HD Revanna Arrest: ಕೊನೆಗೂ ಹೆಚ್​ಡಿ ರೇವಣ್ಣ ಬಂಧನ; ಲೈಂಗಿಕ ದೌರ್ಜನ್ಯ, ಅಪಹರಣ ಪ್ರಕರಣದಲ್ಲಿ ಅರೆಸ್ಟ್

ಅಶ್ಲೀಲ ವಿಡಿಯೋ, ಲೈಂಗಿಕ ದೌರ್ಜನ್ಯ ಹಾಗೂ ಅಪಹರಣ ಪ್ರಕರಣ ಜೆಡಿಎಸ್ ಶಾಸಕ, ಮಾಜಿ ಸಚಿವ ಹೆಚ್​ಡಿ ರೇವಣ್ಣಗೆ ಉರುಳಾಗಿದೆ. ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನು ಅರ್ಜಿ ತಿರಸ್ಕೃತಗೊಂಡ ಬೆನ್ನಲ್ಲೇ ಬೆಂಗಳೂರಿನ ಪದ್ಮನಾಭನಗರದಲ್ಲಿರುವ ಮಾಜಿ ಪ್ರಧಾನಿ ದೇವೇಗೌಡರ ನಿವಾಸದಿಂದ ರೇವಣ್ಣರನ್ನು ವಿಶೇಷ ತನಿಖಾ ತಂಡದ ಅಧಿಕಾರಿಗಳು ಬಂಧಿಸಿದ್ದಾರೆ.

HD Revanna Arrest: ಕೊನೆಗೂ ಹೆಚ್​ಡಿ ರೇವಣ್ಣ ಬಂಧನ; ಲೈಂಗಿಕ ದೌರ್ಜನ್ಯ, ಅಪಹರಣ ಪ್ರಕರಣದಲ್ಲಿ ಅರೆಸ್ಟ್
ಹೆಚ್​ಡಿ ರೇವಣ್ಣ
Follow us
| Updated By: ಗಣಪತಿ ಶರ್ಮ

Updated on:May 04, 2024 | 7:37 PM

ಬೆಂಗಳೂರು, ಮೇ 4: ಅಶ್ಲೀಲ ವಿಡಿಯೋ ಹಾಗೂ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿ ಜೆಡಿಎಸ್ ಶಾಸಕ ಹೆಚ್​ಡಿ ರೇವಣ್ಣರನ್ನು (HD Revanna) ವಿಶೇಷ ತನಿಖಾ ದಳದ (SIT) ಅಧಿಕಾರಿಗಳು ಶನಿವಾರ ಸಂಜೆ ವಶಕ್ಕೆ ಪಡೆದು ಬಂಧಿಸಿದರು. ಬೆಂಗಳೂರಿನ ಪದ್ಮನಾಭನಗರದಲ್ಲಿರುವ ಮಾಜಿ ಪ್ರಧಾನಿ ಹೆಚ್​ಡಿ ದೇವೇಗೌಡರ ನಿವಾಸದಿಂದ ರೇವಣ್ಣರನ್ನು ವಶಕ್ಕೆ ಪಡೆದ ಅಧಿಕಾರಿಗಳು ನೇರವಾಗಿ ಕಾರ್ಲಟನ್‌ ಭವನದಲ್ಲಿರುವ ಎಸ್​ಐಟಿ ಕಚೇರಿಗೆ ಕರೆದುಕೊಂಡು ಹೋಗಿದ್ದಾರೆ. ಮೈಸೂರಿನ ಕೆಆರ್​ ನಗರ ಠಾಣೆಯಲ್ಲಿ ದಾಖಲಾದ ಅಪಹರಣ, ದೌರ್ಜನ್ಯ ಪ್ರಕರಣದಲ್ಲಿ ರೇವಣ್ಣರನ್ನು ಎಸ್ಐಟಿ ವಶಕ್ಕೆ ಪಡೆದಿದೆ.

ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನು ಅರ್ಜಿ ತಿರಸ್ಕೃತಗೊಂಡ ಬೆನ್ನಲ್ಲೇ ರೇವಣ್ಣರ ಬಂಧನಕ್ಕೆ ಎಸ್ಐಟಿ ಅಧಿಕಾರಿಗಳು ತಲಾಶ್ ನಡೆಸಿದರು. ಇದೇ ವೇಳೆ ಅವರು, ದೇವೇಗೌಡರ ನಿವಾಸದಲ್ಲಿರುವುದು ತಿಳಿದು ಎರಡು ಕಾರುಗಳಲ್ಲಿ ಅಲ್ಲಿಗೆ ದೌಡಾಯಿಸಿದರು. ಸುಮಾರು ಐದಕ್ಕೂ ಹೆಚ್ಚು ಮಂದಿ ಅಧಿಕಾರಿಗಳು ರೇವಣ್ಣ ಬಂಧನಕ್ಕೆ ತೆರಳಿದ್ದರು. ಅಧಿಕಾರಿಗಳು ಬಂದು 15 ನಿಮಿಷವಾದ್ರೂ ಮನೆ ಬಾಗಿಲು ಓಪನ್ ಮಾಡಲಾಗಿರಲಿಲ್ಲ. ನಂತರ ರೇವಣ್ಣರೇ ಬಾಗಿಲು ತೆರೆದು ಹೊರಬಂದರು. ತಕ್ಷಣವೇ ಅವರನ್ನು ವಶಕ್ಕೆ ಪಡೆದು ಎಸ್​ಐಟಿ ಅಧಿಕಾರಿಗಳು ಕಚೇರಿಯತ್ತ ತೆರಳಿದರು.

ರೇವಣ್ಣರನ್ನು ವಶಕ್ಕೆ ಪಡೆದು ಕರೆದೊಯ್ಯುತ್ತಿರುವ ಎಸ್ಐಟಿ ಅಧಿಕಾರಿಗಳು

ರೇವಣ್ಣ ಬಂಧನದ ಕಾರಣ ಮುನ್ನೆಚ್ಚರಿಕೆ ಕ್ರಮವಾಗಿ ಎಸ್ಐಟಿ ಕಚೇರಿ ಇರುವ ಕಾರ್ಲಟನ್‌ ಭವನದ ಬಳಿ ಪೊಲೀಸ್ ಬಂದೋಬಸ್ತ್‌ ಮಾಡಲಾಗಿದೆ. ಬ್ಯಾರಿಕೇಡ್ ಹಾಕಿ ಹೈಗ್ರೌಂಡ್ಸ್‌ ಠಾಣೆಯ ಪೊಲೀಸರು ಬಂದೋಬಸ್ತ್‌ ಮಾಡಿದ್ದಾರೆ.

ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಪಟ್ಟಂತೆ ಜನಪ್ರತಿನಿಧಿಗಳ ವಿಶೇಷ ಕೋರ್ಟಿನಲ್ಲಿ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ದರೆ ಬಣ್ಣ, ಬಂಧಿಸುವಂತಹ ಪ್ರಕರಣ ಯಾವುದು ದಾಖಲಾಗಿಲ್ಲ ಎಂದು ವಿಶೇಷ ತನಿಖಾ ತಂಡದ ವಕೀಲರು ಖಚಿತಪಡಿಸಿದ್ದರಿಂದ ಶುಕ್ರವಾರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ವಾಪಸ್ ಪಡೆದಿದ್ದರು. ಆದರೆ ನಂತರ, ಮೈಸೂರಿನ ಕೆಆರ್ ನಗರದಲ್ಲಿ ದಾಖಲಾದ ಅಪಹರಣ ಪ್ರಕರಣದಲ್ಲಿ ರೇವಣ್ಣಗೆ ಬಂಧನ ಭೀತಿ ಎದುರಾಗಿತ್ತು. ಹೀಗಾಗಿ ಅವರು ಮತ್ತೆ ಮಧ್ಯಂತರ ನಿರೀಕ್ಷಣಾ ಜಾಮೀನು ಕೋರಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಮೊರೆ ಹೋಗಿದ್ದರು. ಆದರೆ ಅಲ್ಲಿ ಅವರಿಗೆ ಹಿನ್ನಡೆಯಾಗಿತ್ತು.

