ಚಿಕ್ಕಮಗಳೂರು: ಅರೇನೂರು ಗ್ರಾಮಸ್ಥರಿಗೆ ತಪ್ಪದ ಸಂಕ ಸಂಕಷ್ಟ; ಸಾವಿನ ದಾರಿಯಲ್ಲೇ ಪ್ರತಿನಿತ್ಯ ಜನರ ಪಯಣ
ಈ ಗ್ರಾಮದ ಮಕ್ಕಳು ಮಳೆಗಾಲದಲ್ಲಿ ಮೂರ್ನಾಲ್ಕು ತಿಂಗಳು ಶಾಲೆಗೆ ಹೋಗಲ್ಲ. ಶಾಲೆಗೆ ಹೋಗಬೇಕು ಎಂದರೆ ಮತ್ತೆ ಇದೇ ಮರದ ದಿಮ್ಮಿಯ ಮೇಲೆ ಕಸರತ್ತು ಮಾಡಿ ಶಿಕ್ಷಣ ಪಡೆಯಬೇಕಾದ ಅನಿವಾರ್ಯತೆ. ಯಾರಿಗಾದರೂ ತುರ್ತು ಸಂದರ್ಭದಲ್ಲಿ ಆಸ್ಪತ್ರೆಗೆ ಕರೆದೊಯ್ಯಬೇಕೆಂದರೆ ಜೋಳಿಗೆ ಕಟ್ಟಿಕೊಂಡು ಹೋಗಬೇಕು.
ಚಿಕ್ಕಮಗಳೂರು: ಮಲೆನಾಡಿನ ಕೆಲ ಕುಗ್ರಾಮಗಳ ಪರಿಸ್ಥಿತಿ ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳಾದರು ಬದಲಾಗಿಲ್ಲ. ಇಲ್ಲಿನ ಕೆಲ ಗ್ರಾಮಗಳು ಇಂದಿಗೂ ಕೂಡ ಮೂಲಭೂತ ಸೌಲಭ್ಯಗಳಿಂದ ವಂಚಿತವಾಗಿದೆ. ಅದರಲ್ಲೂ ಓಡಾಡುವುದಕ್ಕೆ ಒಂದು ರಸ್ತೆ ಕೂಡ ಇಲ್ಲದೆ, ಇಂದಿಗೂ ಹಳ್ಳದ ಮೇಲೆ ಹಾಕಿರುವ ಮರದ ದಿಣ್ಣೆಯೇ ದಾರಿಯಾಗಿದೆ. ರಾತ್ರಿ ಹೊತ್ತಲ್ಲಿ ಕೂಡ ಇದೆ ಮಾರ್ಗವಾಗಿ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಇಲ್ಲಿನ ಜನರು ಸಂಕಷ್ಟ ಅನುಭವಿಸುತ್ತಿದ್ದಾರೆ. ಚಿಕ್ಕಮಗಳೂರು ತಾಲೂಕಿನ ಮಾಗೋಡು ಸಮೀಪದ ಅರೆನೂರು ಗ್ರಾಮದಲ್ಲಿ ಸದ್ಯ ಈ ಪರಿಸ್ಥಿತಿ ಇದ್ದು, ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಇಂದಿಗೂ ಈ ಗ್ರಾಮದ ಜನರ ನೆರವಿಗೆ ನಿಂತಿಲ್ಲ. ಇದು ಸಹಜವಾಗಿಯೇ ಇಲ್ಲಿನ ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.
ಮಕ್ಕಳು ಶಾಲೆಗೆ ಹೋಗುವುದಕ್ಕಾಗಲಿ, ಜನ ಕೆಲಸಕ್ಕೆ ಹೋಗುವುದಕ್ಕಾಗಲಿ ಎಲ್ಲದಕ್ಕೂ ಈ ಆನೆ ಬಿದ್ದ ಹಳ್ಳದ ಮೇಲಿರುವ ಮರದ ದಿಣ್ಣೆಯೇ ಗತಿ. ಮಳೆಗಾಲದಲ್ಲಿ ಇವರ ಬದುಕು ಮತ್ತಷ್ಟು ಶೋಚನೀಯ. ಶತಮಾನಗಳಿಂದ ಇಲ್ಲಿನ ಜನ ಒಂದೇ ಒಂದು ಸೇತುವೆಗಾಗಿ ಜನನಾಯಕರು ಹಾಗೂ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ. ಇಂತಹ ದುರ್ಗಮ ಸ್ಥಿತಿಯಲ್ಲಿ ಶತಮಾನಗಳಿಂದ ಬದುಕುತ್ತಿರುವ ಜನರು, ಉಕ್ಕಿ ಹರಿಯುವ ನದಿಯಲ್ಲೇ ಮರದ ದಿಮ್ಮಿಯನ್ನು ನೆಚ್ಚಿಕೊಂಡು ಹೆಜ್ಜೆ ಹಾಕಬೇಕಾದ ಅನಿವಾರ್ಯತೆ ಇದೆ.
