ಬೆದರಿಕೆ ಆರೋಪ: ಕೇಂದ್ರ ಸಚಿವ ಕುಮಾರಸ್ವಾಮಿ ವಿರುದ್ಧ ದೂರು ದಾಖಲಿಸಿದ ಎಡಿಜಿಪಿ ಚಂದ್ರಶೇಖರ್
ಕೇಂದ್ರ ಸಚಿವ ಎಚ್ಡಿ ಕುಮಾರಸ್ವಾಮಿ ಮತ್ತು ಲೋಕಾಯುಕ್ತ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಎಸ್‌ಐಟಿ) ಎಂ.ಚಂದ್ರಶೇಖರ್ ನಡುವಿನ ಜಂಗೀ ಕುಸ್ತಿ ಮತ್ತೊಂದು ಹಂತಕ್ಕೆ ಹೋಗಿದೆ. ಇಷ್ಟು ದಿನ ಆರೋಪ-ಪ್ರತ್ಯಾರೋಪ ಮಾಡಿಕೊಳ್ಳುತ್ತಿದ್ದರು. ಆದ್ರೆ, ಇದೀಗ ಎಡಿಜಿಪಿ ಚಂದ್ರಶೇಖರ್ ಅವರು ಒಂದು ಹೆಜ್ಜೆ ಮುಂದೆ ಹೋಗಿ ಕುಮಾರಸ್ವಾಮಿ ವಿರುದ್ಧ ಪೊಲೀಸರಿಗೆ ದೂರು ದಾಖಲಸಿದ್ದಾರೆ.
ಬೆಂಗಳೂರು, (ಅಕ್ಟೋಬರ್ 11): ಎಸ್‌ಐಟಿ ಎಡಿಜಿಪಿ ಎಂ.ಚಂದ್ರಶೇಖರ್ ಅವರು ಕೇಂದ್ರ ಸಚಿವ ಎಚ್ಡಿ ಕುಮಾರಸ್ವಾಮಿ ವಿರುದ್ಧ ದೂರು ದಾಖಲಿಸಿದ್ದಾರೆ. ಸುಳ್ಳು ಆರೋಗ್ಯ ಪ್ರಮಾಣಪತ್ರ ಪಡೆದಿದ್ದಾರೆಂದು ಸುಳ್ಳು ಆರೋಪ ಹಾಗೂ ಕರ್ನಾಟಕ ಕೆಡರ್ನಿಂದ ಬೇರೆ ರಾಜ್ಯಕ್ಕೆ ಕಳಿಸುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಕುಮಾರಸ್ವಾಮಿ, ನಿಖಿಲ್, ಸುರೇಶ್ ಬಾಬು ವಿರುದ್ಧ ಬೆಂಗಳೂರಿನ ಸಂಜಯನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಚಂದ್ರಶೇಖರ್ ಅವರು ಈ ದೂರು ಆಧರಿಸಿ ಪೊಲೀಸರು ಎನ್ಸಿಆರ್ ದಾಖಲಿಸಿಕೊಂಡಿದ್ದಾರೆ.
ಕರ್ನಾಟಕ ಕೆಡರ್ನಿಂದ ಬೇರೆ ರಾಜ್ಯಕ್ಕೆ ಕಳಿಸುವುದಾಗಿ ಬೆದರಿಕೆ ಹಾಕಿದ್ದಾರೆ. ಅಲ್ಲದೇ ಸುಳ್ಳು ದಾಖಲೆ ಪಡೆದು ಕರ್ನಾಟಕ ಕೆಡರ್ನಲ್ಲಿದ್ದೇನೆಂದು ಸುಳ್ಳು ಆರೋಪ ಮಾಡಿದ್ದಾರೆ. ಹಾಗೇ ಲಂಚ ಪಡೆದಿದ್ದಾಗಿ ನನ್ಮೇಲೆ ಸುಳ್ಳು ಆರೋಪಿಸಿದ್ದಾರೆ. ಇನ್ನು ನನ್ನ ವಿರುದ್ಧ ಸುಳ್ಳು ಆರೋಪ ಮಾಡಿ ಕ್ರಮಕ್ಕೆ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ. ಜೊತೆಗೆ ಆ ಪತ್ರ ಸಾಮಾಜಿಕ ಜಾಲತಾಣದಲ್ಲಿ ಹಾಕಿ ಬೆದರಿಕೆ ಹಾಕಿದ್ದಾರೆ. ನಿಖಿಲ್ ಕುಮಾರಸ್ವಾಮಿ ಸಹ ನನ್ನ ವಿರುದ್ಧ ಸುಳ್ಳು ಆರೋಪ ಮಾಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ: ಹೆಚ್ಡಿ ಕುಮಾರಸ್ವಾಮಿ ಆರೋಪಕ್ಕೆ ಎಡಿಜಿಪಿ ಚಂದ್ರಶೇಖರ್ ಮತ್ತೆ ತಿರುಗೇಟು ನೀಡಿದ್ದು ಹೀಗೆ
