ಡೆಂಗ್ಯೂ ಮರಣ ಮೃದಂಗ; ಹಾವೇರಿ ಜಿಲ್ಲೆಯಲ್ಲಿ ಡೆಂಘೀಗೆ 13 ವರ್ಷದ ಬಾಲಕ ಬಲಿ

ಹಾವೇರಿ ಜಿಲ್ಲೆಯಲ್ಲಿ ಡೆಂಗ್ಯೂ ಪ್ರಕರಣಗಳು ಹೆಚ್ಚಾಗಿವೆ. ಇಂದು ಡೆಂಗ್ಯೂಗೆ 13 ವರ್ಷದ ಬಾಲಕನೋರ್ವ ಮೃತಪಟ್ಟಿದ್ದಾನೆ. ಇನ್ನು ಕರ್ನಾಟಕ ರಾಜ್ಯದಲ್ಲಿ ಡೆಂಗ್ಯೂ ಪ್ರಕರಣಗಳು ದಿನದಿಂದ ದಿನಕ್ಕೆ ಏರಿಕೆ ಕಾಣುತ್ತಿದೆ. ಮತ್ತೊಂದೆಡೆ ಇತ್ತೀಚೆಗೆ ಹಾವೇರಿಯ ಬಾಲಕನೋರ್ವನಲ್ಲಿ ಇಲಿ ಜ್ವರ ಇರುವುದು ಕೂಡ ಪತ್ತೆಯಾಗಿತ್ತು. ಹಾವೇರಿ ಜನರಲ್ಲಿ ಆತಂಕ ಮನೆ ಮಾಡಿದೆ.

ಡೆಂಗ್ಯೂ ಮರಣ ಮೃದಂಗ; ಹಾವೇರಿ ಜಿಲ್ಲೆಯಲ್ಲಿ ಡೆಂಘೀಗೆ 13 ವರ್ಷದ ಬಾಲಕ ಬಲಿ
ಸಾಂದರ್ಭಿಕ ಚಿತ್ರ
Follow us
ಸೂರಜ್​, ಮಹಾವೀರ್​ ಉತ್ತರೆ
| Updated By: ಆಯೇಷಾ ಬಾನು

Updated on:Jul 08, 2024 | 1:48 PM

ಹಾವೇರಿ, ಜುಲೈ.08: ರಾಜ್ಯದಲ್ಲಿ ಡೆಂಗ್ಯೂ (Dengue) ಅಟ್ಟಹಾಸ ಹೆಚ್ಚಾಗಿದೆ. ಪ್ರತಿ ದಿನ ಒಂದಲ್ಲವೊಂದು ಸಾವಿನ (Death) ಪ್ರಕರಣಗಳು ವರದಿಯಾಗುತ್ತಿವೆ. ಹಾವೇರಿ ಜಿಲ್ಲೆಯಲ್ಲಿ ಡೆಂಗ್ಯೂಗೆ 13 ವರ್ಷದ ಬಾಲಕ ಬಲಿಯಾಗಿದ್ದಾನೆ. ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ಚಳಗೇರಿ ಗ್ರಾಮದ 13 ವರ್ಷದ ಪ್ರೇಮ್​ಕುಮಾರ್ ಎಂಬ ಬಾಲಕ ಮೃತಪಟ್ಟಿದ್ದಾನೆ. ಪ್ರೇಮ್ ಕುಮಾರ್ ಕಳೆದ ಒಂದು ವಾರದಿಂದ ಜ್ವರದಿಂದ ಬಳಲುತ್ತಿದ್ದ ಎಂದು ತಿಳಿದುಬಂದಿದೆ. ಸ್ಥಳಕ್ಕೆ ರಾಣೆಬೆನ್ನೂರು ಟಿಹೆಚ್​ಒ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಹೆಮ್ಮಾರಿ ಡೆಂಗ್ಯೂ ಜ್ವರಕ್ಕೆ 5 ವರ್ಷದ ಮಗು ಬಲಿ

