71 ಮಹಿಳಾ ಸಾಂತ್ವನ ಸಹಾಯವಾಣಿ ಕೇಂದ್ರ ಬಂದ್; ಸರ್ಕಾರದ ನಿರ್ಧಾರಕ್ಕೆ ಮಹಿಳಾ ಪರ ಹೋರಾಟಗಾರರ ಆಕ್ರೋಶ
ನೊಂದ ಮಹಿಳೆಯರ ಸಾಂತ್ವನಕ್ಕಾಗಿ ಸ್ವತಃ ರಾಜ್ಯ ಸರ್ಕಾರ 2001ರಲ್ಲಿ ಸ್ವಯಂ ಸೇವಾ ಸಂಘ ಸಂಸ್ಥೆಗಳ ಮೂಲಕ 194 ಮಹಿಳಾ ಸಾಂತ್ವನ ಸಹಾಯವಾಣಿಗಳನ್ನು ಆರಂಭಿಸಿತ್ತು. ಜತೆಗೆ ತಲಾ ಪ್ರಕರಣಕ್ಕೆ ಇಂತಿಷ್ಟು ಎಂದು ಹಣಕಾಸಿನ ನೆರವು ನೀಡುತ್ತಿತ್ತು. ಆದರೆ ಈಗ ಈ ಕೇಂದ್ರಗಳನ್ನು ಬಂದ್ ಮಾಡಲಾಗಿದೆ.
ಚಿಕ್ಕಬಳ್ಳಾಪುರ: ಮಹಿಳೆಯರ ಮೇಲಿನ ದೌರ್ಜನ್ಯ, ವರದಕ್ಷಿಣೆ ಕಿರುಕುಳ, ಅತ್ಯಾಚಾರ, ಲೈಂಗಿಕ ಕಿರುಕುಳದಂತಹ ಪ್ರಕರಣಗಳಲ್ಲಿ ನೊಂದ ಮಹಿಳೆಯರ ಪರ ನಿಂತು, ಅವರಿಗೆ ಒಂದೆಡೆ ಸಾಂತ್ವನ ಮತ್ತೊಂದೆಡೆ ಅಗತ್ಯ ನೆರವು ಹಾಗೂ ವಸತಿ ನೀಡುತ್ತಿದ್ದ ಮಹಿಳಾ ಸಾಂತ್ವನ ಸಹಾಯವಾಣಿಯನ್ನು ಸರ್ಕಾರ ಬಂದ್ ಮಾಡಿದೆ. ರಾಜ್ಯದ 194 ಮಹಿಳಾ ಸಾಂತ್ವನ ಸಹಾಯವಾಣಿಗಳಲ್ಲಿ, 74 ಮಹಿಳಾ ಸಾಂತ್ವನ ಸಹಾಯವಾಣಿಗಳನ್ನು ರಾಜ್ಯ ಸರ್ಕಾರ ಬಂದ್ ಮಾಡಿ ಆದೇಶ ಹೊರಡಿಸಿದೆ. ಇದರಿಂದ ನೊಂದ ಮಹಿಳೆಯರಿಗೆ ಅನ್ಯಾಯವಾಗುತ್ತದೆ. ಅನ್ಯಾಯವಾದವರಿಗೆ ಮತ್ತೆ ಅನ್ಯಾಯ ಮಾಡೋದು ಸರಿಯಲ್ಲ ಎನ್ನುವ ವಾದ ಎಲ್ಲೇಡೆ ಕೇಳಿ ಬಂದಿದ್ದು, ಮಹಿಳೆಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನೊಂದ ಮಹಿಳೆಯರ ಸಾಂತ್ವನಕ್ಕಾಗಿ ಸ್ವತಃ ರಾಜ್ಯ ಸರ್ಕಾರ 2001ರಲ್ಲಿ ಸ್ವಯಂ ಸೇವಾ ಸಂಘ ಸಂಸ್ಥೆಗಳ ಮೂಲಕ 194 ಮಹಿಳಾ ಸಾಂತ್ವನ ಸಹಾಯವಾಣಿಗಳನ್ನು ಆರಂಭಿಸಿತ್ತು. ಜತೆಗೆ ತಲಾ ಪ್ರಕರಣಕ್ಕೆ ಇಂತಿಷ್ಟು ಎಂದು ಹಣಕಾಸಿನ ನೆರವು ನೀಡುತ್ತಿತ್ತು, ಇದರಿಂದ ನೊಂದ ಮಹಿಳೆಯರ ಪರ ಯಾರು ನಿಂತುಕೊಳ್ಳದಿದ್ದರೂ, ಮಹಿಳಾ ಮತ್ತು ಮಕ್ಕಳು ಕಲ್ಯಾಣ ಇಲಾಖೆಯ ನಿರ್ದೆಶನದಡಿ ಸಾಂತ್ವನ ಕೇಂದ್ರಗಳು ನೊಂದವರ ಬಾಳಲ್ಲಿ ಬೆಳಕು ಮೂಡಿಸಲು ಯತ್ನಿಸುತ್ತಿದ್ದವು. ಆದರೆ ಈಗ ರಾಜ್ಯದ 194 ಸಾಂತ್ವನ ಕೇಂದ್ರಗಳ ಪೈಕಿ 74 ಕೇಂದ್ರಗಳನ್ನು ಎಪ್ರಿಲ್ 1ರಿಂದಲೇ ಬಂದ್ ಮಾಡಿದೆ ಎಂದು ರಾಜ್ಯ ಮಹಿಳಾ ಸಾಂತ್ವನ ಕೇಂದ್ರಗಳ ಒಕ್ಕೂಟದ ಅಧ್ಯಕ್ಷೆ ಡಾ.ಎಂ.ವಿಜಯಾ ತಿಳಿಸಿದ್ದಾರೆ.
