ಸಕ್ಕರೆ ಕಾರ್ಖಾನೆ ವಿರುದ್ಧ ಸಿಡಿದ್ದೆದ್ದ ರೈತ ಮುಖಂಡರು; ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿ ಮುಂದೆ ಅಹೋರಾತ್ರಿ ಧರಣಿ

ಇಂದಿನಿಂದ ಶುರುವಾಗಿರುವ ರೈತರ ಅಹೋರಾತ್ರಿ ಧರಣಿ ಸರಕಾರ ಕಬ್ಬಿಗೆ 2400 ರೂಪಾಯಿ ಟನ್ ಕೊಡುವವರೆಗೂ ನಮ್ಮ ಹೋರಾಟ ಹೀಗೆ ಇರುತ್ತದೆಂದು ರೈತ ಸಂಘದ ಅಧ್ಯಕ್ಷ ಬಾಬುರಾವ್ ತಿಳಿಸಿದ್ದಾರೆ.

ಸಕ್ಕರೆ ಕಾರ್ಖಾನೆ ವಿರುದ್ಧ ಸಿಡಿದ್ದೆದ್ದ ರೈತ ಮುಖಂಡರು; ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿ ಮುಂದೆ ಅಹೋರಾತ್ರಿ ಧರಣಿ
ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿ ಮುಂದೆ ಅಹೋರಾತ್ರಿ ಧರಣಿ
Follow us
TV9 Web
| Updated By: preethi shettigar

Updated on: Aug 17, 2021 | 10:58 AM

ಬೀದರ್: ಜಿಲ್ಲೆಯಲ್ಲಿ ಕಬ್ಬು ಬೆಳೆದ ರೈತರಿಗೆ ಸಿಹಿಗಿಂತ ಕಹಿ ಅನುಭವ ನೀಡುತ್ತಿರುವುದೇ ಹೆಚ್ಚು. ಸಕ್ಕರೆ ಕಾರ್ಖಾನೆಯವರು ರೈತರ ಕಬ್ಬಿಗೆ ಸೂಕ್ತ ಬೆಲೆ ನಿಗದಿ ಮಾಡದೆ ಮನಸ್ಸಿಗೆ ಬಂದ ರೀತಿಯಲ್ಲಿ ಪ್ರತಿ ವರ್ಷವೂ ರೈತರಿಂದ ಕಬ್ಬು ಖರೀದಿ ಮಾಡುತ್ತಿದ್ದು, ರೈತರನ್ನು ಅಸಹಾಯರನ್ನಾಗಿ ಮಾಡಿದೆ. ಕಾರ್ಖಾನೆಯವರ ಈ ಧೋರಣೆಯನ್ನು ಪ್ರಶ್ನೆ ಮಾಡಬೇಕಾದ ಜಿಲ್ಲಾಡಳಿತ ಕಾರ್ಖಾನೆ ಮಾಲೀಕರ ಶಕ್ತಿಯ ಮುಂದೆ ಮಂಡಿಯೂರಿದ್ದು, ಇದು ಸಹಜವಾಗಿಯೇ ಈ ಭಾಗದ ಕಬ್ಬು ಬೆಳೆಗಾರರ ಅಸಮಾಧಾನಕ್ಕೆ ಕಾರಣವಾಗಿದೆ.

ಬೀದರ್ ಜಿಲ್ಲೆಯಲ್ಲಿ ರೈತರಿಗೆ ಕಹಿಯಾದ ಕಬ್ಬು ಸೂಕ್ತ ಬೆಲೆ ನಿಗದಿ, ಸಕಾಲಕ್ಕೆ ಕಬ್ಬು ಕಾರ್ಖಾನೆಗೆ ಸಾಗಿಸುವುದು ರೈತರಿಗೆ ಕನಸಿನ ಮಾತಾಗಿದೆ. ಮಾರುಕಟ್ಟೆಯಲ್ಲಿ 25 ಪೈಸೆ ಚಾಕ್​ಲೇಟ್​ ಸೇರಿ ಪ್ರತಿ ವಸ್ತುವಿಗೂ ಕೂಡಾ ಬೆಲೆ ನಿಗದಿ ಇದೆ. ಆದರೆ ವರ್ಷವಿಡಿ ಬೆವರು ಸುರಿಸಿ ಬೆಳೆದ ಕಬ್ಬಿಗೆ ಪ್ರತಿ ಟನ್​ಗೆ ಎಷ್ಟು ಬೆಲೆ ಎಂಬುವುದೇ ಗೊತ್ತಿಲ್ಲ ಕಾರ್ಖಾನೆ ಮಾಲೀಕರ ತೋಳ್ಬಲದ ಮುಂದೆ ಸರಕಾರಿ ಯಂತ್ರ ಮಂಡಿಯೂರಿದೆ.

