ಕರಿದ ಹಸಿರು ಬಟಾಣಿಗೆ ಕೃತಕ ಬಣ್ಣ ಬಳಸಿ ಮಾರಾಟ: ಕ್ರಮಕ್ಕೆ ಮುಂದಾದ ರಾಜ್ಯ ಸರ್ಕಾರ
ಕರ್ನಾಟಕ ಸರ್ಕಾರವು ಕರಿದ ಹಸಿರು ಬಟಾಣಿಗಳಲ್ಲಿ ಕೃತಕ ಬಣ್ಣ ಬಳಸುವುದನ್ನು ತಡೆಯಲು ಕ್ರಮ ಕೈಗೊಂಡಿದೆ. ಆಹಾರ ಸುರಕ್ಷತಾ ಇಲಾಖೆಯು ರಾಜ್ಯಾದ್ಯಂತ ಬಟಾಣಿಗಳ ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಿದೆ. 70ಕ್ಕೂ ಹೆಚ್ಚು ಮಾದರಿಗಳನ್ನು ಪರೀಕ್ಷಿಸಲಾಗುತ್ತಿದೆ. ಪ್ರಯೋಗಾಲಯದ ವರದಿಯ ನಂತರ ಕಾನೂನು ಕ್ರಮ ಕೈಗೊಳ್ಳಲಾಗುವುದು.

ಬೆಂಗಳೂರು, ಫೆಬ್ರವರಿ 20: ಕರಿದ ಬಟಾಣಿಗೆ ಕೃತಕ ಬಣ್ಣ (Fried Green Peas) ಹಾಕಿ ಮಾರಾಟ ಮಾಡುವವರ ವಿರುದ್ಧ ರಾಜ್ಯ ಸರ್ಕಾರ ಕ್ರಮಕ್ಕೆ ಮುಂದಾಗಿದೆ. ಈ ನಿಟ್ಟಿನಲ್ಲಿ ಕರಿದ ಬಟಾಣಿಗಳ ಸ್ಯಾಂಪಲ್ಗಳನ್ನ ಸಂಗ್ರಹಿಸಿ ಲ್ಯಾಬ್ಗೆ ಕಳುಹಿಸಲು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಈಗಾಗಲೇ ಕೆಲ ವಲಯದಲ್ಲಿ ಸ್ಯಾಂಪಲ್ ಸಂಗ್ರಹಿಸಿ ಕ್ರಮಕೈಗೊಳ್ಳಲಾಗಿದ್ದು, ಲ್ಯಾಬ್ ವರದಿ ಬಂದ ಬಳಿಕ ಕಲರ್ ಅಳವಡಿಕೆ ನಿಷೇಧಿಸುವ ಆದೇಶ ಸಾಧ್ಯತೆ ಇದೆ.
ಕರಿದ ಹಸಿರು ಬಟಾಣಿಗಳ ತಯಾರಿಕೆಯಲ್ಲಿ ಕೃತಕ ಬಣ್ಣಗಳ ಬಳಸುತ್ತಿರುವ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಗಳು ಭಿತ್ತರವಾಗುತ್ತಿದ್ದ ಹಿನ್ನೆಲೆಯಲ್ಲಿ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯ ವತಿಯಿಂದ ಕರ್ನಾಟಕದಾದ್ಯಂತ ಮಾರಾಟ ಮಾಡಲಾಗುತ್ತಿರುವ ಹಸಿರು ಬಟಾಣಿಗಳ ಮಾದರಿಗಳನ್ನು ಸಂಗ್ರಹಿಸಿ, ಅವುಗಳ ವಿಶ್ಲೇಷಣೆಗಾಗಿ ಸರ್ಕಾರಿ ಆಹಾರ ಪ್ರಯೋಗಾಲಯಗಳಿಗೆ (ರಾಜ್ಯ ಮತ್ತು ವಿಭಾಗೀಯ ಆಹಾರ ಪ್ರಯೋಗಾಲಯ) ಕಳುಹಿಸಲು ಅಂಕಿತಾಧಿಕಾರಿಗಳು ಮತ್ತು ಆಹಾರ ಸುರಕ್ಷತಾಧಿಕಾರಿಗಳಿಗೆ ಸೂಚಿಸಲಾಗಿದೆ.
ಇದನ್ನೂ ಓದಿ: ಬೆಂಗಳೂರಿನ ಈ ಪ್ರದೇಶಗಳಲ್ಲಿ ಫೆ. 20ರಂದು ನೀರು ಪೂರೈಕೆ ಸ್ಥಗಿತ: ಇಂದೇ ವ್ಯವಸ್ಥೆ ಮಾಡಿಕೊಳ್ಳಿ
ಇದಕ್ಕೆ ಸಂಬಂಧಿಸಿದಂತೆ ರಾಜ್ಯಾದ್ಯಂತ ಇದುವರೆಗೆ 70 ಹಸಿರು ಬಟಾಣಿಗಳ ಮಾದರಿಯನ್ನು ಸಂಗ್ರಹಿಸಿ ವಿಶ್ಲೇಷಣೆಗಾಗಿ ಪ್ರಯೋಗಾಲಯಕ್ಕೆ ಸಲ್ಲಿಸಲಾಗಿದೆ. ಪ್ರಯೋಗಾಲಯದ ವಿಶ್ಲೇಷಣಾ ವರದಿಗಳ ಆಧಾರದಲ್ಲಿ ಮುಂದಿನ ಕಾನೂನಾತ್ಮಕ ಜರುಗಿಸಲಾಗುತ್ತದೆ.
ಇದನ್ನೂ ಓದಿ: ಕೇಂದ್ರದಿಂದ 7 ಸಾವಿರ ಇ ಬಸ್: ಸಾರ್ವಜನಿಕ ಸಾರಿಗೆ ಬಸ್ ಸಂಖ್ಯೆಯಲ್ಲಿ ದೆಹಲಿಯನ್ನೂ ಮೀರಿಸಿ ನಂ.1 ಆಗಲಿದೆ ಬೆಂಗಳೂರು
ಇನ್ನು ಇತ್ತೀಚೆಗೆ ಗೋಬಿ ಮಂಚೂರಿ, ಬಾಂಬೆ ಮಿಠಾಯಿ ರಾಜ್ಯದಲ್ಲಿ ಬ್ಯಾನ್ ಆಗಿತ್ತು. ಈ ತಿಂಡಿಗಳಿಗೆ ಬಳಸುತ್ತಿದ್ದ ಬಣ್ಣ ಬದುಕನ್ನೇ ಮುಗಿಸಿಬಿಡುತ್ತೆ ಅನ್ನೋ ಭಯಾನಕ ವರದಿ ಬಂದಿತ್ತು. ಆ ವರದಿ ಕೈ ಸೇರಿದ್ದೇ ತಡ ಸರ್ಕಾರ ಇವೆರಡು ತಿಂಡಿಗಳನ್ನ ರಾಜ್ಯದಲ್ಲಿ ಬ್ಯಾನ್ ಮಾಡಿತ್ತು. ಒಂದು ವೇಳೆ ಕಲರ್ ತಿಂಡಿಗಳನ್ನ ಮಾರಾಟ ಮಾಡಿದರೆ, 10 ಲಕ್ಷ ರೂಪಾಯಿ ದಂಡ ಜತೆಗೆ 7 ವರ್ಷ ಮೀರದಂತೆ ಜೈಲು ಶಿಕ್ಷೆ ಅಂತಾ ಆರೋಗ್ಯ ಸಚಿವರು ಕಠಿಣ ಎಚ್ಚರಿಕೆ ಕೂಡ ನೀಡಿದ್ದರು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.