ಬಿ ನಾಗೇಂದ್ರ ಸಣ್ಣ ಮೀನು: ಸಿದ್ದರಾಮಯ್ಯ, ಡಿಕೆ ಶಿವಕುಮಾರ್​ ತಿಮಿಂಗಿಲು ಎಂದ ಶೋಭಾ ಕರಂದ್ಲಾಜೆ

| Updated By: ಗಂಗಾಧರ​ ಬ. ಸಾಬೋಜಿ

Updated on: Aug 02, 2024 | 3:32 PM

ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಕೇಂದ್ರ ಸಚಿವರ ಶೋಭಾ ಕರಂದ್ಲಾಜೆ, ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣದಲ್ಲಿ ನಾಗೇಂದ್ರ ಸಣ್ಣ ಮೀನು, ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ತಿಮಿಂಗಿಲಗಳು ಎಂದು ವಾಗ್ದಾಳಿ ಮಾಡಿದ್ದಾರೆ. ಎರಡು ಪ್ರಕರಣದಲ್ಲಿ ಸಿದ್ದರಾಮಯ್ಯ ಅಪರಾಧಿ ಎಂದು ಆರೋಪ ಮಾಡಿದ್ದಾರೆ.

ಬಿ ನಾಗೇಂದ್ರ ಸಣ್ಣ ಮೀನು: ಸಿದ್ದರಾಮಯ್ಯ, ಡಿಕೆ ಶಿವಕುಮಾರ್​ ತಿಮಿಂಗಿಲು ಎಂದ ಶೋಭಾ ಕರಂದ್ಲಾಜೆ
ಬಿ.ನಾಗೇಂದ್ರ ಸಣ್ಣ ಮೀನು, ಸಿದ್ದರಾಮಯ್ಯ, ಡಿಕೆ ಶಿವಕುಮಾರ್​ ತಿಮಿಂಗಿಲು ಎಂದ ಶೋಭಾ ಕರಂದ್ಲಾಜೆ
Follow us on

ಮೈಸೂರು, ಆಗಸ್ಟ್​ 2: ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಬಿ.ನಾಗೇಂದ್ರ ಸಣ್ಣ ಮೀನು, ಸಿದ್ದರಾಮಯ್ಯ (Siddaramaiah), ಡಿಕೆ ಶಿವಕುಮಾರ್​​​ ತಿಮಿಂಗಿಲಗಳು ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ (Shobha Karandlaje) ವಾಗ್ದಾಳಿ ಮಾಡಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮುಡಾ, ವಾಲ್ಮೀಕಿ ನಿಗಮ ಪ್ರಕರಣ ಎರಡರಲ್ಲೂ ಸಿಎಂ ಅಪರಾಧಿ. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಅವರದ್ದು ನೇರ ಹೊಣೆಗಾರಿಕೆ ಇದೆ ಎಂದು ಕಿಡಿಕಾರಿದ್ದಾರೆ.

ಸಿದ್ದರಾಮಯ್ಯ ಮತ್ತೆ ಸಿಎಂ ಆಗುವುದಿಲ್ಲ

ಈ‌ ಕಾರಣಕ್ಕೆ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು. ರಾಜೀನಾಮೆ ಕೊಟ್ಟು ತನಿಖೆ ಎದುರಿಸಿ ನಂತರ ಮತ್ತೆ ಸಿಎಂ ಆಗಿ. ಆದರೆ ಸಿದ್ದರಾಮಯ್ಯ ಮತ್ತೆ ಸಿಎಂ ಆಗುವುದಿಲ್ಲ ಎಂದು ಹೇಳಿದ್ದಾರೆ. ರಾಜ್ಯಪಾಲರ ನೋಟಿಸ್‌ಗೆ ಸಿದ್ದರಾಮಯ್ಯ ಹೆದರಿದ್ದಾರೆ. ಅದಕ್ಕಾಗಿ ಸಂಪುಟ ಸಭೆ ಕರೆದು ರಾಜ್ಯಪಾಲರ ವಿರುದ್ಧ ನಿರ್ಣಯ ಕೈಗೊಂಡಿದ್ದಾರೆ. ರಾಜ್ಯ ಸರ್ಕಾರ ರಾಜ್ಯಪಾಲರನ್ನು ಹೆದರಿಸುವ ಕೆಲಸಕ್ಕೆ ಕೈಹಾಕಿದೆ ಎಂದಿದ್ದಾರೆ.

ಇದನ್ನೂ ಓದಿ: ರಾಜ್ಯಪಾಲರು ಕೇಂದ್ರ ಸರ್ಕಾರದ ಕೈಗೊಂಬೆ, ಅವರ ನೋಟಿಸ್​ಗೆ ಹೆದರಲ್ಲ: ಸಿಎಂ ಸಿದ್ದರಾಮಯ್ಯ

