ಬೆಂಗಳೂರು, ಜುಲೈ 08: ಮೊನ್ನೆಯಷ್ಟೇ ರಾಜ್ಯದ ಐಪಿಎಸ್ ಅಧಿಕಾರಿಗಳ ಸಭೆ ಮಾಡಿದ್ದ ಸಿಎಂ ಸಿದ್ದರಾಮಯ್ಯ (Siddaramaiah) ಇಂದು ಐಎಎಸ್ (IAS) ಅಧಿಕಾರಿಗಳ ಜೊತೆ ವಿಧಾನಸೌಧದಲ್ಲಿ ಸಭೆ ಮಾಡಿದ್ದಾರೆ. ಸರ್ಕಾರದ ಆಡಳಿತಾತ್ಮಕ ವಿಚಾರಗಳ ಕುರಿತು ಸಭೆಯಲ್ಲಿ ಚರ್ಚೆ ಮಾಡಲಾಗಿದೆ. ರಾಜ್ಯದಲ್ಲಿ 1.40 ಕೋಟಿ ಎಕರೆ ಸರ್ಕಾರಿ ಜಮೀನು ಇದ್ದು, ಅದರಲ್ಲಿ ಒಟ್ಟು 91,000 ಜಮೀನುಗಳು ಒತ್ತವರಿಯಾಗಿರುವುದಾಗಿ ಗುರುತಿಸಲಾಗಿದೆ. ಲ್ಯಾಂಡ್ ಬೀಟ್ ಮೊಬೈಲ್ ತಂತ್ರಾಂಶದ ಮೂಲಕ ದತ್ತಾಂಶ ಸೃಜಿಸಲಾಗಿದೆ. 14.32 ಲಕ್ಷ ಸರ್ಕಾರಿ ಜಮೀನುಗಳ ಸ್ಥಳ ಪರಿಶೀಲನೆಗೆ ಸೂಚಿಸಲಾಗಿದೆ.
ಈ ಪೈಕಿ 10.78 ಲಕ್ಷ ಜಮೀನುಗಳಿಗೆ ಗ್ರಾಮಲೆಕ್ಕಾಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಇದರಲ್ಲಿ ಕಂದಾಯ ಇಲಾಖೆಯ 1.93 ಲಕ್ಷ ಜಮೀನುಗಳು ಇದ್ದು, ವಿವಿಧ 20 ಇಲಾಖೆಗಳ ಜಮೀನುಗಳನ್ನು ಗುರುತಿಸಲಾಗಿದೆ. ಕೆರೆ ಮತ್ತು ಸ್ಮಶಾನಗಳ ಹೆಚ್ಚುವರಿ ಜವಾಬ್ದಾರಿ ತೆಗೆದುಕೊಂಡು, ಸಮೀಕ್ಷೆ ನಡೆಸಲಾಗಿದೆ.
ಇದನ್ನೂ ಓದಿ: ಸ್ವಾತಂತ್ರ್ಯೋತ್ಸವ, ಸಂವಿಧಾನ ದಿನಾಚರಣೆಯಲ್ಲಿ ಅಂಬೇಡ್ಕರ್ ಭಾವಚಿತ್ರ ಕಡ್ಡಾಯ
ಆಗಸ್ಟ್ ತಿಂಗಳಿನಿಂದ ಸರ್ವೇಯರುಗಳ ಲಭ್ಯತೆ ನೋಡಿಕೊಂಡು ಒತ್ತುವರಿ ತೆರವು ಮಾಡಲು ಕ್ರಮ ಕೈಗೊಳ್ಳಲಾಗುವುದು. ಇತರೆ ಇಲಾಖೆಯವರೂ ಸಹ ತಮ್ಮ ಜಮೀನು ಎಲ್ಲಿದೆ ಹಾಗೂ ಒತ್ತುವರಿಯಾಗಿದೆಯೇ ಎಂಬ ಕುರಿತು ಪರಿಶೀಲಿಸಲು ಅವಕಾಶವಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಮಾಹಿತಿ ನೀಡಿದ್ದಾರೆ.
