ಕಾರ್ಯಾಂಗ, ಶಾಸಕಾಂಗ ಹೆಚ್ಚು ಪರಿಣಾಮಕಾರಿ, ಗುಣಾತ್ಮಕವಾಗಿ ಕೆಲಸ ಮಾಡುತ್ತಿಲ್ಲ: ಸಿದ್ದರಾಮಯ್ಯ ಬೇಸರ

ಜಿಲ್ಲಾಧಿಕಾರಿಗಳಿಗೆ ಮಹಾರಾಜರು ಎನ್ನುವ ಭಾವನೆ ಇದ್ದರೆ ಅಭಿವೃದ್ಧಿ ಮತ್ತು ಪ್ರಗತಿ ಸಾಧ್ಯವಿಲ್ಲ. ರಾಜಕಾರಣಿಗಳು ಮತ್ತು ಅಧಿಕಾರಿಗಳು ಇಬ್ಬರೂ ಜನ ಸೇವಕರು ಎನ್ನುವುದನ್ನು ನೆನಪಿನಲ್ಲಿಟ್ಟುಕೊಂಡು ಜನಸೇವೆ ಮಾಡಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದರು.

ಕಾರ್ಯಾಂಗ, ಶಾಸಕಾಂಗ ಹೆಚ್ಚು ಪರಿಣಾಮಕಾರಿ, ಗುಣಾತ್ಮಕವಾಗಿ ಕೆಲಸ ಮಾಡುತ್ತಿಲ್ಲ: ಸಿದ್ದರಾಮಯ್ಯ ಬೇಸರ
ಸಿಎಂ ಸಿದ್ದರಾಮಯ್ಯ
Follow us
Anil Kalkere
| Updated By: ವಿವೇಕ ಬಿರಾದಾರ

Updated on:Jul 08, 2024 | 1:16 PM

ಬೆಂಗಳೂರು, ಜು.8: ರಾಜಕಾರಣಿಗಳು, ಅಧಿಕಾರಿಗಳ ಅನುಭವದ ಮೇಲೆ ಆಡಳಿತ ಹೆಚ್ಚು ಪರಿಣಾಮಕಾರಿಯಾಗಿ ಆಗಬೇಕಿತ್ತು.‌ 40 ವರ್ಷಗಳ ಹಿಂದೆ ಅಧಿಕಾರಿಗಳು ಕೆಲಸ ನಿರ್ವಹಿಸುವ ರೀತಿಗೂ, ಇವತ್ತಿನ ಅಧಿಕಾರಿಗಳು ಕರ್ತವ್ಯ ನಿರ್ವಹಿಸುವ ರೀತಿಗೂ ಹೋಲಿಸಿದರೆ ಕಾರ್ಯಾಂಗ ಮತ್ತು ಶಾಸಕಾಂಗ ಈಗ ಹೆಚ್ಚು ಪರಿಣಾಮಕಾರಿಯಾಗಿ, ಗುಣಾತ್ಮಕವಾಗಿ ಕೆಲಸ ಮಾಡುತ್ತಿಲ್ಲ ಎನ್ನುವುದು ಗೊತ್ತಾಗುತ್ತಿದೆ. ಇದು ಬಹಳ ಬೇಸರದ ಸಂಗತಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಹೇಳಿದರು.

ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆದ DC ಮತ್ತು CEO ಹಾಗೂ ಉಸ್ತುವಾರಿ ಕಾರ್ಯದರ್ಶಿಗಳ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲಾಧಿಕಾರಿಗಳಿಗೆ ಮಹಾರಾಜರು ಎನ್ನುವ ಭಾವನೆ ಇದ್ದರೆ ಅಭಿವೃದ್ಧಿ ಮತ್ತು ಪ್ರಗತಿ ಸಾಧ್ಯವಿಲ್ಲ. ರಾಜಕಾರಣಿಗಳು ಮತ್ತು ಅಧಿಕಾರಿಗಳು ಇಬ್ಬರೂ ಜನ ಸೇವಕರು ಎನ್ನುವುದನ್ನು ನೆನಪಿನಲ್ಲಿಟ್ಟುಕೊಂಡು ಜನಸೇವೆ ಮಾಡಿ ಎಂದು ಸೂಚನೆ ನೀಡಿದರು.

ಸರ್ಕಾರದ ಕಾರ್ಯಕ್ರಮಗಳು, ಯೋಜನೆಗಳು ಪರಿಣಾಮಕಾರಿಯಾಗಿ ಜನ ಸಾಮಾನ್ಯರಿಗೆ ತಲುಪಿಸಲು ಡಿಸಿ, ಎಸ್​ಪಿ, ಸಿಇಒಗಳು ಕ್ರಿಯಾಶೀಲತೆಯಿಂದ, ಸಮನ್ವಯತೆಯಿಂದ ಕೆಲಸ ಮಾಡಬೇಕು. ಆಗ ಮಾತ್ರ ಸರ್ಕಾರದ ಕಾಳಜಿಗಳು ಜನರಿಗೆ ತಲುಪಲು ಸಾಧ್ಯ ಎಂದರು.