ಗದಗದಲ್ಲಿ ಮಹಾಮಾರಿ ಡೆಂಗ್ಯೂಗೆ 5 ವರ್ಷದ ಮಗು ಬಲಿಯಾಗಿದೆ. ಮಗು ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಪೋಷಕರ ಆರೋಪಿಸಿದ್ದಾರೆ. ಆಸ್ಪತ್ರೆಯಲ್ಲಿ ಬೆಡ್ ಇಲ್ಲದೇ 2 ಗಂಟೆ ಕಾಲ ಮಗು ನರಳಾಡಿದೆ ಎಂದು ಮೃತ ಚಿರಾಯಿ ತಂದೆ ಮಂಜುನಾಥ, ತಾಯಿ ಸುಜಾತಾ ಆಕ್ರೋಶ ಹೊರಹಾಕಿದ್ರು. ಅಡ್ಮಿಟ್ ಮಾಡಿಕೊಳ್ಳಲು ಸಹ ಜಿಮ್ಸ್ ವೈದ್ಯರು ಹಿಂದೇಟು ಹಾಕಿದ್ದರು. ನಮ್ಮಲ್ಲಿ ಬೆಡ್ ಇಲ್ಲ ಬೇರೆ ಕಡೆ ಹೋಗಿ ಅಂತಾ ವೈದ್ಯರು ಹೇಳಿದ್ರು ಅಂತಾ ಕಿಡಿ ಕಾರಿದ್ರು.

ಶಂಕಿತ ಡೆಂಘೀಗೆ 23 ವರ್ಷದ ಯುವತಿ ಸಾವು

ಹಾಸನ ಜಿಲ್ಲೆಯಲ್ಲಿ ಶಂಕಿತ ಡೆಂಘೀಗೆ ಮತ್ತೊಬ್ಬ ಯುವತಿ ಬಲಿಯಾಗಿದ್ದಾಳೆ. ಹಾಸನದ ಖಾಸಗಿ ಆಸ್ಪತ್ರೆಯಲ್ಲಿ 23 ವರ್ಷದ ಸುಪ್ರಿತಾ ಸಾವನ್ನಪ್ಪಿದ್ದಾಳೆ. ಅರಸೀಕೆರೆ ತಾಲೂಕಿನ ಮುದುಡಿ ತಾಂಡಾದ ಜೂಲೂನಾಯ್ಕ, ಸುಮಿತ್ರಾದೇವಿ ಎಂಬುವವರ ಪುತ್ರಿ ಸುಪ್ರಿತಾ ಸಾವನ್ನಪ್ಪಿದ್ದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. 4 ದಿನಗಳ ಹಿಂದೆ ತೀವ್ರ ಜ್ವರ ಹಿನ್ನೆಲೆ ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಪಡೆಯುತ್ತಿರುವಾಗಲೇ ಸುಪ್ರಿತಾಗೆ ಬಹು ಅಂಗಾಗ ವೈಫಲ್ಯ ಆಗಿತ್ತು. ಬಳಿಕ ಹಾಸನ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಹಾಸನ ಜಿಲ್ಲೆಯಲ್ಲಿ ಶಂಕಿತ ಡೆಂಘೀಗೆ 7 ಜನ ಬಲಿ

ಹಾಸನ ಜಿಲ್ಲೆಯಲ್ಲಿ ಡೆಡ್ಲಿ ಡೇಂಘಿಗೆ ಮಕ್ಕಳು, ಯುವ ಸಮುದಾಯವೇ ಬಲಿಯಾಗುತ್ತಿದೆ. ಶಂಕಿತ ಡೆಂಘೀ ಹಾಸನ ಜಿಲ್ಲೆಯಲ್ಲಿ ಈವರೆಗೆ 7 ಜನರು ಸಾವನ್ನಪ್ಪಿದ್ದಾರೆ. ಹಾಸನ ಜಿಲ್ಲೆಯಲ್ಲಿ ಈವರೆಗೆ ಡೆಂಘೀ ಜ್ವರದಿಂದ ಮೂರು ಮಕ್ಕಳು ಮೃತಪಟ್ಟಿದ್ದಾರೆ. ಡೆಂಘೀ ತಾಂಡವಕ್ಕೆ ಹಾಸನ ಜಿಲ್ಲೆಯ ಜನರು ಕಂಗಾಲಾಗಿ ಕೂತಿದ್ದಾರೆ. ಆತಂಕ ಮನೆ ಮಾಡಿದೆ.

