನಲ್ಲಿ ಬರಗಾಲ ಮತ್ತು ವ್ಯಾಪಕ ಹಿಮಪಾತದಿಂದಾಗಿ ಕಬ್ಬು ಬೆಳೆ ಹಾಳಾಗಿದೆ. ಇದು ಜಾಗತಿಕ ಸಕ್ಕರೆ ಧಾರಣೆಯ ಮೇಲೆ ಈಗಾಗಲೇ ಪರಿಣಾಮ ಬೀರುತ್ತಿದ್ದು, ಮುಂದಿನ ಸಕ್ಕರೆ ಹಂಗಾಮಿನಿಂದ ಈ ಬೆಳವಣಿಗೆಯ ಪರಿಣಾಮಗಳು ಸ್ಪಷ್ಟವಾಗಿ ಗೋಚರಿಸಲಿವೆ. ವಿಶ್ವದ ಸರಾಸರಿ ಬಳಕೆಯ ಲೆಕ್ಕಾಚಾರದಲ್ಲಿ ಸುಮಾರು 38.3 ಲಕ್ಷ ಟನ್ ಸಕ್ಕರೆ ಕೊರತೆಯಾಗಬಹುದು ಎಂದು ಅಂದಾಜಿಸಲಾಗಿದೆ ಎಂದು ಅಂತರರಾಷ್ಟ್ರೀಯ ಸಕ್ಕರೆ ಒಕ್ಕೂಟ ಹೇಳಿದೆ.

ಭಾರತದಲ್ಲಿ ನಿರೀಕ್ಷಿಸಲಾಗಿರುವ ಬಂಪರ್​ ಇಳುವರಿಯು ಒಟ್ಟಾರೆ ಸಕ್ಕರೆ ಧಾರಣೆಯೂ ಕುಸಿಯುವಂತೆ ಮಾಡಬಹುದು ಎಂದು ಅಂದಾಜಿಸಲಾಗಿದೆ. ಕಳೆದ ಕೆಲವು ವರ್ಷಗಳಿಂದ ಭಾರತದಲ್ಲಿ ಸಕ್ಕರೆ ಇಳುವರಿ ಉತ್ತಮ ಪ್ರಮಾಣದಲ್ಲಿ ಬರುತ್ತಿದೆ. 2021-22ರ ಹಂಗಾಮಿನಲ್ಲಿ 3.1 ಕೋಟಿ ಟನ್ ಸಕ್ಕರೆ ಉತ್ಪಾದನೆಯಾಗಿತ್ತು. ಈ ಪೈಕಿ 2.65 ಕೋಟಿ ಟನ್ ದೇಶೀಯವಾಗಿಯೇ ಮಾರಾಟವಾಗಿತ್ತು ಎಂದು ಭಾರತೀಯ ಸಕ್ಕರೆ ಕಾರ್ಖಾನೆಗಳ ಒಕ್ಕೂಟದ ಮಾಹಿತಿ ತಿಳಿಸುತ್ತದೆ. ಮಾರಾಟವಾಗದ 87 ಲಕ್ಷ ಟನ್ ಸಕ್ಕರೆ ಇಂದಿಗೂ ಈ ಕಾರ್ಖಾನೆಗಳ ಗೋದಾಮಿನಲ್ಲಿಯೇ ಉಳಿದಿವೆ.

ಮುಂದಿನ ಸಕ್ಕರೆ ಹಂಗಾಮಿನಲ್ಲಿ 60 ಲಕ್ಷ ಟನ್​ಗೆ ವಿದೇಶಗಳಿಂದ ಬೇಡಿಕೆ ಕುದುರಬಹುದು ಎಂದು ಒಕ್ಕೂಟ ಅಂದಾಜಿಸಿದೆ. ಪ್ರಸಕ್ತ ಸಾಲಿನಲ್ಲಿ 70 ಲಕ್ಷ ಟನ್ ಸಕ್ಕರೆಯನ್ನು ರಫ್ತು ಮಾಡಲಾಗಿತ್ತು. ಸರ್ಕಾರದ ಸಹಾಯಧನ ಮತ್ತು ಉತ್ತೇಜಕ ಕ್ರಮಗಳೂ ಭಾರತದ ಸಕ್ಕರೆ ದಾಸ್ತಾನಿಗೆ ವಿದೇಶಗಳಲ್ಲಿ ಮಾರುಕಟ್ಟೆ ಹುಡುಕಲು ನೆರವಾಗಿವೆ. ಸ್ಥಳೀಯ ಮಾರುಕಟ್ಟೆ ಧಾರಣೆಗಿಂತಲೂ ವಿದೇಶದ ಮಾರುಕಟ್ಟೆಯಲ್ಲಿ ಧಾರಣೆ ಕುಸಿದಿದ್ದಾಗ ಸರ್ಕಾರದ ಉತ್ತೇಜಕಗಳನ್ನು ಘೋಷಿಸಲಾಗುತ್ತದೆ. ಮುಂದಿನ ಸಕ್ಕರೆ ಹಂಗಾಮಿಗೂ ಸರ್ಕಾರ ನೆರವು ಘೋಷಿಸಬಹುದು ಎಂಬ ನಿರೀಕ್ಷೆ ಉದ್ಯಮ ವಲಯದಲ್ಲಿದೆ ಎಂದು ಬ್ಲೂಂಬರ್ಗ್​ ಜಾಲತಾಣ ವರದಿ ಮಾಡಿದೆ.

(Sugarcane Crop loss in Brazil India could export 60 tonnes of sugar next season)

ಇದನ್ನೂ ಓದಿ: ಸಕ್ಕರೆ ಕಾರ್ಖಾನೆ ವಿರುದ್ಧ ಸಿಡಿದ್ದೆದ್ದ ರೈತ ಮುಖಂಡರು; ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿ ಮುಂದೆ ಅಹೋರಾತ್ರಿ ಧರಣಿ

ಇದನ್ನೂ ಓದಿ: ಮುರುಗೇಶ್ ನಿರಾಣಿ ಗುತ್ತಿಗೆ ಪಡೆದಿದ್ದ ಸಕ್ಕರೆ ಕಾರ್ಖಾನೆಗೆ ರೈತರ ಮುತ್ತಿಗೆ; ತೀವ್ರ ಆಕ್ರೋಶ

Published On - 8:07 pm, Fri, 10 September 21