ಕರ್ನಾಟಕ ರಾಜ್ಯ ಮಹಿಳಾ ಸಾಂತ್ವನ ಕೇಂದ್ರಗಳ ಒಕ್ಕೂಟದ ವಾದಕ್ಕೆ, ರಾಜ್ಯ ಸರ್ಕಾರ ಉತ್ತರ ನೀಡಿದ್ದು, ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ವಿವಿಧ ಯೋಜನೆಗಳಾದ ಉಜ್ವಲ, ಸ್ವಾದಾರ, ಕೌಟುಂಬಿಕ ಸಲಹಾ ಕೇಂದ್ರಗಳು ಸೇರಿದಂತೆ ಈಗಾಗಲೇ ಸಖಿ ಓನ್ ಸ್ಟಾಪ್ ಕೇಂದ್ರಗಳು ಇವೆ. ಇನ್ನೂ ಮತ್ತೆ ಪ್ರತ್ಯೇಕ ಮಹಿಳಾ ಸಾಂತ್ವನ ಕೇಂದ್ರಗಳ ಅವಶ್ಯಕತೆ ಇಲ್ಲ ಎಂದು ತಿಳಿಸಿದೆ. ಆದರೆ ಮಹಿಳಾ ಸಾಂತ್ವನ ಕೇಂದ್ರಗಳಲ್ಲಿ ಇರುವ ಮೂಲಭೂತ ಸೌಕರ್ಯಗಳು, ಆಪ್ತ ಸಮಾಲೋಚನೆ, ಕಾನೂನು ನೆರವು, ವಸತಿ ಸಖಿ ಓನ್ ಸ್ಟಾಫ್ನಲ್ಲಿ ಇಲ್ಲ, ಅಲ್ಲಿ ಕೇವಲ ಒಂದು ರೂಮ್ ಒಂದು ಟೇಬಲ್ ಒಂದಿಬ್ಬರು ಸ್ಟಾಫ್ ಇದ್ದಾರೆ. ಹಾಗಾಗಿ ಸರ್ಕಾರಿ ಮಹಿಳಾ ಸಾಂತ್ವನ ಕೇಂದ್ರಗಳನ್ನು ಮುಂದುವರೆಸುವಂತೆ ಮಹಿಳಾ ಪರ ಹೋರಾಟಗಾರ್ತಿ ಶ್ರೀಮತಿ ರೇವತಿ ಆಗ್ರಹಿಸಿದ್ದಾರೆ.
ನೊಂದ ಮಹಿಳೆಯರ ತವರು ಮನೆಯಂತಿರುವ ಮಹಿಳಾ ಸಾಂತ್ವನ ಸಹಾಯವಾಣಿ ಕೇಂದ್ರಗಳನ್ನು ಮುಚ್ಚುವುದರಿಂದ, ನೊಂದವರಿಗೆ ತೊಂದರೆ ಮಾಡಿದಂತಾಗುತ್ತದೆ ಎಂದು ಮಹಿಳಾ ಪರ ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದ್ದು, ಸರ್ಕಾರ ಈ ಬಗ್ಗೆ ಯಾವ ನಿರ್ಧಾರ ತೆಗೆದುಕೊಳ್ಳುತ್ತದೆ ಎನ್ನುವುದನ್ನು ಕಾದು ನೋಡಬೇಕಿದೆ.
ಇದನ್ನೂ ಓದಿ:
French Open 2021: ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ಚೊಚ್ಚಲ ಗ್ರ್ಯಾಂಡ್ ಸ್ಲ್ಯಾಮ್ ಗೆದ್ದ ಬಾರ್ಬೊರಾ ಕ್ರೆಜ್ಕಿಕೋವಾ
Samantha Akkineni: ಸಂಕಷ್ಟದಲ್ಲಿದ್ದ ಮಹಿಳಾ ಆಟೋ ಡ್ರೈವರ್ಗೆ ದುಬಾರಿ ಕಾರ್ ಗಿಫ್ಟ್ ನೀಡಿದ ನಟಿ ಸಮಂತಾ