ಇದನ್ನೂ ಓದಿ: ಕರ್ನಾಟಕದಲ್ಲಿ ಡೆಂಗ್ಯೂ ಹೆಚ್ಚಳ: ಮುನ್ನೆಚ್ಚರಿಕೆ ಕ್ರಮಕ್ಕೆ ಗ್ರಾಮ ಪಂಚಾಯತಿಗಳಿಗೆ ಗೈಡ್​ಲೈನ್ಸ್

‘ಡೆಂಘೀಯಿಂದ ನಾಲ್ವರು ಮೃತಪಟ್ಟಿದ್ದಾರೆ’

ಪಿಡಿಯಾರ್ಟಿಕ್ ವಾರ್ಡ್​​ನಲ್ಲಿ ಡೆಂಘೀಯಿಂದ ನಾಲ್ವರು ಮೃತಪಟ್ಟಿದ್ದಾರೆ ಅಂತಾ ಹುಬ್ಬಳ್ಳಿ ಕಿಮ್ಸ್​ ಆಸ್ಪತ್ರೆ ನಿರ್ದೇಶಕ ಡಾ.ಎಸ್​.ಎಫ್​.ಕಮ್ಮಾರ್ ಹೇಳಿದ್ರು. ಕಿಮ್ಸ್​ ಆಸ್ಪತ್ರೆ ಮೆಡಿಸನ್ ವಾರ್ಡ್​ನಲ್ಲಿ ಯಾವ್ದೇ ಸಾವು ಆಗಿಲ್ಲ. ಧಾರವಾಡ ಜಿಲ್ಲೆಯಲ್ಲಿ ಡೆಂಘೀಯಿಂದ ಯಾವುದೇ ಡೆತ್​​ ಆಗಿಲ್ಲ. ಬೇರೆ ಜಿಲ್ಲೆಗಳಿಂದ ಬಂದಿರುವಂತ ನಾಲ್ವರು ರೋಗಿಗಳ ಸಾವು ಆಗಿದೆ. ಮೆಡಿಸನ್ ವಾರ್ಡ್​ನ ಐಸಿಯುನಲ್ಲಿ ಇಬ್ಬರು ರೋಗಿಗಳು ಇದ್ದಾರೆ ಅಂತಾ ಹೇಳಿದ್ದಾರೆ.

9 ಜನರಿಗೆ ವಕ್ಕರಿಸಿದ ಚಿಕನ್ ಗುನ್ಯಾ

ಮೈಸೂರು ಜಿಲ್ಲೆ ನಂಜನಗೂಡಿನಲ್ಲಿ ಡೆಂಘೀ ಸೋಂಕಿನ ಆರ್ಭಟ ಜೋರಾಗಿದೆ. ಚಿಕನ್ ಗುನ್ಯಾದ ಭೀತಿ ಹೆಚ್ಚಾಗಿದೆ. ನಂಜನಗೂಡಿನಲ್ಲಿ 23 ಜನರಿಗೆ ಡೆಂಘೀ ಇದ್ದು 9 ಜನರಿಗೆ ಚಿಕನ್ ಗುನ್ಯಾ ವಕ್ಕರಿಸಿದೆ. ಹೀಗಾಗಿ, ಶಾಸಕ ದರ್ಶನ್ ಧ್ರುವನಾರಾಯಣ, ತಹಶೀಲ್ದಾರ್ ಶಿವಕುಮಾರ್, ಇಒ ಜೆರಾಲ್ಡ್ ರಾಜೇಶ್, ಟಿಹೆಚ್​ಒ ಡಾ.ಈಶ್ವರ್ ನೇತೃತ್ವದಲ್ಲಿ ಸಭೆ ನಡೆಸಿದ್ರು.

12 ವರ್ಷದ ಬಾಲಕನಿಗೆ ಇಲಿ ಜ್ವರ ಪತ್ತೆ

ಹಾವೇರಿ ಜಿಲ್ಲೆಯಲ್ಲಿ ಡೆಂಘೀ ಜತೆ ಇಲಿ ಜ್ವರ ಕೂಡ ಪತ್ತೆಯಾಗಿದೆ. ಹಾವೇರಿಯಲ್ಲಿ 12 ವರ್ಷದ ಬಾಲಕನಿಗೆ ಇಲಿ ಜ್ವರ ಕಾಣಿಸಿಕೊಂಡಿದೆ. ಕಳೆದ 15 ದಿನಗಳಿಂದಲೂ ಜ್ವರದಿಂದ ಬಾಲಕ ಬಳಲುತ್ತಿದ್ದ. ದಿನ ಬಿಟ್ಟು ದಿನ ಜ್ವರ ಕಾಣಿಸಿ ಕೊಳ್ತಿದ್ರಿಂದ ರಕ್ತ ತಪಾಸಣೆ ನಡೆಸಲಾಗಿತ್ತು. ಈ ವೇಳೆ ಇಲಿ ಜ್ವರ ಇರೋದು ದೃಢ ಪಟ್ಟಿದೆ. ಬಾಲಕನ ಆರೋಗ್ಯ ಸ್ಥಿರ ಆಗಿದ್ದು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 1:05 pm, Mon, 8 July 24