ಇದನ್ನೂ ಓದಿ: ರೇವಣ್ಣಗೆ ಬಂಧನ ಭೀತಿ: ಮಧ್ಯಂತರ ನಿರೀಕ್ಷಣಾ ಜಾಮೀನು ವಜಾ

ಏನಿದು ಕಿಡ್ನಾಪ್ ಕೇಸ್?

ವ್ಯಕ್ತಿಯೊಬ್ಬರು ತನ್ನ ತಾಯಿ ನಾಪತ್ತೆಯಾಗಿದ್ದಾರೆ. ಬಿಡುಗಡೆಯಾದ ಅಶ್ಲೀಲ ವಿಡಿಯೊದಲ್ಲಿ ಅವರ ಚಿತ್ರವೂ ಇತ್ತು, ಬಳಿಕ ಅವರು ಕಣ್ಮರೆಯಾಗಿದ್ದಾರೆ ಎಂದು ಮೇ 2ರ ತಡರಾತ್ರಿ ಮೈಸೂರಿನ ಕೆಆರ್​​ ನಗರ ಠಾಣೆಯಲ್ಲಿ ದೂರು ನೀಡಿದ್ದರು. ಪ್ರಕರಣ ಸಂಬಂಧ ರೇವಣ್ಣ ಪತ್ನಿ ಭವಾನಿಯವರ ಸಂಬಂಧಿಯೂ ಆಗಿರುವ ಸತೀಶ್ ಬಾಬು ಎಂಬವರನ್ನು ಈಗಾಗಲೇ ಎಸ್​ಐಟಿ ಬಂಧಿಸಿದೆ. ಇವರನ್ನು ಆರೋಪಿ ಸಂಖ್ಯೆ 2 ಎಂದು ಎಸ್​ಐಟಿ ಗುರುತಿಸಿದೆ. ರೇವಣ್ಣ ಮೊದಲ ಆರೋಪಿಯಾಗಿದ್ದಾರೆ. ಸಂತ್ರಸ್ತೆಯ 20 ವರ್ಷದ ಪುತ್ರ ನೀಡಿದ ದೂರಿನ ಆಧಾರದಲ್ಲಿ ಪ್ರಕರಣ ದಾಖಲಾಗಿತ್ತು.

ಇದನ್ನೂ ಓದಿ: ಅಶ್ಲೀಲ ವಿಡಿಯೋ ಪ್ರಕರಣ: ಮಾಜಿ ಸಚಿವ ಹೆಚ್​ಡಿ ರೇವಣ್ಣಗೆ ಮತ್ತೊಂದು ಸಂಕಷ್ಟ, ಮೈಸೂರಿನಲ್ಲಿಯೂ ಕೇಸ್ ದಾಖಲು

ನಾಪತ್ತೆಯಾಗಿರುವ ಮಹಿಳೆಯ ಪತ್ತೆಗಾಗಿ ನಂತರ ಮೈಸೂರು, ಹಾಸನ, ಮಂಡ್ಯ ಜಿಲ್ಲೆಗಳು ಮತ್ತು ಬೆಂಗಳೂರು ನಗರ ಸೇರಿದಂತೆ ವಿವಿಧಡೆ ಪರಿಶೀಲನೆ ನಡೆಸಲಾಗಿತ್ತು. ಬಳಿಕ ಇಂದು ಸಂಜೆಯೊಳಗೆ ವಿಚಾರಣೆಗೆ ಹಾಜರಾಗುವಂತೆ ರೇವಣ್ಣಗೆ ಎಸ್​​ಐಟಿ ಮೂರನೇ ನೋಟಿಸ್ ನೀಡಿತ್ತು. ಇದೀಗ ಅವರನ್ನು ಬಂಧಿಸಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:56 pm, Sat, 4 May 24