ಹೂ-ಹಣ್ಣು ತರಕಾರಿ ಬೆನ್ನಲ್ಲೆ ತೆಂಗಿನ ಕಾಯಿ ಬೆಲೆ ಹೆಚ್ಚಳ; ಬೆಲೆ ಕೇಳಿ ಗ್ರಾಹಕರು ಶಾಕ್
ದಸರಾ ಹಬ್ಬಕ್ಕೆ ಕೌಂಟ್ ಡೌನ್ ಆರಂಭವಾಗಿದ್ದು, ಈ ಮಧ್ಯೆ ಬೆಲೆ ಏರಿಕೆ ಅನ್ನೋ ಭೂತ ಜನರನ್ನ ಬೆಂಬಿಡದೇ ಕಾಡುತ್ತಿದೆ. ಈ ಬೆನ್ನಲ್ಲೆ ಅಡುಗೆ ಹಾಗೂ ಪೂಜೆಗೆ ಪ್ರಮುಖವಾಗಿ ಬೇಕಾಗುವ ತೆಂಗಿನ ಕಾಯಿ ಬೆಲೆ ಏರಿಕೆಯಾಗಿದ್ದು, ಬೆಲೆ ಏರಿಕೆ ಕೇಳಿ ಗ್ರಾಹಕರು ಶಾಕ್ ಆಗಿದ್ದಾರೆ.
ಬೆಂಗಳೂರು, ಅಕ್ಟೋಬರ್,01: ಹೂ-ಹಣ್ಣು, ಟೊಮೆಟೊ, ಈರುಳ್ಳಿ, ತರಕಾರಿ, ಅಡುಗೆ ಎಣ್ಣೆ ಹೀಗೆ ಪ್ರತಿನಿತ್ಯ ಒಂದಲ್ಲ ಒಂದು ಅಗತ್ಯ ವಸ್ತುಗಳ ಬೆಲೆ ಏರಿಕೆ ಆಗ್ತಾನೆ ಇದೆ. ಸತತ ಬೆಲೆ ಏರಿಕೆಯಿಂದಾಗಿ ಕಂಗೆಟ್ಟಿದ್ದ ಜನರಿಗೆ ಇದೀಗ ಪ್ರತಿನಿತ್ಯ ಬಳಸುವ ತೆಂಗಿನಕಾಯಿ ಬೆಲೆ ಏರಿಕೆಯಾಗಿದ್ದು, ಹಬ್ಬದ ಸಮಯದಲ್ಲೇ ಈ ರೀತಿ ಬೆಲೆ ಏರಿಕೆ ಆದ್ರೆ ಹೇಗೆ ಅನ್ನೋ ಹೊಸ ತಲೆನೋವು ಶುರುವಾಗಿದೆ.
ಕಳೆದ ಹದಿನೈದು ದಿನಗಳ ಹಿಂದೆ ಒಂದು ಕೆ.ಜಿ ತೆಂಗಿನ ಕಾಯಿ 30ರಿಂದ 35ರೂಪಾಯಿಗೆ ಮಾರಾಟವಾಗುತ್ತಿತ್ತು. ಆದ್ರೆ ಇದೀಗಾ ಅದೇ ತೆಂಗಿನ ಕಾಯಿ 50-57 ರೂಪಾಯಿಗೆ ಮಾರಾಟವಾಗುತ್ತಿದೆ. ಇನ್ನೂ,ಕಳೆದ 2010ರ ನಂತರ ಇದೇ ಮೊದಲ ಬಾರಿಗೆ ಹೆಚ್ಚಿನ ಮಟ್ಟದಲ್ಲಿ ಬೆಲೆ ಏರಿಕೆಯಾಗಿದ್ದು, ದಸರಾ, ದೀಪಾವಳಿ ಇರುವ ಕಾರಣ ಹಬ್ಬದ ಸಮಯದಲ್ಲಿ ಮತ್ತಷ್ಟು ಬೆಲೆ ಏರಿಕೆಯಾಗುತ್ತದೆ ಎನ್ನಲಾಗುತ್ತಿದೆ. ಜೊತೆಗೆ ಮುಂದಿನ ಆರು ತಿಂಗಳವರೆಗೆ ಈ ಬೆಲೆ ಏರಿಕೆ ಜನರನ್ನ ಕಾಡಲಿದೆ ಎಂದು ವ್ಯಾಪಾರಸ್ಥರು ಹೇಳುತ್ತಿದ್ದಾರೆ.