ಕರ್ತವ್ಯಲೋಪಕ್ಕೆ ಹಿರಿಯ ಅಧಿಕಾರಿಗಳೂ ಹೊಣೆ

ರಾಜ್ಯದಲ್ಲಿ ಡೆಂಗ್ಯು ನಿಯಂತ್ರಣಕ್ಕೆ ಸಮರೋಪಾದಿಯಲ್ಲಿ ಕೆಲಸ ಮಾಡಿ. ಡಿಸಿ, ಡಿಹೆಚ್​ಒಗಳು ತಾಲ್ಲೂಕು ಮಟ್ಟದ ಅಧಿಕಾರಿಗಳ ಜೊತೆ ಸಭೆ ಮಾಡಿ ಕ್ಷಿಪ್ರವಾಗಿ ಕೆಲಸ ಮಾಡಿ. ಇಷ್ಟು ದಿನ ಉದಾಸೀನ, ನಿರ್ಲಕ್ಷ್ಯಕ್ಕೆ, ಕರ್ತವ್ಯಲೋಪಕ್ಕೆ ಕೆಳ ಹಂತದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಇವತ್ತಿನಿಂದ ಹಿರಿಯ ಅಧಿಕಾರಿಗಳನ್ನೂ ಹೊಣೆ ಮಾಡಿ ಕ್ರಮ ಕೈಗೊಳ್ಳುತ್ತೇನೆ ಎಂದು ಸ್ಪಷ್ಟ ಎಚ್ಚರಿಕೆ ನೀಡಿದರು.

ಡಿಸಿ, ಸಿಇಒಗಳು, ತಮ್ಮ ಜಿಲ್ಲೆಯ ಸಮಗ್ರ ಮಾಹಿತಿಗಳನ್ನು ಅಂಗೈಯಲ್ಲಿ ಇಟ್ಟುಕೊಂಡು ಉತ್ಸಾಹದಿಂದ ಕೆಲಸ ಮಾಡಬೇಕು. ಆಗ ಮಾತ್ರ ಪ್ರಗತಿ ಮತ್ತು ಅಭಿವೃದ್ಧಿಯ ವೇಗ ಕಾಣಲು ಸಾಧ್ಯ. ಅಭಿವೃದ್ಧಿ ಮತ್ತು ಕಾನೂನು ಸುವ್ಯವಸ್ಥೆ ಪರಸ್ಪರ ಪೂರಕ. ಒಂದು ಇಲ್ಲದಿದ್ದರೆ ಮತ್ತೊಂದು ಇರಲು ಸಾಧ್ಯವಿಲ್ಲ. ಕರ್ನಾಟಕ ಗುಡ್ ಗೌರ್ನೆನ್ಸ್​ನಲ್ಲಿ ಮಾದರಿ ರಾಜ್ಯವಾಗಿದೆ ಎನ್ನುವುದನ್ನು ಮರೆಯಬಾರದು. ಈ ಹೆಗ್ಗಳಿಕೆಯನ್ನು ಮುಂದುವರೆಸಿಕೊಂಡು ಹೋಗುವ ಜವಾಬ್ದಾರಿ ನಿಮ್ಮಗಳ ಮೇಲಿದೆ ಎಂದರು.

ಇದನ್ನೂ ಓದಿ: ಜನ ನಿರ್ಭೀತಿಯಿಂದ ಬದುಕುವ ವಾತಾವರಣ ನಿರ್ಮಿಸಿ ಅಂತ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದ ಸಿಎಂ ಸಿದ್ದರಾಮಯ್ಯ

ಜಿಲ್ಲಾಧಿಕಾರಿಗಳು ಯಾವುದೇ ಜಿಲ್ಲೆಗೆ ಹೋಗುವ ಮೊದಲು ಆಯಾ ಜಿಲ್ಲೆಗಳ ಮಾನವ ಅಭಿವೃದ್ಧಿ ಸೂಚ್ಯಂಕಗಳ ಜೊತೆಗೆ ಜಿಲ್ಲೆಯ ಸಮಗ್ರ ಮಾಹಿತಿ ತಿಳಿದುಕೊಳ್ಳಬೇಕು. ಎಸ್​ಎಸ್​ಎಲ್​ಸಿ ಫಲಿತಾಂಶದಲ್ಲಿ ಕೆಲವು ಜಿಲ್ಲೆಗಳಲ್ಲಿ ಕುಸಿತ ಕಂಡಿರುವುದನ್ನು ಪ್ರಸ್ತಾಪಿಸಿದ ಮುಖ್ಯಮಂತ್ರಿಗಳು, ಈ ಬಾರಿ ಕಾಪಿಯನ್ನು ಸಂಪೂರ್ಣ ನಿಲ್ಲಿಸಿದ್ದು ಶ್ಲಾಘನೀಯ. ಆದರೆ ಈ ಕಾರಣಕ್ಕೆ ಫಲಿತಾಂಶ ಕುಸಿತ ಆಯಿತು ಎನ್ನುವ ಸಮರ್ಥನೆ ಸರಿಯಲ್ಲ ಎಂದು ಹೇಳಿದರು. ಡಿಸಿ, ಸಿಇಒ, ಇಲಾಖಾ ಕಾರ್ಯದರ್ಶಿಗಳ ಜವಾಬ್ದಾರಿ ಇಲ್ಲವಾ? ಆತ್ಮಾವಲೋಕನ ಮಾಡಿಕೊಂಡು ಪರಿಸ್ಥಿತಿ ಸುಧಾರಿಸಲು ಪ್ರಯತ್ನಿಸಲೇಬೇಕು. DDPI, DC, CEOಗಳು ಒಟ್ಟಿಗೇ ಕುಳಿತು ಚರ್ಚಿಸಿ ಪರಿಸ್ಥಿತಿ ಸುಧಾರಿಸಬೇಕು ಎಂದು ಸೂಚನೆ ನೀಡಿದರು.

