ಗೃಹಲಕ್ಷ್ಮಿ ಆಯ್ತು, ಈಗ ಅನ್ನಭಾಗ್ಯ ಯೋಜನೆಯಲ್ಲೂ ಫಲಾನುಭವಿಗಳಿಗೆ ಶಾಕ್ ನೀಡಿದ ಸರ್ಕಾರ

| Updated By: ಗಣಪತಿ ಶರ್ಮ

Updated on: Oct 02, 2024 | 7:05 AM

ಕಾಂಗ್ರೆಸ್ ಸರ್ಕಾರದ ಮಹತ್ವಕಾಂಕ್ಷೆಯ ಯೋಜನೆಗಳಲ್ಲಿ ಒಂದಾದ ಅನ್ನಭಾಗ್ಯ ಯೋಜನೆಯ ಹಣ ಮೂರು ತಿಂಗಳುಗಳಿಂದ ಫಲಾನುಭವಿಗಳ ಖಾತೆಗೆ ವರ್ಗಾವಣೆಯಾಗಿಲ್ಲ.‌ ಹೀಗಾಗಿ ಅನ್ನಭಾಗ್ಯ ಫಾಲಾನುಭವಿಗಳು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದರೊಂದಿಗೆ, ಗೃಹಲಕ್ಷ್ಮಿ ಯೋಜನೆಯಂತೆಯೇ ಅನ್ನ ಭಾಗ್ಯ ಕೂಡ ಫಲಾನುಭವಿಗಳ ನಿರಾಸೆಗೆ ಕಾರಣವಾಗಿದೆ.

ಗೃಹಲಕ್ಷ್ಮಿ ಆಯ್ತು, ಈಗ ಅನ್ನಭಾಗ್ಯ ಯೋಜನೆಯಲ್ಲೂ ಫಲಾನುಭವಿಗಳಿಗೆ ಶಾಕ್ ನೀಡಿದ ಸರ್ಕಾರ
ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಿದ ಫಲಾನುಭವಿಗಳು
Follow us on

ಬೆಂಗಳೂರು, ಅಕ್ಟೋಬರ್ 2: ಸಾಕಷ್ಟು ಪ್ರಮಾಣದಲ್ಲಿ ಅಕ್ಕಿ ದಾಸ್ತಾನಿರದ ಕಾರಣ, ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕನಸಿನ ಯೋಜನೆ ಅನ್ನ ಭಾಗ್ಯ ಯೋಜನೆಯಡಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಮಾಡಲಾಗುತ್ತಿತ್ತು. ಆದರೆ, ಕಳೆದ ಮೂರು ತಿಂಗಳುಗಳಿಂದ ಹಣ ಬಿಪಿಎಲ್ ಫಲಾನುಭವಿಗಳ ಕೈಸೇರಿಲ್ಲ. ಹೀಗಾಗಿ ಫಲಾನುಭವಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಅನ್ನಭಾಗ್ಯದ (ನೇರ ನಗದು ವರ್ಗಾವಣೆ) ಹಣ ಬಾರದ ಪರಿಣಾಮ ಸರ್ಕಾರದ ವಿರುದ್ಧ ಫಲಾನುಭವಿಗಳು ಮಂಗಳವಾರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನ ಶೇಷಾದ್ರಿಪುರಂನಲ್ಲಿ ಫಾಲಾನುಭವಿಗಳು ಒಟ್ಟಿಗೆ ಸೇರಿ ಸಭೆ ಮಾಡಿ, ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಳೆದ ಮೂರು ತಿಂಗಳಿನಿಂದ ಹಣವನ್ನೂ ಕೊಡದೆ, ಅಕ್ಕಿಯನ್ನೂ ಕೊಡದೆ ಆಹಾರ ಮತ್ತು ನಾಗಾರೀಕ ಸರಬರಾಜು ಇಲಾಖೆಯ ಜನರಿಗೆ ಟೋಪಿಹಾಕುವ ಕೆಲಸ ಮಾಡುತ್ತಿದೆ. ಮೂರು ತಿಂಗಳಿನಿಂದ ಹಣ ಬಂದಿಲ್ಲ. ಹಣವೂ ಇಲ್ಲದೇ ಅಕ್ಕಿಯೂ ಇಲ್ಲದೇ ಬಡವರ್ಗದ ಜನರು ಪರದಾಡುತ್ತಿದ್ದಾರೆ. ಅಕ್ಕಿ‌ ಕೊಡುತ್ತೇವೆ ಎಂದು ಅಶ್ವಾಸನೆ ಕೊಟ್ಟು ಅಧಿಕಾರಕ್ಕೆ ಬಂದರು. ಇದೀಗ ಒಂದು ವರ್ಷ ಕಳೆಯುತ್ತಾ ಬಂದರೂ ಅಕ್ಕಿ ಕೊಟ್ಟಿಲ್ಲ. ಅಲ್ಲದೇ ಅಕ್ಕಿಯ ಬದಲಾಗಿದೆ ಹಣ ಕೊಡುತ್ತೇವೆ ಎಂದರು. ಆದರೆ ಆರು ತಿಂಗಳು ಹಣ ಹಾಕಿ ಈಗ ಸುಮ್ಮನಾಗಿದ್ದಾರೆ. ನಮಗೆ ಹಣದ ಅಗತ್ಯ ಇಲ್ಲ. ಹಣದ ಬದಲು ನಮಗೆ ಅಕ್ಕಿಯನ್ನೇ ಕೊಡಿ. ಅಥವಾ ಅಕ್ಕಿ ಸಿಗದಿದ್ದರೆ ದಿನಸಿ ಪದಾರ್ಥಗಳನ್ನ ಕೊಡಿ ಎಂದು ಫಲಾನುಭವಿಗಳ ಪರವಾಗಿ ಬೆಂಗಳೂರಿನ ಮಮತಾ ಎಂಬವರು ಬೇಡಿಕೆ ಇಟ್ಟಿದ್ದಾರೆ.

