ಕೊಟ್ಟ ಮಾತು ತಪ್ಪಿದ ಸರ್ಕಾರಕ್ಕೆ ಬಿಸಿ ಮುಟ್ಟಿಸಲು ಮತ್ತೆ ಪ್ರತಿಭಟನೆಗೆ ಇಳಿದ ಅಂಗನವಾಡಿ ಕಾರ್ಯಕರ್ತೆಯರು.. ಮೌರ್ಯ ಸರ್ಕಲ್‌ನಲ್ಲಿ ಪ್ರತಿಭಟನೆ
ಬಜೆಟ್‌ನಲ್ಲಿ ಬೇಡಿಕೆಗಳನ್ನು ಈಡೇರಿಸದ ಹಿನ್ನೆಲೆಯಲ್ಲಿ ಎಐಟಿಯುಸಿ ಸಂಘಟನೆ ನೇತೃತ್ವದಲ್ಲಿ ಅಂಗನವಾಡಿ ಕಾರ್ಯಕರ್ತೆಯರಿಂದ ಬೆಂಗಳೂರಿನ ಮೌರ್ಯ ಸರ್ಕಲ್‌ನಲ್ಲಿ ಪ್ರತಿಭಟನೆ ನಡೆಯಲಿದೆ.
ಬೆಂಗಳೂರು: ರಾಜ್ಯಾದ್ಯಂತ ಇಂದು ಅಂಗನವಾಡಿಗಳು ಬಂದ್ ಆಗಲಿವೆ. ಬಜೆಟ್‌ನಲ್ಲಿ ಬೇಡಿಕೆಗಳನ್ನು ಈಡೇರಿಸದ ಹಿನ್ನೆಲೆಯಲ್ಲಿ ಎಐಟಿಯುಸಿ ಸಂಘಟನೆ ನೇತೃತ್ವದಲ್ಲಿ ಅಂಗನವಾಡಿ ಕಾರ್ಯಕರ್ತೆಯರಿಂದ ಬೆಂಗಳೂರಿನ ಮೌರ್ಯ ಸರ್ಕಲ್‌ನಲ್ಲಿ ಪ್ರತಿಭಟನೆ ನಡೆಯಲಿದೆ. ಬೆಳಿಗ್ಗೆ 10 ಗಂಟೆಯಿಂದ ಸಂಜೆಯವರೆಗೆ ಪ್ರತಿಭಟನೆ ನಡೆಯಲಿದ್ದು ಧರಣಿಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಕಾರ್ಯಕರ್ತೆಯರು ಜಮಾಯಿಸಲಿದ್ದಾರೆ.
ವಿವಿಧ ಬೇಡಿಕೆಗಳನ್ನು ಆಗ್ರಹಿಸಿ ಫೆಬ್ರವರಿ 2 ರಂದು ಫ್ರೀಡಂ ಪಾರ್ಕ್ನಲ್ಲಿ ಸಾವಿರಾರು ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಬೃಹತ್ ಪ್ರತಿಭಟನೆ ಮಾಡಿದ್ದರು. ಆದ್ರೆ ಇವರಿಗೆ ಮತ್ತೊಮ್ಮೆ ಸರ್ಕಾರ ಮೋಸ ಮಾಡಿದೆ. ಈ ಬಾರಿಯ ಬಜೆಟ್‌ನಲ್ಲಿ ನಿಮ್ಮ ಬೇಡಿಕೆಗಳನ್ನು ಈಡೆರಿಸುವುದಾಗಿ ಸಚಿವರು ಮತ್ತು ಅಧಿಕಾರಿಗಳು ಭರವಸೆ ನೀಡಿದ್ದರು. ಆದ್ರೆ ಅದು ಯಾವುದೂ ಇಡೇರಿಲ್ಲ. ಈ ಬಾರಿಯ ಬಜೆಟ್‌ನಲ್ಲಿ ಕೊಟ್ಟ ಯಾವುದೇ ಭರವಸೆಗಳನ್ನು ಈಡೇರಿಸದ ಹಿನ್ನೆಲೆಯಲ್ಲಿ ಇಂದು ಮಹಿಳಾ ವಿರೋಧಿ ಬಜೆಟ್ ಅಂತ ಪ್ರತಿಭಟನೆ ಮಾಡಲು ಅಂಗನವಾಡಿ ಕಾರ್ಯಕರ್ತೆಯರು ಮುಂದಾಗಿದ್ದಾರೆ.
ಬೇಡಿಕೆಗಳೇನು? ಸೇವಾ ಹಿರಿತನದ ಆಧಾರದಲ್ಲಿ ಗೌರವಧನ ಹೆಚ್ಚಳ ಮಾಡಬೇಕು. ಹಾಗೇ ಉಚಿತ ವೈದ್ಯಕೀಯ ಸೌಲಭ್ಯ ಅಥವಾ ಇಎಸ್‌ಐ ಸೌಲಭ್ಯ ನೀಡಬೇಕು. LKG, UKGಯನ್ನು ಅಂಗನವಾಡಿಯಲ್ಲೇ ಆರಂಭಿಸಬೇಕು. ಮಿನಿ ಅಂಗನವಾಡಿಗಳನ್ನ ಉನ್ನತೀಕರಿಸುವ ಜೊತೆಗೆ ಮಿನಿ ಅಂಗನವಾಡಿ ಕೇಂದ್ರಗಳಿಗೆ ಸಹಾಯಕಿಯರನ್ನ ನೇಮಕಾತಿ ಮಾಡಬೇಕು. ಪಿಂಚಣಿ ಸೌಲಭ್ಯ, ಕೊವಿಡ್ 19 ರ ಪರಿಹಾರವನ್ನ ನೀಡಬೇಕು. ಖಾಯಂ ನೌಕರಿ ನೀಡಬೇಕು. ಮಾಸಿಕ 24 ಸಾವಿರ ರೂ. ಸಮಾನ ಕನಿಷ್ಠ ವೇತನ ನೀಡಬೇಕು ಸೇರಿ ಹಲವು ಬೇಡಿಕೆ ಈಡೇರಿಸುವಂತೆ ಆಗ್ರಹ.
ಇದನ್ನೂ ಓದಿ: ಬೆಂಗಳೂರಿಗಿಂದು ಪ್ರತಿಭಟನೆ ಶಾಕ್.. ಅಂಗನವಾಡಿ, ಬಿಸಿಯೂಟ ಕಾರ್ಯಕರ್ತೆಯರ ಬೃಹತ್ ಪ್ರತಿಭಟನೆ