ಜನಸಂಪರ್ಕ, ಜನಸ್ಪಂದನ ಸಭೆಗಳಲ್ಲಿ 15-20 ಸಾವಿರ ಅರ್ಜಿಗಳು ಬರುತ್ತವೆ. ನೀವು ಸರಿಯಾಗಿ ಸ್ಥಳೀಯವಾಗಿ ಕೆಲಸ ಮಾಡಿದ್ದರೆ ಇಷ್ಟೊಂದು ಮಂದಿ ನನ್ನ ಬಳಿಗೆ ಏಕೆ ಬರುತ್ತಾರೆ? DC, CEOಗಳು ಇರೋದು ಜನಸಂಪರ್ಕ ಸಭೆಗಳಿಗೆ ಬಂದ ಅರ್ಜಿಗಳನ್ನು Forward ಮಾಡಿ ಮುಚ್ಚಳಿಕೆ ಕೊಟ್ಟು ಕೈ ತೊಳೆದುಕೊಳ್ಳೋಕಾ? ಪರಿಹಾರ ಕೊಡಿಸುವವರು ಯಾರು? ಇದಕ್ಕೇನಾ ನೀವು ಇರೋದು ಎಂದು ಖಾರವಾಗಿ ಪ್ರಶ್ನಿಸಿದರು.

ನೀವು ಪರಿಹಾರ ಕೊಡಲಿಲ್ಲ ಅಂತ ನನ್ನ ತನಕ ಬಂದಿದ್ದಾರೆ. ಜನರ ಸಮಸ್ಯೆಗಳ ಅರ್ಜಿಗಳು ಸಕಾರಾತ್ಮಕವಾಗಿ ವಿಲೇವಾರಿ ಆಗಿಲ್ಲ, ಗುಣಾತ್ಮಕವಾಗಿ ವಿಲೇವಾರಿ ಆಗಿಲ್ಲ ಅಂದರೆ ನಿಮ್ಮ ವಿರುದ್ಧ ಕ್ರಮ ಖಚಿತ ಎಂದು ಎಚ್ಚರಿಸಿದರು.

ತಹಶೀಲ್ದಾರ್, ಜಿಲ್ಲಾಧಿಕಾರಿಗಳ ಸಮೇತ ಜಿಲ್ಲಾ, ತಾಲ್ಲೂಕು ಮಟ್ಟದ ಅಧಿಕಾರಿಗಳು ಜನರನ್ನು ನೇರ ಭೇಟಿ ಮಾಡುತ್ತಿಲ್ಲ. ಅಧಿಕಾರಿಗಳು ಕರ್ತವ್ಯ ನಿರ್ವಹಿಸುವ ಕಡೆಯೇ ಉಳಿಯಬೇಕು ಎನ್ನುವ ನನ್ನ ಸೂಚನೆ ಸರಿಯಾಗಿ ಪಾಲನೆ ಆಗುತ್ತಿಲ್ಲ. PDOಗಳು, VAಗಳು ಕೆಲಸ ಮಾಡುವ ಜಾಗದಲ್ಲೇ ಉಳಿಯಬೇಕು. ಈ ಬಗ್ಗೆ DC, CEOಗಳು ಗಮನ ಹರಿಸಬೇಕು ಎಂದು ಸೂಚನೆ ನೀಡಿದರು.

ಸಂಚಾರಿ ಕುರಿಗಾಹಿಗಳಿಗೆ ಗುರುತಿನ ಚೀಟಿ ನೀಡಿ

ಸಂಚಾರಿ ಕುರಿಗಾಹಿಗಳಿಗೆ ಗುರುತಿನ ಚೀಟಿ ನೀಡಬೇಕು, ಕುರಿ-ಮೇಕೆಗಳ ಟೆಂಟ್ ಹಾಕಿರುವ ಸ್ಥಳಕ್ಕೇ ಹೋಗಿ ಲಸಿಕೆ ಮತ್ತು ಚುಚ್ಚುಮದ್ದುಗಳನ್ನು ನೀಡಬೇಕು, ಸಂಚಾರಿ ಕುರಿಗಾಹಿಗಳಿಗೆ ಬಂದೂಕು ಲೈಸೆನ್ಸ್ ಕೊಡುವುದು ಕಡ್ಡಾಯ. ಕುರಿ ಕಳ್ಳತನ ತಡೆಯಲು ಇದು ಅಗತ್ಯ ಎನ್ನುವ ಸ್ಪಷ್ಟ ಸೂಚನೆಗಳನ್ನು ನೀಡಿದರು.

ಮಣ್ಣಿನ ಫಲವತ್ತತೆ ಕಡಿಮೆ ಆಗುತ್ತಿದೆ. ಇದನ್ನು ಹೆಚ್ಚಿಸಲು ಅಗತ್ಯ ಕ್ರಮ ಕೈಗೊಳ್ಳುವ ಜೊತೆಗೆ ರೈತರಿಗೆ ಮಣ್ಣಿನ ಆರೋಗ್ಯ ಕಾರ್ಡ್ ಅನ್ನು ಕಡ್ಡಾಯವಾಗಿ ನೀಡಬೇಕು. ಪ್ರತೀ ಎರಡು ವರ್ಷಕ್ಕೊಮ್ಮೆ ಮಣ್ಣಿನ ಪರೀಕ್ಷೆ ನಡೆಸಬೇಕು ಎಂದು ಸ್ಪಷ್ಟ ಸೂಚನೆ ನೀಡಿದರು.

