
ಬೆಂಗಳೂರು, ಜುಲೈ 29: ಕಾಂಗ್ರೆಸ್ ಕರ್ನಾಟಕ (Karnataka) ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ರಾಜ್ಯಕ್ಕೆ ಬಂದು ಶಾಸಕರ ಜತೆ ಒನ್ ಟು ವನ್ ಸಭೆ ನಡೆಸಿದ್ದಾಯ್ತು. ಇದೀಗ ಸಿಎಂ ಸಿದ್ದರಾಮಯ್ಯ (Siddaramaiah) ಸರದಿ. ಇಂದಿನಿಂದ 4 ದಿನಗಳ ಕಾಲ ಅವರು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಶಾಸಕರ ಜತೆ ಸಭೆ ನಡೆಸಲಿದ್ದಾರೆ. ಮೊದಲಿಗೆ, ತವರು ಜಿಲ್ಲೆ ಮೈಸೂರಿನಿಂದಲೇ ಇಂದು ಸಂಜೆ ಸಭೆ ಆರಂಭಿಸಲಿದ್ದಾರೆ. ಶಾಸಕರಿಗೆ ತಲಾ 50 ಕೋಟಿ ರೂ. ಅನುದಾನವನ್ನು ಬಿಡುಗಡೆ ಮಾಡಿ ಮುಖ್ಯಮಂತ್ರಿಗಳು ಕೆಲವು ದಿನಗಳ ಹಿಂದೆ ಆದೇಶ ಹೊರಡಿಸಿದ್ದರು. ಆ ಸಂಬಂಧ ಸಚಿವರು, ಶಾಸಕರ ಜತೆ ಚರ್ಚಿಸಲಿದ್ದಾರೆ ಎನ್ನಲಾಗಿದೆ.
ರಾಜಕೀಯವಾಗಿಯೂ ಈ ಸಭೆ ಬಹಳ ಮಹತ್ವದ್ದು ಎಂದು ವಿಶ್ಲೇಷಿಸಲಾಗುತ್ತಿದೆ. ಇತ್ತೀಚೆಗೆ ದೆಹಲಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ, ‘ಐದು ವರ್ಷ ನಾನೇ ಸಿಎಂ’ ಎಂದು ಸಿದ್ದರಾಮಯ್ಯ ಹೇಳಿದ್ದರು. ಅದಾದ ನಂತರ ರಾಜ್ಯ ಕಾಂಗ್ರೆಸ್ನಲ್ಲಿ ಒಂದೇ ಶಕ್ತಿ ಕೇಂದ್ರ ಇದೆ ಎಂಬ ಸಂದೇಶ ನೀಡಲು ಅವರು ಈ ಸಭೆಯನ್ನು ಬಳಸಿಕೊಳ್ಳಲಿದ್ದಾರೆ ಎನ್ನಲಾಗಿದೆ.
ಮೊದಲ ದಿನದ ಇಂದಿನ ಸಭೆಯಲ್ಲಿ ಸಚಿವ ಮಹದೇವಪ್ಪ, ಕೆ.ವೆಂಕಟೇಶ್, ರಾಜಣ್ಣ, ದಿನೇಶ್, ಬೋಸರಾಜು, ಸ್ಪೀಕರ್ ಖಾದರ್ ಸೇರಿ ಹಲವರು ಭಾಗಿಯಾಗುವ ಸಾಧ್ಯತೆ ಇದೆ.
ಉಸ್ತುವಾರಿ ಸಚಿವರು, ಶಾಸಕರ ಜತೆಗಿನ ಸಭೆಯಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಇರುವುದಿಲ್ಲ ಎಂಬುದು ತಿಳಿದುಬಂದಿದೆ. ಸಭೆಗೆ ಆಹ್ವಾನ ನೀಡದಿರುವುದಕ್ಕೆ ಆಂತರಿಕವಾಗಿ ಡಿಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಕೆಪಿಸಿಸಿ ಅಧ್ಯಕ್ಷ, ಉಪಮುಖ್ಯಮಂತ್ರಿ ಆಗಿದ್ದರೂ ಸಭೆಗೆ ಕರೆಯದಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಶಾಸಕರ ಬಳಿ ಆಂತರಿಕವಾಗಿ ಹೇಳಿಕೊಂಡಿದ್ದಾರೆ ಎನ್ನಲಾಗಿದೆ.