170 ರೂಪಾಯಿಗೆ ಏನೂ ಸಿಗಲ್ಲ: ಫಲಾನುಭವಿಗಳ ಆಕ್ರೋಶ

ನಾವು ಅಕ್ಕಿ ದುಡ್ಡು ಬರುತ್ತದೆ ಅಂತ ಬ್ಯಾಂಕಿಗೂ ಮನೆಗೂ ಅಲೆದಾಡುತ್ತಾ ಇದ್ದೇವೆ ಇದ್ದೀವಿ. ಆದರೆ ಅಕ್ಕಿ ದುಡ್ಡು ಮಾತ್ರ ನಮಗೆ ಬಂದಿಲ್ಲ. ಈ ಯೋಜನೆಗಳಿಂದ ಮನೆಯಲ್ಲಿ ಜಗಳಗಳಾಗುತ್ತಿವೆ. ಅಲ್ಲದೇ 170 ರೂಪಾಯಿಗೆ ಏನೂ ಬರುವುದಿಲ್ಲ. ನಮಗೆ ಅಕ್ಕಿಯನ್ನೇ ಕೊಡಿ.‌ ಬಡವರ್ಗದವರು ಅಕ್ಕಿಯನ್ನ ಖರೀದಿಸುವುದಕ್ಕೆ ತುಂಬ ಕಷ್ಟವಾಗುತ್ತಿದೆ. ಕೂಲಿ ಕೆಲಸ ಮಾಡುವವರಿಗೆ ಈ ಅಕ್ಕಿ ತುಂಬ ಅನುಕೂಲವಾಗುತ್ತಿತ್ತು. ಆದರೆ ಈಗ ಅಕ್ಕಿಕೊಡದೇ ತುಂಬ ಕಷ್ಟವಾಗುತ್ತಿದೆ ಎಂದು ಫಲಾನುಭವಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪಡಿತರ ವಿತರಕರ ಸಂಘದವರು ಹೇಳುವುದೇನು?