ಈ ಎಲ್ಲ ಕೆಲಸಗಳನ್ನು ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಪರಸ್ಪರ ಸಮನ್ವಯತೆಯಿಂದ ಕೆಲಸ ಮಾಡಬೇಕು. ತಹಶೀಲ್ದಾರ್ ನ್ಯಾಯಾಲಯಗಳಲ್ಲಿ 8234 ಪ್ರಕರಣಗಳು ಬಾಕಿ ಇವೆ. ಉಪವಿಭಾಹಾಧಿಕಾರಿಗಳ ಬಳಿ RRT (ಹಕ್ಕು ಬದಲಾವಣೆ) ಪ್ರಕರಣಗಳು 37587 ಬಾಕಿ ಇವೆ. ಇವುಗಳಲ್ಲಿ 5 ವರ್ಷಕ್ಕೂ ಮೇಲ್ಪಟ್ಟವು 7522 ಪ್ರಕರಣಗಳಿವೆ, DC ಗಳ ಬಳಿ 10838 ಪ್ರಕರಣಗಳು ಬಾಕಿ ಇವೆ. 5 ವರ್ಷಕ್ಕೂ ಮೇಲ್ಪಟ್ಟವು 4207 ಪ್ರಕರಣಗಳಿವೆ. DC ಗಳೇ ಬಾಕಿ ಉಳಿಸಿಕೊಂಡರೆ ನೀವು AC ಮತ್ತು ತಹಶೀಲ್ದಾರ್ ಗಳಿಗೆ ಏನು ಸೂಚನೆ ಕೊಡ್ತೀರಿ ಎಂದು ಪ್ರಶ್ನಿಸಿದರು.

ಕೆಲವು DCಗಳ ಬಳಿ ಒಂದೂ ಪ್ರಕರಣಗಳೂ ಬಾಕಿ ಇಲ್ಲ. ಉಳಿದ DC ಗಳಿಂದ ಏಕೆ ಸಾಧ್ಯವಾಗಿಲ್ಲ. ಜನ DC, AC ತಹಶೀಲ್ದಾರ್ ಕಚೇರಿಗಳಿಗೆ ಅಲೆಯೋದು ಅಧಿಕಾರಿಗಳು ಜನರ ಕೈಗೆ ಸಿಗದೇ ಇದ್ದರೆ ಅವರು ಏನು ಮಾಡಬೇಕು ಎಂದು ಪ್ರಶ್ನಿಸಿದರು.

ಗೆಜೆಟಿಯರ್‌, ಎಕನಾಮಿಕ್‌ ಸರ್ವೇಗಳನ್ನು ಕಡ್ಡಾಯವಾಗಿ ಓದಿ

ಜಿಲ್ಲಾಧಿಕಾರಿಗಳು ಗಜೆಟಿಯರ್‌, ಎಕನಾಮಿಕ್‌ ಸರ್ವೇ ಓದಿದರೆ ಆ ಜಿಲ್ಲೆಯ ಇತಿಹಾಸ, ಸ್ಥಿತಿಗತಿಗಳನ್ನು ಅರಿತುಕೊಳ್ಳಲು ಸಾಧ್ಯ. ಫ್ರೇಸರ್‌ ಎಂಬ ಅಧಿಕಾರಿಯ ಸಲಹೆ ಇಲ್ಲದೆ ನಾಲ್ವಡಿ ಕೃಷ್ಣರಾಜ ಒಡೆಯರ್‌, ಗಾಯಕ್‌ವಾಡ್‌, ಶಾಹು ಮಹಾರಾಜ ಮೊದಲಾದವರು ಒಳ್ಳೆಯ ಅರಸರೆಂದು ಹೆಸರುಗಳಿಸಲು ಸಾಧ್ಯವಾಗುತ್ತಿರಲಿಲ್ಲ. ಬಳ್ಳಾರಿಯಲ್ಲಿ ಮನ್ರೋ ಎಂಬ ಅಧಿಕಾರಿ ಕಲೆಕ್ಟರ್‌ ಆಗಿದ್ದರು. ಇಂದಿಗೂ ಅಲ್ಲಿನ ಜನ ತಮ್ಮ ಮಕ್ಕಳಿಗೆ ಅವರ ಹೆಸರಿಡುತ್ತಾರೆ. ನಾವೆಲ್ಲರೂ ಜನಸೇವಕರು ಎಂಬ ಭಾವನೆಯಿಂದ ಕೆಲಸ ನಿರ್ವಹಿಸಬೇಕು. ಆಗ ಮಾತ್ರ ಜನಪರ ಆಡಳಿತ ನೀಡಲು ಸಾಧ್ಯವಾಗುತ್ತದೆ.

ನಮ್ಮ ಜನರು ತಮ್ಮ ಮಕ್ಕಳಿಗೆ ನಿಮ್ಮ ಹೆಸರು ಇಡುವ ರೀತಿಯಲ್ಲಿ ಗುಣಾತ್ಮಕವಾಗಿ, ಪರಿಣಾಮಕಾರಿಯಾಗಿ ಕೆಲಸ ಮಾಡಲು ಅವಕಾಶಗಳಿವೆ, ನಿಮ್ಮಿಂದ ಇದು ಸಾಧ್ಯವಿದೆ. ಬಡವರ ಬಗ್ಗೆ ಅನುಕಂಪ ಇರಬೇಕು. ಅಸಮಾನತೆ ನೀಗಿಸಲು ಪ್ರಯತ್ನಿಸಬೇಕು. ಬಸವಣ್ಣ, ಗಾಂಧೀಜಿ, ಅಂಬೇಡ್ಕರ್‌ ಅವರನ್ನು ಓದುತ್ತೇವೆ. ಸಂವಿಧಾನ ಅರಿತುಕೊಳ್ಳಬೇಕು ಎಂದು ಹೇಳುತ್ತೇವೆ. ಇದು ಕೇವಲ ಓದುವುದಕ್ಕಲ್ಲ. ಅನುಷ್ಠಾನ ಮಾಡುವುದಕ್ಕೆ ಎಂಬುದನ್ನು ಅರಿತುಕೊಳ್ಳಿ. ಈ ಸೇವೆಯನ್ನು ಆಯ್ಕೆ ಮಾಡಿಕೊಂಡಿದ್ದೀರಿ. ಪರಿಸ್ಥಿತಿ ಬದಲಾದಂತೆ ನಾವೂ ಬದಲಾಗಬೇಕು ಎಂದು ಕಿವಿ ಮಾತು ಹೇಳಿದರು.