ಮುಖ್ಯಮಂತ್ರಿಗಳು ಉಸ್ತುವಾರಿ ಸಚಿವರು ಮತ್ತು ಶಾಸಕರ ಜತೆ ಸಭೆ ನಡೆಸುವ ವಿಚಾರವಾಗಿ ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ‘ಟಿವಿ9’ಗೆ ಮಾಹಿತಿ ನೀಡಿದ್ದಾರೆ. ರಾಜ್ಯದ ಅಭಿವೃದ್ಧಿ ಕಾರ್ಯಗಳಿಗೆ ಅನುದಾನದ ಕೊರತೆ ಇಲ್ಲ. 2025-26ನೇ ಸಾಲಿನಲ್ಲಿ 8,000 ಕೋಟಿ ರೂಪಾಯಿಗಳ ಹೆಚ್ಚುವರಿ ಅನುದಾನವನ್ನು 224 ವಿಧಾನಸಭಾ ಕ್ಷೇತ್ರಗಳಿಗೆ ವಿತರಿಸಲಾಗುವುದು. ಆಡಳಿತ ಪಕ್ಷದ ಶಾಸಕರಿಗೆ 50 ಕೋಟಿ ರೂಪಾಯಿ ಮತ್ತು ವಿರೋಧ ಪಕ್ಷದ ಶಾಸಕರಿಗೆ 25 ಕೋಟಿ ರೂಪಾಯಿಗಳನ್ನು ನೀಡಲಾಗುವುದು ಎಂದು ಅವರು ಹೇಳಿದ್ದಾರೆ.
ಜಿಲ್ಲಾವಾರು ಸಭೆಗಳಲ್ಲಿ ಮುಖ್ಯಮಂತ್ರಿಗಳು ಪ್ರತಿ ಶಾಸಕರೊಂದಿಗೆ ವೈಯಕ್ತಿಕವಾಗಿ 10 ನಿಮಿಷಗಳಷ್ಟು ಹೊತ್ತು ಸಮಾಲೋಚನೆ ನಡೆಸಲಿದ್ದಾರೆ. ಶಾಸಕರೊಂದಿಗೆ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ಬಗ್ಗೆ ಚರ್ಚಿಸಲಿದ್ದಾರೆ ಎಂದು ರಾಯರೆಡ್ಡಿ ತಿಳಿಸಿದ್ದಾರೆ.
ಇದನ್ನೂ ಓದಿ: ಎಸ್ಸಿ, ಎಸ್ಟಿಗೆ ಮಾತ್ರ ಮೀಸಲಿಟ್ಟ ಹಣ ಗ್ಯಾರಂಟಿಗಳಿಗೆ: ಮತ್ತೆ ವಿವಾದ ಮೈಮೇಲೆ ಎಳೆದುಕೊಳ್ಳಲು ಮುಂದಾದ ಸರ್ಕಾರ
ಶಾಸಕರಿಗೆ ನೀಡಲಾಗುವ ಅನುದಾನದ ಹಣವನ್ನು ನಗರ, ಗ್ರಾಮೀಣ ಮತ್ತು ಲೋಕೋಪಯೋಗಿ ರಸ್ತೆಗಳ ಅಭಿವೃದ್ಧಿ, ಶಾಲಾ ಕೊಠಡಿಗಳು, ಕಲ್ಯಾಣ ಮಂಟಪಗಳು ಮತ್ತು ದೇವಸ್ಥಾನಗಳ ನಿರ್ಮಾಣಕ್ಕೆ ಬಳಸಬಹುದು ಎಂದು ಸರ್ಕಾರ ಈಗಾಗಲೇ ಸ್ಪಷ್ಟಪಡಿಸಿದೆ.