ಜಿಲ್ಲೆಯಲ್ಲಿ ಸಕ್ಕರೆ ಕಾರ್ಖಾನೆಗಳು ಆಡಿದ್ದೇ ಆಟ ನಡೆಸಿದ್ದೆ ಕಾರುಬಾರು ಎಂಬಂಥ ಸ್ಥಿತಿ ಇಲ್ಲಿ ನಿರ್ಮಾಣವಾಗಿದೆ. ಸಹಕಾರಿ ಹಾಗೂ ಖಾಸಗಿ ಸಕ್ಕರೆ ಕಾರ್ಖಾನೆಗಳ ಮೇಲೆ ಜಿಲ್ಲಾಡಳಿತ ಸರಕಾರಕ್ಕೆ ಹಿಡಿತವೆ ಇಲ್ಲದಂತಾಗಿದೆ. ಉಸ್ತುವಾರಿ ಸಚಿವರು, ಶಾಸಕರು ಯಾವತ್ತೂ ಇವುಗಳತ್ತ ಕಣ್ಣೆತ್ತಿಯೂ ನೋಡಿಲ್ಲ. ಹೀಗಾಗಿ ಕಬ್ಬು ಬೆಳೆದ ಬೆಳೆಗಾರರು ಸಂಕಷ್ಟ ಎದುರಿಸುವಂತಾಗಿದ್ದು, ಬೆಲೆ ನಿಗದಿ ಮಾಡದಿದ್ದರೂ ಕಾರ್ಖಾನೆ ರೈತರು ಕಬ್ಬು ಹಾಕುತ್ತಿದ್ದು, ಕಾರ್ಖಾನೆಯವರು ಕೊಟ್ಟಷ್ಟು ಹಣ ಪಡೆಯಬೇಕು ಎಂದು ಕಬ್ಬು ಬೆಳೆದ ರೈತ ಬಸವರಾಜ್ ಅಳಲು ತೋಡಿಕೊಂಡಿದ್ದಾರೆ.

ಬೀದರ್ ಜಿಲ್ಲೆಯಲ್ಲಿ ಆರು ಸಕ್ಕರೆ ಕಾರ್ಖಾನೆಗಳಿದ್ದು, ಅದರಲ್ಲಿ ಬೀದರ್ ಸಹಕಾರಿ ಸಕ್ಕರೆ ಕಾರ್ಖಾನೆ ಸದ್ಯ ಬಾಗಿಲು ಮುಚ್ಚಿದೆ. ಮಹಾತ್ಮ ಗಾಂಧಿ ಸಕ್ಕರೆ ಕಾರ್ಖಾನೆ, ನಾರಂಜಾ ಸಹಕಾರಿ ಸಕ್ಕರೆ ಕಾರ್ಖಾನೆ, ಭಾಲ್ಕೇಶ್ವರ ಸಕ್ಕರೆ ಕಾರ್ಖಾನೆ, ಕಿಸಾನ್ ಸಕ್ಕರೆ ಕಾರ್ಖಾನೆ, ಭವಾನಿ ಸಕ್ಕರೆ ಕಾರ್ಖಾನೆ ಎಲ್ಲೆಡೆ ಕಬ್ಬು ಹಾಕಿದ ರೈತರ ಗೋಳು ಇದೆಯಾಗಿದ್ದು, ಯಾವೊಂದು ಕಾರ್ಖಾನೆ ರೈತರಿಗೆ ಇತಿಂಷ್ಟೂ ಹಣ ನಿಗದಿ ಮಾಡಿಲ್ಲ. ಬದಲಾಗಿ ರೈತರಿಗೆ ಬಾಯಿ ಮಾತಿನಲ್ಲಿ ಕ್ಷಿಂಟಾಲ್​ಗೆ 2,200 ಕೊಡುವುದಾಗಿ ಹೇಳಿಕೊಂಡು ಕಳೆದ ವರ್ಷ ರೈತರಿಂದ ಕಬ್ಬು ಖರೀದಿಸಿದ್ದರು. ಆದರೇ ರೈತರಿಗೆ ಕೊಟ್ಟಿದ್ದು ಮಾತ್ರ ಟನ್​ಗೆ 1950 ರೂಪಾಯಿಗಳು ಮಾತ್ರ.

ಇನ್ನೂ ಕಾರ್ಖಾನೆಯವರು ಯಾವತ್ತೂ ರೈತರ ಹಿತ ಗಮನಿಸಿ ಬೆಲೆ ನಿಗದಿ ನಿರ್ಧಾರ ಕೈಗೊಳ್ಳುತ್ತಿಲ್ಲ. ರಾಜ್ಯದ ವಿವಿಧೆಡೆ ಅಕ್ಕಪಕ್ಕದ ರಾಜ್ಯಗಳಲ್ಲಿ ಒಂದೇ ದರವಿದ್ದರೆ ಬೀದರ್​ನಲ್ಲಿ ಮಾತ್ರ ಬೇರೆ ಬೇರೆ ಇರುತ್ತದೆ. ಇನ್ನೂ ಯಾವುದೇ ಕಾರ್ಖಾನೆಯೂ ಕೂಡಾ ಕ್ರಷಿಂಗ್ ಆರಂಭಿಸುವ ಮುನ್ನ ಕಬ್ಬಿನ ದರ ನಿಗದಿಯೆ ಮಾಡಲ್ಲ. ಈ ವಿಷಯದಲ್ಲಿ ಮಾತ್ರ ಎಲ್ಲಾ ಕಾರ್ಖಾನೆಯ ಪ್ರಮುಖರು ಒಂದೆ ತತ್ವದಡಿ ಹೆಜ್ಜೆ ಹಾಕುತ್ತಾರೆ.

