
ಬೆಂಗಳೂರು, ಫೆಬ್ರವರಿ 3: ಕರ್ನಾಟಕದ (Karnataka) ರೈಲ್ವೆ ಮೂಲಸೌಕರ್ಯ ಅಭಿವೃದ್ಧಿಗೆ 2026–27ರ ಕೇಂದ್ರ ಬಜೆಟ್‌ನಲ್ಲಿ (Union Budget 2026) 7,748 ಕೋಟಿ ರೂ. ಹಂಚಿಕೆ ಮಾಡಲಾಗಿದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ (Ashwini Vaishnaw) ತಿಳಿಸಿದ್ದಾರೆ. ಸೋಮವಾರ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿ ನೀಡಿರುವುದು ದಾಖಲೆ ಮಟ್ಟದ ಬಜೆಟ್ ಆಗಿದ್ದು, ಕರ್ನಾಟಕದಲ್ಲಿ ರೈಲ್ವೆ ಅಭಿವೃದ್ಧಿ ಕಾರ್ಯಗಳಿಗೆ ವೇಗ ನೀಡಲಿದೆ ಎಂದರು. ಪ್ರಸ್ತುತ ಕರ್ನಾಟಕದಲ್ಲಿ ಒಟ್ಟು 52,950 ಕೋಟಿ ರೂ. ಮೌಲ್ಯದ ರೈಲ್ವೆ ಯೋಜನೆಗಳು ವಿವಿಧ ಹಂತಗಳಲ್ಲಿ ಪ್ರಗತಿಯಲ್ಲಿವೆ. ಈ ಯೋಜನೆಗಳಲ್ಲಿ ಹೊಸ ರೈಲು ಹಳಿಗಳ ನಿರ್ಮಾಣ, ನಿಲ್ದಾಣಗಳ ಸಮಗ್ರ ಪುನರಾಭಿವೃದ್ಧಿ, ಹಾಗೂ ಪ್ರಮುಖ ಸುರಕ್ಷತಾ ನವೀಕರಣಗಳು ಸೇರಿವೆ ಎಂದು ವೈಷ್ಣವ್ ವಿವರಿಸಿದರು.
ಬಜೆಟ್‌ನಲ್ಲಿ ಘೋಷಿಸಲಾದ ಬೆಂಗಳೂರು–ಚೆನ್ನೈ ಹಾಗೂ ಬೆಂಗಳೂರು–ಹೈದರಾಬಾದ್ ಹೈಸ್ಪೀಡ್ ರೈಲು ಕಾರಿಡಾರ್‌ಗಳು ಬೆಂಗಳೂರಿನ ಜನಜೀವನದಲ್ಲಿ ದೊಡ್ಡ ಬದಲಾವಣೆ ತರಲಿವೆ ಎಂದು ರೈಲ್ವೆ ಸಚಿವರು ಹೇಳಿದರು.
ಬೆಂಗಳೂರು–ಚೆನ್ನೈ ನಡುವಿನ ಪ್ರಯಾಣದ ಸಮಯ ಕೇವಲ 1 ಗಂಟೆ 13 ನಿಮಿಷಗಳಿಗೆ ಇಳಿಯಲಿದ್ದು, ಬೆಂಗಳೂರು–ಹೈದರಾಬಾದ್ ಪ್ರಯಾಣ ಕೇವಲ 2 ಗಂಟೆಗಳಲ್ಲಿ ಸಾಧ್ಯವಾಗಲಿದೆ. ಇದರಿಂದ ಉತ್ಪಾದನೆ, ವಿನ್ಯಾಸ ಮತ್ತು ಐಟಿ ಸೇವೆಗಳ ವೃದ್ಧಿಗೆ ದೊಡ್ಡ ಮಟ್ಟದಲ್ಲಿ ಸಹಕಾರವಾಗಲಿದೆ ಎಂದರು.