ಕ್ರಿಮಿನಲ್ ಮೊಕದ್ದಮೆ ಸಂಖ್ಯೆ 16/2024ರಲ್ಲಿ ಆರೋಪಿಯಾಗಿರುವರು ತನಿಖೆಗೆ ಅಡ್ಡಿಪರಿಸುವ ಉದ್ದೇಶದಿಂದ ಎಸ್‌ಐಟಿ ಅಧಿಕಾರಿಗಳಿಗೆ ಬೆದರಿಕೆ ಒಡ್ಡುತ್ತಿದ್ದಾರೆ. ಪ್ರಾಸಿಕ್ಯೂಷನ್ಗೆ ಅನುಮತಿ ಕೋರಿ ರಾಜ್ಯಪಾಲರಿಗೆ ಲೋಕಾಯುಕ್ತ ಎಸ್‌ಐಟಿ ಕಳುಹಿಸಲಾದ ಈ ದಾಖಲೆಗಳು ಅದೇ ಪ್ರಕರಣದಲ್ಲಿ ಆರೋಪಿಯಾಗಿರುವ ಕುಮಾರಸ್ವಾಮಿಯವರ ಕೈಗೆ ಸಿಕ್ಕಿದ್ದಾದರೂ ಹೇಗೆ? ಅವರು ತಮ್ಮ ಕೇಂದ್ರ ಮಂತ್ರಿ ಪದವಿಯ ಅಧಿಕಾರಿವನ್ನು ದುರುಪಯೋಗಪಡಿಸಿಕೊಂಡಿದ್ದಾರೆಯೇ ಎಂಬ ಪ್ರಶ್ನೆ ಮೂಡುತ್ತಿದೆ ಎಂದು ಚಂದ್ರಶೇಖರ್ ಅವರು ತಮ್ಮ ದೂರಿನಲ್ಲಿ ಅನುಮಾನ ವ್ಯಕ್ತಡಿಸಿದ್ದಾರೆ.
ಅತ್ಯಂತ ಕೀಳುಮಟ್ಟದ ಕ್ರಿಮಿನಲ್ಗಳು ಕೂಡ ಕುಟುಂಬ ಮತ್ತು ಮಕ್ಕಗಳನ್ನು ತಮ್ಮ ದ್ವೇಷ ವ್ಯವಹಾರದಿಂದ ದೂರವಿಡುತ್ತಾರೆ. ಆದ್ರೆ, ಕುಮಾರಸ್ವಾಮಿಯವರು ನನ್ನ ಕುಟುಂಬದ ಮೇಲೆಯೂ ಸುಳ್ಳು ಆರೋಪ ಹೊರಿಸಿ ಬೆದರಿಯೊಡ್ಡಿದ್ದಾರೆ ಎಂದು ಎಡಿಜಿಪಿ ಆರೋಪಿಸಿದ್ದಾರೆ.
ಕುಮಾರಸ್ವಾಮಿಯವರ ಮಗ ನಿಖಿಲ್ ಕುಮಾರಸ್ವಾಮಿಯವರು ನನ್ನ ವಿರುದ್ಧ ಸುಳ್ಳು ಮತ್ತು ದುರುದ್ದೇಶಪೂರಿತ ಆರೋಪಗಳನ್ನು ಮಾಡಿದ್ದಾರೆ. ಕುಮಾರಸ್ವಾಮಿಯವರ ಆಪ್ತ ಸುರೇಶ್ ಬಾಬಯ ಕೂಡ ನನ್ನ ವಿರುದ್ಧ ಕ್ರಮಕೈಗೊಳ್ಳುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ. ಅಲ್ಲದೇ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿ ಬೆದರಿಕೆ ಹಾಕಿದ್ದಾರೆ ಎಂದು ಲೋಕಾಯುಕ್ತ ವಿಶೇಷ ತನಿಖಾ ತಂಡದ ಎಡಿಜಿಪಿ ಚಂದ್ರಶೇಖರ್ ಅವರು ಸಂಜಯ್ ನಗರ ಪೊಲೀಸ್ ಠಾಣೆಗೆ ನೀಡಿರುವ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಸದ್ಯ ಪೊಲೀಸರು ಎನ್ಸಿಆರ್ ದಾಖಲಿಸಿಕೊಂಡಿದ್ದು, ಮುಂದೆ ಏನೆಲ್ಲಾ ಕ್ರಮಕೈಗೊಳ್ಳುತ್ತಾರೆ ಎನ್ನುವುದನ್ನು ಕಾದುನೋಡಬೇಕಿದೆ.
Published On - 7:43 pm, Fri, 11 October 24