ಬೆಂಗಳೂರಿಗೆ ಸಾಮಾನ್ಯವಾಗಿ ಕರ್ನಾಟಕದ ಎಲ್ಲಾ ಭಾಗದಿಂದಲೂ ತೆಂಗಿನಕಾಯಿ ಆಮದಾಗುತ್ತದೆ. ಆದರೆ ಈ ಬಾರಿ ವಿಪರೀತ ಬಿಸಿಲಿದ್ದ ಕಾರಣ ಎಳನೀರಿಗೆ ಬೇಡಿಕೆ ಹೆಚ್ಚಾಗಿದ್ದು, ಉತ್ತರ ಭಾರತಕ್ಕೆ ಸಾಕಷ್ಟು ಎಳನೀರು ರಫ್ತಾಗಿದೆ. ಇದೇ ಕಾರಣದಿಂದಾಗಿ ತೆಂಗಿನ ಕಾಯಿ ಬೆಳೆಯಲ್ಲಿ ಕುಸಿತವಾಗಿದ್ದು ಏಕಾಏಕಿ ಬೆಲೆ ಹೆಚ್ಚಾಗಿದೆ ಎನ್ನಲಾಗುತ್ತಿದೆ. ಹೀಗಾಗಿ ತೆಂಗಿನ ಕಾಯಿ ಬೆಲೆ ಏರಿಕೆಯಾಗಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ದುಬಾರಿಯಾಗುವ ಸಾಧ್ಯತೆ ಇದೆ. ಆದರೆ ಹಬ್ಬದ ಹೊಸ್ತಿಲಲ್ಲಿ ಇದ್ದಂತಹ ಗ್ರಾಹಕರಿಗೆ ಈ ಬೆಲೆ ನುಂಗಲಾರದ ತುತ್ತಾಗಿದೆ.
ಇದನ್ನೂ ಓದಿ: ನಂದಿನಿ ಹಾಲಿನ ಬೆಲೆ ಏರಿಕೆ ಪ್ರಯೋಜನ ರೈತರಿಗೆ ಸಿಗಲ್ಲ! ಹಾಲು ಉತ್ಪಾದಕರು ಹೇಳುವ ಲೆಕ್ಕಾಚಾರ ಇಲ್ಲಿದೆ
ಇನ್ನು, ಇದು ತೆಂಗಿನ ಕಾಯಿಯ ಕಥೆಯಾದ್ರೆ ಮತ್ತೊಂದೆಡೆ ತರಕಾರಿಗಳ ಬೆಲೆಯು ಕೊಂಚ ಜಾಸ್ತಿಯಾಗಿದೆ. ಈರುಳ್ಳಿ, ಕ್ಯಾರೇಟ್, ಟೊಮೆಟೊ, ಬೀನ್ಸ್, ಮೂಲಂಗಿಯ ಬೆಲೆ ಜಾಸ್ತಿಯಾಗಿದ್ದು, ಹಬ್ಬಕ್ಕೆ ತರಕಾರಿಯನ್ನ ಖರೀದಿಸುವುದಕ್ಕೆ ಬಂದಿದ್ದಂತಹ ಗ್ರಾಹಕರು ಶಾಕ್ ಆಗಿದ್ದಾರೆ. ಹಾಗಾದ್ರೆ ತರಕಾರಿಗಳ ಬೆಲೆ ಎಷ್ಟಿತ್ತು, ಈಗ ಎಷ್ಟಿದೆ ಇಲ್ಲಿ ತಿಳಿಯಿರಿ.
ತರಕಾರಿ | ಹಿಂದಿನ ಬೆಲೆ | ಇಂದಿನ ಬೆಲೆ |
ನಾಟಿ ಬೀನ್ಸ್ | 50Rs | 60Rs |
ಟೊಮೆಟೊ | 15Rs | 30Rs |
ಬಿಳಿ ಬದನೆ | 60Rs | 35Rs |
ಮೆಣಸಿನಕಾಯಿ | 60Rs | 50Rs |
ನುಗ್ಗೆಕಾಯಿ(ಕೆಜಿ) | 60Rs | 120Rs |
ಊಟಿ ಕ್ಯಾರೆಟ್ | 80Rs | 60Rs |
ನವಿಲುಕೋಸು | 40Rs | 40Rs |
ಕ್ಯಾಪ್ಸಿಕಂ | 40Rs | 60Rs |
ಶುಂಠಿ | 150Rs | 180Rs |
ನಾಟಿ ಬಟಾಣಿ | 200Rs | 250Rs |
ಫಾರಂ ಬಟಾಣಿ | 100Rs | 150Rs |
ಬೆಳ್ಳುಳ್ಳಿ | 400Rs | 400Rs |
ಒಟ್ನಲ್ಲಿ, ನಿರಂತರ ಬೆಲೆ ಏರಿಕೆಯಿಂದಾಗಿ ಗ್ರಾಹಕರು ರೋಸಿಹೋಗುತ್ತಿದ್ದು, ಇದೀಗ ತೆಂಗಿನ ಕಾಯಿ ಬೆಲೆ ಏರಿಕೆಗೆ ಶಾಕ್ ಆಗಿದ್ದಾರೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