ಡೆಂಗ್ಯೂ ನಿಯಂತ್ರಿಸಿ

ಕಲುಷಿತ ನೀರು ಕುಡಿದು ಹಲವು ಸಾವು- ನೋವುಗಳು ಸಂಭವಿಸಿವೆ. ಇಂತಹ ಪ್ರಕರಣಗಳು ಮರುಕಳಿಸಿದರೆ, ಹಿರಿಯ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಲಾಗುವುದು.

ಸಿಂಧುತ್ವ ಪ್ರಮಾಣ ಪತ್ರ ಸಕಾಲದಲ್ಲಿ ನೀಡಬೇಕು. ಇವುಗಳನ್ನು ಬಾಕಿ ಉಳಿಸಿಕೊಳ್ಳದೆ ಸೂಕ್ತ ಆದೇಶ ಹೊರಡಿಸಬೇಕು. ಅಭ್ಯರ್ಥಿಗಳಿಗೆ ಸಕಾಲದಲ್ಲಿ ಸಿಂಧುತ್ವ ಪ್ರಮಾಣ ಪತ್ರ ನೀಡದೆ ಇದ್ದರೆ ಅವರ ಭವಿಷ್ಯ ಹಾಳಾಗುವುದಿಲ್ಲವೇ ಎಂದು ಪ್ರಶ್ನಿಸಿದರು.

ಗಂಗಾ ಕಲ್ಯಾಣ ಯೋಜನೆಯಡಿ ವಿದ್ಯುತ್‌ ಸಂಪರ್ಕ ಕಲ್ಪಿಸಲು ಬಾಕಿ ಉಳಿದಿರುವ ಪಂಪ್‌ಸೆಟ್‌ಗಳಿಗೆ ವಿದ್ಯುತ್‌ ಸಂಪರ್ಕ ಒದಗಿಸಬೇಕು. ಬುಡಕಟ್ಟು ಜನರಿಗೆ ಅರಣ್ಯ ಜಮೀನು ಮಂಜೂರು ಮಾಡಲು 26,126 ಅರ್ಜಿಗಳು ಬಾಕಿ ಇವೆ. ಇವುಗಳನ್ನು ತ್ವರಿತವಾಗಿ ವಿಲೇವಾರಿ ಮಾಡಬೇಕು. ಅವರ ಹಾಡಿಗಳಿಗೆ ಹೋಗಲು ರಸ್ತೆ ಸಂಪರ್ಕ ಇರುವುದಿಲ್ಲ. ಈ ಬಗ್ಗೆ ಅಗತ್ಯ ಮೂಲಸೌಕರ್ಯ ಒದಗಿಸಲು ಸೂಕ್ತ ಸುತ್ತೋಲೆ ಹೊರಡಿಸಲು ಸೂಚಿಸಿದರು.

ಬಿಪಿಎಲ್‌ ಕಾರ್ಡು

ರಾಜ್ಯದಲ್ಲಿ ಶೇ. 80 ರಷ್ಟು ಬಿಪಿಎಲ್‌ ಕಾರ್ಡುಗಳನ್ನು ಹೊಂದಿದ್ದಾರೆ. ತಮಿಳುನಾಡಿನಲ್ಲಿ ಶೇ.40 ರಷ್ಟಿದೆ. ನೀತಿ ಆಯೋಗದ ಪ್ರಕಾರ ರಾಜ್ಯದಲ್ಲಿ ಪ್ರಸ್ತುತ ಬಡತನ ರೇಖೆಗಿಂತ ಕೆಳಗಿರುವವರ ಪ್ರಮಾಣ ಶೇ.5.67 ಇರಬೇಕು. ಆದರೆ ರಾಜ್ಯದಲ್ಲಿ 1.27 ಕೋಟಿ ಕುಟುಂಬಗಳಿಗೆ ಬಿಪಿಎಲ್‌ ಕಾರ್ಡ್‌ ನೀಡಿದ್ದೇವೆ. ಅನರ್ಹ ಬಿ.ಪಿ.ಎಲ್. ಕಾರ್ಡುಗಳನ್ನು ರದ್ದು ಪಡಿಸಿ, ಅರ್ಹರಿಗೆ ಬಿಪಿಎಲ್‌ ಕಾರ್ಡು ಒದಗಿಸಬೇಕು ಎಂದು ಸಿಎಂ ಸೂಚಿಸಿದರು.