ಮಾಗೋಡು ಗ್ರಾಮದಿಂದ ಈ ಅರೆನೂರು ಮೂಲಕ ಎರಡ್ಮೂರು ಹಳ್ಳಿಗಳಿಗೆ ಸಂಪರ್ಕವಿದೆ. ಅರೆನೂರು ಗ್ರಾಮದಲ್ಲಿ ಸುಮಾರು 35 ಮನೆಗಳಿವೆ. ಬಾಳೆಹೊನ್ನೂರು ಮಾರ್ಗದ ಮಾಗೋಡು ಹೆದ್ದಾರಿಗೆ ಕೇವಲ ಒಂದು ಕಿ.ಮೀ. ಆದರೆ ಅರೆನೂರು ಗ್ರಾಮದ ಜನ ಮಾಗೋಡಿಗೆ ಬರಬೇಕಂದರೆ ಸುಮಾರು 10 ಕಿ.ಮೀ. ಸುತ್ತಿ ಬರಬೇಕು. ಈ ಆನೆ ಬಿದ್ದ ಹಳ್ಳಕ್ಕೆ ಸೇತುವೆ ನಿರ್ಮಾಣವಾದರೆ ಒಂದೇ ಕಿ.ಮೀನಲ್ಲಿ ಮಾಗೋಡು ಹೆದ್ದಾರಿಗೆ ಬರುತ್ತಾರೆ. ಆದರೆ ಒಂದು ಸೇತುವೆ ನಿರ್ಮಿಸಿಕೊಡಲು ಇವರೆಗೆ ಯಾರಿಂದಲೂ ಆಗಿಲ್ಲ.
ಈ ಗ್ರಾಮದ ಮಕ್ಕಳು ಮಳೆಗಾಲದಲ್ಲಿ ಮೂರ್ನಾಲ್ಕು ತಿಂಗಳು ಶಾಲೆಗೆ ಹೋಗಲ್ಲ. ಶಾಲೆಗೆ ಹೋಗಬೇಕು ಎಂದರೆ ಮತ್ತೆ ಇದೇ ಮರದ ದಿಮ್ಮಿಯ ಮೇಲೆ ಕಸರತ್ತು ಮಾಡಿ ಶಿಕ್ಷಣ ಪಡೆಯಬೇಕಾದ ಅನಿವಾರ್ಯತೆ. ಯಾರಿಗಾದರೂ ತುರ್ತು ಸಂದರ್ಭದಲ್ಲಿ ಆಸ್ಪತ್ರೆಗೆ ಕರೆದೊಯ್ಯಬೇಕೆಂದರೆ ಜೋಳಿಗೆ ಕಟ್ಟಿಕೊಂಡು ಹೋಗಬೇಕು. ಈ ಹಳ್ಳದಲ್ಲಿ ಹೋಗುವಾಗ ಕೆಲವರು ಬಿದ್ದು ಕೈಕಾಲು ಮುರಿದುಕೊಂಡಿದ್ದಾರೆ. ಸೂಕ್ತ ಸಮಯದಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗದೆ ಕೆಲವರು ಸಾವನ್ನಪ್ಪಿದ್ದಾರೆ.
ಅನೇಕ ದಶಕಗಳಿಂದ ಮರದ ದಿಣ್ಣೆಯ ಕಾಲು ಸಂಕವನ್ನೇ ಈ ಜನರು ಓಡಾಡಲು ಸೇತುವೆ ಮಾಡಿಕೊಂಡಿದ್ದಾರೆ. ಒಂದು ವೇಳೆ ಸ್ವಲ್ಪ ಹೆಜ್ಜೆ ತಪ್ಪಿದರು ಆಗುವ ಅನಾಹುತ ಊಹಿಸಲು ಅಸಾಧ್ಯ. ಜನರು ಹೀಗೆ ಓಡಾಡಬೇಕಾದರೆ ಹಳ್ಳಕ್ಕೆ ಬಿದ್ದು ಅದೃಷ್ಟವಶಾತ್ ಬದುಕಿ ಬಂದ ಹಲವಾರು ನಿದರ್ಶನಗಳಿವೆ. ಇಷ್ಟಾದರೂ ಇನ್ನು ಯಾರು ಈ ಬಗ್ಗೆ ಗಮನ ಹರಿಸಿಲ್ಲ. ಇನ್ನಾದರೂ ಅಧಿಕಾರಿಗಳು ಎಚ್ಛೇತ್ತುಕೊಂಡು ಈ ಭಾಗದ ಜನರಿಗೆ ಸೇತುವೆ ನಿರ್ಮಿಸಿಕೊಡಲಿ ಎನ್ನುವುದು ನಮ್ಮ ಆಶಯ.
ಇದನ್ನೂ ಓದಿ: ದುಸ್ಥಿತಿಯಲ್ಲಿರುವ ವರದಾ ನದಿ ಸೇತುವೆ; ಅನಾಹುತ ಸಂಭವಿಸುವ ಮೊದಲೇ ಎಚ್ಚೆತ್ತುಕೊಳ್ಳಲು ಹಾವೇರಿ ಜನರಿಂದ ಮನವಿ
Bidar News: ರಸ್ತೆಯಿಲ್ಲದೆ ತಾಂಡಾದ ಜನರ ಪರದಾಟ; ಐದು ದಶಕಗಳಿಂದ ಕಾಲ್ನಡಿಗೆಯಲ್ಲಿಯೇ ಸಂಚಾರ