ವಿವಿಧ ಇಲಾಖೆಗಳ ಆಸ್ತಿ ರಕ್ಷಣೆಗೆ ಎಸ್ಟೇಟ್ ಅಧಿಕಾರಿಗಳನ್ನು ನೇಮಕ ಮಾಡಬೇಕು. ತಮ್ಮ ಇಲಾಖೆಗೆ ಹಂಚಿಕೆಯಾದ ಭೂಮಿಯ ಮಾಹಿತಿಯನ್ನು ಆರ್.ಟಿ.ಸಿ.ಯಲ್ಲಿ ಕೇಂದ್ರೀಕರಣ ಮಾಡಬೇಕು ಹಾಗೂ ಒತ್ತುವರಿ ತೆರವುಗೊಳಿಸಿ, ತಮ್ಮ ಆಸ್ತಿಯನ್ನು ಸಂರಕ್ಷಿಸಬೇಕು. ಸರ್ಕಾರಿ ಜಮೀನು ಒತ್ತುವರಿಯನ್ನು ನಿರ್ದಾಕ್ಷಿಣ್ಯವಾಗಿ ತೆರವುಗೊಳಿಸಬೇಕು ಎಂದು ಸಭೆಯಲ್ಲಿ ತಿರ್ಮಾನಿಸಲಾಗಿದೆ.
ಇದನ್ನೂ ಓದಿ: ಕಾರ್ಯಾಂಗ, ಶಾಸಕಾಂಗ ಹೆಚ್ಚು ಪರಿಣಾಮಕಾರಿ, ಗುಣಾತ್ಮಕವಾಗಿ ಕೆಲಸ ಮಾಡುತ್ತಿಲ್ಲ: ಸಿದ್ದರಾಮಯ್ಯ ಬೇಸರ
ಗಣಿ, ಕ್ವಾರಿಗಳಿಂದ ರಾಜ್ಯ ಸರ್ಕಾರಕ್ಕೆ ರಾಯಲ್ಟಿ ವಂಚನೆ ವಿಚಾರವಾಗಿ ಕಠಿಣ ಕ್ರಮಕೈಗೊಳ್ಳುವಂತೆ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ. ಪರ್ಮಿಟ್ ಪಡೆಯದೆ ರಾಯಲ್ಟಿ ಸಂಗ್ರಹದಿಂದ ಸರ್ಕಾರಕ್ಕೆ ನಷ್ಟವಾಗುತ್ತಿರುವ ಬಗ್ಗೆ ಸಚಿವರು ಸಿಎಂ ಗಮನಕ್ಕೆ ತಂದಿದ್ದಾರೆ.
ಕ್ವಾರಿ ಗಣಿಗಾರಿಕೆಯಲ್ಲಿ 50 ಲಕ್ಷ ಟನ್ಗೆ ಪರಿಸರ ತೀರುವಳಿ ಪಡೆದರೆ 20 ಲಕ್ಷ ಟನ್ಗೆ ಮಾತ್ರ ಪರ್ಮಿಟ್ ಪಡೀತಾರೆ. ಹಾಗಿದ್ದರೆ ಹೆಚ್ಚಿನ ಮಟ್ಟದ ಪರಿಸರ ತೀರುವಳಿ ಪಡೆದಿದ್ದು ಯಾಕೆ? ಪರಿಸರ ತೀರುವಳಿ ಪಡೆದಿರುವುದು, ಪರ್ಮಿಟ್ ಪಡೆದಿರುವುದಕ್ಕೂ ವ್ಯತ್ಯಾಸ ಏನು ಎಂದಿದ್ದಾರೆ.
ಅರ್ಧದಷ್ಟು ಕಡಿಮೆಯಿದೆ ಎಂದು ಸಂತೋಷ್ ಲಾಡ್ ಸಿಎಂ ಗಮನ ಸೆಳೆದರು. ಸಚಿವರ ಮಾತಿಗೆ ಹಲವು ಸಚಿವರು ಧ್ವನಿಗೂಡಿಸಿದರು. ತಕ್ಷಣ ಪರಿಶೀಲಿಸಿ ಕ್ರಮಕೈಗೊಳ್ಳುವಂತೆ ಸಿಎಂ ಸಿದ್ದರಾಮಯ್ಯ ಸೂಚಿಸಿದ್ದು, ಅಗತ್ಯವಿದ್ದರೆ ಸರ್ಕಾರದಿಂದ ಹೊಸ ನೀತಿ ರೂಪಿಸೋಣ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.