ಜನರನ್ನು ಅನಗತ್ಯವಾಗಿ ಅಲೆದಾಡಿಸಬೇಡಿ. ಅವರ ದೂರುಗಳನ್ನು ಆಲಿಸಿ, ಅಗತ್ಯ ಪರಿಹಾರ ಒದಗಿಸಬೇಕು. ರಾಜ್ಯದಲ್ಲಿ ಈ ಬಾರಿ ಬರ ನಿರ್ವಹಣೆಯನ್ನು ಉತ್ತಮವಾಗಿ ಮಾಡಿದ್ದೇವೆ. ಕುಡಿಯುವ ನೀರಿಗೆ ಸಂಬಂಧಿಸಿದಂತೆ ಸಮಸ್ಯಾತ್ಮಕ ಗ್ರಾಮಗಳನ್ನು ಮೊದಲೇ ಗುರುತಿಸಿ ಪರ್ಯಾಯ ವ್ಯವಸ್ಥೆ ಮಾಡಿದ ಕಾರಣ ಎಲ್ಲೂ ಹೆಚ್ಚು ತೊಂದರೆಯಾಗಿಲ್ಲ. ಬರ ನಿರ್ವಹಣೆಗೆ 85 ಕೋಟಿ ವೆಚ್ಚವಾಗಿದ್ದು, ಪಾರದರ್ಶಕವಾಗಿ ಮಾಡಲಾಗಿದೆ. 783 ಕೋಟಿ ಜಿಲ್ಲಾಧಿಕಾರಿ ಖಾತೆಯಲ್ಲಿ ಲಭ್ಯವಿದೆ.

ರಾಜ್ಯದಲ್ಲಿ ಪ್ರಸ್ತುತ ಮುಂಗಾರು ಅವಧಿಯಲ್ಲಿ ಇದುವರೆಗೆ ಶೇ.7ರಷ್ಟು ಹೆಚ್ಚು ಮಳೆಯಾಗಿದೆ. ಈ ವರ್ಷ ಮಳೆ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಅತಿವೃಷ್ಟಿಯಿಂದ ಸಮಸ್ಯೆಯಾಗುವ ಗ್ರಾಮಗಳನ್ನು ಗುರುತಿಸಲಾಗಿದೆ 225 ಅಂತಹ ಜಲಾಗ್ರಾಮಗಳನ್ನು 1247ಗ್ರಾಮ ಪಂಚಾಯತ್‌ ಗುರುತಿಸಲಾಗಿದೆ. ಪ್ರತಿಯೊಂದು ಗ್ರಾಂ ಪಂಚಾಯತ್‌ ನಲ್ಲಿ ಟಾಸ್ಕ್‌ ಪೋಸ್ಟ್‌ ರಚನೆ. ಕಂದಾಯ ಇಲಾಖೆ, ಪಂಚಾಯತ್‌, ಪೋಲಿಸ್‌, ಅಗ್ನಿಶಾಮಕ, ಆರೋಗ್ಯ ಸೇರಿದಂತೆ ತಾಲೂಕು ಒಬ್ಬರಂತೆ ನೋಡಲ್‌ ಅಧಿಕಾರಿ ನೇಮಕ. ಎಲ್ಲಾ ಕಡೆ ಅಣಕುಪ್ರದರ್ಶನ ಮಾಡಲಾಗುತ್ತಿದೆ. ಎಲ್ಲಾ ಸಲಕರಣೆ ಲಭ್ಯವಾಗಿಡುವಂತೆ ಸೂಚನೆ ನೀಡಲಾಯಿತು.

ಬೆಳೆ ಹಾನಿ, ಮನೆ ಹಾನಿ ಎಸ್‌ಡಿಆರ್‌ಎಫ್‌ ಪ್ರಕಾರ ನೀಡಲು ಸೂಚನೆ ನೀಡಲಾಗಿದೆ. ಜಿಲ್ಲಾಡಳಿತ ಮುಂಜಾಗರೂಕತೆ ವಹಿಸಲು ಸೂಚನೆ ನೀಡಲಾಗಿದೆ. ಪ್ರಾಣ ಹಾನಿ ತಪ್ಪಿಸುವುದು ಆದ್ಯತೆಯಾಗಬೇಕು. 27 ಜಿಲ್ಲೆ 177 ತಾಲೂಕುಗಳು, 1247 ಗ್ರಾಮ ಪಂಚಾಯತ್‌ಗಳಲ್ಲಿ ಅತಿವೃಷ್ಟಿಗೆ ತುತ್ತಾಗುವುದನ್ನು ಗುರುತಿಸಲಾಗಿದ್ದು, ಪ್ರತಿ ಕಡೆ ಟಾಸ್ಕ್‌ಪೋರ್ಸ್‌ ರಚಿಸಬೇಕು. 20,38,334 ಜನರು ಪದೇ ಪದೇ ಪ್ರವಾಹಕ್ಕೆ ತುತ್ತಾಗುವುದನ್ನು ಗುರುತಿಸಲಾಗಿದೆ. ಅಂತಹ ಜನರನ್ನು ಬೇರೆ ಕಡೆಗೆ ಸ್ಥಳಾಂತರಿಸಿ ಮನೆ ಒದಗಿಸುವ ಬಗ್ಗೆ ಕ್ರಮ ಕೈಗೊಳ್ಳಬೇಕು. 2225 ಗ್ರಾಮಗಳು 2242 ಕಾಳಜಿ ಕೇಂದ್ರಗಳನ್ನು ಗುರುತಿಸಲಾಗಿದೆ. ಉತ್ತಮವಾಗಿ ಮಳೆಯಾಗಿರುವ ಕಾರಣ ಎಲ್ಲಾ ಜಲಾಶಯಗಳಲ್ಲಿ ಒಟ್ಟು 293 ಟಿಎಂಸಿ ನೀರು ಸಂಗ್ರಹವಿದೆ. ಈ ಬಾರಿ ಪೂರ್ವ ಮುಂಗಾರಿನಲ್ಲಿ 3714 ಮನೆಗಳಿಗೆ ಹಾನಿ ಉಂಟಾಗಿದ್ದು, ಎಸ್‌ಡಿಆರ್‌ಎಫ್‌ ಮಾನದಂಡ ಪ್ರಕಾರ ಪರಿಹಾರವನ್ನು ತಕ್ಷಣ ಒದಗಿಸಬೇಕು ಎಂದರು.