ಕಳೆದ ವರ್ಷ ಟನ್​ಗೆ 1950 ರೂಪಾಯಿ ಮಾತ್ರ ಪಾವತಿಸಲಾಗಿದೆ. ಎಫ್​ಆರ್​ಪಿಯಂತೆ 2400 ರೂಪಾಯಿ ಕೊಡಬೇಕಿತ್ತು. ಆದರೇ ಕೊಡಲೇ ಇಲ್ಲ. ಹೀಗಾಗಿ ಹೋದ ಸಲ ಆದ ಹಾಗೇ ಈ ವರ್ಷ ಆಗಬಾರದೆಂದು ರೈತರು ಪ್ರತಿಭಟನೆ ಆರಂಭಿಸಿದ್ದಾರೆ. ಕಬ್ಬಿಗೆ ದರ ನಿಗದಿ ಮಾಡಿ ಎಂದು ಹತ್ತಾರು ಸಲ ಜಿಲ್ಲೆಯ ಸಚಿವರಿಗೆ ಜಿಲ್ಲಾಧಿಕಾರಿಗಳಿಗೆ ಕಾರ್ಖಾನೆಯ ಮಾಲೀಕರಿಗೆ ರೈತರು ಮನವಿ ಮಾಡಿದ್ದರೂ ಏನು ಪ್ರಯೋಜನವಾಗುತ್ತಿಲ್ಲ. ಹೀಗಾಗಿ ರೊಚ್ಚಿಗೆದ್ದಿರುವ ರೈತರು ಬೀದರ್ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚೌಹಾನ್ ಕಚೇರಿ ಮುಂದೆ ಅಹೋರಾತ್ರಿ ಧರಣಿಗೆ ಮುಂದಾಗಿದ್ದಾರೆ.

ಇಂದಿನಿಂದ ಶುರುವಾಗಿರುವ ರೈತರ ಅಹೋರಾತ್ರಿ ಧರಣಿ ಸರಕಾರ ಕಬ್ಬಿಗೆ 2400 ರೂಪಾಯಿ ಟನ್ ಕೊಡುವವರೆಗೂ ನಮ್ಮ ಹೋರಾಟ ಹೀಗೆ ಇರುತ್ತದೆಂದು ರೈತ ಸಂಘದ ಅಧ್ಯಕ್ಷ ಬಾಬುರಾವ್ ತಿಳಿಸಿದ್ದಾರೆ.

ಮಹಾರಾಷ್ಟ್ರ, ತೆಲಂಗಾಣ ಕಾರ್ಖಾನೆಗಳು ಕಳೆದ ವರ್ಷ ಟನ್ ಕಬ್ಬಿಗೆ 2200 ರಿಂದ 2400 ವರೆಗೆ ದರ ಕೊಟ್ಟಿದ್ದು ಗಡೀ ಜಿಲ್ಲೆಯಲ್ಲಿ ಮಾತ್ರ 1950 ಗಡೀ ದಾಟುತ್ತಲೇ ಇಲ್ಲ. ಇದು ಸಹಜವಾಗಿಯೇ ರೈತರ ಅಸಮಾದಾನಕ್ಕೆ ಕಾರಣವಾಗಿದ್ದು, ಹೀಗಾಗಿ ಕಾರ್ಖಾನೆ ಮಾಲೀಕರ ಈ ಧೋರಣೆ ವಿರುದ್ಧ ರೈತರು ಪ್ರತಿಭಟನೆ ಹಾದಿ ಹಿಡಿದಿದ್ದಾರೆ.

ವರದಿ: ಸುರೇಶ್ ನಾಯಕ್

ಇದನ್ನೂ ಓದಿ: ಒಂದೇ ರಾತ್ರಿಯಲ್ಲಿ 43 ಮೆಟ್ರಿಕ್ ಟನ್ ಕಬ್ಬು ಟ್ರ್ಯಾಕ್ಟರ್​ಗೆ ತುಂಬಿಸಿ ಸಾಹಸ ಮೆರೆದ ಕಾರ್ಮಿಕ

ಕಬ್ಬು ಬೆಳೆಗಾರರಿಗೆ ಬಾಕಿ ಹಣ ನೀಡಲು ಸಕ್ಕರೆ ಕಾರ್ಖಾನೆ ಮಾಲೀಕರಿಗೆ ಖಡಕ್ ಸೂಚನೆ ನೀಡಿದ ವಿಜಯಪುರ ಜಿಲ್ಲಾಧಿಕಾರಿ