3 ತಿಂಗಳಿಂದ ಸಂಬಳವಿಲ್ಲದೆ ಆಶಾ ಕಾರ್ಯಕರ್ತೆಯರು ಕಂಗಾಲು: ರಾಜ್ಯ ಸರ್ಕಾರದ ವಿರುದ್ಧ ಹೋರಾಟಕ್ಕೆ ಧುಮುಕಲು ಸಜ್ಜು
ಕೇಂದ್ರ ಹಾಗೂ ರಾಜ್ಯ ಸರ್ಕಾರದ ಪ್ರಾಯೋಜಕತ್ವದ ಆರೋಗ್ಯ ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸುವ ಆಶಾ ಕಾರ್ಯಕರ್ತೆಯರ ಗೋಳು ಕೇಳುವವರೇ ಇಲ್ಲದಂತಾಗಿದೆ. ಕಳೆದ ಮೂರು ತಿಂಗಳುಗಳಿಂದ ಸಂಬಳವಿಲ್ಲದ ಕಣ್ಣೀರಲ್ಲೇ ಕೈತೊಳೆಯುತ್ತಿರುವ ಆಶಾ ಕಾರ್ಯಕರ್ತೆಯರು, ಹಬ್ಬದ ಸಂದರ್ಭದಲ್ಲೂ ಕೂಡ ಸಂಕಷ್ಟ ಪಡುವಂತೆ ಆಗಿದೆ. ಇದೀಗ ಅವರು ಸರ್ಕಾರದ ವಿರುದ್ಧ ಹೋರಾಟಕ್ಕೆ ಸಜ್ಜಾಗುತ್ತಿದ್ದಾರೆ.

ಬೆಂಗಳೂರು, ಅಕ್ಟೋಬರ್ 24: ಕಳೆದ ವಿಧಾನಸಭಾ ಚುನಾವಣೆ ವೇಳೆ ಗೌರವಧನ ಹೆಚ್ಚಳ ಮಾಡುವ ಭರವಸೆ ನೀಡಿದ್ದ ಕಾಂಗ್ರೆಸ್ ಸರ್ಕಾರ, ಈಗ ಅಂಗನವಾಡಿ ಕಾರ್ಯಕರ್ತೆಯರಿಗೆ (Asha Workers) ಸಂಬಳವನ್ನು ಕೂಡ ನೀಡದೇ ಸತಾಯಿಸುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಕಳೆದ ಮೂರು ತಿಂಗಳ ಸಂಬಳ ಇನ್ನೂ ಆಶಾ ಕಾರ್ಯಕರ್ತೆಯರ ಕೈಸೇರದೆ ಜೀವನ ನಿರ್ವಹಣೆ ಮಾಡುವುದೇ ಕಷ್ಟವಾಗಿದೆ. ಜುಲೈ, ಆಗಸ್ಟ್, ಸೆಪ್ಟೆಂಬರ್ ತಿಂಗಳ ಸಂಬಳಕ್ಕಾಗಿ ಆಶಾ ಕಾರ್ಯಕರ್ತೆಯರು ಕಾದು ಕಾದು ಸುಸ್ತಾಗಿದ್ದಾರೆ.
ಸಂಬಳ ತೀರಾ ವಿಳಂಬ ಆಗಿದ್ದು, ಕೂಡಲೇ ಸಮಸ್ಯೆ ಬಗೆಹರಿಸುವಂತೆ ಹಿರಿಯ ಅಧಿಕಾರಿಗಳಿಗೂ ಸಂಘ ಮನವಿ ಮಾಡಿತ್ತು. ಈ ಕುರಿತಾಗಿ ಸಿಎಂ ಸಿದ್ದರಾಮಯ್ಯ ಅವರನ್ನು ಕೂಡ ಭೇಟಿ ಮಾಡಿ, ಸಂಕಷ್ಟ ಹೇಳಿಕೊಳ್ಳಲಾಗಿತ್ತು. ಸಿಎಂ ಸೂಚನೆ ನೀಡಿದ ಬಳಿಕವೂ ಅಧಿಕಾರಿಗಳು ತ್ವರಿತ ಕ್ರಮಕ್ಕೆ ಮುಂದಾಗಿಲ್ಲ. ತಾಂತ್ರಿಕ ಸಮಸ್ಯೆ ಎಂಬೆಲ್ಲಾ ಕಾರಣಗಳನ್ನು ಹೇಳಿ ತಮ್ಮ ನಿರ್ಲಕ್ಷ್ಯ ಧೋರಣೆ ಮುಂದುವರೆಸಿದ್ದಾರೆ.
ಹೀಗಾಗಿ ಸರ್ಕಾರ ಹಾಗೂ ಇಲಾಖೆಯ ಧೋರಣೆಯಿಂದ ಬೇಸತ್ತಿರುವ ಆಶಾ ಕಾರ್ಯಕರ್ತೆಯರು ಶೀಘ್ರವೇ ಸಭೆ ಸೇರಿ ಮುಷ್ಕರ ನಡೆಸುವ ಬಗ್ಗೆ ಚಿಂತನೆ ನಡೆಸಿದ್ದಾರೆ.
ಇದನ್ನೂ ಓದಿ: ಆಶಾ ಕಾರ್ಯಕರ್ತೆಯರು ಧರಣಿ ನಿಲ್ಲಿಸುತ್ತಾರೆಯೇ ಇಲ್ಲ ಮುಂದುವರಿಸುತ್ತಾರೆಯೇ? ಗೊಂದಲ ಹುಟ್ಟಿಸಿದ ಸಿಎಂ ಮಾತು!
ಒಟ್ಟಾರೆಯಾಗಿ, ರಾಜ್ಯದಲ್ಲಿ 42 ಸಾವಿರಕ್ಕೂ ಹೆಚ್ಚು ಆಶಾ ಕಾರ್ಯಕರ್ತೆಯರು ಇದ್ದು, ಇವರೆಲ್ಲ ವೇತನ ಇಲ್ಲದೆ ಸಂಕಷ್ಟದಲ್ಲಿ ಕಾಲ ದೂಡುವಂತೆ ಆಗಿದೆ. ಇನ್ನಾದರೂ ಸರ್ಕಾರ ಈ ಕುರಿತಾಗಿ ಗಮನ ಹರಿಸಬೇಕಿದೆ.
ವರದಿ: ಲಕ್ಷ್ಮೀನರಸಿಂಹ, ಟಿವಿ9 ಬೆಂಗಳೂರು