ಹವಾಮಾನ ಇಲಾಖೆಯೊಂದಿಗೆ ನಿಕಟ ಸಂಪರ್ಕದಲ್ಲಿದ್ದು, ಪರಿಸ್ಥಿತಿಯನ್ನು ನಿಭಾಯಿಸಬೇಕು. ವಿವಿಧ ಸಾಮಾಜಿಕ ಭದ್ರತಾ ಯೋಜನೆಗಳಡಿ 3784 ಅರ್ಜಿಗಳು ಇತ್ಯರ್ಥಪಡಿಸಲು ಬಾಕಿಯಿದ್ದು ಸಕಾಲದ ಅವಧಿಯ ಮಿತಿಯಲ್ಲಿಯೇ ಇವೆ. ಇನ್ನು ಮುಂದೆ 30 ದಿನಗಳ ಒಳಗಾಗಿ ವಿಲೇವಾರಿ ಮಾಡಬೇಕು ಎಂದು ಸೂಚಿಸಿದರು.

ರಾಜ್ಯದಲ್ಲಿ 76 ಲಕ್ಷ ಜನರಿಗೆ ಪಿಂಚಣಿ ನೀಡುತ್ತಿದ್ದು, ದೇಶದಲ್ಲೇ ಅಧಿಕವಾಗಿದೆ. ಕೇಂದ್ರ ಸರ್ಕಾರದ ನಿರ್ದೇಶನದಂತೆ ಎನ್‌ಪಿಸಿಐ ಮ್ಯಾಪಿಂಗ್‌ ಮಾಡುವಲ್ಲಿ 2 ಲಕ್ಷ ಪ್ರಕರಣಗಳು ಬಾಕಿಯಿವೆ. ಇದನ್ನು ಆದ್ಯತೆ ಮೇರೆಗೆ ಮಾಡಲು ಸೂಚನೆ ನೀಡಲಾಗಿದೆ. ಜಿಲ್ಲೆಯಲ್ಲಿ ಎಷ್ಟು ಪಿಂಚಣಿ ಅರ್ಜಿಗಳು ಬಾಕಿಯಿವೆ ಎಂಬುವುದನ್ನು ಆಯಾ ಜಿಲ್ಲಾಧಿಕಾರಿಗಳು ಪರಿಶೀಲಿಸಿ ಕೂಡಲೇ ಇತ್ಯರ್ಥಪಡಿಸಲು ಕ್ರಮ ಕೈಗೊಳ್ಳಬೇಕು. ಗ್ರಾಮಗಳಲ್ಲಿ ಸಾವು ಸಂಭವಿಸಿದ ತಕ್ಷಣ ಆಯಾ ಪಿಂಚಣಿ ಸ್ಥಗಿತಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

ರೈತರ ಆತ್ಮಹತ್ಯೆ

ರೈತ ಆತ್ಮಹತ್ಯೆ ಪ್ರಕರಣಗಳಲ್ಲಿ ಪರಿಹಾರ ಒದಗಿಸುವಲ್ಲಿ ವಿಳಂಬ ಸಲ್ಲದು. ಕಾನೂನು ಪ್ರಕಾರ ಪರಿಶೀಲಿಸಿ 1003 ಅರ್ಹ ಪ್ರಕರಣಗಳಲ್ಲಿ 994 ರೈತರ ಕುಟುಂಬಕ್ಕೆ ಪರಿಹಾರ ಒದಗಿಸಲಾಗಿದೆ. ಕಳೆದ ಬಾರಿ ಸಭೆಯಲ್ಲಿ ಪರಿಹಾರ ನೀಡಿಕೆಯಲ್ಲಿ ವಿಳಂಬವಾಗುತ್ತಿರುವ ಬಗ್ಗೆ ಮುಖ್ಯಮಂತ್ರಿಗಳು ಅಸಮಾಧಾನ ವ್ಯಕ್ತಪಡಿಸಿದ್ದರು. ಈ ಬಾರಿ ಚುರುಕು ಮೂಡಿಸಲಾಗಿದೆ. ರೈತರ ಸಭೆ ಮಾಡಿ ಜಾಗೃತಿ, ಆತ್ಮವಿಶ್ವಾಸ ಮೂಡಿಸುವ ಕಾರ್ಯ ಮಾಡಬೇಕು ಎಂದು ನಿರ್ದೇಶನ ನೀಡಿದರು.