ಬಿಜೆಪಿ, ಜೆಡಿಎಸ್​ನಿಂದ ರಾಜಭವನ ದುರ್ಬಳಕೆ ಆರೋಪ ವಿಚಾರವಾಗಿ ಪ್ರತಿಕ್ರಿಯಿಸಿದ್ದು, ದೂರ ನೀಡಿರುವುದು ನಾವಲ್ಲ ಸಾರ್ವಜನಿಕ ವ್ಯಕ್ತಿ. ದೂರಿನ ಅನ್ವಯ ಸಿದ್ದರಾಮಯ್ಯಗೆ ನೋಟಿಸ್ ನೀಡಿದ್ದಾರೆ ಅಷ್ಟೇ. ಅದಕ್ಕೆ ಉತ್ತರ ಕೊಡುವ ಬದಲು ಸಿದ್ದರಾಮಯ್ಯ ಹೆದರಿದ್ದಾರೆ. 50:50 ಹೊಸ ಬಡಾವಣೆಗಳಿಗೆ ಮಾತ್ರ ಅಂತಾ ನಿಯಮ ಇದೆ. ಆದರೆ ಈ ನಿಯಮ ಹಳೆಯ ಪ್ರಕರಣಗಳಿಗೆ ಅನ್ವಯ ಆಗಲ್ಲ. ಸಿಎಂ ನಿಯಮ ಮೀರಿ ತಮ್ಮ ಮನೆಯವರಿಗೆ ನಿವೇಶನ ಪಡೆದಿದ್ದಾರೆ ಎಂದು ವಾಗ್ದಾಳಿ ಮಾಡಿದ್ದಾರೆ.

ನಾಗೇಂದ್ರ ಹಿಂದಿರುವ ಶಕ್ತಿ ಸಿದ್ದರಾಮಯ್ಯ

ವಾಲ್ಮೀಕಿ ನಿಗಮದ ಹಗರಣದಲ್ಲಿ ಭ್ರಷ್ಟಾಚಾರ ಆಗಿರುವುದನ್ನು ಸಿದ್ದರಾಮಯ್ಯ ಅಧಿವೇಶನದಲ್ಲಿ ಒಪ್ಪಿಕೊಂಡಿದ್ದಾರೆ. ಈ ಹಣ ತೆಲಂಗಾಣದ ಚುನಾವಣೆಗೆ ಹೋಗಿದೆ. ತೆಲಂಗಾಣ ಚುನಾವಣೆಗೆ ಹಣ ಕೊಡಲು ಕಾಂಗ್ರೆಸ್ ಹೈಕಮಾಂಡ್ ಸಿದ್ದರಾಮಯ್ಯಗೆ ಸೂಚನೆ ನೀಡಿತ್ತು. ಇದು ರಾಜ್ಯದ ಬಡವರ ತೆರಿಗೆ ಹಣ. ಇದರ ನೇರ ಹೊಣೆ ಸಿಎಂ ಸಿದ್ದರಾಮಯ್ಯ ಹೊರಬೇಕು. ಅವರೇ ಹಣಕಾಸು ಸಚಿವರು, ಇಲ್ಲಿ ನಾಗೇಂದ್ರ ನೆಪ ಮಾತ್ರ. ನಾಗೇಂದ್ರ ಹಿಂದಿರುವ ಶಕ್ತಿ ಅದು ಸಿದ್ದರಾಮಯ್ಯ ಎಂದು ಹರಿಹಾಯ್ದಿದ್ದಾರೆ.

ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಜನಾಂದೋಲನ ವಿಚಾರವಾಗಿ ಮಾತನಾಡಿದ್ದು, ಬಜೆಟ್​ನಲ್ಲಿ ಬಿಜೆಪಿ ಸರ್ಕಾರ ಇಲ್ಲದ ರಾಜ್ಯಗಳಿಗೂ ಅನುದಾನ ನೀಡಿದೆ. ಕರ್ನಾಟಕದಲ್ಲಿ ರೈಲ್ವೆ, ಹೈವೇಗಳ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಸಾಕಷ್ಟು ಅನುದಾನ ನೀಡಿದೆ. ಅವರು ಅಂಕಿ ಅಂಶ ಇಟ್ಟುಕೊಂಡು ಮಾತನಾಡಲಿ. ನಾನು ಕೂಡ ಅಂಕಿ ಅಂಶಗಳ ಜೊತೆಗೆ ಉತ್ತರ ನೀಡುತ್ತೇನೆ ಎಂದಿದ್ದಾರೆ.

ಇದನ್ನೂ ಓದಿ: ಸಿಎಂ ವಿರುದ್ಧ ಪ್ರಾಸಿಕ್ಯೂಷನ್​ ನೊಟೀಸ್ ವಾಪಸಿಗೆ ಸಂಪುಟ ನಿರ್ಣಯ, ರಾಜ್ಯಪಾಲರ ಮುಂದಿನ ನಡೆ ಏನು?

ಮೇಕೆದಾಟು ಯೋಜನೆ ವಿಚಾರ ಮೊದಲು ನ್ಯಾಯಾಲಯದಲ್ಲಿನ ಸಮಸ್ಯೆ ಇತ್ಯರ್ಥ ಮಾಡಿಕೊಂಡು ನಂತರ ನಮ್ಮ ಬಳಿ ಬನ್ನಿ. ನಾವು ಬಿಜೆಪಿ ಅಧಿಕಾರದಲ್ಲಿ ಇರುವ ರಾಜ್ಯ, ಇಲ್ಲದ ರಾಜ್ಯಕ್ಕೂ ಅನುದಾನ ನೀಡಿದ್ದೇವೆ. ನಾವು ಒಂದು ಸ್ಥಾನ ಗೆಲ್ಲದ ರಾಜ್ಯಗಳಿಗೂ ನೀಡಿದ್ದೇವೆ. ಇಲ್ಲಿ ಕೇಂದ್ರದಿಂದ ಅನ್ಯಾಯದ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.