ಕೆಸರುಗದ್ದೆ ಕಂಬಳ: ಹರಕೆಯ ಓಟಕ್ಕೆ ಸಾಕ್ಷಿಯಾಯಿತು ಉಡುಪಿಯ ಕಂಬಳ ಮನೆತನ

ಕೆಸರುಗದ್ದೆ ಕಂಬಳ: ಹರಕೆಯ ಓಟಕ್ಕೆ ಸಾಕ್ಷಿಯಾಯಿತು ಉಡುಪಿಯ ಕಂಬಳ ಮನೆತನ
ಕಂಬಳ ಮನೆತನದಿಂದ ಕೆಸರು ಗದ್ದೆ ಓಟ

ಪ್ರಶಸ್ತಿಗಾಗಿ ಓಡುವ ಸ್ಪರ್ಧಾತ್ಮಕ ಕಂಬಳದ ನಡುವೆ, ದೈವಗಳ ಹರಕೆ ತೀರಿಸುವ ಉದ್ದೇಶದಿಂದ ಪ್ರತಿ ವರ್ಷ ಕಂಬಳ ಮನೆತನದ ಸಹಯೋಗದಲ್ಲಿ ಕೆಸರು ಗದ್ದೆ ಕೋಣಗಳ ಓಟ ನಡೆಯುವುದು ಸಾಂಪ್ರದಾಯಿಕ ನೆಲೆಗಟ್ಟಿನಲ್ಲಿ ವಿಶೇಷ.

preethi shettigar

| Edited By: Ghanashyam D M | ಡಿ.ಎಂ.ಘನಶ್ಯಾಮ

Feb 28, 2021 | 6:53 PM


ಉಡುಪಿ: ನಗರದ ಕಡವೂರು ಗ್ರಾಮದಲ್ಲಿ ಇರುವ ಕಂಬಳ ಮನೆತನದ ಗದ್ದೆಯಲ್ಲಿ ಪ್ರತಿವರ್ಷವು ಕೂಡ ಕೆಸರುಗದ್ದೆಯ ಓಟ ನಡೆಯುತ್ತದೆ. ಹತ್ತಾರು ಕೋಣಗಳು ಗತ್ತಿನಿಂದ ಓಟದಲ್ಲಿ ಭಾಗವಹಿಸುತ್ತವೆ. ಆದರೆ ಬಿಲ್ಲಿನ ಎದೆಯಿಂದ ಹೊರಟ ಬಾಣದಂತೆ ಕೆಸರುಗದ್ದೆಯಲ್ಲಿ ಮಿಂಚಿನಓಟ ನಡೆಸುವ ಈ ಕೋಣಗಳು ಇಲ್ಲಿಗೆ ಸ್ಪರ್ಧೆಯ ಉದ್ದೇಶದಿಂದ ಬಂದಿಲ್ಲ. ಬದಲಿಗೆ ಇವು ಹರಕೆಯ ಓಟಕ್ಕೆ ಬಂದ ಕೋಣಗಳು.

ಕಂಬಳ ಮನೆಯಲ್ಲಿರುವ ಕುಮಾರ ದೈವಕ್ಕೆ ಅಚ್ಚುಮೆಚ್ಚಿನ ಹರಕೆಯೆಂದರೆ ಕಂಬಳದಲ್ಲಿ ಕೋಣ ಇಳಿಸುವುದು. ಇಲ್ಲಿನ ದೈವಕ್ಕೆ ಹರಕೆ ರೂಪದಲ್ಲಿ ಕೋಣ ಓಡಿಸುವುದಾಗಿ ಹೇಳಿಕೊಂಡ ಅನೇಕರ ಪ್ರಾರ್ಥನೆಗಳು ಫಲಿಸಿವೆ. ಊರಿನಲ್ಲಿ ಕೃಷಿ ಚಟುವಟಿಕೆಗಳು, ಮಳೆ-ಬೆಳೆ ಚೆನ್ನಾಗಿ ಆಗಬೇಕು ಎಂಬ ಉದ್ದೇಶದಿಂದ ಈ ಕಂಬಳವನ್ನು ಅನಾದಿಕಾಲದಿಂದ ನಡೆಸಿಕೊಂಡು ಬರಲಾಗುತ್ತಿದೆ. ಇನ್ನು ಜಾನುವಾರುಗಳಿಗೆ ಕಾಯಿಲೆಗಳು ಬಾಧಿಸಿದಾಗಲೂ ಕಂಬಳದ ಹರಕೆ ಹೊರುವುದು ಇಲ್ಲಿನ ವಾಡಿಕೆ.