ಜಮೀನು ಮಾರ್ಗಸೂಚಿ ದರಕ್ಕಿಂತ ಕಡಿಮೆ ಬೆಲೆಗೆ ನೊಂದಣಿ ಅಗುತ್ತಿರುವ ಪ್ರಕರಣಗಳು ಕಂಡು ಬಂದಿದ್ದು, ಬಾಕಿ ರಾಜಸ್ವವನ್ನು ವಸೂಲು ಮಾಡಲು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಕಳೆದ 30 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಈ ಪ್ರಕ್ರಿಯೆಯನ್ನು ಕೈಗೆತ್ತಿಕೊಳ್ಳಲಾಗಿದೆ. ಈ ವರ್ಷದ ಮಾರ್ಚ್‌ ಅಂತ್ಯದ ವೇಳೆಗೆ ಇಂತಹ 24519 ಪ್ರಕರಣಗಳು ಬಾಕಿಯಿದ್ದು, 310 ಕೋಟಿ ರೂ. ರಾಜಸ್ವ ವಸೂಲಾತಿ ಮಾಡಬೇಕಾಗಿದೆ. ಇದನ್ನು ತ್ವರಿತವಾಗಿ ಮಾಡಲು ಸೂಚನೆ ನೀಡಿದರು.

ರಾಜ್ಯದಲ್ಲಿ 92 ಉಪ ನೋಂದಣಿ ಹಾಗೂ 15 ಜಿಲ್ಲಾ ನೋಂದಣಿ ಕಚೇರಿಗಳು ಖಾಸಗಿ ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಇವುಗಳಿಗೆ ಸ್ವಂತ ಕಟ್ಟಡ ಒದಗಿಸಲು ಕ್ರಮ ಕೈಗೊಳ್ಳಬೇಕು. ಬೆಂಗಳೂರು ನಗರ ಪ್ರದೇಶದಲ್ಲಿ ಅತಿ ಹೆಚ್ಚು ಕಚೇರಿಗಳು ಬಾಡಿಗೆ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಬಿಬಿಎಂಪಿ ಅಧೀನದ ಕಟ್ಟಡಗಳಲ್ಲಿ ಸ್ಥಳಾವಕಾಶ ಒದಗಿಸಬೇಕು ಎಂದು ಸೂಚಿಸಿದರು.

ಕಲಬುರಗಿಯಲ್ಲಿ ಸಿಎಂ ಜನಸ್ಪಂದನ

ಜನಸ್ಪಂದನ ಕಾರ್ಯಕ್ರಮವನ್ನು ಎಲ್ಲಾ ಜಿಲ್ಲೆಗಳಲ್ಲಿ ಆರಂಭಿಸಬೇಕು. ಅಧಿವೇಶನದ ಮುಗಿದ ಬಳಿಕ ಜಿಲ್ಲಾ ಜನಸ್ಪಂದನ ಕಾರ್ಯಕ್ರಮವನ್ನು ನಡೆಸಲು ಕ್ರಮ ಕೈಗೊಳ್ಳಬೇಕು. ಜಿಲ್ಲಾ ಉಸ್ತುವಾರಿ ಸಚಿವರು ತಪ್ಪದೇ ಜನಸ್ಪಂದನಾ ಸಭೆಗಳನ್ನು ಮಾಡಬೇಕು. ಜಿಲ್ಲಾಧಿಕಾರಿಗಳು ಸ್ವೀಕರಿಸುವ ಅರ್ಜಿಗಳನ್ನು ಆದಷ್ಟು ಬೇಗನೆ ವಿಲೇವಾರಿ ಮಾಡಬೇಕು. 40702 ಅರ್ಜಿಗಳನ್ನು ವಿಲೇವಾರಿ ಮಾಡಿದ್ದು, ಇನ್ನೂ 8ಸಾವಿರ ಅರ್ಜಿಗಳು ವಿಲೇವಾರಿಗೆ ಬಾಕಿಯಿದೆ. ತಕ್ಷಣ ವಿಲೇವಾರಿ ಮಾಡಿ. ಕಲ್ಬುರ್ಗಿಯಲ್ಲಿ ಅಧಿವೇಶನ ಮುಗಿದ ಬಳಿಕ ಮುಂದಿನ ತಿಂಗಳು ರಾಜ್ಯ ಮಟ್ಟದ ಜನಸ್ಪಂದನ ಕಾರ್ಯಕ್ರಮ ಆಯೋಜಿಸಲಾಗುವುದು.

ವಿದ್ಯಾರ್ಥಿ ವೇತನ

131,21,302 ಮೆಟ್ರಿಕ್‌ ಪೂರ್ವ ಮಕ್ಕಳಿಗೆ ಮೊದಲ ಬಾರಿಗೆ ಪ್ರಥಮ ತ್ರೈಮಾಸಿಕ ಅವಧಿಯಲ್ಲಿಯೇ ವಿದ್ಯಾರ್ಥಿ ವೇತನ ನೀಡಲಾಗಿದ್ದು, 95436 ವಿದ್ಯಾರ್ಥಿಗಳ ಆಧಾರ್‌ ಸೀಡ್‌ ಮಾಡಬೇಕಾಗಿದೆ. ಇದನ್ನು ಶೀಘ್ರವೇ ಪೂರ್ಣಗೊಳಿಸಲು ಸೂಚಿಸಲಾಯಿತು.

ಹಾಸ್ಟೆಲ್‌ ಪ್ರವೇಶ ಪ್ರಕ್ರಿಯೆಯನ್ನು ಆನ್‌ಲೈನ್‌ ಮೂಲಕವೇ ಕೈಗೊಳ್ಳಬೇಕು. ತಾಂತ್ರಿಕ ತೊಡಕುಗಳಿದ್ದರೆ ನಿವಾರಿಸಿಕೊಂಡು, 10 ದಿನಗಳ ಒಳಗೆ ದಾಖಲಾತಿ ಪ್ರಕ್ರಿಯೆ ಪೂರ್ಣಗೊಳಿಸಬೇಕು ಎಂದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 1:11 pm, Mon, 8 July 24

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್