ಅಕ್ಕಿದುಡ್ಡು ಯಾಕೆ ಬರುತ್ತಿಲ್ಲ ಎಂದು ಪಡಿತರ ವಿತರಕನ್ನು ಫಾಲಾನುಭವಿಗಳು ಪ್ರಶ್ನಿಸುತ್ತಿದ್ದಾರೆ. ನಾವು ಸರ್ಕಾರಕ್ಕೆ ಈ ಹಿಂದೆ ಮನವಿ ಕೊಡ ಸಲ್ಲಿಸಿದ್ದೆವು. ಅಕ್ಕಿ ಫಾಲಾನುಭವಿಗಳು ಅಧಿಕಾರಿಗಳಿಗಿಂತ ಹೆಚ್ಚು ಪಡಿತರ ವಿತರಕರೊಂದಿಗೆ ಹೆಚ್ಚು ಸಂಪರ್ಕದಲ್ಲಿ ಇರ್ತಾರೆ. ಹೀಗಾಗಿ ವಿತರಕರೊಂದಿಗೆ ಬಿಪಿಎಲ್ ಫಾಲಾನುಭವಿಗಳು ಜಗಳ ಮಾಡ್ತಿದ್ದಾರೆ. ಅಲ್ಲದೇ ಅಕ್ಕಿ ಬೇಕಾ ಅಥವಾ ಹಣ ಬೇಕಾ ಅಂತ ಅಧಿಕಾರಿಗಳು ಬಂದು ಸರ್ವೇ ಮಾಡಿ, ಹಣ ಕೊಡುತ್ತೇವೆ ಅಂತ ಹೇಳಿ ಸ್ಟಾಪ್ ಮಾಡಿದ್ದಾರೆ. ಅಲ್ಲದೇ, ನಾವು ಹಣ ಬೇಡ ಹಣದ ಬದಲಾಗಿ ದಿನಸಿ ಕೊಡಿ ಅಂತ ಸರ್ಕಾರಕ್ಕೆ ಮನವಿ ಕೂಡ ಸಲ್ಲಿಸಿದ್ವಿ. ಆದ್ರೆ ಸರ್ಕಾರ ನಮ್ಮ ಮನವಿಯನ್ನ ತಿರಸ್ಕಾರ ಮಾಡಿದೆ. ಇದರಿಂದ ಬಡವರ್ಗದ ಜನರಿಗೆ ಸಮಸ್ಯೆಯಾಗುತ್ತಿದೆ. ಸರ್ಕಾರ ನುಡಿದಂತೆ ನಡೆದುಕೊಳ್ಳಬೇಕು. ಅಲ್ಲದೇ ವಿತರಕರ ಸಮಸ್ಯೆಯನ್ನ ಆಹಾರ ನಾಗಾರೀಕ ಇಲಾಖೆ ಅಧಿಕಾರಿಗಳು ಕೇಳುವುದಕ್ಕೆ ರೆಡಿ ಇಲ್ಲ. ಅಂತ ಪಡಿತರ ವಿತರಕರ ಸಂಘದ ಅಧ್ಯಕ್ಷ ಕೃಷ್ಣಪ್ಪ ಹೇಳಿದ್ದಾರೆ.

ಇದನ್ನೂ ಓದಿ: ಹೂ-ಹಣ್ಣು ತರಕಾರಿ ಬೆನ್ನಲ್ಲೇ ತೆಂಗಿನ ಕಾಯಿ ಬೆಲೆ ಹೆಚ್ಚಳ; ಬೆಲೆ ಕೇಳಿ ಗ್ರಾಹಕರು ಶಾಕ್

ಒಟ್ಟಿನಲ್ಲಿ ಸಿದ್ದರಾಮಾಯ್ಯನವರ ಕನಸಿನ ಯೋಜನೆ ಜಾರಿಗೆ ಮೊದಲಿನಿಂದಲೂ ಒಂದಿಲ್ಲೊಂದು ಸಮಸ್ಯೆ ಕಾಡುತ್ತಿದೆ. ಆದಷ್ಟು ಬೇಗ ಅನ್ನಭಾಗ್ಯದ ಹಣವನ್ನು ಫಾಲಾನುಭವಿಗಳಿಗೆ ವರ್ಗಾಯಿಸಬೇಕಿದೆ. ಇಲ್ಲವಾದರೆ ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ಮಾಡುವುದಾಗಿ ಫಾಲಾನುಭವಿಗಳು ಎಚ್ಚರಿಕೆ ನೀಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