ಈ ಕಂಬಳ ಆಚರಣೆ ಇಲ್ಲಿ ಒಂದು ಧಾರ್ಮಿಕ ಕ್ರಿಯೆಯಾಗಿ ನಡೆಯುತ್ತಿದ್ದು, ಕಂಬಳಕ್ಕೆ ದಿನ ನಿಗದಿ ಆದ ಬಳಿಕ ಕಂಬಳ ಮನೆತನದವರು ವ್ರತಾಚರಣೆಯಲ್ಲಿ ಇರುತ್ತಾರೆ. ಕಂಬಳಕ್ಕೆ ಪೂರ್ವಭಾವಿಯಾಗಿ ಪ್ರಾಯೋಗಿಕ ಓಟ ನಡೆಯುತ್ತದೆ. ಕಂಬಳದ ದಿನ ಮುಂಜಾನೆ ಗ್ರಾಮದ ದೈವ ದೇವರುಗಳಿಗೆ ಪ್ರಾರ್ಥನೆ ಸಲ್ಲಿಸಿ ಮಧ್ಯಾಹ್ನ ಅನ್ನಸಂತರ್ಪಣೆ ನಡೆಸಿ ಬಳಿಕ ಕುಮಾರ ದೈವದ ದರ್ಶನ ನಡೆಯುತ್ತದೆ.

kambala

ಕುಮಾರ ದೈವದ ದರ್ಶನ

ಈ ಹೊತ್ತಿಗೆ ಕೋಣಗಳು ಕಂಬಳದ ಗದ್ದೆಯ ಬಳಿಗೆ ಬಂದಿರುತ್ತವೆ. ಕುಮಾರ ಪಾತ್ರಿಯು ಕಂಬಳ ಗದ್ದೆಗೆ ಆಗಮಿಸಿ ಕೋಣಗಳ ಓಟದ ಸೊಬಗನ್ನು ಕಣ್ತುಂಬಿಕೊಳ್ಳುತ್ತಾರೆ. ಇದಿಷ್ಟು ಕಂಬಳದ ದಿನ ನಡೆಯುವ ಆಚರಣೆಗಳು. ಈ ಕಂಬಳಕ್ಕೆ ಸಾಕಷ್ಟು ಧಾರ್ಮಿಕ ಮಹತ್ವವಿದ್ದು, ಕಂಬಳ ನಡೆಸದೆ ಹೋದರೆ ಗ್ರಾಮಕ್ಕೆ ಆಪತ್ತುಗಳು ಬರುತ್ತವೆ ಎನ್ನುವುದು ಇಲ್ಲಿನ ಜನರ ನಂಬಿಕೆ. ಹಾಗಾಗಿ ಊರಿನ ಕಂಬಳವನ್ನು ಗ್ರಾಮಸ್ಥರೂ ಯಾವುದೇ ಕಾರಣಕ್ಕೂ ತಪ್ಪಿಸುವುದಿಲ್ಲ.

kambala

ಡೋಲು ಬಡಿದು ಕಂಬಳಕ್ಕೆ ಚಾಲನೆ

kambala

ಕೆಸರು ಗದ್ದೆ ಓಟಕ್ಕೆ ಸಿದ್ಧವಾದ ಕೋಣಗಳು

ನಗರೀಕರಣ ಬೆಳೆಯುತ್ತಿದ್ದಂತೆ ಈ ಆಚರಣೆಗಳು ನಾಶವಾಗುವ ಹಂತ ತಲುಪಿದೆ. ಹಿಂದೆ ಈ ಗದ್ದೆಗಳ ಪಕ್ಕದಲ್ಲಿ ಸ್ವಚ್ಛಂದವಾಗಿ ಹರಿಯುತ್ತಿದ್ದ ಇಂದ್ರಾಣಿ ನದಿಯ ನೀರನ್ನು ಬಳಸಿ ಕಂಬಳ ಮಾಡಲಾಗುತ್ತಿತ್ತು. ಆದರೆ ಈಗ ಈ ನದಿ ಕಲುಷಿತವಾದ ಕಾರಣ ಕಂಬಳ ಗದ್ದೆಗೆ ನೀರು ಹೊಂದಿಸುವುದೇ ದೊಡ್ಡ ಸವಾಲಾಗಿದೆ. ಇನ್ನು ನಗರ ಪ್ರದೇಶದ ಗದ್ದೆಗಳೆಲ್ಲ ಲೇಔಟ್​ಗಳಾಗಿ ಕೋಣಗಳೆಲ್ಲಾ ಕಸಾಯಿಖಾನೆ ಸೇರಿವೆ. ಆದರೂ ಈ ಆಚರಣೆ ನಿಲ್ಲಬಾರದು ಎಂಬ ಉದ್ದೇಶದಿಂದ ದೂರದೂರದಿಂದ ಕೋಣಗಳನ್ನು ಕರೆಸಿಕೊಂಡು ಕಂಬಳ ನಡೆಸಲಾಗುತ್ತಿದೆ ಎಂದು ಸ್ಥಳೀಯರಾದ ರಮೇಶ್ ಹೇಳಿದ್ದಾರೆ.

ಇದನ್ನೂ ಓದಿ: Kambala Record ಕಂಬಳದಲ್ಲಿ ಹೊಸ ದಾಖಲೆ: ಶ್ರೀನಿವಾಸ್ ಗೌಡರ ದಾಖಲೆ ಮುರಿದ ಬೈಂದೂರು ವಿಶ್ವನಾಥ್​


Follow us on

Related Stories

Most Read Stories

Click on your DTH Provider to Add TV9 Kannada