ಅಮೃತ್ ಭಾರತ್ ನಿಲ್ದಾಣ ಯೋಜನೆಯಡಿಯಲ್ಲಿ ರಾಜ್ಯದ 61 ರೈಲು ನಿಲ್ದಾಣಗಳನ್ನು 2,110 ಕೋಟಿ ರೂ. ವೆಚ್ಚದಲ್ಲಿ ಸಂಪೂರ್ಣವಾಗಿ ಪುನರಾಭಿವೃದ್ಧಿ ಮಾಡಲು ಗುರುತಿಸಲಾಗಿದೆ. ಇವುಗಳಲ್ಲಿ ಬಾಗಲಕೋಟೆ, ಧಾರವಾಡ, ಗದಗ, ಗೋಕಾಕ್ ರಸ್ತೆ ಹಾಗೂ ಮುನಿರಾಬಾದ್ ನಿಲ್ದಾಣಗಳ ಕಾಮಗಾರಿಗಳು ಈಗಾಗಲೇ ಪೂರ್ಣಗೊಂಡಿವೆ. ಬಾದಾಮಿ, ಅಳ್ನಾವರ, ಕೊಪ್ಪಳ ಮತ್ತು ಬಂಟ್ವಾಳ ನಿಲ್ದಾಣಗಳು ಉದ್ಘಾಟನೆಗಾಗಿ ಸಿದ್ಧವಾಗಿವೆ.
2014ರಿಂದ ಈವರೆಗೆ ರಾಜ್ಯದಲ್ಲಿ ಸುಮಾರು 1,750 ಕಿಲೋಮೀಟರ್ ಹೊಸ ರೈಲು ಹಳಿಗಳನ್ನು ನಿರ್ಮಿಸಲಾಗಿದೆ. ರಾಜ್ಯದ ಒಟ್ಟು ರೈಲ್ವೆ ಜಾಲದಲ್ಲಿ 3,368 ರೂಟ್ ಕಿಲೋಮೀಟರ್‌ಗಳಷ್ಟು (ಸುಮಾರು 97%) ಮಾರ್ಗಗಳನ್ನು ವಿದ್ಯುದ್ದೀಕರಣಗೊಳಿಸಲಾಗಿದೆ. ಜೊತೆಗೆ 707 ಫ್ಲೈಓವರ್‌ಗಳು ಹಾಗೂ ಅಂಡರ್‌ಪಾಸ್‌ಗಳನ್ನು ನಿರ್ಮಿಸಲಾಗಿದೆ.
138 ಕಿಮೀ ಉದ್ದದ ಕೆಎಸ್‌ಆರ್ ಬೆಂಗಳೂರು–ಮೈಸೂರು ಮಾರ್ಗದಲ್ಲಿ 72.76 ಕೋಟಿ ರೂ. ವೆಚ್ಚದಲ್ಲಿ ಸ್ವಯಂಚಾಲಿತ ಸಿಗ್ನಲ್ ವ್ಯವಸ್ಥೆ ಅಳವಡಿಸಲಾಗುತ್ತಿದೆ. ಈ ಯೋಜನೆಗೆ 2025ರ ಡಿಸೆಂಬರ್ 9 ರಂದು ಸ್ವೀಕೃತಿ ಪತ್ರ ನೀಡಲಾಗಿದೆ.
ಕರ್ನಾಟಕದಲ್ಲಿ ಹೊಸ ರೈಲು ಮಾರ್ಗಗಳ ನಿರ್ಮಾಣಕ್ಕೆ 3,085 ಕೋಟಿ ರೂ. ಹಾಗೂ ಜೋಡಿ ಹಳಿಗಳ ನಿರ್ಮಾಣಕ್ಕೆ 1,534 ಕೋಟಿ ರೂ. ಮೊತ್ತವನ್ನು ಹಂಚಿಕೆ ಮಾಡಲಾಗಿದೆ ಎಂದು ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ತಿಳಿಸಿದ್ದಾರೆ.
ಇದನ್ನೂ ಓದಿ: ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿದ್ದರಾಮಯ್ಯ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇಂದ್ರ ಸರ್ಕಾರದ ವಿರುದ್ಧ ಅನಗತ್ಯ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ವಿ. ಸೋಮಣ್ಣ ಟೀಕಿಸಿದ್ದಾರೆ. ಅವರು ಕ್ಷುಲ್ಲಕ ರಾಜಕೀಯ ಮಾಡುವುದು ಬಿಟ್ಟು ಅಭಿವೃದ್ಧಿ ಕೆಲಸಗಳತ್ತ ಗಮನಹರಿಸಬೇಕು. ರಾಜ್ಯ ಸರ್ಕಾರ ಕೇಂದ್ರದೊಂದಿಗೆ ಸಮನ್ವಯದಿಂದ ಕೆಲಸ ಮಾಡಿದರೆ ಕರ್ನಾಟಕಕ್ಕೆ ಇನ್ನಷ್ಟು ಲಾಭವಾಗಲಿದೆ ಎಂದು ಸೋಮಣ್ಣ ಹೇಳಿದ್ದಾರೆ.